ಗುರುವಾರ , ಮೇ 19, 2022
21 °C

ಬಾರದ ಮಳೆ; ಬಾಡುತ್ತಿರುವೆ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: `ಬ್ಯಾರೆ ಕಡಿಗೆ ಮಳಿ ಹೆಚ್ಚಾಗಿ ಜನಾ ಸಾಯಕ್ಹತ್ಯಾರ. ಇಲ್ಲೆ ನೋಡೀದ್ರ ಹನಿ ಮಳಿ ಇಲ್ದ ಇದ್ದ ಬೆಳಿ ಒಣಗಿ ರೈತ್ರು ದನಾ, ಕರಾ ಉಪವಾಸ ಬೀಳಂಗಾಗೇತಿ. ಇದೆಂದ ಕಾಲ ಬಂತೋ ಯಪ್ಪಾ, ಮಳಿರಾಯ ಬೇಕಂದಲ್ಲೆ ಕೈಕೊಡ್ತಾನ ಬ್ಯಾಡಂದಲ್ಲೆ ಸುರಿತ್ಯಾನ.....'ರಾಜ್ಯದ ಇತರೆ ಭಾಗಗಳಲ್ಲಿ ಕುಂಭದ್ರೋಣ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡರೆ ಈ ಭಾಗದಲ್ಲಿ ಮಾತ್ರ ಮಳೆ ಅಪರೂಪವಾಗಿ ಬೆಳೆಗಳು ಒಣಗುವ ಸ್ಥಿತಿ ತಲುಪಿರುವುದನ್ನು ತಾಲ್ಲೂಕಿನ ಚಳಗೇರಿ ರೈತ ಚನ್ನಬಸಪ್ಪ ತುಲನೆ ಮಾಡಿ ಹಪಹಪಿಸಿದ್ದು ಹೀಗೆ.ಮುಂಗಾರು ಹಂಗಾಮಿನಲ್ಲಿಯ ವಿವಿಧ ಬೆಳೆಗಳನ್ನು ಬಿತ್ತಿ ಒಂದು ತಿಂಗಳಾದರೂ ಮಳೆ ಸುಳಿದಿಲ್ಲ. ತುಂತುರು ಮಳೆಯೂ ಇಲ್ಲ, ಅದಕ್ಕೆ ತದ್ವಿರುದ್ಧ ಎಂಬಂತೆ ಬಿರು ಬಿಸಿಲು ಜೊತೆಗೆ ಬಿರುಗಾಳಿ ಬೀಸುತ್ತಿರುವುದರಿಂದ ಬೆಳವಣಿಗೆ ಹಂತದಲ್ಲಿರುವ ಬೆಳೆಗಳು ಕೆಲವೆಡೆ ಬಾಡಿ ನಿಂತಿರುವುದು ಅಕ್ಕಪಕ್ಕದ ತಾಲ್ಲೂಕಿನ ಹಳ್ಳಿಗಳಲ್ಲಿ ಕಂಡುಬರುತ್ತಿದೆ.ಪ್ರಾರಂಭದಲ್ಲಿ ರೋಹಿಣಿ ಮಳೆ ಎರಡು ದಿನ ವ್ಯಾಪಕವಾಗಿ ಸುರಿಯಿತು. ಹಾಗಾಗಿ ರೈತರು ಸಾಲ ಅಥವಾ ಕೈಯಲ್ಲಿದ್ದ ಹಣ ಖರ್ಚು ಮಾಡಿ ಬೀಜ ಗೊಬ್ಬರ ಭೂಮಿಗೆ ಸುರಿದದ್ದಾಗಿದೆ. ಹೆಸರು, ಮೆಕ್ಕೆಜೋಳ, ಸಜ್ಜೆ ಮತ್ತಿತರೆ ಬೆಳೆಗಳು ಸಹ ಇಲ್ಲಿಯವರೆಗೆ ದೃಷ್ಟಿತಾಕುವುದೇನೊ ಎನ್ನುವಂತಿದ್ದವು. ಇನ್ನೂ ಒಂದು ವಾರ ಮಳೆ ಬಾರದಿದ್ದರೆ ಪರಿಸ್ಥಿತಿ ಬಹಳಷ್ಟು ಗಂಭೀರವಾಗಬಹುದೆಂಬ ಆತಂಕ ರೈತರಲ್ಲಿದೆ. ತೇವಾಂಶ ಕೊರತೆ ಎದುರಾಗಿದ್ದು ಒಂದು ವಾರ ಮಾತ್ರ ಬೆಳೆಗಳು ಬದುಕಬಲ್ಲವು ಎಂದು ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಶೇಖರಯ್ಯ ವಿವರಿಸಿದರು.ಕೃಷಿ ಇಲಾಖೆ ಮಾಹಿತಿಯಂತೆ ಮುಂಗಾರಿನ ಕ್ಷೇತ್ರ 68,250 ಹೆಕ್ಟೇರ್ ಪೈಕಿ 46,000 ಹೆಕ್ಟೇರ್ ಬಿತ್ತನೆಯಾಗಿದೆ. ನೀರಾವರಿಗೆ ಸೀಮಿತವಾಗಿದ್ದ ಮೆಕ್ಕೆಜೋಳವನ್ನು ಮಳೆಯಾಶ್ರಯದ ರೈತರೂ (6680 ಹೆಕ್ಟೇರ್) ಬಿತ್ತನೆ ಮಾಡಿದ್ದಾರೆ. ಬೀಜ, ಗೊಬ್ಬರ, ಕೂಲಿ ಇತರೆ ವೆಚ್ಚ ಸೇರಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.ಹೈಬ್ರೀಡ್ ಸಜ್ಜೆ ಎಲ್ಲಕ್ಕಿಂತ ಹೆಚ್ಚಿನ (18,004 ಹೆಕ್ಟೇರ್) ಪ್ರದೇಶದಲ್ಲಿ ಬೆಳೆಯಲಾಗಿದೆ. ಅಲ್ಪಾವಧಿ ತಳಿ ಹೆಸರು 10,200 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಶೇಂಗಾ ಸೇರಿ 5400 ಹೆಕ್ಟೇರ್‌ನಲ್ಲಿವೆ. ಎಲ್ಲ ಬೆಳೆಗಳು ಸದ್ಯಕ್ಕೆ ಉತ್ತಮವಾಗಿದ್ದು ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.`ಬೆಳಿ ನೋಡೀದ್ರ ಹೊಟ್ಟಿ ತುಂಬತೈತ್ರಿ ಮಳಿಯಪ್ಪ (ಮಳೆ) ಇತ್ತಾಗ ಕಣ್ಣ್ ಹಾಕವೊಲ್ಲ, ಹೆಸರು ಇಷ್ಟೊಂದು ಚೊಲೊ ಬೆಳಿದೈತೆಂದ್ರ ಅದು ದಕ್ಕಂಗಿಲ್ಲ ಅನಸತೈತಿ' ಎಂಬುದು ಯಾವುದೇ ಕೀಟ, ರೋಗ ಬಾಧೆಯ ಸುಳಿವಿಲ್ಲದೆ ಅತ್ಯುತ್ತಮವಾಗಿರುವ ಹೆಸರು ಬೆಳೆ ಕುರಿತು ಪಟ್ಟಣದ ರೈತ ಪರಶುರಾಮಪ್ಪ ಬನ್ನಿಗೋಳ ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.