ಸೋಮವಾರ, ಮೇ 23, 2022
24 °C

ಬಾಲಕಾರ್ಮಿಕ ವಿರೋಧಿ ದಿನ: ಆಚರಣೆಗೋ? ಅವಲೋಕನಕ್ಕೋ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಜೂನ್ 12, ಮತ್ತೊಂದು `ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ~ಯನ್ನು ನಾವು ಕಾಣುತ್ತಿದ್ದೇವೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್. ಓ.) ಜೂನ್ 12 ಅನ್ನು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ 2002ರಲ್ಲಿ ಘೋಷಿಸಿದಂದಿನಿಂದ ಇದು 11ನೇ ವರ್ಷಾಚರಣೆ.ಅದರಲ್ಲೂ ಈ ಬಾರಿ ಐ.ಎಲ್.ಓ. ಖಂಡಿತವಾಗಿಯೂ ನಮ್ಮ ಸರ್ಕಾರವೂ ಸಹ ಇಂದು ತಾನೇನು ಹೊರತಲ್ಲವೆಂಬಂತೆ, ರಾಜ್ಯ ಮಟ್ಟದಲ್ಲಷ್ಟೇ ಅಲ್ಲದೆ, ತನ್ನ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಗಳ ಮೂಲಕ ರಾಜ್ಯದಾದ್ಯಂತ ಅಬ್ಬರದಿಂದ ಆಚರಿಸಿಬಿಡುತ್ತದೆ. ಆದರೆ, ನಮ್ಮ ಮುಂದಿರುವ ಪ್ರಶ್ನೆ ಈ ದಿನವನ್ನು ನಾವು ಬರೀ ಆಚರಿಸಲಿಕ್ಕಷ್ಟೇ ಸೀಮಿತಗೊಳಿಸಬೇಕೋ ಅಥವಾ ನಿಜಕ್ಕೂ ಗಂಭೀರ ಅವಲೋಕನದ ಅಗತ್ಯವಿದೆಯೇ ಎನ್ನುವುದು.ಹೌದು, ಆಗಬೇಕಿರುವುದು ಸಮಸ್ಯೆಯ ಸಂಪೂರ್ಣ ಅವಲೋಕನ. ಮೂಲ ಕಾರಣದ ಅವಲೋಕನ, ಬಾಲಕಾರ್ಮಿಕತೆಯೊಟ್ಟಿಗೆ ಹೆಣೆದುಕೊಂಡಿರುವ ಬಡತನ, ಅಜ್ಞಾನ, ಕಂದಾಚಾರ, ಮೂಢನಂಬಿಕೆ, ಅಪನಂಬಿಕೆ, ಅದರ ಕರಾಳ ಪರಿಣಾಮ, ನಾಳೆಯ ನಾಡಿನ ಅಭಿವೃದ್ಧಿಗೆ ಅದರಿಂದಾಗುವ ಹೊಡೆತ ಹಾಗೂ ಅದೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ಸಮಸ್ಯೆಗಳ ಆದ್ಯತೆ ಪಟ್ಟಿಯಲ್ಲಿ `ಬಾಲಕಾರ್ಮಿಕತೆ~ಗಿರುವ `ಸ್ಥಾನ~ದ ಅವಲೋಕನ. ಅದ್ಯಾವ ಅಂಕಿ ಅಂಶಗಳ ಆಧಾರದೊಂದಿಗೋ, ನಮ್ಮ ಸರ್ಕಾರಗಳಲ್ಲಿ ಬಾಲಕಾರ್ಮಿಕತೆ ಅಷ್ಟೇನೂ ಗಂಭೀರವಾದ ವಿಷಯವಲ್ಲವೆಂದು ಪರಿಗಣಿಸಿರುವಂತೆ ತೋರುತ್ತದೆ.ನಾವೆಲ್ಲರೂ ತಿಳಿದಿರುವ ಹಾಗೆ ಬಾಲಕಾರ್ಮಿಕ ಸಮಸ್ಯೆ, ಹಲವು ಕಾರಣಗಳಿಂದ ಕೂಡಿದ, ಹಿಂದಿನಿಂದಲೂ ಬೇರೂರಿರುವ ಹಾಗೂ ಕೆಲವರ ವಾದದಲ್ಲಿ ಅನಿವಾರ್ಯವೂ ಆಗಿರುವ ಒಂದು ಸಂಕೀರ್ಣ `ಸಾಮಾಜಿಕ~ ಸಮಸ್ಯೆ.ಆದರೆ, ನಾವು ನಿಜಕ್ಕೂ ಅದನ್ನು ಅಳೆಯಬೇಕಿರುವುದು ಬೇರೆಯದೇ ಆದ ಮಾನದಂಡದಲ್ಲಿ, ಸಮಗ್ರ ಆಯಾಮದಿಂದ ಹಾಗೂ ದೂರದರ್ಶಿ ನೆಲೆಗಟ್ಟಿನಲ್ಲಿ ನಾವದನ್ನು ಪರಿಗಣಿಸಬೇಕಾದದ್ದು ಒಂದು `ಅಭಿವೃದ್ಧಿ~ ಸಮಸ್ಯೆ ಎಂದು.

 

ಉತ್ತಮ ಬಾಲ್ಯದಿಂದ, ಮಾನಸಿಕ, ದೈಹಿಕ ಹಾಗೂ ಜ್ಞಾನದ ಅಭಿವೃದ್ಧಿಯಿಂದ ವಂಚಿತವಾಗುವ ಯಾವುದೇ ಮಗು, ಈ ನಾಡಿನ ನಾಳೆಯ ಅಭಿವೃದ್ಧಿ ನೊಗವನ್ನು ಹೇಗೆ ತಾನೇ ಹೊರಲು ಶಕ್ತ ಎಂಬುದು ಚಿಂತಿಸಬೇಕಾದ ಸಂಗತಿ.ಬಾಲಕಾರ್ಮಿಕ ಸಮಸ್ಯೆ ಹಾಗೂ ಮಕ್ಕಳ ಕಲ್ಯಾಣಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಾವು ಕೊಡಬೇಕಿದ್ದ ಆದ್ಯತೆ ಕಡಿಮೆಯಾಗಿದೆಯೇನೋ ಎಂದೆನಿಸುತ್ತದೆ. 2010ರ ಮೇ 10 ಮತ್ತು 11 ರಂದು ನೆದರ್‌ಲೆಂಡಿನ `ಹೇಗ್~ನಲ್ಲಿ ನಡೆದ `ಜಾಗತಿಕ ಬಾಲಕಾರ್ಮಿಕ ಸಮ್ಮೇಳನ~ದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಬಿಡುಗಡೆ ಮಾಡಿರುವ `ಜಾಗತಿಕ ಬಾಲಕಾರ್ಮಿಕ ವರದಿ~. ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಎಲ್ಲರನ್ನೂ ಚಿಂತಿಸುವಂತೆ ಮಾಡಿದೆ.2004 ರಿಂದ 2008ರ ತನಕ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ನಾವು ಕಂಡಿರುವ ಯಶಸ್ಸು ಶೇ 3 ಮಾತ್ರ ಎಂದು ವರದಿ ಹೇಳಿದೆ. 5 ರಿಂದ 14ರ ವಯೋಮಾನದ ಮಕ್ಕಳಲ್ಲಿ ಶೇ 10 ರಷ್ಟು ದುಡಿಯುವವರು ಕಡಿಮೆಯಾಗಿರುವುದು ಕಂಡುಬಂದರೂ, 15 ರಿಂದ 17ನೇ ವಯೋಮಾನದವರಲ್ಲಿ ಶೇ 20 ರಷ್ಟು ಹೆಚ್ಚಾಗಿರುವುದು ಆತಂಕಕಾರಿ ಸಂಗತಿ. ಬಾಲಕಾರ್ಮಿಕತೆ ಮಕ್ಕಳ ಹಕ್ಕುಗಳಿಗೆ ಮಾರಕವಷ್ಟೇ ಅಲ್ಲದೆ, ಯಾವುದೇ ದೇಶದ ಅಭಿವೃದ್ಧಿಗೆ ಸ್ಪಷ್ಟ ತೊಡಕು.ಏಷಿಯಾ-ಪೆಸಿಫಿಕ್ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಬಾಲಕಾರ್ಮಿಕರು ಕಂಡುಬರುತ್ತಾರೆ ಎಂದು ವರದಿ ತಿಳಿಸಿದೆ. ಪ್ರಸ್ತುತ ಬಾಲಕಾರ್ಮಿಕರ ಸಾಂದ್ರತೆಯಲ್ಲಿ ಹಿಂದಿನ ಜನಗಣತಿಯ ಪ್ರಕಾರ ನಮ್ಮ ರಾಜ್ಯ 7ನೇ ಸ್ಥಾನದಲ್ಲಿದೆ.

 

2001ರ ಜನಗಣತಿಯ ಪ್ರಕಾರ ಸುಮಾರು 8.2 ಲಕ್ಷ ಮಕ್ಕಳು, 2004-05ರ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್‌ನ ವರದಿ ಪ್ರಕಾರ 5.71 ಲಕ್ಷ ಮಂದಿ ಮಕ್ಕಳು ನಮ್ಮ ರಾಜ್ಯದಲ್ಲಿ ದುಡಿಯುತ್ತಿದ್ದಾರೆ. 2011ರ ಜನಗಣತಿಯ ವಿವರವಾದ ಅಂಕಿ ಅಂಶಗಳ ವಿಶ್ಲೇಷಣೆಯ ಮೂಲಕ ಸದ್ಯದ ಚಿತ್ರಣವನ್ನು ತೆರೆದಿಡಬೇಕಿದೆ.ಒಟ್ಟಾರೆಯಾಗಿ ದುಡಿಯುವ ಮಕ್ಕಳ ಸಂಖ್ಯೆ ಕಡಿಮೆಯಾದಂತೆ ಕಂಡುಬಂದರೂ, ಅನಿಯಮಿತವಾಗಿ ಹಾಗೂ ನಿರ್ದಿಷ್ಟ ಸಂದರ್ಭಗಳಲ್ಲಿ ದುಡಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಾಗಿರುವ ವಿವಿಧ ಸಮೀಕ್ಷೆಗಳು ವಿಭಿನ್ನ ಅಂಕಿ ಅಂಶಗಳನ್ನು ವರದಿ ಮಾಡಿದೆ.ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಸಹಯೋಗದಲ್ಲಿ, ಕರ್ನಾಟಕ ರಾಜ್ಯ ಬಾಲಕಾರ್ಮಿಕ ಯೋಜನೆಯ ಅಡಿಯಲ್ಲಿ, 2005-06 ರಲ್ಲಿ ಬೀದರ್ ಹಾಗೂ ಚಾಮರಾಜನಗರದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ `ಅಂದಾಜಿ~ಸಿರುವ ಪ್ರಕಾರ ಕ್ರಮವಾಗಿ 40,652 ಮತ್ತು 26,931 ಮಂದಿ ಮಕ್ಕಳು ದುಡಿಮೆಯಲ್ಲಿ ನಿರತರಾಗಿದ್ದರು.2010ರ ಸರ್ವಶಿಕ್ಷಾ ಅಭಿಯಾನ ಸಮೀಕ್ಷೆಯ ಪ್ರಕಾರವೂ ಹಿಂದಿನ ಸಮೀಕ್ಷೆಯಲ್ಲಿ ವರದಿಯಾಗಿರುವದಕ್ಕಿಂತ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ತಿಳಿದುಬಂದಿದೆ. ಇದೆಲ್ಲವೂ ನಾವು ನಿಜವಾಗಿಯೂ ಚಿಂತಿಸಬೇಕಾದ ವಿಚಾರ.ನಮ್ಮ ಮುಂದಿರುವ ಮತ್ತೊಂದು ಸವಾಲು ಎಂದರೆ `ಮಕ್ಕಳು/ಮಗು~ ಎಂಬುದರ ವ್ಯಾಖ್ಯಾನ. ವಿವಿಧ ಕಾಯ್ದೆಗಳು ವಿಭಿನ್ನವಾಗಿ ಮಕ್ಕಳನ್ನು ವ್ಯಾಖ್ಯಾನಿಸುತ್ತವೆ.ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ನಾವೆಲ್ಲರೂ ಪ್ರಮುಖವಾಗಿ ಆಶ್ರಯಿಸಿರುವ `ಬಾಲಕಾರ್ಮಿಕ ಕಾಯ್ದೆ 1986, (ನಿಷೇಧ ಮತ್ತು ನಿಯಂತ್ರಣ) ಮತ್ತು 14 ವರ್ಷ ವಯೋಮಾನದ ಒಳಗಿರುವ ವ್ಯಕ್ತಿಯನ್ನು `ಮಗು~ ಎಂದು ವರ್ಗೀಕರಿಸಿದರೆ, ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವವಾಗಿ ಚರ್ಚಿಸುತ್ತಿರುವ ಹಾಗೂ ಪರಿಗಣಿಸಬೇಕೆಂದು ಭಾವಿಸಿರುವ ಬಾಲ ನ್ಯಾಯ ಕಾಯ್ದೆ 2000, 18 ವರ್ಷ ವಯೋಮಾನದ ಒಳಗಿರುವ ವ್ಯಕ್ತಿಯನ್ನು ಮಗು ಎಂದು ಹೇಳುತ್ತದೆ.

 

ಅಂತೆಯೇ ಮಕ್ಕಳ (ಕೆಲಸಕ್ಕಾಗಿ ಒತ್ತೆಯಿಡುವುದು) ಕಾಯ್ದೆ 1933, 15 ವರ್ಷದ ಒಳಗಿರುವವರನ್ನು, ಕನಿಷ್ಠ ವೇತನ ಕಾಯ್ದೆ 1948, `14~ ವರ್ಷದ ಒಳಗಿರುವವರನ್ನು ಮಗು ಎಂದು ವರ್ಗೀಕರಿಸುತ್ತವೆ.ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ 138ನೇ `ಕನಿಷ್ಠ ಪ್ರಾಯ~ದ ಕುರಿತಾಗಿನ ಸಮಾವೇಶ 15 ವಯಸ್ಸಿನ ಒಳಗಿನವರನ್ನು ಮಕ್ಕಳು ಎಂದು ಪರಿಗಣಿಸಬೇಕು, ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಕ್ರಮೇಣ ವಯೋಮಾನವನ್ನು 14 ರಿಂದ 18ಕ್ಕೆ ಏರಿಸಬೇಕೆಂದು ನಿರ್ಣಯ ತೆಗೆದುಕೊಂಡಿದೆ. ಒಟ್ಟಾರೆಯಾಗಿ ಮಕ್ಕಳ ಕಲ್ಯಾಣವನ್ನು ಮಾನದಂಡವಾಗಿಟ್ಟುಕೊಂಡು ಒಂದು ಸಮಗ್ರ ಹಾಗೂ ಏಕರೂಪ ವ್ಯಾಖ್ಯಾನವನ್ನು ಮಾಡಬೇಕಿದೆ.ಇತ್ತೀಚಿನ ಶಿಕ್ಷಣ ಹಕ್ಕು ಕಾಯ್ದೆ 2009 ಸಹ ಕೇವಲ 14 ವರ್ಷ ಪ್ರಾಯದ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದೆ. ಕಾಯ್ದೆಗಳಲ್ಲಿನ ಇಂತಹ ವ್ಯತ್ಯಾಸ ಅಂತಿಮವಾಗಿ ಶೋಷಿತ ಮಗುವಿನ ಕಲ್ಯಾಣದಲ್ಲಿ  ಪರಿಣಾಮ ಬೀರುತ್ತದೆ.ಕಾಯ್ದೆಗಳಲ್ಲಿನ ದ್ವಂದ್ವ: ಪ್ರಸ್ತುತ ನಮ್ಮ ಕಾಯ್ದೆ (ಬಾಲ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ) ಬಾಲಕಾರ್ಮಿಕತೆಯನ್ನು ಕೆಲವು ಕಾರ್ಯಕ್ಷೇತ್ರಗಳಲ್ಲಿ ಮಾತ್ರ ಸಂಪೂರ್ಣ ನಿಷೇಧಿಸುವ ಮತ್ತು ಇನ್ನುಳಿದ ಕ್ಷೇತ್ರಗಳಲ್ಲಿ ಕೇವಲ ನಿಯಂತ್ರಿಸುವ ಮಾತನ್ನಾಡುತ್ತದೆ. ಇತ್ತ ಶಿಕ್ಷಣ ಹಕ್ಕು ಕಾಯ್ದೆ, ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯುವ (ನೀಡುವ) ಮಾತನ್ನಾಡುತ್ತದೆ. ಈ ದ್ವಂದ್ವತೆ ನಿವಾರಿಸುವ ಅಗತ್ಯವಿದೆ.ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದಾಗ ಬೇರೆಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಸಮಗ್ರ ರಕ್ಷಣೆಗಾಗಿ ಹಾಗೂ ಕಲ್ಯಾಣಕ್ಕಾಗಿ ಹಲವಾರು ಸಾಂಸ್ಥಿಕ ವ್ಯವಸ್ಥೆಗಳು ರಚನೆಯಾಗಿದೆ.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಮಕ್ಕಳ ರಕ್ಷಣಾ ಘಟಕ, ರಾಜ್ಯ ಬಾಲಕಾರ್ಮಿಕ ಸಂಪನ್ಮೂಲ ಕೇಂದ್ರ, ಹೀಗೆ ಸರ್ಕಾರ ವಿವಿಧ ಇಲಾಖೆಗಳ ಮತ್ತು ಸಂಸ್ಥೆಗಳ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಸಲುವಾಗಿ ರೂಪಿಸಲಾಗಿರುವ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತಾಗಲು ಸರ್ಕಾರ ಅಗತ್ಯ ಸಹಕಾರ ಮತ್ತು ವಾತಾವರಣವನ್ನು ನಿರ್ಮಿಸಿ ಕೊಡಬೇಕಿದೆ.

 

ಇದೆಲ್ಲವನ್ನು ಬಿಟ್ಟು ಕೇವಲ ಆಚರಣೆಗಾಗಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನವನ್ನು ಪರಿಗಣಿಸಿದರೆ ಸಮಯ ಮತ್ತು ಸಂಪನ್ಮೂಲದ ಅಪವ್ಯಯವಷ್ಟೇ ನಮ್ಮ `ಸಾಧನೆ~ ಯಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.