ಬಾಲಕಿಯರ ಪ್ರೌಢಶಾಲೆಗೆ ಸುವರ್ಣ ಸಂಭ್ರಮ ಇಂದು

7

ಬಾಲಕಿಯರ ಪ್ರೌಢಶಾಲೆಗೆ ಸುವರ್ಣ ಸಂಭ್ರಮ ಇಂದು

Published:
Updated:

ಅಂಕೋಲಾ: ಉತ್ತರ ಕನ್ನಡದ ನೆಲದಲ್ಲಿ ವಿದ್ಯಾರ್ಥಿನಿಯರ ಪ್ರೌಢ ಶಿಕ್ಷಣದ ಅಗತ್ಯಗಳನ್ನು ಪೂರೈಸಲು 1962ರಲ್ಲಿ ಪ್ರೇಮಾತಾಯಿ ಪಿಕಳೆ, ಶೇಷಗಿರಿ ಪಿಕಳೆ ದಂಪತಿ ಸ್ಥಾಪಿಸಿದ ವಾಸುದೇವರಾವ ಕಸಬೇಕರ ಬಾಲಕಿಯರ ಪ್ರೌಢಶಾಲೆಯು ಜನವರಿ 1ರಂದು ಸುವರ್ಣ ಸಂಭ್ರಮವನ್ನು ಕಾಣುತ್ತಿದೆ.ವಸಾಹತುಶಾಹಿಯ ಸಂದರ್ಭದಲ್ಲಿಯೇ ಮಹಾರಾಷ್ಟ್ರದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಪುಲೆ ದಂಪತಿಯ ಹೋರಾಟದ ಬದುಕನ್ನು ಆದರ್ಶವಾಗಿಟ್ಟುಕೊಂಡು ಅರಣ್ಯ ಜಿಲ್ಲೆಯಲ್ಲಿ ಅಂತಹ ಪ್ರಯತ್ನವನ್ನು ಯಶಸ್ವಿಯಾಗಿ ಕೈಗೊಂಡ ಪಿಕಳೆ ದಂಪತಿ ಬದುಕಿನುದ್ದಕ್ಕೂ ಪರೋಪಕಾರವನ್ನೇ ಉಸಿರಾಗಿಸಿಕೊಂಡು ಅಮರರಾದರು.ಮಹಿಳೆಯೊಬ್ಬಳು ಶಿಕ್ಷಣ ಪಡೆದರೆ ಇಡೀ ಕುಟುಂಬ ಶೈಕ್ಷಣಕ ಸಂಸ್ಕಾರಕ್ಕೆ ಒಳಗಾಗುತ್ತದೆ ಎಂದು ಪ್ರೇಮಾತಾಯಿ ಹೇಳುತ್ತಿದ್ದರು. ಈ ಆದರ್ಶ ದಂಪತಿಗಳು ಆದರ್ಶಗಳನ್ನು ಕೇವಲ ಬಾಯಿ ಮಾತಿನಲ್ಲಿ ಹೇಳದೆ ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾದರು. ಅವರು ಸ್ಥಾಪಿಸಿದ ಬಾಲಕಿಯರ ಪ್ರೌಢಶಾಲೆ, ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರ ಈ ಎಲ್ಲಾ ಸಂಸ್ಥೆಗಳ ನೆರವಿನಿಂದ ಈ ಭಾಗದ ಮಹಿಳೆಯರು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುವಂತಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನೂರಾರು ಮಹಿಳೆಯರು ಶಿಕ್ಷಕಿಯರಾಗಿ ನೇಮಕಗೊಳ್ಳುವಂತಾಯಿತು. ಬಾಲಕಿಯರ ಪ್ರೌಢಶಾಲೆ ತನ್ನ ಸಾರ್ಥಕ 50 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಪಿಕಳೆ ದಂಪತಿ ತಮ್ಮ ಬದುಕಿನ ಉತ್ತರಾರ್ಧದಲ್ಲಿ ಈ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಪ್ರತಿಷ್ಠಿತ ಕೆ.ಎಲ್.ಇ. ವಿದ್ಯಾ ಸಂಸ್ಥೆಯ ಸುಪರ್ದಿಗೆ ಒಳಪಡಿಸಿದರು.

ನಂತರದ ದಿನಗಳಲ್ಲಿ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರು ಈ ಸಂಸ್ಥೆಗಳ ಕರ್ಣಧಾರತ್ವವನ್ನು ವಹಿಸಿಕೊಂಡು ಇನ್ನಷ್ಟು ವಿದ್ಯಾ ಸಂಸ್ಥೆಗಳನ್ನು ರೂಪಿಸಿದರು. ಬಿ.ಇಡಿ. ಕಾಲೇಜು, ನರ್ಸಿಂಗ್‌ ಮಹಾವಿದ್ಯಾಲಯ, ಔಷಧಿ ವಿಜ್ಞಾನ ಸಂಸ್ಥೆ ಮುಂತಾದವುಗಳನ್ನು ಪರಿಚಯಿಸುವ ಮೂಲಕ ಈ ಭಾಗದಲ್ಲಿ ವೃತ್ತಿಪರ ಶಿಕ್ಷಣದ ಅಭಿರುಚಿಯನ್ನು ಬೆಳೆಸುತ್ತಿದ್ದಾರೆ.ಸುವರ್ಣ ಸಂಭ್ರಮ ಕಾರ್ಯಕ್ರಮ

ಸಂಸ್ಥೆಯ ಸಭಾಂಗಣದಲ್ಲಿ ಜ.1ರಂದು ಬೆಳಿಗ್ಗೆ 10.-30ಕ್ಕೆ ಸುವರ್ಣ ಮಹೋತ್ಸವ ಮತ್ತು ಪ್ರೇಮಾತಾಯಿ ಅವರ 88ನೇ ಜಯಂತಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾಯಮೂರ್ತಿ ಡಾ.ಎಸ್.ಆರ್. ನಾಯಕ, ಮೂಡುಬಿದಿರೆಯ ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರೇವಣಸಿದ್ದಪ್ಪ, ಕೆ.ಎಲ್.ಇ. ಸಂಸ್ಥೆಯ ಪ್ರಮುಖರಾದ ಡಾ. ನಟರಾಜ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಬಿ. ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry