ಶುಕ್ರವಾರ, ಮೇ 14, 2021
31 °C

ಬಾಲಕಾರ್ಮಿಕ ಪದ್ಧತಿ ಮುಕ್ತ ರಾಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಕಾರ್ಮಿಕ ಪದ್ಧತಿ ಮುಕ್ತ ರಾಜ್ಯ

ಬೆಂಗಳೂರು: `ಬಾಲ ಕಾರ್ಮಿಕ ಪದ್ಧತಿಯು ನಮ್ಮ ಸಮಾಜ ಮತ್ತು ದೇಶಕ್ಕೆ ಅಂಟಿದ ಕಳಂಕವಾಗಿದೆ. ರಾಜ್ಯವನ್ನು ಬಾಲ ಕಾರ್ಮಿಕ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ' ಎಂದು ಕಾರ್ಮಿಕ ರಾಜ್ಯ ಸಚಿವ ಪಿ.ಟಿ.ಪರಮೇಶ್ವರ ನಾಯಕ ಹೇಳಿದರು.ಕಾರ್ಮಿಕ ಇಲಾಖೆಯು ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ `ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ದೇಶದಲ್ಲಿನ ಅಸಂಘಟಿತ ವಲಯಗಳಲ್ಲಿ ಶೇ 92 ರಷ್ಟು ಬಾಲ ಕಾರ್ಮಿಕರಿದ್ದಾರೆ. 1.85 ಲಕ್ಷ ಮಕ್ಕಳು ಗೃಹಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಯೂನಿಸೆಫ್ ವರದಿ ಮಾಡಿದೆ. ಇದು ಆತಂಕ ಪಡುವ ವಿಷಯವಾಗಿದೆ' ಎಂದರು.`ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಪ್ರಕಾರ 17 ಜಿಲ್ಲೆಗಳಲ್ಲಿ 169 ಹಗಲು ಸೇತುಬಂಧ ಶಾಲೆಗಳನ್ನು ನಡೆಸುತ್ತಿದ್ದು, ಈ ಶಾಲೆಗಳಲ್ಲಿ 7,371 ಮಕ್ಕಳಿಗೆ ಪುನರ್ವಸತಿಯನ್ನು ಕಲ್ಪಿಸಲಾಗಿದೆ. 169 ಶಾಲೆಗಳಲ್ಲಿ 132 ಶಾಲೆಗಳನ್ನು ವಿಶೇಷ ವಸತಿ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ರಾಜ್ಯ ಬಾಲ ಕಾರ್ಮಿಕ ಯೋಜನೆಯಡಿ 13 ಜಿಲ್ಲೆಗಳಲ್ಲಿ 32 ವಸತಿ ವಿಶೇಷ ಶಾಲೆಗಳನ್ನು ನಡೆಸುತ್ತಿದ್ದು 929 ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ' ಎಂದು ಹೇಳಿದರು.`2012-13 ರಲ್ಲಿ ರಾಜ್ಯ ಬಾಲ ಕಾರ್ಮಿಕ ಕ್ರಿಯಾ ಯೋಜನೆ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ಕ್ರಿಯಾ ಯೋಜನೆಗಳನ್ನು ಜಾರಿಗೆ ತಂದಿದ್ದು, 1,08,938 ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಅವರನ್ನು ಶಾಲೆಗೆ ಸೇರಿಸುವ ಮೂಲಕ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುತ್ತಿದ್ದ ಮಾಲೀಕರ ವಿರುದ್ಧ 2001 ರಿಂದ ಇದುವರೆಗೆ 19,003 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ ಮತ್ತು ನ್ಯಾಯಾಲಯವು ರೂ. 81.70 ಲಕ್ಷ ದಂಡವನ್ನು ವಿಧಿಸಿದೆ. ಕಳೆದ 3 ವರ್ಷಗಳಲ್ಲಿ 6 ಪ್ರಕರಣಗಳಲ್ಲಿ ತಪ್ಪಿತಸ್ಥ ಮಾಲೀಕರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ' ಎಂದು ವಿವರಿಸಿದರು.`2011-12 ನೇ ಸಾಲಿನಲ್ಲಿ ರಾಜ್ಯದಲ್ಲಿ ಬಾಲ ಕಾರ್ಮಿಕರ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಗುರುತಿಸಲಾದ ಬಾಲ ಕಾರ್ಮಿಕರ ಸಂಖ್ಯೆಗನುಗುಣವಾಗಿ ಹೆಚ್ಚು ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ' ಎಂದರು.`ಕೆಲಸದಲ್ಲಿ ತೊಡಗಿದ್ದ ಬಾಲ ಕಾರ್ಮಿಕರನ್ನು ಬಿಡುಗಡೆಗೊಳಿಸಿದ ನಂತರ ಆ ಬಾಲ ಕಾರ್ಮಿಕರ ಬಗ್ಗೆ ನಿಗಾ ವಹಿಸುವ ಸಲುವಾಗಿ `ಅಂತರ್ಜಾಲ ಆಧಾರಿತ ಬಾಲ ಕಾರ್ಮಿಕರ ನಿಗಾ ವ್ಯವಸ್ಥೆ' ಯನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ' ಎಂದು ಹೇಳಿದರು.ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, `ಬಾಲ ಕಾರ್ಮಿಕರಿಗೆ ಶಿಕ್ಷಣವನ್ನು ಕೊಡಿಸಿ, ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಎಲ್ಲ ಇಲಾಖೆಗಳೂ ಕೈ ಜೋಡಿಸಬೇಕು. ಆಗ ಮಾತ್ರ ಬಾಲ ಕಾರ್ಮಿಕ ಪದ್ಧತಿಯು ನಿರ್ಮೂಲನವಾಗಲು ಸಾಧ್ಯವಾಗುತ್ತದೆ' ಎಂದು  ಹೇಳಿದರು.`ಬಾಲ ಕಾರ್ಮಿಕ ಪದ್ಧತಿಯು ನಮ್ಮ ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ಮಕ್ಕಳು ನಮ್ಮ ದೇಶದ ಸಂಪತ್ತು. ಅವರಿಗೆ ಸರಿಯಾದ ಶಿಕ್ಷಣವನ್ನು ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ' ಎಂದರು.`ಬಾಲ ಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಲು ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಸಹ ಕೈ ಜೋಡಿಸಬೇಕು. ಒಂದು ದಿನದಲ್ಲಿಯೇ ಪದ್ಧತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ವರ್ಷದ ಎಲ್ಲ ದಿನಗಳಲ್ಲಿಯೂ ಶ್ರಮ ವಹಿಸಬೇಕು' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.