ಶುಕ್ರವಾರ, ಜೂನ್ 18, 2021
27 °C

ಬಾರುಗಳಲ್ಲಿ ಕರಗಿದ ಕನಸು!

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಒಂದು ಹಿಡಿ ಪ್ರೀತಿಗಾಗಿ ಹಪಹಪಿಸುವ ಜೀವಗಳು ಬಾರಿನ ಮಾಂಸ, ಮದ್ಯ, ಸಿಗರೇಟು ಘಾಟಿನ ವಾಸನೆಯಲ್ಲಿ ನರಳಬೇಕಾಗಿದೆ. ಪೆನ್ನು ಹಿಡಿಯಬೇಕಾದ ಕೈಗಳಲ್ಲಿ ಗಿರಾಕಿಯ ತುಟಿಯಲ್ಲಿನ ಸಿಗರೇಟಿಗೆ ಬೆಂಕಿ ಹಚ್ಚುತ್ತಿದ್ದಾರೆ. ಗ್ಲಾಸಿನೊಳಗೆ ಶರಾಬು ಸುರಿಯುತ್ತಾ ತಮ್ಮ ಬಾಲ್ಯ ಕರಗಿಸುತ್ತಿದ್ದಾರೆ.ಈ ಅಮಾಯಕ ಬಾಲಕರ ಹಣೆಯಲ್ಲಿ ದೇವರು ಬರೆದಿರುವ ಷರಾ ಇದೇನಾ...?

31ಇ ಬಸ್ಸನ್ನೇರಿದ ಆ ಬಾಲಕ ಮತ್ತೆ ನೆನಪಾಗುತ್ತಿದ್ದಾನೆ. ಅವತ್ತು ತ್ಯಾಗರಾಜನಗರದ ಬಳಿ ಬಿಎಂಟಿಸಿ ಬಸ್ಸಿನೊಳಗೆ ಸುಮಾರು 12 ವರ್ಷ ವಯಸ್ಸಿನ ಹುಡುಗನನ್ನು ದೂಡಿದ ಆ ವ್ಯಕ್ತಿ `ರೀ ಕಂಡಕ್ಟ್ರೇ ಈ ಹುಡುಗನನ್ನು ಮೆಜೆಸ್ಟಿಕ್‌ನಲ್ಲಿ ಇಳಿಸ್ರಿ~ ಎಂದು ಹೇಳಿ ಕೈಗೆ ಹತ್ತು ರೂಪಾಯಿ ಕೊಟ್ಟ.ಕೆಳಗೆ ಜಾರುತ್ತಿದ್ದ ಚೆಡ್ಡಿಯನ್ನು ಮೇಲೆತ್ತಿಕೊಂಡ ಆ ಹುಡುಗ ಮತ್ತೊಂದು ಕೈಯಿಂದ ಗೊಣ್ಣೆ ಒರೆಸಿಕೊಂಡು ಬಸ್ಸಿನ ಮೂಲೆಯಲ್ಲಿ ನಿಂತುಕೊಂಡ.ಪಕ್ಕದಲ್ಲೇ ಇದ್ದ ಯಜಮಾನರೊಬ್ಬರು, `ಈ ಹುಡುಗನನ್ನು ಬಾರೊಂದರಲ್ಲಿ ನೋಡಿದ್ದೆ. ಏಕೋ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅನ್ಸುತ್ತೆ. ಅದಕ್ಕೆ ಕೆಲಸ ಬಿಟ್ಟು ಓಡಿಸಿರಬೇಕು~ ಎಂದರು.

 

ಆ ಹುಡುಗನನ್ನು ಮಾತನಾಡಿಸಬೇಕು ಅನಿಸಿತು. ಬೆನ್ನು ಮುಟ್ಟಿದ ತಕ್ಷಣ ಅಳಲು ಶುರು ಮಾಡಿದ. ಕೈ ಸನ್ನೆ ಮಾಡಿದೆ. ಪಾಪ, ಮಾತನಾಡಲು ಬಾಯಿ ಬರುತ್ತಿರಲಿಲ್ಲ. ಇರಲಿ ಎಂದು ಮೊಬೈಲ್‌ನಲ್ಲಿ ಆ ಹುಡುಗನ ಫೋಟೊ ಕ್ಲಿಕ್ಕಿಸಿದೆ. ನನ್ನ ಸ್ಟಾಪ್ ಬಂದ ಕಾರಣ ಕೆಳಗಿಳಿಯಬೇಕಾಯಿತು.ಆದರೆ ಆ ಹುಡುಗ... ಮೆಜೆಸ್ಟಿಕ್‌ನಲ್ಲಿ ಇಳಿದನೇ? ಅವನದ್ದು ಯಾವ ಊರಿರಬಹುದು? ಬೆಂಗಳೂರು, ಗುಲ್ಬರ್ಗ, ಬಿಹಾರ ಇರಬಹುದಾ? ಅಪ್ಪ ಬೈದರು ಎಂದು ಮನೆ ಬಿಟ್ಟು ಓಡಿ ಬಂದಿರಬಹುದಾ? ಬಡತನ ಸಹಿಸಲಾರದೇ ಪೋಷಕರೇ `ಹೋಗು ಎಲ್ಲಾದರೂ ಬದುಕಿಕೊ~ ಎಂದು ಬೆಂಗಳೂರಿಗೆ ಹೊರಡುವ ರೈಲು ಹತ್ತಿಸಿರಬಹುದೇ? ಆ ಯಜಮಾನರು ಹೇಳಿದಂತೆ ಈ ಹುಡುಗ ಬಾರಿನಲ್ಲಿ ಕೆಲಸ ಮಾಡುತ್ತಿದ್ದದ್ದು ನಿಜವೇ? ಅಥವಾ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಮನೆಯೊಡತಿ ಬೈದು ಕಳುಹಿಸಿದಳೇ? ಮಾಯಾನಗರಿಯ ಜನಜಂಗುಳಿ ನಡುವೆ ಅಪ್ಪ-ಅಮ್ಮನ ಕೈತಪ್ಪಿ ಹೋಗಿರಬಹುದೇ? ಮೆಜೆಸ್ಟಿಕ್‌ನಿಂದ ಆತ ಮತ್ತೆಲ್ಲಿ ಹೋಗಬಹುದು?ಆ ಹುಡುಗನ ಬಗ್ಗೆ ಯೋಚನೆ ಮಾಡಿದಾಗಲೆಲ್ಲಾ ಮನಸ್ಸಿನೊಳಗೆ ಮತ್ತಷ್ಟು ಪ್ರಶ್ನೆಗಳು! ಮೊಬೈಲ್‌ನಲ್ಲಿ ಸೆರೆ ಹಿಡಿದ ಆತನ ಚಿತ್ರಗಳು ಇನ್ನೂ ಇವೆ. ಮಾತನಾಡಲು ಬಾರದ ಆ ಹುಡುಗ ತೊದಲಿದ್ದು ಮತ್ತೆ ಮತ್ತೆ ಕಿವಿಗೆ ಬಡಿದಂತಾಗುತ್ತಿದೆ.ಗೊತ್ತು ಗುರಿ ಇಲ್ಲದ ಆ ಅಮಾಯಕ ಹುಡುಗನ ಬಗ್ಗೆ ಯೋಚನೆ ಮಾಡುತ್ತಲೇ ಮನಸು ತಿರುಗ್ದ್ದಿದು ಬಾರಿನ ಕಡೆಗೆ. ಅಂದರೆ ಗಿರಾಕಿಗಳ ಗ್ಲಾಸಿನೊಳಗೆ ಶರಾಬು ಸುರಿಯುತ್ತಾ ತಮ್ಮ ಬಾಲ್ಯವನ್ನು ಕರಗಿಸುತ್ತಿರುವ ಮಕ್ಕಳೆಡೆಗೆ.ಏನನ್ನೊ ಕೇಳುವ ನೆಪದಲ್ಲಿ ಸಂಜೆ ಸುಮ್ಮನೇ ಏಳೆಂಟು ಬಾರುಗಳಿಗೆ ಒಬ್ಬನೇ ಹೋಗಿಬಂದೆ. `ನನ್ನೊಬ್ಬ ಫ್ರೆಂಡ್ ಇಲ್ಲಿದ್ದ. ಈಗ ಎಲ್ಲಿರಬಹುದು, ನಿಮಗೆ ಗೊತ್ತೇ~ ಎಂದು ಕೇಳುವ ನೆಪದಲ್ಲಿ ಚಾಮರಾಜಪೇಟೆ, ಕಲಾಸಿಪಾಳ್ಯ, ಮೆಜೆಸ್ಟಿಕ್‌ನ ಕೆಲ ಬಾರುಗಳಲ್ಲಿ ದುಡಿಯುತ್ತಿರುವ ಮಕ್ಕಳೊಂದಿಗೆ ಮಾತನಾಡಿದೆ.ಗುಂಡು-ತುಂಡು ಸರಬರಾಜು ಮಾಡುತ್ತಾ, ಟೇಬಲ್ ಒರೆಸುತ್ತಾ ದುಡಿಯುತ್ತಿರುವ ಎಳೆ ಜೀವಗಳ ದುರಂತಮಯ ಬದುಕು ಬೆತ್ತಲಾಗುತ್ತಾ ಹೋಯಿತು...ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕಡೆಯ ಹೆಚ್ಚಿನ ಮಕ್ಕಳು ಸಿಲಿಕಾನ್ ಸಿಟಿಯ ಬಾರುಗಳಲ್ಲಿ ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲ, ದೂರದ ರಾಜ್ಯಗಳಿಂದ, ಜಿಲ್ಲೆಗಳಿಂದ, ಹಳ್ಳಿಗಳಿಂದ ಹೈಟೆಕ್ ನಗರಿಗೆ ಬಂದಿಳಿದು ಬಾರುಗಳು, ರೆಸ್ಟೋರೆಂಟ್‌ಗಳು, ದರ್ಶಿನಿಗಳು, ಗ್ಯಾರೇಜ್‌ಗಳಲ್ಲಿ ಪುಡಿಗಾಸಿಗಾಗಿ ಕೆಲಸ ಮಾಡುತ್ತಿರುವವರು ತುಂಬಾ ಮಂದಿ ಇದ್ದಾರೆ.ಕೆಲವರ ವಯಸ್ಸು ಇನ್ನೂ 10 ದಾಟಿಲ್ಲ! ಕೆಲವರು ಶಾಲೆ ಬಿಟ್ಟು ಬಂದಿರುತ್ತಾರೆ. ಇನ್ನು ಕೆಲವರನ್ನು ಬಡತನ ಸಹಿಸಲಾಗದೇ ಪೋಷಕರೇ ಇಂತಹ ಕೆಲಸಗಳಿಗೆ ಸೇರಿಸಿರುತ್ತಾರೆ. ಸಂಜೆ 6ರಿಂದ ರಾತ್ರಿ 12ರವರೆಗೆ ಬಾರುಗಳಲ್ಲಿ ದುಡಿದು ಬೆಳಿಗ್ಗೆ ಎದ್ದು ಶಾಲಾ, ಕಾಲೇಜಿಗೆ ಹೋಗುವವರೂ ಇದ್ದಾರೆ.`ಹೇಳಿದ ಕೆಲಸ ಮಾಡುವುದು ಕೊಂಚ ತಡವಾಯಿತು ಎಂದರೆ ಮಾಲೀಕರು ತಲೆಗೆ ಹೊಡಿತಾರೆ. ಕೇಳಿದ್ದನ್ನು ತಂದುಕೊಡದಿದ್ದರೆ ಗಿರಾಕಿಗಳು ಬೈಯುತ್ತಾರೆ. ಬೆಳಿಗ್ಗೆ ಆರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಒಂದು ಗಂಟೆಗೆ. ಮಾಂಸದ ಊಟ ಉಳಿದಿದ್ದರೂ ನಮಗೆ ಕೊಡುವುದಿಲ್ಲ.

 

ಅನ್ನಕ್ಕೆ ತಿಳಿ ಸಾರು ಬಿಟ್ಟು ಕೊಡುತ್ತಾರೆ~ ಎಂದು ಕೆ.ಆರ್.ಮಾರ್ಕೆಟ್‌ನ ಬಾರೊಂದರಲ್ಲಿರುವ ಅರಸೀಕೆರೆಯ ಉಮೇಶ್ ನುಡಿಯುತ್ತಾನೆ.ಮನೆ ಬಿಟ್ಟು ಮಂಡ್ಯದಿಂದ ಬಂದಿರುವ ದಿನೇಶ್ ಶಾಲಾ ಯೂನಿಫಾರ್ಮ್‌ನಲ್ಲೇ ಮೆಜೆಸ್ಟಿಕ್‌ನ ಬಾರೊಂದರಲ್ಲಿ ದುಡಿಯುತ್ತಿದ್ದಾನೆ. `ಒಂದು ಗ್ಲಾಸು ಒಡೆದು ಹಾಕಿದರೆ ಅವತ್ತಿನ ಸಂಬಳ ಕೊಡುವುದಿಲ್ಲ. ಊಟ ಹಾಕುವುದಿಲ್ಲ. ಕೆಟ್ಟ ಮಾತುಗಳಲ್ಲಿ ಬೈಯುತ್ತಾರೆ~ ಎಂದು ಕಲಾಸಿಪಾಳ್ಯದ ಬಾರಿನಲ್ಲಿ ದುಡಿಯುತ್ತಿರುವ 12 ವರ್ಷದ ಮಲ್ಲೇಶ್ ತನ್ನ ಕಷ್ಟವನ್ನು ಬಿಚ್ಚಿಡುತ್ತಾನೆ. ಇವನದ್ದು ಹಾಸನ ಜಿಲ್ಲೆಯ ಹಗರೆ.ಈ ಹುಡುಗರ ಸಂಬಳ ತಿಂಗಳಿಗೆ ಒಂದು ಸಾವಿರಕ್ಕಿಂತ ಹೆಚ್ಚಿಲ್ಲ. ಕೆಲವು ಬಾರುಗಳಲ್ಲಿ ಐನೂರು ರೂಪಾಯಿ ಕೊಡುತ್ತಾರೆ ಅಷ್ಟೆ. ಇದರಲ್ಲಿ ಈ ಹುಡುಗರು ಮನೆಗೆಷ್ಟು ಕೊಟ್ಟಾರು ಹೇಳಿ? ಮೂರು ಹೊತ್ತು ಊಟ ಕೊಡುತ್ತಾರೆ. ಬಾರಿನ ಮೇಲ್ಛಾವಣಿಯೇ ಇವರ ಬೆಡ್ ರೂಮ್. ನಕ್ಷತ್ರ ಎಣಿಸುತ್ತಾ ಕನಸು ಹೆಣೆಯಬೇಕಾದ ಪರಿಸ್ಥಿತಿ ಈ ಮಕ್ಕಳದ್ದು.`ನನಗೆ ದಿನಕ್ಕೆ ನೂರು ರೂಪಾಯಿ ಟಿಪ್ಸ್ ಸಿಗುತ್ತೆ. ಆದರೆ ಹಿರಿಯ ಕೆಲಸಗಾರರು ಅದನ್ನು ಕಿತ್ತುಕೊಳ್ಳುತ್ತಾರೆ. ಕೊನೆಗೆ 10 ರೂಪಾಯಿ ಕೈಗಿಡುತ್ತಾರೆ. ಹಾಗಾಗಿ ಅವ್ವನಿಗೆ ತಿಂಗಳಿಗೆ 500 ರೂಪಾಯಿ ಮಾತ್ರ ಕೊಡ್ತೀನಿ~ ಎನ್ನುವುದು ಮೆಜೆಸ್ಟಿಕ್‌ನ ಬಾರೊಂದರಲ್ಲಿ ಕಳೆದ ಮೂರೂವರೆ ವರ್ಷಗಳಿಂದ ದುಡಿಯುತ್ತಿರುವ ಗುಂಡ್ಲುಪೇಟೆಯ 14 ವರ್ಷದ ಸತೀಶ್ ದುಗುಡ.ಅರ್ಧದಲ್ಲೇ ಏಳನೇ ತರಗತಿಗೆ ತಿಲಾಂಜಲಿ ಇಟ್ಟು ಬಂದಿರುವ ಮದ್ದೂರಿನ ಪ್ರದೀಪ್‌ಗೆ ಈಗ ಬಾರೇ ಮನೆ ಆಗಿದೆ. ಕೆ.ಆರ್.ಪೇಟೆಯ ಚಂದ್ರು ಒಂದೂವರೆ ವರ್ಷದಲ್ಲಿ ನಾಲ್ಕು ಬಾರು ಬದಲಾಯಿಸಿದ್ದಾನೆ. ಇದು ಎಲ್ಲೆಲ್ಲಿಂದಲೋ ಬಂದು ಉದ್ಯಾನ ನಗರಿಯ ಬಾರುಗಳಲ್ಲಿ ದುಡಿಯುತ್ತಿರುವ ಬಾಲ ಕಾರ್ಮಿಕರ ಬದುಕು. ಆದರೆ ಜೀವನ ಸಾಗಬೇಕಲ್ಲ. ಅದಕ್ಕಾಗಿ ಹೊಡೆದರೆ ಹೊಡೆಸಿಕೊಂಡು ಬೈದರೆ ಬೈಯಿಸಿಕೊಂಡು ಕಣ್ಣೀರನ್ನು ಕಣ್ಣಲ್ಲೇ ಹಿಂಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಬಾರಿಗೆ ಹೋಗುವವರಿಗೆ ಗೊತ್ತಿರುವ ನಗ್ನ ಸತ್ಯವಿದು. ವಾಪಸು ಬರುವಾಗ ಗೊತ್ತಿರುವುದಿಲ್ಲ ಅಷ್ಟೆ!ಆದರೆ ಬಾರುಗಳ ಮಾಲೀಕರು ಹೇಳುವುದೇ ಬೇರೆ. `ಕೆಲಸ ಕೊಡಿ ಎಂದು ದಂಬಾಲು ಬೀಳುತ್ತಾರೆ. ಕೆಲವರು ಊಟ ಹಾಗೂ ಮಲಗಲು ಜಾಗ ಕೊಡಿ ಸಾಕು ಹೇಳಿದ ಕೆಲಸ ಮಾಡುತ್ತೇವೆ ಎನ್ನುತ್ತಾರೆ.ಅಂಥವರನ್ನು ಕೆಲಸಕ್ಕೆ ಸೇರಿಸಿಕೊಂಡರೆ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಅಯ್ಯೋ ಪಾಪ ಎನಿಸಿಬಿಡುತ್ತದೆ~ ಎನ್ನುತ್ತಾರೆ ಚಾಮರಾಜಪೇಟೆಯ ಬಾರೊಂದರ ಮ್ಯಾನೇಜರ್.ಬಾರುಗಳಲ್ಲಿ ಬೆಳೆಯುವ ಈ ಹುಡುಗರು ಅಪಾಯಕಾರಿ ಕೂಡ. ಯಾವುದೋ ಆಸೆಗೋ ಯಾರದ್ದೋ ಆಮಿಷಕ್ಕೆ ಬಲಿಯಾಗುವ ಈ ಮಕ್ಕಳು ಕೆಲವೊಮ್ಮೆ ಅಪರಾಧ ಕೃತ್ಯ ಎಸಗಲೂ ಹಿಂದೆ ಮುಂದೆ ನೋಡುವುದಿಲ್ಲ.ಮೆಜೆಸ್ಟಿಕ್, ಕಲಾಸಿಪಾಳ್ಯ, ಶಿವಾಜಿನಗರ ಸುತ್ತಮುತ್ತ ನೋಡಿ. ಬಾರು ಹುಡುಗರ ಒಂದು ಪಟಾಲಮ್ಮೇ ಇದೆ. ಆ ಪ್ರದೇಶದ ಸಣ್ಣಪುಟ್ಟ ರೌಡಿಗಳೊಂದಿಗೆ ಸ್ನೇಹ ಬೆಳೆಸಿರುತ್ತಾರೆ. ಈ ಗುಂಪಿನ ಯಾರಿಗಾದರೂ ಕೈ ಮಾಡಿದರೆ ಆತನ ಕಥೆ ಮುಗಿಯಿತು ಎಂತಲೇ ಅರ್ಥ.

 

ಅಷ್ಟೇ ಅಲ್ಲ; ಸಣ್ಣ ಮಕ್ಕಳ ಕೈಯಲ್ಲೂ ಸಿಗರೇಟು, ಬಾಯಿ ತುಂಬಾ ಪಾನ್ ಪರಾಗ್. ಕೊನೆಗೆ ಬಾಯಲ್ಲಿ ಬ್ಲೇಡ್, ಕೈಯಲ್ಲಿ ಚಾಕು! ಈ ಮಕ್ಕಳನ್ನು ರಕ್ಷಿಸುವವರು ಯಾರು? ಅವರಿಗೆ ಆಸರೆ ನೀಡುವವರು ಯಾರು?ಇಷ್ಟೆಲ್ಲದರ ನಡುವೆ ಬಸ್ಸಿನಲ್ಲಿ ಸಿಕ್ಕಿದ ಆ ಹುಡುಗ ಮತ್ತೆ ನೆನಪಾಗುತ್ತಿದ್ದಾನೆ. ಆತ ಎಲ್ಲಿ ಹೋಗಿರಬಹುದು? ಮತ್ತೆಲ್ಲಾದರೂ ಆ ಹುಡುಗ ಸಿಕ್ಕುವನೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.