ಬಾಲಕಿಯರ ವಸತಿನಿಲಯವೂಅವ್ಯವಸ್ಥೆಯೂ...

7

ಬಾಲಕಿಯರ ವಸತಿನಿಲಯವೂಅವ್ಯವಸ್ಥೆಯೂ...

Published:
Updated:

ಗುಲ್ಬರ್ಗ:ಸರ್ಕಾರ ಸ್ಥಾಪಿಸಿರುವ ವಸತಿ ನಿಲಯಗಳ ಕಾರ್ಯವೈಖರಿ, ಅವುಗಳ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನೋಡಬೇಕಾದರೆ ನೀವು ಬೇರೆ ಎಲ್ಲಿಗೂ ಹೋಗಬೇಕಿಲ್ಲ. ನಗರದ ಜೇವರ್ಗಿ ಕ್ರಾಸ್ ಹತ್ತಿರವಿರುವ ವಿದ್ಯಾನಗರದಲ್ಲಿನ ಸರ್ಕಾರಿ ಬಾಲಕಿಯರ ವಸತಿ ನಿಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು!ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್ ನಂತರದ ಪಿಯುಸಿ, ಬಿ.ಎ, ಬಿಇಡಿ, ಐಟಿಐ, ಡಿಪ್ಲೊಮಾ ಓದುವ ಒಟ್ಟು ಸುಮಾರು 450ಕ್ಕೂ ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಆದರೆ ಅವರಿಗೆ ಕನಿಷ್ಠ ಮೂಲಸೌಕರ್ಯಗಳಿಲ್ಲದ್ದರಿಂದ ಅಲ್ಲಿ ವಾಸವಾಗಿರುವುದೇ ಅವರಿಗೆ ವನವಾಸವಾಗಿ ಪರಿಣಮಿಸಿದೆ.ಉತ್ತಮ ಗುಣಮಟ್ಟದ ಆಹಾರ ಕೊಡಬೇಕು ಎಂಬ ಸರ್ಕಾರದ ಆದೇಶವಿದ್ದರೂ ಇಲ್ಲಿ ಮಾತ್ರ ಕಳಪೆ ಆಹಾರದ ಜೊತೆಗೆ ಹುಳು-ಹರಳುಗಳನ್ನು ಸಹ ಬೋನಸ್ ಆಗಿ ನೀಡುತ್ತಿದ್ದಾರೆ ಎಂದು ಅಲ್ಲಿನ ವಿದ್ಯಾರ್ಥಿನಿಯರು ವಸತಿ ನಿಲಯದ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡುತ್ತಾರೆ.ಯಾವುದೇ ತರಕಾರಿ ಬಳಸದೆ ಬರೀ ಕಾಳುಪಲ್ಲೆ, ಕುದಿಯದ ಅನ್ನ, ತಟ್ಟೆಯಲ್ಲಿ ನಮ್ಮ ಪ್ರತಿಬಿಂಬ ಕಾಣುವ ಸಾರು, ಕೈಯಲ್ಲಿ ಹಿಡಿದರೆ ಮುರಿಯುವ ರೊಟ್ಟಿ, ಅರೆಬೆಂದ ಚಪಾತಿ ನೀಡಲಾಗುತ್ತಿದ್ದು, ವಸತಿ ನಿಲಯ ಸೇರಿದಾಗಿನ ನಮ್ಮ ದೇಹದ ತೂಕಕ್ಕೂ ಈಗಿನ ಸದ್ಯದ ನಮ್ಮ ದೇಹದ ತೂಕಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ (ತೂಕ ಕಡಿಮೆಯಾಗಿದೆ) ಎಂದು ಅಲ್ಲಿನ ವಿದ್ಯಾರ್ಥಿನಿಯರು ದೂರು ಸಲ್ಲಿಸುತ್ತಾರೆ.“ಇರುವ 38 ಕೋಣೆಗಳಲ್ಲಿ ಎರಡು ಕೋಣೆಗಳಲ್ಲಿ ಸಾಮಗ್ರಿ ಸಂಗ್ರಹಿಸಲಾಗಿದೆ. ಹೀಗಾಗಿ ಒಂದೊಂದು ಕೋಣೆಯಲ್ಲಿ 10ರಿಂದ 15 ಜನ ವಾಸವಾಗಿದ್ದೇವೆ. ವಸತಿ ನಿಲಯದ ಅಂಗಳದಲ್ಲಿ ಒಂದರಮೇಲೊಂದು ಹಂದಿ ಮಲಗುವಂತೆ ನಾವೂ ಒಬ್ಬರ ಮೇಲೊಬ್ಬರು ಮಲಗುತ್ತೇವೆ.ವಸತಿ ನಿಲಯದಲ್ಲಿರುವ ಗ್ರಂಥಾಲಯ ಕೋಣೆ ಮುಚ್ಚಿ ಎರಡು ವರ್ಷಗಳೇ ಗತಿಸಿರುವುದರಿಂದ ಅದು ಈಗ ಅಡುಗೆ ಕೋಣೆಯಾಗಿ ಪರಿವರ್ತನೆಗೊಂಡಿದೆ. ನಾವು ಬಳಸುವ ಸ್ನಾನಗೃಹ ಹಾಗೂ ಶೌಚಗೃಹಗಳನ್ನು ಸ್ವಚ್ಛಮಾಡಿ ಹಲವಾರು ತಿಂಗಳುಗಳೇ ಗತಿಸಿವೆ.ಹೀಗಾಗಿ ಇಲ್ಲಿ ಇರುವುದೆಂದರೆ ನರಕದಲ್ಲಿ ಮಿಂದೆದ್ದಂತೆ. ಸೌಕರ್ಯ ಕಲ್ಪಿಸುವ ಬಗ್ಗೆ ಮೇಲ್ವಿಚಾರಕಿರನ್ನು ಕೇಳಿದರೆ ನಮಗೇ ಹೆದರಿಸುತ್ತಾರೆ. ಮೇಲಾಗಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ನೋವಿನಿಂದ ನುಡಿಯುತ್ತಾರೆ ಆಶಾ, ಸುನಿತಾ, ಪ್ರತಿಭಾ, ಪ್ರಿಯಾಂಕ, ರಾಜಶ್ರೀ, ಭಾರತಿ, ಮಮತಾಶ್ರೀ ಮತ್ತಿತರರು.ಇದು ಅಲ್ಲಿನ ವಿದ್ಯಾರ್ಥಿನಿಯರು ಹೇಳುವ ವಸತಿ ನಿಲಯದ ಒಳಗಿನ ಸ್ಥಿತಿಯಾದರೆ, ವಸತಿ ನಿಲಯದ ಹೊರಚಿತ್ರಣ ಇನ್ನೂ ಭಯಾನಕವಾಗಿದೆ. ವಸತಿ ನಿಲಯದ ಹೊಸ್ತಿಲಲ್ಲೇ ಕಸದ ರಾಶಿ, ಹಂದಿ, ನಾಯಿಗಳ ಹಿಂಡು, ವಸತಿ ನಿಲಯದ ಎದುರಿಗೆ ನಿಂತರೆ ದುರ್ನಾತ ಎಲ್ಲರಿಗೂ ಕಂಡು ಬರುವ ಮತ್ತು ಅನುಭವಿಸುವ ಸಂಕಟ.ವಸತಿ ನಿಲಯದ ಸಮಸ್ಯೆಗಳನ್ನು ಬಗೆ ಹರಿಸುವಂತೆ ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಪ್ರತಿಭಟನೆ ಮೂಲಕ ಈಚೆಗೆ ಮನವಿ ಸಲ್ಲಿಸಲಾಗಿದೆ. ಆಗಿನಿಂದ ಮೇಲ್ನೋಟಕ್ಕೆ ಸ್ವಲ್ಪ ಸ್ವಚ್ಛವಾಗಿ ಕಂಡು ಬರುತ್ತಿರುವ ಈ ವಸತಿ ನಿಲಯದಲ್ಲಿ ಅನೇಕ ವರ್ಷಗಳಿಂದ ಸಮಸ್ಯೆಗಳು ಜೀವಂತವಾಗಿಯೇ ಉಳಿದುಕೊಂಡು ಬಂದಿವೆ.ಈ ಮಧ್ಯೆ ವಸತಿ ನಿಲಯದ ಐಟಿಐ ಮತ್ತು ಡಿಪ್ಲೊಮಾ ಓದುವ ವಿದ್ಯಾರ್ಥಿನಿಯರನ್ನು ಬೇರೆ ವಸತಿ ನಿಲಯಕ್ಕೆ ವರ್ಗಾಯಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ನಿರ್ಧಾರ ಕೈಗೊಳ್ಳುವುದರಿಂದ ಇಲ್ಲಿಯೇ ವಾಸವಾಗಿರುವ ವಿದ್ಯಾರ್ಥಿನಿಯರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ವಸತಿ ನಿಲಯದ ಅವ್ಯವಸ್ಥೆಗೆ ಕಾರಣರಾದ ಮೇಲ್ವಿಚಾರಕಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಎಸ್‌ಎಫ್‌ಐ ಮುಖಂಡ ಸುನೀಲ್ ಮಾನ್ಪಡೆ ಆಗ್ರಹಿಸುತ್ತಾರೆ.ಆರೋಪ ನಿರಾಧಾರ

ಇಲ್ಲಿಗೆ ನಾನು ವರ್ಗವಾಗಿ ಬಂದು ಮೂರು ತಿಂಗಳಾಯಿತು. ಈ ಮುಂಚೆ ಇಲ್ಲಿದ್ದ ಮೇಲ್ವಿಚಾರಕಿ ವಿದ್ಯಾರ್ಥಿನಿಯರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕಳಪೆ ಪಟ್ಟದ ಆಹಾರ ಪೂರೈಸುವುದಿಲ್ಲ. ಉತ್ತಮ ಗುಣಮಟ್ಟದ ಆಹಾರ ನೀಡುತ್ತೇವೆ. ವಿದ್ಯಾರ್ಥಿನಿಯರ ಅಸಭ್ಯ ಹಾಗೂ ಬೇಜವಾಬ್ದಾರಿ ವರ್ತನೆಗೆ ನಾನು ಕಡಿವಾಣ ಹಾಕಿದ್ದೇನೆ.ಇಲ್ಲಿನ ಸಮಸ್ಯೆಗಳಾದ ನೀರು, ಕೋಣೆ ಇವುಗಳ ಬಗ್ಗೆ ನಾನು ಈಗಾಗಲೇ ಮೇಲಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದೇನೆ. ವಿದ್ಯಾರ್ಥಿನಿಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸುತ್ತಾರೆ ವಸತಿ ನಿಲಯದ ಮೇಲ್ವಿಚಾರಕಿ ನಾಗಮ್ಮ ಕಾಳೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry