ಭಾನುವಾರ, ನವೆಂಬರ್ 17, 2019
28 °C
ಸುಡು ಬಿಸಿಲು, ನೀರಿನ ಕೊರತೆ; ಬೆಳೆಗಾರ ಕಂಗಾಲು

ಬಾರದ `ರೇವತಿ': ಚಿಗುರೊಡೆಯದ ಕಾಫಿ!

Published:
Updated:
ಬಾರದ `ರೇವತಿ': ಚಿಗುರೊಡೆಯದ ಕಾಫಿ!

ಚಿಕ್ಕಮಗಳೂರು:  ಕಾಫಿ ಬೆಳೆಗಾರರ ಪಾಲಿಗೆ  `ಹೂವಿನ ಮಳೆ-ದುಡ್ಡಿನ ಮಳೆ' ಎಂದೇ ಹೆಸರಾಗಿರುವ ರೇವತಿ ಮಳೆಯಾಗದೇ ಮಲೆನಾಡಿನಲ್ಲಿ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.ಎರಡು ವಾರಗಳಿಂದ ಮಲೆನಾಡಿನಲ್ಲಿ ಮಳೆ ಹನಿ ಸದ್ದು ಇಲ್ಲದಂತಾಗಿದೆ. ಫೆಬ್ರುವರಿಯಲ್ಲಿ ಪೂರ್ವಭಾದ್ರ ಮಳೆ ಬಂದಿದ್ದರಿಂದ ಬಹುತೇಕ ಕಾಫಿ ತೋಟಗಳಲ್ಲಿ ಕಾಫಿ ಹೂವು ಅರಳಿ ನಿಂತಿತ್ತು. ಹೂವು ಫಸಲುಗಟ್ಟಲು ಪೂರಕವಾಗುವಂತೆ ಉತ್ತರಭಾದ್ರೆಯೂ ಒಂದೆರಡು ಹದ ಸುರಿಯಿತು. ಹೀಗಾಗಿ ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಮಲೆನಾಡಿನಲ್ಲಿ ಕಾಫಿ `ಹೂವಿನ ಹಬ್ಬ' ನಡೆದಿತ್ತು.ಇಷ್ಟೊತ್ತಿಗೆ ರೇವತಿ ಮಳೆ ಸುರಿದು, ಕಾಫಿ ಗಿಡಗಳಲ್ಲಿ ಚಿಗುರು ತೆಗೆಯುವ ಕೆಲಸ ಆರಂಭವಾಗಬೇಕಿತ್ತು. ಆದರೆ, ಗಿರಿಪ್ರದೇಶದ ಕೆಲ ಭಾಗ ಹೊರತುಪಡಿಸಿ ಮಲೆನಾಡಿನಲ್ಲಿ ಎರಡು ವಾರಗಳಿಂದ ಮಳೆ ಸುರಿದಿಲ್ಲ. ಬಿಸಿಲ ಧಗೆ ವಿಪರೀತವಾಗಿದೆ.ತಾಪಮಾನದಲ್ಲಿ ಏರಿಕೆ ಉಂಟಾಗಿದೆ. ಸದಾ ತಂಪು ವಾತಾವರಣದಿಂದ ಹಿತಾನುಭವ ಕಟ್ಟಿಕೊಡುತ್ತಿದ್ದ ಮಲೆನಾಡಿನಲ್ಲೂ ಬಿಸಿಲ ಧಗೆಯಿಂದ ಜನರು ಹೊರಬರಲು ಅಂಜುವಂತಾಗಿದೆ.ಗರಿಷ್ಠ 36-37 ಡಿಗ್ರಿ ಉಷ್ಣಾಂಷ ದಾಖಲಾಗುತ್ತಿದೆ. ಫಸಲುಗಟ್ಟಬೇಕಾದ ಹಂತದಲ್ಲಿರುವ ಕಾಫಿ ಗಿಡಗಳು ಸುಡು ಬಿಸಿಲಿಗೆ ಬಾಡುತ್ತಿವೆ.`ರೇವತಿ ಮಳೆ ಬಾರದೆ ಇದೇ ವಾತಾವರಣ ಒಂದೆರಡು ವಾರ ಮುಂದುವರಿದರೆ ತೋಟಗಳಲ್ಲಿ ಕಾಫಿಗಿಡ ಮತ್ತು ಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಬಿಳಿ ಕಾಂಡಕೊರಕ ಬಾಧೆಯಿಂದ ಕಾಫಿ ಗಿಡಗಳನ್ನು ರಕ್ಷಿಸಿಕೊಳ್ಳುವುದು ಹರಸಾಹಸವಾಗುತ್ತದೆ' ಎನ್ನುತ್ತಾರೆ ಕಾಫಿ ಬೆಳೆಗಾರ ವಾಟಿಗನಹಳ್ಳಿ ಮಂಜುನಾಥ್.ಫೆಬ್ರುವರಿಯಲ್ಲೇ ಹೂವು

ರೋಬಸ್ಟಾ ಫೆಬ್ರುವರಿಯಲ್ಲಿ ಹೂವಾದರೆ, ಅರೆಬಿಕಾ ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ರೇವತಿ ಮಳೆಗೆ ಹೂವು ಆಗುತ್ತಿತ್ತು. ಆದರೆ ಈ ಬಾರಿ ರೇವತಿಗೂ ಪೂರ್ವದಲ್ಲೇ ಒಂದೆರಡು ಹದ ಮಳೆ ಚೆನ್ನಾಗಿ ಸುರಿದಿದ್ದರಿಂದ ಒಂದು ತಿಂಗಳು ಮುಂಚಿತವಾಗಿಯೇ ಫೆಬ್ರುವರಿಯಲ್ಲಿ ಎರಡು ಹಂತದಲ್ಲಿ ಅರೆಬಿಕಾ ಹೂವಾಗಿದೆ. ನೀರಾವರಿ ಸೌಲಭ್ಯ ಉಳ್ಳವರು ನೀರು ಉಣಿಸಿ, ಫಸಲು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಮಳೆ ನಂಬಿಕೊಂಡೇ ಕಾಫಿ ಬೆಳೆ ಮಾಡಿರುವ ಬಹುತೇಕ ಅರೇಬಿಕಾ ಬೆಳೆಗಾರರು, ಬಾಡುತ್ತಿರುವ ಗಿಡಗಳನ್ನು ನೋಡಿ ಕೊರಗು ವಂತಾಗಿದೆ.

 

ಪ್ರತಿಕ್ರಿಯಿಸಿ (+)