ಬುಧವಾರ, ಅಕ್ಟೋಬರ್ 16, 2019
21 °C

ಬಾರ್, ಪಬ್ ಅವಧಿ ವಿಸ್ತರಣೆ: ಪರಿಶೀಲನೆ

Published:
Updated:

ಬೆಂಗಳೂರು: `ಸಾರ್ವಜನಿಕರ ಹಿತದೃಷ್ಟಿಯಿಂದ ಬಾರ್ ಹಾಗೂ ಪಬ್‌ಗಳ ವ್ಯವಹಾರದ ಅವಧಿ ವಿಸ್ತರಣೆ ಬೇಡ ಎಂಬ ಅಭಿಪ್ರಾಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದು, ಈ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ತಿಳಿಸಿದರು. ನಗರದ ಆಡುಗೋಡಿಯಲ್ಲಿ ಶುಕ್ರವಾರ ನಡೆದ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಸಿಬ್ಬಂದಿ ಕ್ರೀಡಾಕೂಟದ ಮುಕ್ತಾಯ ಸಮಾರಂಭಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಿದ್ದು, ಬಾರ್ ಹಾಗೂ ಪಬ್‌ಗಳ ಕಾರ್ಯಾವಧಿಯ ವೇಳೆಯನ್ನು ಮಧ್ಯರಾತ್ರಿ12.30ರವರೆಗೆ ವಿಸ್ತರಿಸಬೇಕು ಎಂದು ಮಾಲೀಕರು ಬೇಡಿಕೆ ಇಟ್ಟಿದ್ದಾರೆ. `ಈಗಾಗಲೇ ನಗರದಲ್ಲಿ 11.30ರವರೆಗೆ ಬಾರ್ ಹಾಗೂ ಪಬ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಅವಧಿಯನ್ನು ಇನ್ನೊಂದು ಗಂಟೆಗೆ ವಿಸ್ತರಿಸಿದರೆ ವಸತಿ ಪ್ರದೇಶದ ಜರಿಗೆ ಸಮಸ್ಯೆಯಾಗಲಿದೆ ಹಾಗೂ ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.ಪಬ್ ಹಾಗೂ ಬಾರ್‌ಗಳಲ್ಲಿ ಕೆಲಸ ಮಾಡುವ ಯುವತಿಯರಿಗೆ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಬೇಕು. ಒಂದು ವೇಳೆ ಈ ನೀತಿಯನ್ನು ಪಾಲಿಸದಿದ್ದಲ್ಲಿ ಆ ಬಾರ್ ಹಾಗೂ ಪಬ್‌ನ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

Post Comments (+)