ಬಾಲಕನಿಂದ ಬಾಲಕನ ಕೊಲೆ

7

ಬಾಲಕನಿಂದ ಬಾಲಕನ ಕೊಲೆ

Published:
Updated:

ಬೆಂಗಳೂರು: ನಗರದ ಶ್ರೀರಾಮಪುರ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿದ್ದಾರೆ.ಪಾನಮತ್ತನಾಗಿದ್ದ ಬಾಲಕನೊಬ್ಬ ಮತ್ತೊಬ್ಬ ಬಾಲಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶ್ರೀರಾಮಪುರ ಸ್ಮಶಾನದಲ್ಲಿ ನಡೆದಿದೆ.ಶ್ರೀರಾಮಪುರ ಸಮೀಪದ ಕ್ರಿಶ್ಚಿಯನ್ ಕಾಲೊನಿ ನಿವಾಸಿ ವಿಲ್ಸನ್ ಎಂಬುವರ ಪುತ್ರ ಶರತ್ (17) ಕೊಲೆಯಾದ ಬಾಲಕ. ಕೊಲೆ ಮಾಡಿದ ಬಾಲಕನ ವಯಸ್ಸು 16 ವರ್ಷ. ಆತನನ್ನು ಬಂಧಿಸಿ ಸರ್ಕಾರಿ ಪರಿವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಶರತ್ ಮತ್ತು ಆರೋಪಿ ಬಾಲಕ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕ್ರಿಶ್ಚಿಯನ್ ಕಾಲೊನಿ ಸುತ್ತಮುತ್ತಲ ಬಡಾವಣೆಗಳ ಜನರು ಸ್ಮಶಾನದಲ್ಲಿ ಮಂಗಳವಾರ ಮಧ್ಯಾಹ್ನ `ಸ್ಮಶಾನ ಸೂರಿ~ ಹಬ್ಬ ಆಚರಿಸಿದ್ದರು. ಆ ಹಬ್ಬದ ಹಿನ್ನೆಲೆಯಲ್ಲಿ ಮದ್ಯವನ್ನು ಪೂಜೆಗೆ ಇಡಲಾಗಿತ್ತು. ಹಬ್ಬ ಆಚರಿಸಿದ ನಂತರ ಜನರೆಲ್ಲ ಸ್ಮಶಾನದಿಂದ ಹೊರಟು ಹೋಗಿದ್ದರು. ಶರತ್ ಮತ್ತು ಸ್ನೇಹಿತರು ಮಾತ್ರ ಸ್ಮಶಾನದಲ್ಲೇ ಇದ್ದರು. ಅದೇ ವೇಳೆಗೆ ಅಲ್ಲಿಗೆ ಬಂದ ಆರೋಪಿ ಬಾಲಕ, ಪೂಜೆಗೆ ಇಟ್ಟಿದ್ದ ಮದ್ಯವನ್ನು ಕುಡಿದು ಶರತ್ ಜತೆ ಜಗಳವಾಡಿ ಆತನ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬುಧವಾರ ಬೆಳಿಗ್ಗೆ ಆತ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ:

ವೈಯಾಲಿಕಾವಲ್‌ನ ಜಲಗಂಗಮ್ಮ ದೇವಸ್ಥಾನ ರಸ್ತೆ ನಿವಾಸಿ ಮಹೇಶ್‌ರಾಜ್ ಎಂಬುವರು ಪತ್ನಿ ಚಂದ್ರಕಲಾ (37) ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಚಂದ್ರಕಲಾ ಅವರ ವಿವಾಹವಾಗಿ 12 ವರ್ಷವಾಗಿತ್ತು ಮತ್ತು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಾರು ಚಾಲಕನಾಗಿದ್ದ ಮಹೇಶ್‌ರಾಜ್ ಪ್ರತಿನಿತ್ಯ ಪಾನಮತ್ತನಾಗಿ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಂತೆಯೇ ಮಧ್ಯಾಹ್ನ ಚಂದ್ರಕಲಾ ಜತೆ ಜಗಳವಾಡಿದ ಆತ ಅವರ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗಿದ್ದರು ಎಂದು ವೈಯಾಲಿಕಾವಲ್ ಪೊಲೀಸರು ತಿಳಿಸಿದ್ದಾರೆ.`ಮದ್ಯವ್ಯಸನಿಯಾಗಿದ್ದ ಮಹೇಶ್‌ರಾಜ್ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ಆತನೇ ಸಹೋದರಿಯನ್ನು ಕೊಲೆ ಮಾಡಿದ್ದಾನೆ~ ಎಂದು ಚಂದ್ರಕಲಾ ಅಣ್ಣ ಭಾಸ್ಕರ್ ಅವರು ದೂರು ಕೊಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ದರೋಡೆ: ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ಹಾಗೂ ಮೂರು ಸಾವಿರ ನಗದು ಸೇರಿದಂತೆ ಸುಮಾರು 1.45 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ಕೊತ್ತನೂರು ಸಮೀಪದ ಚೌಡಪ್ಪ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಥಣಿಸಂದ್ರ ನಿವಾಸಿ ಲಕ್ಷ್ಮಿಕಾಂತ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಕೃಷಿಕರಾಗಿರುವ ಅವರು ಚೌಡಪ್ಪ ಲೇಔಟ್ ಬಳಿ ಇರುವ ತೋಟಕ್ಕೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ 80 ಗ್ರಾಂ ತೂಕದ ಚಿನ್ನದ ಸರ, ಮೊಬೈಲ್ ಫೋನ್ ಮತ್ತು ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊತ್ತನೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಇಬ್ಬರ ಆತ್ಮಹತ್ಯೆ: ಮೈಕೊಲೇಔಟ್ ಹಾಗೂ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರಕರಣಗಳಲ್ಲಿ ಮಹಿಳೆ ಸೇರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎನ್.ಎಸ್.ಪಾಳ್ಯ ಸಮೀಪದ ಡಾಲರ್ಸ್‌ ಕಾಲೊನಿ ನಿವಾಸಿ ಚಂದ್ರಶೇಖರ್‌ನಾಯ್ಡು ಎಂಬುವರ ಪತ್ನಿ ಶಾರದಮ್ಮ (48) ಅವರು ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಚಂದ್ರಶೇಖರ್‌ನಾಯ್ಡು ಕಟ್ಟಡ ಗುತ್ತಿಗೆದಾರರು. ಶಾರದಮ್ಮ ಅವರು ಮನೆಯ ಕೊಠಡಿಯೊಂದರಲ್ಲಿ ಮಧ್ಯಾಹ್ನ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೈಕೊಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯಶವಂತಪುರ: ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮತ್ತೀಕೆರೆ ಗೋಕುಲ ಬಡಾವಣೆಯಲ್ಲಿ ನಡೆದಿದೆ.ಗೋಕುಲ ಬಡಾವಣೆ ಒಂದನೇ ಹಂತದ ನಿವಾಸಿ ಪದ್ಮನಾಭ (38) ಆತ್ಮಹತ್ಯೆ ಮಾಡಿಕೊಂಡವರು. ಕುಟುಂಬ ಸದಸ್ಯರು ರಾತ್ರಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry