ಬಾರದ ಮುಂಗಾರು ಮಳೆ: ರೈತರು ಕಂಗಾಲು

ಗುರುವಾರ , ಜೂಲೈ 18, 2019
28 °C

ಬಾರದ ಮುಂಗಾರು ಮಳೆ: ರೈತರು ಕಂಗಾಲು

Published:
Updated:

ಕೋಲಾರ:  ಮುಂಗಾರು ಮಳೆ ವಿಳಂಬವಾಗಿರುವುದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಮಳೆ ಬಾರದೆ ಉಳುಮೆ ತಡವಾಗುತ್ತಿದೆ. ಹೀಗಾಗಿ ಮಳೆಗಾಲ ಮತ್ತು ಬಿತ್ತನೆ ಕಾಲ ಒಂದೇ ಬಾರಿಗೆ ಎದುರಾದರೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಬಹಳಷ್ಟು ರೈತರಿದ್ದಾರೆ.

ಆಗಾಗ ಮಳೆ ಬರುತ್ತಿದ್ದರೆ ಉಳುಮೆಗೆ ಅನುಕೂಲಕರ ವಾತಾವರಣವಿರುತ್ತದೆ. ಮೇ ತಿಂಗಳಲ್ಲಿ ತೊಗರಿಗೆ ಕಾಲಾವಕಾಶವಿತ್ತು. ಆದರೆ ಸಮರ್ಪಕ ಮಳೆ ಇಲ್ಲದೆ ಹಲವು ರೈತರು ತೊಗರಿ ಬೆಳೆಯುವುದನ್ನು ಕೈಬಿಟ್ಟಿದ್ದಾರೆ. ಈಗ ರಾಗಿಗೆ ಬಿತ್ತನೆ ಸಮಯ ಶುರುವಾಗಿದೆ. ಆದರೆ ಉಳುಮೆಯೇ ಜಿಲ್ಲೆಯಲ್ಲಿ ಸರಿಯಾಗಿ ನಡೆದಿಲ್ಲ.ಮೇ ತಿಂಗಳಲ್ಲಿ, ಅಲ್ಲಲ್ಲಿ ಸುರಿದ ಮಳೆ ಪರಿಣಾಮವಾಗಿ ಐದಾರು ಬಾರಿ ಉಳುಮೆ ಮಾಡಿರುವ ರೈತರೂ ಮಳೆಗಾಗಿ ಕಾಯುತ್ತಾ ಮತ್ತೆ ಮತ್ತೆ ಉಳುಮೆ ಮಾಡುತ್ತಲೇ ಇದ್ದಾರೆ. ಕೆಲವೆಡೆ ಸಣ್ಣ ಮಳೆಯೂ ಆಗದಿರುವುದರಿಂದ ಇನ್ನಷ್ಟು ರೈತರು ಉಳುಮೆ ಮಾಡದೆಯೇ ಜಮೀನನ್ನು ಬೀಳುಬಿಟ್ಟಿರುವ ಸನ್ನಿವೇಶವೂ ಇದೆ.ನಿರಾಶೆ: ಜಿಲ್ಲೆಯಲ್ಲಿ 1.02 ಲಕ್ಷ ಹೆಕ್ಟೇರ್ ಕೃಷಿ ಕ್ಷೇತ್ರವಿದೆ. ಆ ಪೈಕಿ ಇದುವರೆಗೆ ಕೇವಲ 1672 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಶೇ 2ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಹೊತ್ತಿಗೆ 3 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು.ಕಳೆದ ವರ್ಷದ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ನಿರಾಶಾದಾಯಕ ಸನ್ನಿವೇಶವಿದೆ. ಕಳೆದ ವರ್ಷ ಜುಲೈ ಮೊದಲ ವಾರದಲ್ಲಿ 30.7 ಸೆಂ.ಮೀ. ಮಳೆ ಸುರಿದಿತ್ತು. ಆದರೆ ಈ ಬಾರಿ ಕೇವಲ 18.1 ಸೆಂ.ಮೀ. ಮಳೆ ಮಾತ್ರ ಸುರಿದಿದೆ. ಜಿಲ್ಲೆಯ ರೈತರ ಮಟ್ಟಿಗೆ ಇದು ವಿಷಾದನೀಯ ಸಂಗತಿಯೂ ಹೌದು.ಜಿಲ್ಲೆಯಲ್ಲಿ 4500 ಹೆಕ್ಟೇರ್ ಗುರಿ ಪೈಕಿ ಕೇವಲ 405 ಹೆಕ್ಟೇರ್‌ನಲ್ಲಿ ಮಾತ್ರ ತೊಗರಿ ಬಿತ್ತನೆ ನಡೆದಿದೆ. ಅಲಸಂದೆ 2 ಸಾವಿರ ಹೆಕ್ಟೇರ್ ಪೈಕಿ 95 ಹೆಕ್ಟೇರ್‌ನಲ್ಲಿ, ಅವರೆ 9 ಸಾವಿರ ಹೆಕ್ಟೇರ್ ಪೈಕಿ  105 ಹೆಕ್ಟೇರ್ ಬಿತ್ತನೆಯಾಗಿದೆ. ಒಟ್ಟಾರೆ 15.5 ಸಾವಿರ ಹೆಕ್ಟೇರ್ ಗುರಿ ಪೈಕಿ ಕೇವಲ 605 ಹೆಕ್ಟೇರ್‌ನಷ್ಟು ಮಾತ್ರ ದ್ವಿದಳ ಧಾನ್ಯಗಳ ಬಿತ್ತನೆಯಾಗಿದೆ. 14100 ಹೆಕ್ಟೇರ್ ಗುರಿ ಪೈಕಿ 1410 ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ.ಅಳಲು: ಈಗ ಮಳೆ ಬಂದರೆ, ಉಳುಮೆ ಮತ್ತು ಬಿತ್ತನೆ ಕಾರ್ಯ ಎರಡನ್ನೂ ಏಕಕಾಲಕ್ಕೆ ಮಾಡಬೇಕಾದ ಅನಿವಾರ್ಯವೂ ಸೃಷ್ಟಿಯಾಗಿದೆ. ಮಾಗಿ ಉಳುಮೆ ಮಾಡಿ ಭೂಮಿಯನ್ನು ಹದ ಮಾಡಿಕೊಂಡಿದ್ದು ಬಿತ್ತನೆ ಮಾಡಿದರೆ ಬೆಳೆ ಸಮೃದ್ಧಿಯಾಗಿ ಬರುತ್ತದೆ. ಬಿತ್ತನೆ ಉಳುಮೆ ಎರಡೂ ಏಕಕಾಲಕ್ಕೆ ನಡೆದರೆ ಸಮೃದ್ಧ ಬೆಳೆ ದೊರಕುವುದಿಲ್ಲ ಎನ್ನುತ್ತಾರೆ ನೆನಮನಹಳ್ಳಿಯ ರೈತ ಎನ್.ಆರ್.ಚಂದ್ರಶೇಖರ್.ಆಗಾಗ್ಗೆ ಮಳೆ ಸುರಿದ ಹಿನ್ನೆಲೆಯಲ್ಲಿ ಈಗಾಗಲೇ ಐದಾರು ಬಾರಿ ಜಮೀನು ಉಳುಮೆ ಮಾಡಿದ್ದೇವೆ. ಬಿತ್ತನೆಗೆ ಭೂಮಿ ಸಿದ್ಧವಿದೆ. ಆದರೆ ಇನ್ನೂ ಮಳೆಯೇ ಬಂದಿಲ್ಲ ಎನ್ನುತ್ತಾರೆ ತೇರಳ್ಳಿಯ ಬೆಟ್ಟ ಸಾಲಿನಲ್ಲಿರುವ ರೈತ ಶ್ರೀನಿವಾಸ್, ಪಾಪರಾಜನಹಳ್ಳಿಯ ನಾರಾಯಣಸ್ವಾಮಿ, ಚಂದ್ರಪ್ಪ, ವೆಂಕಟಪ್ಪ.ಈಗ ಇರುವ ತೇವದಲ್ಲೇ ರಾಗಿಯನ್ನು ಬಿತ್ತನೆ ಮಾಡುತ್ತೇನೆ. ಮೊಳೆಯಲು ಈಗಿರುವ ತೇವವೇ ಸಾಕು ಎಂಬುದು ಚಂದ್ರಪ್ಪನವರ ವಿಶ್ವಾಸ.ಮಳೆಗಾಗಿ ಕಾಯುವುದು ಜಿಲ್ಲೆಯ ರೈತರ ಅನಿವಾರ್ಯ ಕರ್ಮ ಎಂಬ ಸನ್ನಿವೇಶದ ನಡುವೆಯೇ ಕರ್ಮಯೋಗಿಗಳು ನಿರಾಶೆ, ನಿರುತ್ಸಾಹವನ್ನು ಮೆಟ್ಟಿ ನಿಲ್ಲುವ ದಾರಿಯನ್ನು ಹುಡುಕುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry