ಮಂಗಳವಾರ, ಏಪ್ರಿಲ್ 13, 2021
23 °C

ಬಾಲಕಿಯ ನೋವಿಗೆ ಹೈಕೋರ್ಟ್ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹನ್ನೊಂದು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಎರಡೂ ಕಾಲುಗಳನ್ನು ಮಾತ್ರವಲ್ಲದೆ ಸೊಂಟದ ಕೆಳಭಾಗದ ಸ್ವಾಧೀನವನ್ನು ಸಂಪೂರ್ಣವಾಗಿ ಕಳೆದುಕೊಂಡು ತೆವಳುತ್ತ ಬಂದು ತನ್ನ ಪ್ರಕರಣದ ವಿಚಾರಣೆಗಾಗಿ ಕಾದು ಕುಳಿತಿದ್ದ ಬಾಲಕಿಯೊಬ್ಬಳ ನೋವಿಗೆ ಸ್ಪಂದಿಸಿದ ಹೈಕೋರ್ಟ್, ಆಕೆಯ ಪ್ರಕರಣವನ್ನು ಮುಂಚೆಯೇ ವಿಚಾರಣೆಗೆ ಕೈಗೆತ್ತಿಕೊಂಡ್ದ್ದಿದು 6.30 ಲಕ್ಷ ರೂಪಾಯಿ ಪರಿಹಾರಕ್ಕೆ ಆದೇಶಿಸಿರುವ ಘಟನೆ ಬುಧವಾರ ನಡೆಯಿತು.

ಐದು ವರ್ಷ ವಯಸ್ಸಿನಲ್ಲಿ ನಡೆದ ದುರ್ಘಟನೆಯಲ್ಲಿ ಶಾಶ್ವತ ಅಂಗವಿಕಲೆಯಾದ ಬಾಲಕಿ ಸವಿತಾಳ (ಈಗ ಆಕೆಗೆ 16 ವರ್ಷ) ನೆರವಿಗೆ ಹೈಕೋರ್ಟ್ ಧಾವಿಸಿದೆ. ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ನೀಡಿದ್ದ 2 ಲಕ್ಷ ರೂಪಾಯಿ ಪರಿಹಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎನ್.ಕೆ.ಪಾಟೀಲ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಪರಿಹಾರವನ್ನು 6.30 ಲಕ್ಷ ರೂಪಾಯಿಗೆ ಏರಿಸಿ ಆದೇಶಿಸಿತು.

ಬನಶಂಕರಿ ನಿವಾಸಿ ಸವಿತಾ, 2001ರಲ್ಲಿ ಒಂದನೆಯ ತರಗತಿಯಲ್ಲಿ ಓದುತ್ತಿದ್ದಳು. ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ, ರಾಜಾಜಿನಗರದ ನಿವಾಸಿ ಕೆ.ಸಿ.ಪ್ರತಿಭಾ ಅವರು ಓಡಿಸುತ್ತಿದ್ದ ಕಾರು ಸವಿತಾಳ ಮೇಲೆ ಹಾಯ್ದು, ಆಕೆ ಗಂಭೀರವಾಗಿ ಗಾಯಗೊಂಡಳು. `ರೂ 3 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದರೂ, ಬಾಲಕಿ ಸಂಪೂರ್ಣ ಗುಣಮುಖ ಆಗಲಿಲ್ಲ. ಇದರಿಂದ ಆಕೆ ಶಾಶ್ವತ ಅಂಗವಿಕಲೆಯಾದಳು. ಘಟನೆ ನಡೆದು 11 ವರ್ಷವಾದರೂ, ವೈದ್ಯಕೀಯ ಚಿಕಿತ್ಸೆ ಇನ್ನೂ ನಿಂತಿಲ್ಲ. ಶಾಲೆಗೂ ಹೋಗದೆ ವಿದ್ಯಾಭ್ಯಾಸ ಕುಂಠಿತಗೊಂಡಿದೆ. ಎಲ್ಲ ಕೆಲಸಗಳಿಗೂ ಬೇರೆಯವರನ್ನೇ ಅವಲಂಬಿಸುವ ಸ್ಥಿತಿ ಆಕೆಯದ್ದು~ ಎಂದು ಅರ್ಜಿಯಲ್ಲಿ ಅವಳ ತಂದೆ ತಿಳಿಸಿದ್ದಾರೆ.

ಈ ಅರ್ಜಿಯು ವಿಚಾರಣಾ ಪಟ್ಟಿಯಲ್ಲಿ (ಕಾಸ್ ಲಿಸ್ಟ್) 36ನೇ ಸ್ಥಾನ ಪಡೆದಿತ್ತು. ಬೆಳಿಗ್ಗೆ 10.30ಕ್ಕೇ ಬಾಲಕಿ ತನ್ನ ತಂದೆಯ ಜೊತೆ ಕೋರ್ಟ್ ಸಭಾಂಗಣದೊಳಕ್ಕೆ ಬಂದು ಕುಳಿತಿದ್ದಳು. ನ್ಯಾಯಮೂರ್ತಿಗಳ ಗಮನ ಆಕೆಯ ಕಡೆ ಹೊರಳಿತು. ಅವಳ ಪರಿಸ್ಥಿತಿ ಕಂಡು ಮರುಗಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಂಡರು. ಪರಿಹಾರದ ಹಣ ಹೆಚ್ಚಿಸಿದ ಅವರು, ಈ ಹಣವನ್ನು ಶೀಘ್ರ ನೀಡುವಂತೆ ಓರಿಯಂಟಲ್ ಇನ್ಶುರೆನ್ಸ್ ಕಂಪೆನಿ ಹಾಗೂ ಅಪಘಾತ ಮಾಡಿರುವ  ಪ್ರತಿಭಾ ಅವರಿಗೆ ಆದೇಶಿಸಿದ್ದಾರೆ.

ಕಾನೂನು ಉಲ್ಲಂಘಿಸುವ ವೈದ್ಯರು: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯರು, ಗ್ರಾಮೀಣ ಸೇವಾ ಭತ್ಯೆಯನ್ನು ಪಡೆದುಕೊಳ್ಳುತ್ತ ಸರ್ಕಾರದ ಬೊಕ್ಕಸಕ್ಕೆ ಸುಮಾರು 30 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿ ನಾಗರಾಜ ಎನ್ನುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕಾನೂನಿನ ಅನ್ವಯ ಪ್ರತಿಯೊಬ್ಬ ಸರ್ಕಾರಿ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಕುರಿತು ಆದೇಶ ನೀಡಬೇಕು ಹಾಗೂ ಖಾಲಿ ಇರುವ ವೈದ್ಯರ ಹುದ್ದೆಯನ್ನು ಶೀಘ್ರ ಭರ್ತಿ ಮಾಡಲು ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

`ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಾಗಿ ನೇಮಕಗೊಂಡ ನಂತರ, ಕನಿಷ್ಠ ಆರು ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು. ಆದರೆ ಸರ್ಕಾರವು ಈ ನಿಯಮಕ್ಕೆ ವಿರುದ್ಧವಾಗಿ ವೈದ್ಯರನ್ನು ಜಿಲ್ಲಾ ಯೋಜನಾಧಿಕಾರಿಯಾಗಿ ನಿಯುಕ್ತಿಗೊಳಿಸುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಗ್ರಾಮೀಣ ಭತ್ಯೆ, ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಯೂ ದುಡಿದರೆ ಮೂರು ಸಾವಿರ ರೂಪಾಯಿ ಹೆಚ್ಚುವರಿ ಭತ್ಯೆ ನೀಡಲಾಗುತ್ತಿದೆ. ಇದರ ಹೊರತಾಗಿಯೂ ಅಲ್ಲಿಗೆ ಹೋಗಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ಹೋಗದಿದ್ದರೂ, ಈ ಎಲ್ಲ ವಿಶೇಷ ಭತ್ಯೆಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ~ ಎನ್ನುವುದು ಅರ್ಜಿದಾರರ ದೂರು.

ಬಡಾವಣೆ ನಿರ್ಮಾಣ; ಅಧಿಸೂಚನೆ ರದ್ದು: ಜೆ.ಪಿ.ನಗರ 9ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಉತ್ತರಹಳ್ಳಿ ಹೋಬಳಿಯ ದೊಡ್ಡಕಲ್ಲಸಂದ್ರ ಗ್ರಾಮದಲ್ಲಿ `ಗೌತಮ್ ಕಾಮತ್ ಹೋಟೆಲ್~ಗೆ ಸೇರಿರುವ ಸುಮಾರು 2 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದು ಮಾಡಿದೆ.

1988ರ ಪ್ರಾಥಮಿಕ ಹಾಗೂ 1991ರ ಅಂತಿಮ ಅಧಿಸೂಚನೆಯನ್ನು ಹೋಟೆಲ್ ಮಾಲೀಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ದಶಕ ಕಳೆದರೂ ಇದುವರೆಗೆ ಬಡಾವಣೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ. ಆದುದರಿಂದ ಅಧಿಸೂಚನೆ ರದ್ದು ಮಾಡಿ, ತಮ್ಮ ಜಮೀನು ತಮಗೆ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅವರು ಕೋರಿದ್ದರು. ಇದನ್ನು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಮಾನ್ಯ ಮಾಡಿದರು.

ಹಾವು: ತನಿಖೆ ರದ್ದು; ಗ್ರಾಹಕರಿಗೆ ಸರಬರಾಜು ಮಾಡಲು ಇಟ್ಟಿದ್ದ ಮದ್ಯದ ಬಾಟಲುಗಳಲ್ಲಿ ಸತ್ತ ಹಾವು ಇಟ್ಟ ಆರೋಪ ಹೊತ್ತಿದ್ದ ರೆಸಿಡೆನ್ಸಿ ರಸ್ತೆಯಲ್ಲಿನ `ನಿಕ್ಸ್ ಎಲೈಟ್ ಬಾರ್ ಅಂಡ್ ರೆಸ್ಟೋರೆಂಟ್~ ಮಾಲೀಕರ ವಿರುದ್ಧದ ತನಿಖೆಯನ್ನು ಹೈಕೋರ್ಟ್ ಬುಧವಾರ ರದ್ದು ಮಾಡಿದೆ.

ತನಿಖೆ ನಡೆಸುವಂತೆ ಸೆಷನ್ಸ್ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅನಂತನಾರಾಯಣ ಮತ್ತು ಕಾರ್ಟಲ್ ರಾಯ್ಲೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ಮಾನ್ಯ ಮಾಡಿದರು. 2007ರಲ್ಲಿ ಈ ಘಟನೆ ನಡೆದಿತ್ತು. 2009ರಲ್ಲಿ ಸೆಷನ್ಸ್ ಕೋರ್ಟ್ ತನಿಖೆಗೆ ಆದೇಶಿಸಿತ್ತು. ತಮ್ಮ ವಿರುದ್ಧ ವೃಥಾ ಆರೋಪ ಮಾಡಲಾಗಿದೆ ಎಂದು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಆರ್‌ಎಸ್‌ಎಸ್ ಮುಖಂಡನ ವಿರುದ್ಧ ಪಿಐಎಲ್

ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಆರ್.ಎಸ್.ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಪುತ್ತೂರಿನ ಸುರೇಶ್ ಭಟ್ ಬಾಕ್ರಬೈಲ್ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದೆ.

`ಜನವರಿ 22ರಂದು ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿಗೆ ಭಂಗ ತರುವಂತಹ ಕೃತ್ಯ ನಡೆಸಿದ್ದಾರೆ. ಇಡೀ ರಾಜ್ಯವನ್ನೇ ಅಲ್ಲಾಡಿಸುವಂತಹ ಪ್ರಭಾವಿ ಇವರಾಗಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ವಾಧಿಕಾರಿಯಾಗಿ ಆಡಳಿತ ನಿಯಂತ್ರಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಪೊಲೀಸರು ಕೂಡ ಹಿಂದೇಟು ಹಾಕುತ್ತಿದ್ದಾರೆ~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

`ಪ್ರಚೋದನಕಾರಿ ಹೇಳಿಕೆ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜ.31ರಂದು ದೂರು ದಾಖಲು ಮಾಡಿದ್ದೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಕೂಡ ದಾಖಲಾಗಿದೆ. ಏಳು ತಿಂಗಳಾದರೂ ಇದುವರೆಗೆ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿಲ್ಲ~ ಎಂದಿರುವ ಅರ್ಜಿದಾರರು, ಪ್ರಭಾಕರ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.