ಬಾಲಕನಾಗಿದ್ದಾಗ ಭಾರತಕ್ಕೆ ಬಂದ ನೆನಪು...!

7

ಬಾಲಕನಾಗಿದ್ದಾಗ ಭಾರತಕ್ಕೆ ಬಂದ ನೆನಪು...!

Published:
Updated:

ಬೆಂಗಳೂರು: ಟ್ರಿನಿಡ್ಯಾಡ್ ಮತ್ತು ಟೊಬಾಗೊದ ಬಾಲಕನೊಬ್ಬ ದಶಕಗಳ ಹಿಂದೆ ಭಾರತಕ್ಕೆ ಬಂದಿದ್ದ; ಅದು ಯಾರು ಗೊತ್ತೆ?

ಹೀಗೆ ಪ್ರಶ್ನೆ ಹಾಕಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರಯನ್ ಲಾರಾ. ಉದ್ಯಾನನಗರಿಯಲ್ಲಿ ಯುವ ಆಟಗಾರರಿಗೆ ತರಬೇತಿ ನೀಡಲು ಆಯೋಜಿಸಲಾಗಿರುವ ಶಿಬಿರದಲ್ಲಿ ಅನುಭವ ಹಂಚಿಕೊಳ್ಳಲು ಬಂದಿರುವ ಅವರು ಗುರುವಾರ ತಮ್ಮ ನೆನಪಿನ ಪುಟಗಳನ್ನು ತಿರುವಿಹಾಕಿದರು.

‘1984ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ಆಗ ಟ್ರಿನಿಡ್ಯಾಡ್ ಮತ್ತು ಟೊಬಾಗೊದ ಶಾಲಾ ತಂಡದ ಆಟಗಾರನಾಗಿದ್ದೆ’ ಎಂದ ಅವರು ಕ್ರಿಕೆಟ್ ಆಟವು ದೇಶಗಳ ನಡುವೆ ಹೇಗೆ ಸಂಬಂಧದ ಬೆಸುಗೆ ಹಾಕುತ್ತದೆಂದು ಕೂಡ ವಿವರಿಸಿದರು.

‘ರಾಬಿನ್ ಸಿಂಗ್ ನಮ್ಮ ನಾಡಿನಿಂದ ಬಂದು ಭಾರತದ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಆಡಿದರು. ಮುಂದೊಂದು ದಿನ ಸಚಿನ್ ತೆಂಡೂಲ್ಕರ್ ಅವರಂಥ ಯಾವುದೋ ಒಬ್ಬ ಕ್ರಿಕೆಟಿಗನು ವೆಸ್ಟ್ ಇಂಡೀಸ್ ಪರವಾಗಿ ಆಡಬಹುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅವರು ‘ಲಾರಾ ನಮ್ಮ ದೇಶಕ್ಕೆ ಬಂದು ಆಡಲೆಂದು ನಾವೂ ಬಯಸುತ್ತೇವೆ’ ಎಂದು ಥಟ್ಟನೇ ನುಡಿದರು. ಆಗ ವಾತಾವರಣದಲ್ಲಿ ನಗೆಯ ಅಲೆ!

ಕ್ರೀಡಾ ಮನೋಭಾವದಿಂದ ಆಡಿದ ಲಾರಾ ಬಗ್ಗೆ ಮೆಚ್ಚುಗೆ ಸೂಚಿಸಿದ ಕುಂಬ್ಳೆ ‘ಮೊಹಾಲಿ ಪಂದ್ಯದಲ್ಲಿ ಲಾರಾ 91ರನ್‌ನಲ್ಲಿದ್ದಾಗ ವೆಂಕಟಪತಿ ರಾಜು ಎಸೆತದಲ್ಲಿ ಬ್ಯಾಟ್‌ಗೆ ತಾಗಿದ್ದ ಚೆಂಡು ನಯನ್ ಮೋಂಗಿಯಾ ಕ್ಯಾಚ್ ಪಡೆದಿದ್ದರು. ಆದರೆ ಅಂಪೈರ್ ಔಟ್ ಎಂದು ಹೇಳಲಿಲ್ಲ. ಆದರೂ ಪೆವಿಲಿಯನ್‌ಗೆ ನಡೆದಿದ್ದರು ಬ್ರಯನ್. ಇದು ಒಳ್ಳೆಯ ಆಟಗಾರನಾಗಿ ಬೆಳೆಯುವ ರೀತಿ’ ಎಂದರು.

ಈ ಮೆಚ್ಚುಗೆಗೆ ಪ್ರತಿಯಾಗಿ ಸ್ಪಿನ್ ಬೌಲರ್ ಕುಂಬ್ಳೆ ಗುಣವನ್ನು ಕೊಂಡಾಡಿದ ಲಾರಾ ‘ಭಾರತದ ಕ್ರಿಕೆಟ್ ಸೇವಕನಂತೆ ಆಡಿದ ಬೌಲರ್. ಚೆಂಡು ಹಿಡಿದು ದಾಳಿ ನಡೆಸಿದಾಗ ಮಾತ್ರವಲ್ಲ; ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿಯೂ ಬಲ ತೋರಿಸುವ ಪ್ರಯತ್ನ ಮಾಡಿದರು. ಆದ್ದರಿಂದ ಯುವ ಕ್ರಿಕೆಟಿಗರು ತಾವೂ ಹೀಗೆ ಆಗಬೇಕು ಎಂದು ಯೋಚಿಸಬೇಕು. ಹಾಗೆ ಮಾಡಿದಲ್ಲಿ ಒಳ್ಳೆಯ ಆಟಗಾರನಾಗಲು ಸಾಧ್ಯ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry