ಬಾಲಕನ ಅನುಮಾನಾಸ್ಪದ ಸಾವು

ಮಂಗಳವಾರ, ಜೂಲೈ 23, 2019
27 °C

ಬಾಲಕನ ಅನುಮಾನಾಸ್ಪದ ಸಾವು

Published:
Updated:

ಬೆಂಗಳೂರು: ಬಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಚಂದ್ರಾಲೇಔಟ್ ಬಳಿಯ ಬಿಸಿಸಿ ಲೇಔಟ್‌ನಲ್ಲಿ ನಡೆದಿದೆ.

ಬಿಸಿಸಿ ಲೇಔಟ್‌ನ ರೈಲ್ವೆ ಸಮಾನಾಂತರ ರಸ್ತೆ ಬಳಿಯಲ್ಲಿ ಬಾಲಕನ ಶವ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಸೋಮವಾರ ಬೆಳಿಗ್ಗೆ ಠಾಣೆಗೆ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋದಾಗ ಬಾಲಕ ಮೃತಪಟ್ಟಿರುವುದು ಗೊತ್ತಾಯಿತು. ಬಾಲಕನ ವಯಸ್ಸು ಸುಮಾರು 15 ವರ್ಷ. ಆದರೆ, ಆತನ ಗುರುತು ಪತ್ತೆಯಾಗಿಲ್ಲ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.

ಬಾಲಕನ ತಲೆಯ ಮೇಲೆ ಗಾಯದ ಗುರುತು ಇದ್ದು, ಆತನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ರೈಲ್ವೆ ಸಮಾನಾಂತರ ರಸ್ತೆಯ ಬಳಿ ತಂದು ಹಾಕಿರುವ ಸಾಧ್ಯತೆ ಇದೆ. ಶವ ಪತ್ತೆಯಾಗಿರುವ ಸ್ಥಳದಿಂದ ಸ್ವಲ್ಪ ದೂರದಲ್ಲೇ ಹಳಿ ಇದ್ದು, ಬಾಲಕ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದು ಗಾಯಗೊಂಡಿರಬಹುದು. ಬಳಿಕ ಆತ ರಸ್ತೆ ಬದಿಗೆ ತೆವಳಿಕೊಂಡು ಬಂದು ಸಾವನ್ನಪ್ಪಿರಬಹುದು ಎಂಬ ಅನುಮಾನವೂ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ಏನೆಂಬುದು ಗೊತ್ತಾಗಲಿದೆ. ಈ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗೃಹಿಣಿ ಆತ್ಮಹತ್ಯೆ: ಚಾಮರಾಜಪೇಟೆ ಬಳಿಯ ಬೃಂದಾವನನಗರದ ಯಮುನಾ ನದಿ ರಸ್ತೆ ನಿವಾಸಿ ಲೋಕೇಶ್ ಎಂಬುವರ ಪತ್ನಿ ವೀಣಾ (24) ಅವರು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಮದುವೆಯಾಗಿ ಐದು ವರ್ಷವಾಗಿತ್ತು ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಲೋಕೇಶ್ ಅವರು ಮಕ್ಕಳೊಂದಿಗೆ ರಾತ್ರಿ ಹೊರಗೆ ಹೋಗಿದ್ದಾಗ ವೀಣಾ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ಅಳಿಯ ಮತ್ತು ಮಗಳು ಅನ್ಯೋನ್ಯವಾಗಿದ್ದರು. ಆಕೆ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಗೊತ್ತಿಲ್ಲ. ಲೋಕೇಶ್, ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು~ ಎಂದು ವೀಣಾ ಅವರ ತಾಯಿ ಮಂಜುಳಾ ಅವರು ಹೇಳಿಕೆ ಕೊಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಪ್ರವಹಿಸಿ ಸಾವು: ಕೊಳವೆಬಾವಿ ಕೊರೆಯುವ ಲಾರಿಯಲ್ಲಿ ಕ್ಲೀನರ್ ಆಗಿದ್ದ ಯುವಕನಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಾರಾಯಿಪಾಳ್ಯ ಸಮೀಪದ ಭಾರತ್‌ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ತಮಿಳುನಾಡು ಮೂಲದ ಕುಮಾರ್ (25) ಸಾವನ್ನಪ್ಪಿದ ಯುವಕ. ಆತ ಗಂಗಾನಗರದಲ್ಲಿರುವ ಜಿಎಸ್‌ಎಲ್ ಬೋರ್‌ವೆಲ್ ಏಜೆನ್ಸಿಯಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ.

ಭಾರತ್‌ನಗರದಲ್ಲಿ ಭಾನುವಾರ ಸಂಜೆ ಬಿಬಿಎಂಪಿ ವತಿಯಿಂದ ಕೊಳವೆಬಾವಿ ಕೊರೆಸಲಾಗಿತ್ತು. ಆ ನಂತರ ಲಾರಿಯು ಗಂಗಾನಗರಕ್ಕೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಭಾರತ್‌ನಗರದ ರಸ್ತೆಯೊಂದರಲ್ಲಿ ವಿದ್ಯುತ್ ತಂತಿ ವಾಹನಕ್ಕೆ ತಗುಲುವಂತೆ ಜೋತು ಬಿದ್ದಿತ್ತು. ಕುಮಾರ್ ಮರದ ಕೋಲಿನಿಂದ ಆ ತಂತಿಯನ್ನು ಮೇಲಕ್ಕೆತ್ತುವ ಯತ್ನದಲ್ಲಿದ್ದಾಗ ಆಕಸ್ಮಿಕವಾಗಿ ಆತನಿಗೆ ವಿದ್ಯುತ್ ಪ್ರವಹಿಸಿತು. ಪರಿಣಾಮ ಲಾರಿಯಿಂದ ಕೆಳಗೆ ಬಿದ್ದ ಆತನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಏಜೆನ್ಸಿಯ ಮಾಲೀಕ ಮತ್ತು ಲಾರಿ ಚಾಲಕನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಪಿಗೆಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry