ಬಾರದ ವಿದ್ಯುತ್: ಹೋರಾಟ ಅರಣ್ಯರೋದನ!

7

ಬಾರದ ವಿದ್ಯುತ್: ಹೋರಾಟ ಅರಣ್ಯರೋದನ!

Published:
Updated:

ಸಿದ್ದಾಪುರ: `ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ~ ಎಂಬಂತಾಗಿದೆ ಕರಡಿಗೋಡು 2ನೇ ವಾರ್ಡ್‌ನ 17 ಕುಟುಂಬದ ಸ್ಥಿತಿ. ಮೂರು ದಶಕಗಳಿಂದ ವಿದ್ಯುತ್ ಸಂಪರ್ಕ ಲಭಿಸದೇ ಇದ್ದರಿಂದ ನಿವಾಸಿಗಳು ಹೋರಾಟ ನಡೆಸುತ್ತಿದ್ದರೂ ವಿದ್ಯುತ್ ಸಂಪರ್ಕ ಮಾತ್ರ ಮರೀಚಿಕೆಯಾಗಿ ಉಳಿದಿದೆ.ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ಸಂಪರ್ಕ ಕಲ್ಪಿಸಬೇಕೆಂದು ಅನೇಕ ವರ್ಷಗಳ ಹಿಂದೆ ಯೋಜನೆ ರೂಪಿತವಾಗಿದ್ದರೂ ಇದುವರೆಗೂ ಬೆಳಕು ಕಾಣುವ ಭಾಗ್ಯ ಇಲ್ಲಿಯ ನಿವಾಸಿಗಳಿಗೆ ಒದಗಿ ಬಂದಿಲ್ಲ. ಮೂವತ್ತು ವರ್ಷಗಳಿಂದ ಅಲೆದು ಅಲೆದು ಹೈರಾಣಾಗಿದ್ದಾರೆ.ಸಿದ್ದಾಪುರ ಪಟ್ಟಣದಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿರುವ ಕರಡಿಗೋಡು 2ನೇ ವಾರ್ಡ್‌ಗೆ ವರ್ಷಗಳ ಹಿಂದೆ ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ಸಂಪರ್ಕ ಕಲ್ಪಿಸಬೇಕೆಂದು ಸೆಸ್ಕ್‌ನಿಂದ ಆದೇಶ ಬಂದಿತ್ತು. ಪಟ್ಟಣದಿಂದ ಅನತಿ ದೂರದಲ್ಲಿರುವ ಮತ್ತು 2ನೇ ವಾರ್ಡ್‌ನ ಸುತ್ತ ಇರುವ ಜನವಸತಿ ಪ್ರದೇಶಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ದೊರಕಿದೆ. ಆದರೆ, 2ನೇ ವಾರ್ಡ್ ಮಾತ್ರ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿರುವುದು ನಿವಾಸಿಗಳಲ್ಲಿ ಪ್ರಶ್ನೆ ಹುಟ್ಟುಹಾಕಿದೆ.ಅನೇಕ ಬಾರಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಯಾವುದೇ ಫಲ ದೊರೆಯದ ಹಿನ್ನೆಲೆಯಲ್ಲಿ ತಾ.ಪಂ, ಜಿ.ಪಂ. ಮತ್ತು ಗ್ರಾ.ಪಂ. ಚುನಾವಣೆ ಬಹಿಷ್ಕರಿಸಲು ನಿವಾಸಿಗಳು ಮುಂದಾಗಿದ್ದರು. ವಿಷಯ ಅರಿತು ದೌಡಾಯಿಸಿದ ಜನಪ್ರತಿನಿಧಿಗಳು `ಇಲ್ಲಿ ಅಳವಡಿಸಲು ಮೀಸಲಿರುವ ವಿದ್ಯುತ್ ಕಂಬಗಳನ್ನು ಅಮ್ಮತಿ ಗ್ರಾ.ಪಂ. ವ್ಯಾಪ್ತಿಯ ಬೈರಂಬಾಡ ಗ್ರಾಮದಲ್ಲಿ ಶೇಖರಿಸಲಾಗಿದೆ. ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಒದಗಿಸುತ್ತೇವೆ.ಚುನಾವಣೆ ಬಹಿಷ್ಕಾರ ಕೈಬಿಡಿ ಎಂದು ಮನವಿ ಮಾಡಿದ್ದರು. ಆದರೆ, ಚುನಾವಣೆ ಮುಗಿದು ವರ್ಷ ಉರುಳಿವೆ. ವಿದ್ಯುತ್ ಸಂಪರ್ಕ ಮಾತ್ರ ಗಗನಕುಸುಮವಾಗಿದೆ~ ಎಂಬುದು ಜನರ ಆಕ್ರೋಶಭರಿತ ಮಾತು.ಕೆಲ ದಿನದ ಹಿಂದೆ ನಿವಾಸಿಗಳು ವಿದ್ಯುತ್ ಸಂಪರ್ಕ ಹೊಂದುವ ಸಲುವಾಗಿ ಅಮ್ಮತಿ ಗ್ರಾ.ಪಂ ವ್ಯಾಪ್ತಿಯ ಬೈರಂಬಾಡ ಗ್ರಾಮದಲ್ಲಿ ಶೇಖರಿಸಿಟ್ಟಿದ್ದ ಕಂಬಗಳನ್ನು ತಾವೇ ವೆಚ್ಚ ಭರಿಸಿ ತರಲು ಮುಂದಾಗಿದ್ದರು. ಹೀಗೆ ಕಂಬಗಳನ್ನು ಲಾರಿಯಲ್ಲಿ ತರುತ್ತಿದ್ದಾಗ ಸೆಸ್ಕ್ ಕಚೇರಿ ಬಳಿ ವಾಹನ ತಡೆದು ನಿಲ್ಲಿಸಿದ ಎಂಜಿನಿಯರ್ `ವಿದ್ಯುತ್ ಸಂಪರ್ಕ ಒದಗಿಸಲು ಇತರೆ ಸಲಕರಣೆಗಳ ಕೊರತೆಯಿದೆ. ಆದ್ದರಿಂದ ಕಂಬಗಳನ್ನು ಇಲ್ಲೇ ಇಳಿಸಿ.ಸಲಕರಣೆಗಳು ಬಂದ ನಂತರ ವಿದ್ಯುತ್ ಸಂಪರ್ಕ ಒದಗಿಸುತ್ತೇವೆ~ ಎಂಬ ಭರವಸೆ ನೀಡಿದರು. ಇದಾಗಿ ವರ್ಷ ಉರುಳಿವೆ. ಆದರೆ, ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ~ ಎನ್ನುತ್ತಾರೆ ಗ್ರಾಮಸ್ಥರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry