ಬಾಲಕರ ಕಾಲೇಜಿಗೆ ದುರಸ್ತಿ ಭಾಗ್ಯ ಇಲ್ಲವೆ?

7

ಬಾಲಕರ ಕಾಲೇಜಿಗೆ ದುರಸ್ತಿ ಭಾಗ್ಯ ಇಲ್ಲವೆ?

Published:
Updated:

ಕೋಲಾರ: ಭವ್ಯ ಇತಿಹಾಸವುಳ್ಳ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈಗ ಆತಂಕದಲ್ಲಿದ್ದಾರೆ.

ಹಲವು ಕೊಠಡಿಗಳಲ್ಲಿ ಪಾಠ ಕೇಳುತ್ತಿರುವಾಗ ಯಾವುದೇ ಕ್ಷಣ ತಲೆ ಮೇಲೆ ಛಾವಣಿ ಭಾಗಶಃ ಕುಸಿಯುವ ಭಯದಲ್ಲೇ ದಿನ ನೂಕುತ್ತಿದ್ದಾರೆ. ರಿಪೇರಿ ಮಾಡಿಕೊಡಿ ಎಂದು ಕಾಲೇಜು ಸಿಬ್ಬಂದಿ ಬರೆದಿರುವ ಮನವಿ ಪತ್ರಗಳಿಗೆ, ವಿದ್ಯಾರ್ಥಿಗಳು ನಡೆಸಿರುವ ಧರಣಿಗೆ ಲೋಕೋಪಯೋಗಿ ಇಲಾಖೆ ಕಿಂಚಿತ್ ಸ್ಪಂದಿಸಿಲ್ಲ ಎಂಬ ಗಂಭೀರ ಆರೋಪವಿದೆ.ಈಚೆಗಷ್ಟೆ ಅರ್ಥಶಾಸ್ತ್ರ ಉಪನ್ಯಾಸಕ ಡಾ.ಶ್ರೀನಿವಾಸಪ್ಪ ತರಗತಿಯಲ್ಲಿ ಪಾಠ ಮಾಡುವಾಗ ಅವರ ತಲೆ ಮೇಲೆ ಛಾವಣಿ ಚೂರುಗಳು ಬಿದ್ದು ವೈದ್ಯರಲ್ಲಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿಗಳ ತಲೆ ಮೇಲೂ ಚೂರುಗಳು ಬಿದ್ದು ಗಾಬರಿ ಮೂಡಿಸಿದ್ದವು.ವಿದ್ಯಾರ್ಥಿಗಳು ಆಕ್ರೋಶಗೊಂಡು ದಿಢೀರನೆ ಕಳೆದ ಗುರುವಾರ ಕಾಲೇಜು ಮುಂದಿನ ವೃತ್ತದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಸುಮ್ಮನಾಗದ ವಿದ್ಯಾರ್ಥಿಗಳು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದ ಬಳಿಕವಷ್ಟೆ ದುರಸ್ತಿಯ  ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.ಕಾಲೇಜಿನಲ್ಲಿ ಪ್ರಸ್ತುತ ತರಗತಿ ಕೊಠಡಿಗಳು 16. ಅವುಗಳಲ್ಲಿ 8 ಕೊಠಡಿ ಅಪಾಯಕಾರಿ ಸ್ಥಿತಿಯಲ್ಲಿವೆ. ನಿತ್ಯವೂ ಛಾವಣಿಯ ಮಣ್ಣು, ಸಿಮೆಂಟು ಚೂರುಗಳು ಉದುರುತ್ತಲೇ ಇರುತ್ತವೆ. ಹೀಗಾಗಿ ಆತಂಕದ ನಡುವೆ  ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿದೆ. ಜೊತೆಗೆ ಕಾಲೇಜಿನ ಎನ್‌ಸಿಸಿ ಕೊಠಡಿ, ಶೌಚಾಲಯ ಕೊಠಡಿಗಳೂ ಇದೇ ಸ್ಥಿತಿಯಲ್ಲಿವೆ. 60-70ರ ದಶಕದಲ್ಲಿ ನಿರ್ಮಾಣವಾಗಿರುವ ಕೊಠಡಿಗಳನ್ನು  ದುರಸ್ತಿಗೊಳಿಸುವ ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂಬುದು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎ.ವಿ.ರೆಡ್ಡಿ ಅವರ ದೂರು.ಲೋಕೋಪಯೋಗಿ ಇಲಾಖೆ ಸ್ಥಳೀಯ ಅಧಿಕಾರಿಗಳಿಗಷ್ಟೆ ಅಲ್ಲ, ಉನ್ನತ ಅಧಿಕಾರಿಗಳಿಗೂ ವಿದ್ಯಾರ್ಥಿಗಳು ಮನವಿಪತ್ರ ಸಲ್ಲಿಸುವ ಜೊತೆ ಪರಿಸ್ಥಿತಿ ಮನದಟ್ಟು ಮಾಡಿಕೊಟ್ಟಿದ್ದಾರೆ.ಅಧಿಕಾರಿಗಳು ದುರಸ್ತಿಯ ಭರವಸೆಯನ್ನೇನೋ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗೋಡೆಗಳ ಮೇಲೆ ಬರೆಯಲಾಗಿದ್ದ ಬರಹಗಳನ್ನು ಶುಕ್ರವಾರ ಅಳಿಸಲಾಗಿದೆ. ರಿಪೇರಿ ಕೆಲಸದ ಕುರಿತು ಯಾವ ಮಾಹಿತಿಯೂ ಇಲ್ಲ ಎನ್ನುತ್ತಾರೆ ಅವರು.ಕನಿಷ್ಠ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗದ ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ ಖಂಡನೀಯ. ಪ್ರಾಂಶುಪಾಲರು ನೀಡಿರುವ ಮನವಿಪತ್ರಕ್ಕೂ ಸ್ಪಂದಿಸದಿರುವುದು ಇಲಾಖೆ ನಿರ್ಲಕ್ಷ್ಯ ಧೋರಣೆ ಸೂಚಿಸುತ್ತದೆ. ಹೊಸ ಶೈಕ್ಷಣಿಕ ವರ್ಷ ಶುರುವಾಗುವುದರೊಳಗೆ ಕಾಲೇಜಿನ ಕೊಠಡಿಗಳನ್ನು ದುರಸ್ತಿ ಮಾಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಸುರೇಶ್‌ಗೌಡ ಹೇಳಿದ್ದಾರೆ.ಅಧ್ಯಾಪಕರ ಅಸಹಾಯಕತೆ, ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಆರ್.ವರ್ತೂರು ಪ್ರಕಾಶರು ಕಾಲೇಜು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದರ ಕಡೆಗೆ ಗಮನ ಹರಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry