ಬುಧವಾರ, ನವೆಂಬರ್ 20, 2019
21 °C

ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

Published:
Updated:

ಮುಜಾಫರ್‌ಪುರ/ನವದೆಹಲಿ (ಪಿಟಿಐ): 5 ವರ್ಷದ ಬಾಲಕಿ ಮೇಲೆ ನಾಲ್ಕು ದಿನಗಳ ಕಾಲ ಅತ್ಯಾಚಾರ ಮಾಡಿದ ಆರೋಪಿಯನ್ನು ಬಿಹಾರದಲ್ಲಿ ಪೊಲೀಸರು ಶನಿವಾರ ನಸುಕಿನಲ್ಲಿ ಬಂಧಿಸಿದ್ದಾರೆ. ಅತ್ತ ಬಾಲಕಿ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಮನೋಜ್‌ಕುಮಾರ್ ಎಂಬಾತನನ್ನು ದೆಹಲಿ ಪೊಲೀಸರು ಸ್ಥಳಿಯ ಪೊಲೀಸರ ನೆರವಿನಿಂದ ಬಂಧಿಸಿ ಮುಜಾಫರ್‌ಪುರದ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು 3 ದಿನಗಳ ಕಾಲ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದರು.ದೆಹಲಿಯಲ್ಲಿ ಕಾರ್ಮಿಕನಾಗಿದ್ದ ಆರೋಪಿ ಮನೋಜ್‌ಕುಮಾರ್ ಅತ್ಯಾಚಾರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರೈಲಿನ ಮೂಲಕ ಬಿಹಾರಕ್ಕೆ ಓಡಿ ಬಂದಿದ್ದ. ಆತನ ಮೊಬೈಲ್ ಕರೆಗಳ ಜಾಡು ಹಿಡಿದ ದೆಹಲಿ ಪೊಲೀಸರು ಆತನನ್ನು ಇಲ್ಲಿ ಬಂಧಿಸಿದರು. ಈತನಿಗೆ ಇತ್ತಿಚೆಗಷ್ಟೆ ವಿವಾಹವಾಗಿತ್ತು ಎಂದು ಹೇಳಲಾಗಿದೆ.ಈ ಮಧ್ಯೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶನಿವಾರವೂ ಅತ್ಯಾಚಾರದ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ಎಐಐಎಂಎಸ್ ಆಸ್ಪತ್ರೆಯ ಬಳಿ ಹಾಗೂ ಪೊಲೀಸ್ ಪ್ರಧಾನ ಕಚೇರಿ ಬಳಿ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸ್ ಕಮೀಷನರ್ ಅವರು ರಾಜೀನಾಮೆ ನೀಡಬೇಕೆಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಅತ್ಯಾಚಾರಿಗಳನ್ನು ನೇಣಿಗೆ ಹಾಕಬೇಕೆಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಪ್ರತಿಕ್ರಿಯಿಸಿ (+)