ಬಾಲಕಿ ಸಮಯಪ್ರಜ್ಞೆ; ಅಪಹರಣದಿಂದ ಪಾರು

ಮಂಗಳವಾರ, ಜೂಲೈ 23, 2019
20 °C

ಬಾಲಕಿ ಸಮಯಪ್ರಜ್ಞೆ; ಅಪಹರಣದಿಂದ ಪಾರು

Published:
Updated:

ಬೆಂಗಳೂರು: ಮಹದೇವಪುರ ಸಮೀಪದ ಉದಯನಗರದಿಂದ ಅಪಹರಣಗೊಂಡಿದ್ದ ನಿಶ್ಚಿತಾ (15), ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದ್ದಾಳೆ. ಜುಲೈ 6ರಂದು ಬಾಣಸವಾಡಿಯಿಂದ ನಿಖಿತಾ ಎಂಬ ಬಾಲಕಿಯನ್ನು ಅಪಹರಿಸಿದ್ದಾತನೇ ಈಕೆಯನ್ನು ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ನಿಶ್ಚಿತಾ, ಜುಲೈ 15ರಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಮಗಳು ಕಾಣೆಯಾಗಿರುವ ಬಗ್ಗೆ ಆಕೆಯ ತಂದೆ ಮಹದೇವಪುರ ಠಾಣೆಗೆ ದೂರು ಕೊಟ್ಟಿದ್ದರು. ಒಂದು ವಾರ ನಿಶ್ಚಿತಾಳನ್ನು ಅಕ್ರಮ ಬಂಧನದಲ್ಲಿರಿಸಿದ್ದ ಆರೋಪಿ, ಭಾನುವಾರ ಬೆಳಿಗ್ಗೆ (ಜು.21) ಆಕೆಯನ್ನು ಬೈಕ್‌ನಲ್ಲಿ ಚಿಕ್ಕಬಳ್ಳಾಪುರ ಕಡೆಗೆ ಕರೆದೊಯ್ಯುವಾಗ ಬಾಗೇಪಲ್ಲಿಯಲ್ಲಿ ಬೈಕ್ ಕೆಟ್ಟು ನಿಂತಿದೆ. ಆಗ ಬೈಕ್ ರಿಪೇರಿ ಮಾಡಿಸಲು ಗ್ಯಾರೆಜ್ ಬಳಿ ಹೋದಾಗ ನಿಶ್ಚಿತಾ ಸ್ಥಳೀಯರ ನೆರವು ಪಡೆದಿದ್ದಾಳೆ. ಆಗ ಆರೋಪಿ ಬೈಕ್ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.ಕೂಡಲೇ ಸ್ಥಳಕ್ಕೆ ತೆರಳಿ ನಿಶ್ಚಿತಾಳನ್ನು ರಕ್ಷಿಸಿದ ಬಾಗೇಪಲ್ಲಿ ಪೊಲೀಸರು, ಆಕೆಯನ್ನು ಮಹದೇವಪುರ ಪೊಲೀಸರಿಗೆ ಒಪ್ಪಿಸಿದರು. ಕುಖ್ಯಾತ ಅಪಹರಣಕಾರರ ಛಾಯಾಚಿತ್ರವನ್ನು ಆಕೆಗೆ ತೋರಿಸಿದಾಗ ಆರೋಪಿ ಆಂಧ್ರಪ್ರದೇಶದ ಮೂಲದ ರವಿಕುಮಾರ್ ಅಲಿಯಾಸ್ ಬಾಬು (35) ಎಂಬುದು ಗೊತ್ತಾಯಿತು. ಅಲ್ಲದೇ, ಜು.6ರಂದು ಬಾಣಸವಾಡಿಯಿಂದ ನಾಪತ್ತೆಯಾಗಿದ್ದ ನಿಖಿತಾ (9) ಹಾಗೂ ಜು.9 ರಂದು ವೈಟ್‌ಫೀಲ್ಡ್‌ನಿಂದ ನಾಪತ್ತೆಯಾಗಿದ್ದ ಅಂಜಿತಾ (7) ಎಂಬ ಬಾಲಕಿಯರೂ ಸಹ ತಮ್ಮನ್ನು ಅಪಹರಿಸಿದ್ದು ಈತನೇ ಎಂದು ಹೇಳಿದ್ದರು. ಈ ಇಬ್ಬರು ಬಾಲಕಿಯರನ್ನು ಕಳೆದ ವಾರ ಆಂಧ್ರಪ್ರದೇಶದಲ್ಲಿ ರಕ್ಷಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.ನೋರೋಗಿ: `ಅಪಹರಣ ಹಾಗೂ ಅಕ್ರಮ ಬಂಧನದಲ್ಲಿರಿಸಿದ ಆರೋಪದಡಿ ರವಿ ವಿರುದ್ಧ ಕಾಮಾಕ್ಷಿಪಾಳ್ಯ, ಕೆ.ಆರ್.ಪುರ, ಕಲಾಸಿಪಾಳ್ಯ, ವೈಟ್‌ಫೀಲ್ಡ್, ಪರಪ್ಪನ ಅಗ್ರಹಾರ, ಸಿಟಿ ಮಾರುಕಟ್ಟೆ, ಕಾಡುಗೋಡಿ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈತ ಮನೋರೋಗಿಯಾಗಿದ್ದು, ಅಪಹರಿಸಿದ ಮಕ್ಕಳನ್ನು ಅಕ್ರಮ ಬಂಧನದಲ್ಲಿರಿಸುತ್ತಾನೆ.ಬಳಿಕ ಅವರ ಬಳಿ ಬೆಲೆ ಬಾಳುವ ವಸ್ತುಗಳಿದ್ದರೆ ಕಸಿದುಕೊಂಡು ಕೆಲ ದಿನಗಳ ನಂತರ ಅಪಹರಿಸಿದ ಜಾಗದಲ್ಲೇ ಬಿಟ್ಟು ಹೋಗುತ್ತಾನೆ. ಈತನ ಸುಳಿವು ಸಿಕ್ಕಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಬೇಕು' ಎಂದು ಹಿರಿಯ ಅಧಿಕಾರಿಗಳು ವಿನಂತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry