ಶುಕ್ರವಾರ, ಮೇ 14, 2021
35 °C

ಬಾಲಕಿಯರ ಹಾಸ್ಟೆಲ್‌; 150 ಮಂದಿಗೆ 2 ಸ್ನಾನ ಗೃಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: 150 ವಿದ್ಯಾರ್ಥಿನಿಯರಿಗೆ ಕೇವಲ ಎರಡು ಸ್ನಾನ ಗೃಹ, ಮೂರು ಶೌಚಾಲಯ, ಅಡುಗೆ ಸರಿ ಇಲ್ಲ, ಒಂದೊಂದು ಕೊಠಡಿಯಲ್ಲಿ ಹಲವು ವಿದ್ಯಾರ್ಥಿನಿಯರು ಇಕ್ಕಟ್ಟಿನಲ್ಲೆ ಇರಬೇಕು. ಕುಡಿಯುವ ನೀರಿನ ಸಮಸ್ಯೆ...- ಇದು ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರ ಸಮಸ್ಯೆ.ನಿಲಯಕ್ಕೆ ಬುಧವಾರ ದಿಢೀರ್ ಭೇಟಿ ನೀಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಎಸ್‌ಪಿ ರೇಣುಕಾ ಕೆ. ಸುಕುಮಾರ್ ಅವರ ಮುಂದೆ ಹಲವು ವಿದ್ಯಾರ್ಥಿನಿಯರು ನಿಲಯದಲ್ಲಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.ಮಧ್ಯಾಹ್ನ ಒಂದು ಗಂಟೆ ವೇಳೆಗೆ ಭೇಟಿ ನೀಡಿದ ಅಧಿಕಾರಿ ರೇಣುಕಾ ನಿಲಯದಲ್ಲಿರುವ ಸಮಸ್ಯೆಗಳ ಕುರಿತು ವಿಚಾರಿಸಿದರು. ಕೆಲವು ಕೊಠಡಿಗಳಿಗೆ ತೆರಳಿ ಇಕ್ಕಟ್ಟಿನ ವಾತಾವರಣ ಇರುವುದನ್ನು ಖಚಿತಪಡಿಸಿಕೊಂಡರು. ಒಂದು ಕೊಠಡಿಯಲ್ಲಿ 11 ವಿದ್ಯಾರ್ಥಿ ನಿಯರನ್ನು ನಿಯೋಜಿಸಿದ್ದು ಅವರಿಗೆ ಅಚ್ಚರಿ ತಂದಿತು.ಅಡುಗೆ ಕೋಣೆಗೆ ತೆರಳಿದ ಅವರಿಗೆ, ಅಡುಗೆ ಅನಿಲ ಒಲೆಗಳಿದ್ದರೂ ಸೌದೆಯಲ್ಲಿ ಅಡುಗೆ ಮಾಡುತ್ತಿರುವುದು, ನೀರು ಶುದ್ಧೀಕರಣ ಘಟಕವನ್ನು ಬಳಸದೆ ಇರುವುದು, ನ್ಯಾಯಬೆಲೆ ಅಂಗಡಿ ಅಕ್ಕಿಯಲ್ಲಿ ಅನ್ನ ಮಾಡಿರುವುದು ಕಂಡು ಬಂತು. ಅಲ್ಲೆ ನಿಂತು ಅನ್ನ- ಸಾರಿನ ರುಚಿ ನೋಡಿದ ಅವರು ಅಸಮಾಧಾನ ವ್ಯಕ್ತಪಡಿಸಿದರು.ಜ್ವರ ಮತ್ತಿತರ ಕಾಯಿಲೆಗಳಿಗೆ ತುತ್ತಾದರೆ ವೈದ್ಯಕೀಯ ಸೌಲಭ್ಯ ನೀಡುವುದಿಲ್ಲ. ಹೀಗಾಗಿ ನಾವೇ ಹೊರಗಿನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತೇವೆ. ವಾರ್ಡನ್ ಅಥವಾ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವು ದಿಲ್ಲ. ಭರವಸೆಗಳನ್ನು ನೀಡುತ್ತಾರಷ್ಟೆ ಎಂದು ತಿಳಿಸಿದರು.ಸಂಪರ್ಕವಿಲ್ಲ: ಭೇಟಿ ಸಂದರ್ಭದಲ್ಲಿ ನಿಲಯದ ವಾರ್ಡನ್ ಪ್ರಮೀಳಾ ಅವರು ಸ್ಥಳದಲ್ಲಿ ಇಲ್ಲದ ಕಾರಣ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ನಿರ್ದೇಶನಾಲಯದ ಅಧಿಕಾರಿಗಳು ಯತ್ನಿಸಿದರು. ಆದರೆ ಅವರ ಕರೆಯನ್ನು ವಾರ್ಡನ್ ಸ್ವೀಕರಿಸಲೇ ಇಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.