ಬಾರ್ ಹುಡುಗರು ಸಾರ್‌

7

ಬಾರ್ ಹುಡುಗರು ಸಾರ್‌

Published:
Updated:
ಬಾರ್ ಹುಡುಗರು ಸಾರ್‌

ಹೊಸ ವರ್ಷದ ಆಚರಣೆ ಮುಗಿದ ಮಾರನೆ ದಿನ ಕೆಲವರಿಗೆ ಸೂರ್ಯೋದಯ ಆಗುವುದು ತಡವಾಗಿ. ಗುಂಡು ಹಾಕಿ ಆಚರಣೆ ಮಾಡಿದ ಆಸಾಮಿಗಳು ಆ ಸಾಲಿಗೆ ಸೇರಿದ ಒಂದು ಗುಂಪಿನವರು. ಅವರಿಗೆ ಎಲ್ಲ ವ್ಯವಸ್ಥೆ ಮಾಡಿಕೊಟ್ಟ, ಬೇಕಾದುದ್ದನ್ನು ಸರಬರಾಜು ಮಾಡಿದ ಬಾರಿನ ಹುಡುಗರಿಗೂ ಬೆಳಕು ಹರಿಯುವುದು ತಡವಾಗಿಯೇ.ವರ್ಷದ ಕೊನೆ ಸಮೀಪಿಸುತ್ತಿದ್ದಂತೆ ಆಚರಣೆಯ ಹುಮ್ಮಸ್ಸಿನಲ್ಲಿರುವ ‘ಗುಂಡೋಪಂತ’ರು ತಮ್ಮದೇ ಆದ ತಾವುಗಳನ್ನು ಡಿ. 31ರಂದು ಹುಡುಕಿಕೊಳ್ಳುವುದು ಸಾಮಾನ್ಯ. ಒಬ್ಬರಿಗೆ ತಮ್ಮದೇ ಏರಿಯಾದಲ್ಲಿರುವ ಎಂದಿನ ಬಾರುಗಳೇ ಅಡ್ಡೆಗಳಾದರೆ, ಇನ್ನು ಕೆಲವರು ಸ್ನೇಹಿತರು ವ್ಯವಸ್ಥೆ ಮಾಡಿದ ಕ್ಲಬ್ಬುಗಳಿಗೆ, ಪಬ್ಬುಗಳಿಗೆ ರೆಸಾರ್ಟ್ ಗಳಿಗೆ ಹೋಗುತ್ತಾರೆ. ಹಾಗೆ ಹೋದಾಗ ಮೋಜು ಮಸ್ತಿ (ತುಸು ಜಾಸ್ತಿಯಾದರೆ ಕುಸ್ತಿ!) ದೊಡ್ಡ ಪ್ರಮಾಣದಲ್ಲಿಯೇ ನಡೆಯುತ್ತದೆ. ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಉತ್ಸಾಹದಿಂದ ಇದ್ದರೆ ಅಂಥವರ ‘ಹೊಟ್ಟೆಪಾಡಿಗೆ’ ಸರಿಯಾದ ವ್ಯವಸ್ಥೆ ಮಾಡುವವರು ಬಾರಿನಲ್ಲಿ ಕೆಲಸ ಮಾಡುವ ಹುಡುಗರು.ಈ ಹುಡುಗರು ಕೊನೆಯಲ್ಲಿ ಜನರಲ್ಲಿ ಕೊಂಚ ಹೆಚ್ಚಾಗಿಯೇ ಇರುವ ‘ಬೀರಡಿಕೆ’ಯನ್ನು ಇಂಗಿಸಲು ಮೊದಲಿಂದಲೇ ತಯಾರಿ ನಡೆಸಿರುತ್ತಾರೆ. ಬಾರಿನ ಮಂದ ಬೆಳಕಿನ ಜೊತೆಗೆ ಸುತ್ತುವರೆದ ಹಲವು ಬಣ್ಣದ ಲೈಟುಗಳು ಚಳಿಯಲ್ಲಿ ತಮ್ಮ ಸಣ್ಣ ಕಣ್ಣುಗಳನ್ನು ಮಿಟುಕಿಸುತ್ತಿರುತ್ತವೆ. ಮಸಾಲೆಯ ವಾಸನೆ ಬಾರಿನ ಗದ್ದಲ ದಾಟಿ ದಾರಿಯಲ್ಲಿ ಹೋಗುವವರನ್ನು ಸೆಳೆಯುವಷ್ಟು ಕಟುವಾಗಿಯೂ ಮಧುರವಾಗಿಯೂ ಇರುತ್ತದೆ. ಬಾರು, ಪಬ್ಬುಗಳಿಗೆ ಅವುಗಳ ಎಂದಿನ ಗಿರಾಕಿಗಳೊಂದಿಗೆ ಹೊಸಬರೂ ಹೊಸವರ್ಷದ ಕೊನೆಗೆ ಬರುವುದುಂಟು. ಅವರೆಲ್ಲ ಗಂಟೆಗಳ ಕಾಲ ಕುಡಿದು ಕುಪ್ಪಳಿಸಲು ಅನುವು ಮಾಡಿಕೊಡುತ್ತಾರೆ ಈ ಬಾರಿನ ಹುಡುಗರು.ಗುಂಡು, ಬೇಕಾದಾಗ ಸಿಗರೇಟು, ಬೇಕುಬೇಕಾದ ತಿನಿಸುಗಳನ್ನು ತಂದು ಕೊಡುತ್ತ, ದಣಿವಾದಾಗ ಕಿಚನ್‌ನಲ್ಲಿ ತುಸು ನೀರು ಕುಡಿದು ದಣಿವಾರಿಸಿಕೊಳ್ಳುತ್ತಾರೆ. ಈ ಗುಂಡೋಪಂತರು ಎರಡು ಪೆಗ್ಗಿನವರೆಗೆ ಸರಿಯಾಗಿರುತ್ತಾರೆ. ಮೂರನೆ ಪೆಗ್ಗಿನ ಹೊತ್ತಿಗೆ ಯಾವ ಸಾಮಾನ್ಯನಿಗೂ ಆಗದ ಜ್ಞಾನೋದಯ ಅವರಿಗೆ ಆಗಿರುತ್ತದೆ. ಆಗ ಅವರು ಈ ಹುಡುಗರಿಗೆ ದಬಾಯಿಸುವುದು, ‘ಅದನ್ನು ಕೊಡು’, ‘ಇದನ್ನು ತಂದಿಡು’ ಎಂದು ಜೋರು ದನಿಯಲ್ಲಿ ಹೇಳುವುದು ನಡೆಯುತ್ತದೆ. ಅವರು ಕೂತ ಟೇಬಲ್ಲಿಗೆ ಇನ್ನಷ್ಟು ಕುರ್ಚಿಗಳು ಜೋಡಣೆಯಾಗುತ್ತವೆ. ಏಕೆಂದರೆ ಅಷ್ಟು ಹೊತ್ತಿಗೆ ಆ ಟೇಬಲ್ಲಿನಲ್ಲಿರುವವರು ಭೂಮಿಯನ್ನೂ ದಾನ ಮಾಡುವಷ್ಟು ಧಾರಾಳಿಗಳಾಗಿರುತ್ತಾರೆ ! ಆದರೆ, ಬಾರಿನ ಹುಡುಗರ ಕೆಲಸ ಇನ್ನಷ್ಟು ಹೆಚ್ಚಾಗುತ್ತದೆ. ಅವರ ಕಾಲಿಗೆ, ಗಂಟಲಿಗೆ ಹೆಚ್ಚಿನ ವೇಗ ಬಂದಿರುತ್ತದೆ.ಯಾವ ಹೊಸ ವರ್ಷ ಬಂದರೂ ಈ ಹುಡುಗರ ಬದುಕು ಹೊಸದಾಗುವುದಿಲ್ಲ; ಅವರ ಬದುಕಿನಲ್ಲಿ ಹೊಸ ಕನಸುಗಳೇನೂ ಚಿಗುರುವುದಿಲ್ಲ. ಗಿರಾಕಿಗಳು ಹೆಚ್ಚಾಗಿರುತ್ತಾರೆಂಬ ಕಾರಣದಿಂದ ಒಂದಷ್ಟು ಹೆಚ್ಚು ಟಿಪ್ಸ್ ಸಿಗುತ್ತದೆ ಎಂದು ನಿದ್ದೆಗೆಟ್ಟು ಕೆಲಸ ಮಾಡಿರುತ್ತಾರೆ. ಅದರಿಂದ ಹೆಚ್ಚೇನೂ ಉಳಿತಾಯ ಆಗಿರುವುದಿಲ್ಲ.ಮಧ್ಯರಾತ್ರಿಯವರೆಗೂ ‘ಗುಂಡಿನ ದಾಳಿಗೆ’ ಒಳಗಾದ ‘ಗುಂಡುಗಲಿಗಳು’ ಎದ್ದೇಳುವ ಸ್ಥಿತಿಯಲ್ಲೇ ಇರುವುದಿಲ್ಲ. ಅಂಥ ಕೆಲವರಿಗೆ ಈ ಹುಡುಗರ ಮೇಲಿನ ಪ್ರೀತಿ ಆ ಸಮಯದಲ್ಲಿ ಹೆಚ್ಚಾಗಿ ನೂರರ ನೋಟುಗಳನ್ನು ಅವರ ಕೈಗೆ ಹಿಡಿಸಿದರೆ, ಇನ್ನು ಕೆಲವರು ಏನೂ ಕೊಡಲಾಗದ ಸ್ಥಿತಿಯಲ್ಲಿರುತ್ತಾರೆ. ಅಂಥವರನ್ನು ಕೈಹಿಡಿದು ಕುಡಿಸುವವರು, ನಡೆಸುವವರು ಇವರೇ ಆಗಿರುತ್ತಾರೆ.ಗಿರಾಕಿಗಳಿಗೆ ಸಾರಾಯಿ, ಊಟ ಸರಬರಾಜು ಮಾಡಿದ್ದಕ್ಕೆ ಎಂದಿಲ್ಲದ ದಣಿವು, ಹಸಿವು ಆಗಿರುತ್ತದೆ. ಆಗ ಹೊಸ ವರ್ಷ ಎನ್ನುವುದು ಇವರ ಪಾಲಿಗೆ ಉತ್ಸಾಹ ಹುಟ್ಟಿಸುವ ಗಳಿಗೆಯೇನೂ ಆಗಿರುವುದಿಲ್ಲ. ಬದಲಿಗೆ ಈ ಲೋಕದ ಮೇಲೆ, ಮೋಜು ಮಸ್ತಿ ಮಾಡುವವರ ಮೇಲೆ, ತೀರ್ಥಯಾತ್ರೆ ಮಾಡುವವರ ಮೇಲೆ ಕಡುಕೋಪ ಹುಟ್ಟಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಕೂತು ತಣ್ಣಗಿನ ಎಣ್ಣೆಯನ್ನು ಹೊಟ್ಟೆಗೆ ಬಿಟ್ಟುಕೊಂಡು ಹರಟೆ ಹೊಡೆಯುತ್ತ, ರಮ್ಯಾ, ಕೃತಿ, ದೀಪಾ, ಕತ್ರಿನಾ, ಸೋನಾಕ್ಷಿ ಎಂಬ ನಟೀಮಣಿಯರ ಸಪೂರ ಕಟಿಯ ಬಗ್ಗೆ ಮಾತನಾಡಿಕೊಳ್ಳುತ್ತ, ಆಫೀಸಿನ ಸಹೋದ್ಯೋಗಿಗಳ ಬಗ್ಗೆ ಒಂದೊಂದೇ ಸಿಪ್‌ ಕುಡಿಯುತ್ತ ಗಾಸಿಪ್ ಮಾಡುತ್ತ ಕಾಲ ಸವೆಸುವವರ ನಡುವೆ, ಕಾಲವನ್ನು ಹಿಡಿಯಲಾಗದೇ ಅದರ ಹಿಂದೆ ನಿತ್ಯವೂ ಓಡುತ್ತಲೇ ಇರುವ ಈ ಬಾರಿನ ಹುಡುಗರಿಗೆ ಬಾರಿ ಬಾರಿಗೂ ಅಂಥವರ ಮೇಲೆ ಸಿಟ್ಟು ಉಂಟಾಗುವುದು ಸಹಜವೇ. ಆದರೆ ಸಿಟ್ಟು ಮಾಡಿಕೊಳ್ಳುವಂತಿಲ್ಲ.ಬಡವನ ಸಿಟ್ಟು ದವಡೆಗೆ ಮಾತ್ರವಲ್ಲ ಹೊಟ್ಟೆಗೂ ಮೂಲವೇ. ವರ್ಷದ ಕೊನೆಯಲ್ಲಿ ಸಿಗುವ ಒಂದು ಹಿಡಿ ಕಾಸು ಇಡೀವರ್ಷ ದುಡಿದಿದ್ದಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಿನದು. ಅದು ಅವರ ಪಾಲಿನ ಬೋನಸ್. ಅದು ಅವರೇ ದುಡಿದದ್ದು. ಮನೆಯವರ ಹೊರತಾಗಿ ಯಾರಿಗೂ ಅದರಲ್ಲಿ ಪಾಲಿಲ್ಲ. ಅದರಿಂದ ಏನೆಲ್ಲ ಮಾಡಬಹುದು ಎಂಬುದು ಹೊಸ ವರ್ಷವಷ್ಟೇ ಲೆಕ್ಕ ಸಿಗುವ ಆ ದುಡ್ಡಿನ ಮೇಲೆ ನಿಂತಿದೆ.ದೇಹದ, ಮನಸ್ಸಿನ ದಣಿವನ್ನು ತಣಿಸಿಕೊಳ್ಳಲು ಜನವರಿ 1ರ ಹಗಲು ಅವಕಾಶ ಮಾಡಿಕೊಡುತ್ತದೆ. ಬೆಳಿಗ್ಗೆಯೇ ಸಿಡಿಯುವ ತಲೆ ಹೊತ್ತವರು ಅವತ್ತು ಬಾರಿನ ಕಡೆ ತಲೆ ಹಾಕಿರುವುದಿಲ್ಲ. ಹಾಗಾಗಿ ಕೆಲಸ ಕಡಿಮೆ. ಆದರೆ, ಒಮ್ಮೆಲೆ ಮಾಡಿದ ಮೂರು ದಿನಗಳ ಕೆಲಸ ಅವರನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಮಾಡಿದ ಕೆಲಸಕ್ಕೆ ಧನ್ಯವಾದ, ವಂದನೆ ಇತ್ಯಾದಿಯನ್ನು ಯಾರಿಂದಲೂ ನಿರೀಕ್ಷಿಸಲಾಗದ ಇಂಥ ಕೆಲಸವನ್ನು ಬೆಂಗಳೂರಿನ ಸಾವಿರಾರು ಬಾರುಗಳ ಅಸಂಖ್ಯಾತ ಹುಡುಗರು ಮಾಡುತ್ತಿರುತ್ತಾರೆ. ಅವರಲ್ಲಿ ಊರು ಬಿಟ್ಟು ಓಡಿ ಬಂದವರು ಇದ್ದಾರೆ, ಊರಲ್ಲಿ ಬಿದ್ದ ಬರಗಾಲದಿಂದ ಗುಳೆ ಹೋದವರು ಅಲ್ಲಿದ್ದಾರೆ, ಬಡತನ ಅವರನ್ನಿಲ್ಲಿ ಕರೆತಂದಿದೆ.ಅವರಿಗೆ ಯಾರೂ ಹೊಸ ವರ್ಷದ ಶುಭಾಶಯ ಹೇಳುವುದಿಲ್ಲ. ವರ್ಷಗಳು ಉರುಳುತ್ತವೆ; ಬಾರಿನ ಹುಡುಗರು ಬದಲಾಗುತ್ತಾರೆ. ಜೊತೆಗೆ ಗಿರಾಕಿಗಳೂ ಬದಲಾಗುತ್ತಾರೆ. ಆ ಸಂಭ್ರಮ, ಕಳೆದ ವರ್ಷದ ನೆನಪು ಹಾಗೇ ಉಳಿದಿರುತ್ತದೆ. ಹಾಗೆಯೇ ಈ ಹುಡುಗರ ತವಕ–ತಲ್ಲಣ, ನೋವು, ಕನಸು ಎಂದಿನಂತೆ ಮುಂದಿನ ವರ್ಷಕ್ಕೂ ದಾಟುತ್ತವೆ. ಈ ಸಿನಿಮಾದ ನಟರು ಬದಲಾಗಿದ್ದಾರೆ; ಕಥೆ, ಚಿತ್ರಕಥೆ, ಸಂಭಾಷಣೆ ಮಾತ್ರ ಅದೇ ಅದೇ ಆಗಿರುತ್ತದೆ. ಪಕ್ಕಾ ನಮ್ಮ ಕನ್ನಡ ಸಿನಿಮಾಗಳಂತೆ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry