ಬಾರದ ಮಳೆ-ಬಾಡುತ್ತಿದೆ ಬೆಳೆ

7

ಬಾರದ ಮಳೆ-ಬಾಡುತ್ತಿದೆ ಬೆಳೆ

Published:
Updated:

ಕುಷ್ಟಗಿ:  ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ವಾರಗಳಿಂದಲೂ ಮಳೆ ಬಾರದ ಕಾರಣ ತಡವಾಗಿ ಬಿತ್ತಿದ ಮುಂಗಾರು ಮತ್ತು ಹಿಂಗಾರು ಬೆಳೆಗಳು ತೇವಾಂಶ ಕೊರತೆ  ಎದುರಿಸುತ್ತಿವೆ.ತಡವಾಗಿ ಬಿತ್ತಿದ್ದ ಸಜ್ಜೆ, ಮೆಕ್ಕೆಜೋಳ, ಶೇಂಗಾ, ತೊಗರಿ ಮೊದಲಾದ ಮುಂಗಾರು ಬೆಳೆಗಳು ಮಳೆ ಬಾರದ ಕಾರಣ ಕಾಳು ಕಟ್ಟುವ ಹಂತದಲ್ಲೇ ಸಂಪೂರ್ಣ ಒಣಗಿ  ಹೋಗಿದ್ದವು. ನಂತರ ಉತ್ತಮ ಮಳೆ ಬಂದಿದ್ದರಿಂದ ಬಿತ್ತನೆಗೆ ಕಾಯ್ದು ಕುಳಿತಿದ್ದ ರೈತರು ಸಾಕಷ್ಟು ಪ್ರದೇಶದಲ್ಲಿ ಸಜ್ಜೆ, ಸೂರ್ಯಕಾಂತಿ, ಹುರುಳಿ ಮತ್ತಿತರೆ ಬೆಳೆ ಬಿತ್ತನೆ ಕೈಗೊಂಡಿದ್ದರು. ಇಲ್ಲಿಯವರೆಗೂ ಬೆಳೆಗಳು ಉತ್ತಮವಾಗಿಯೇ ಇದ್ದವು ಈಗಲಾದರೂ ಮಳೆ ಬಂದರೆ ಉಳಿದುಕೊಳ್ಳುತ್ತವೆ ಎಂದು ರೈತರು ಹೇಳಿದ್ದಾರೆ.ಮಸಾರಿ (ಕೆಂಪು) ಮತ್ತು ಕಪ್ಪು ಭೂಮಿಯಲ್ಲಿಯೂ ಬಿತ್ತನೆಯಾಗಿವೆ, ಎರೆ ಜಮೀನಿನಲ್ಲಿರುವ ಬೆಳೆಗಳು ಇನ್ನಷ್ಟುದಿನ ತಡೆದುಕೊಳ್ಳುವ ತೇವಾಂಶ ಇದೆ. ಆದರೆ ಮಸಾರಿ ಜಮೀನಿನ ಬೆಳೆಗಳಿಗೆ ಮಳೆ ಅಗತ್ಯವಾಗಿದೆ. ಸದ್ಯ ಹವಾಮಾನ ಶುಷ್ಕವಾಗಿದ್ದು ಹಗಲಿನಲ್ಲಿ ಬೇಸಿಗೆಯಂತೆ ಬಿಸಿಲು ಇದ್ದರೆ ಸಂಜೆಯಾಗುತ್ತಿದ್ದಂತೆ ಚಳಿ ಆವರಿಸುತ್ತಿದೆ. ಆಕಾಶದಲ್ಲಿ ಮೋಡಗಳ ಸುಳಿವಿಲ್ಲ.  ಇದನ್ನು ಗಮನಿಸಿದ ರೈತರಲ್ಲಿ ಮತ್ತೆ ಚಿಂತೆ ಆವರಿಸಿದೆ.ಈ ವರ್ಷದ ಮಳೆ ಕುರಿತು ತಳುವಗೇರಿಯ ರೈತ ಬಸನಗೌಡ ಹೇಳುವುದು ಹೀಗೆ `ಮೊದ್ಲ ಮಳಿ ಬರ‌್ಲಿಲ್ರಿ, ನಂತ್ರ ಬಂತು ಈಗ ಮತ್ತೆ ಹೋಗೇತಿ ಹಿಂಗಾರ‌್ಯಾಗ ಬಿತ್ತಿದ ಬೆಳಿ ಸ್ವಲ್ಪ ಉತ್ತಮ ಅದಾವ, ಆದ್ರ ಏನ್ ಮಾಡೋದೈತಿ ಹಾವು ಏಣಿ ಆಟದಂಗಾಗೇತಿ ಮಳಿ ಸ್ಥಿತಿ~ ಎಂದು ನೋವು ತೋಡಿಕೊಂಡರು. ಬಹಳಷ್ಟು ಕಪ್ಪು ಜಮೀನು ಹೊಂದಿರುವ ಮಾದಾಪುರ, ತೆಗ್ಗಿಹಾಳ, ಮುದೇನೂರು, ಬಸಾಪುರ, ಗೋನಾಳ, ಟೆಂಗುಂಟಿ ಸುತ್ತಲಿನ ಹಳ್ಳಿಗಳಲ್ಲಿ ಬಹಳಷ್ಟು ರೈತರು ಸಜ್ಜೆ ಮತ್ತು ಸೂರ್ಯಕಾಂತಿ ಬಿತ್ತನೆ ಮೊರೆ    ಹೋಗಿದ್ದಾರೆ.ಸಜ್ಜೆ ಕಾಳುಕಟ್ಟುವ ಹಂತದಲ್ಲಿದ್ದರೆ ಸೂರ್ಯಕಾಂತಿ ತೆನೆಯೊಡೆಯುವ ಹಂತದಲ್ಲಿದ್ದು ಮಳೆ ಅಭಾವ ರೈತರ ನಿದ್ದೆಗೆಡಿಸಿದೆ.  ಸುಮಾರು 6 ಎಕರೆ ಪ್ರದೇಶದಲ್ಲಿ ಸಜ್ಜೆ ಬೆಳೆ ಬಿತ್ತಿರುವ ರೈತ ದೊಡ್ಡಪ್ಪ ಕುರಿ, ಮಳೆಯಾಗದಿದ್ದರೆ ಬೀಜ, ಗೊಬ್ಬರ, ಕೂಲಿ ಸೇರಿ ಬಿತ್ತನೆಗೆ ಮಾಡಿದ ಖರ್ಚು ಮೈಮೇಲೆ ಬರುತ್ತದೆ ಎಂದು ಅಸಮಾಧಾನ  ವ್ಯಕ್ತಪಡಿಸಿದರು. ಎಲ್ಲಕ್ಕಿಂತಲೂ ಶೇಂಗಾ ಬೆಳೆ ಖರ್ಚು ಹೆಚ್ಚು ಕ್ವಿಂ ಬಿತ್ತನೆ ಬೀಜಕ್ಕೆ ಏಳೆಂಟು ಸಾವಿರ ರೂ ಖರ್ಚಾಗುತ್ತದೆ, ಆದರೆ ಮಳೆ ಕೈಕೊಟ್ಟಿದ್ದರಿಂದ ಬೆಳೆ ಬಾಡಿದೆ.  ಈಗ ಮಳೆ ಬಂದರೂ ಸ್ವಲ್ಪ ಪ್ರಮಾಣದಲ್ಲಿ ಹೊಟ್ಟು ಬರಬಹುದು ಅಷ್ಟೆ ಎಂದು ಚಳಗೇರಿಯ  ರೈತ ಹನುಮಗೌಡ ಪಾಟೀಲ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry