ಬಾಲಗ್ರಹ ಪೀಡಿತ ಬಾಲಭವನ

7
ಪ್ರಜಾವಾಣಿ ವಿಶೇಷ: ರಂಗ ಮಂದಿರ ರಾಮಾಯಣ

ಬಾಲಗ್ರಹ ಪೀಡಿತ ಬಾಲಭವನ

Published:
Updated:

ಗುಲ್ಬರ್ಗ: ನಗರದ ಎಸ್‌.ಎಂ.ಪಂಡಿತ ರಂಗ­ಮಂದಿರದ ಅಲ್ಪ ದೂರದಲ್ಲೇ ಜಿಲ್ಲಾ ಬಾಲಭವನ ಇದೆ. ಇಲ್ಲಿಯೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯು­ತ್ತಿರುತ್ತವೆ. ಮುಖ್ಯವಾಗಿ ಮಕ್ಕಳ ಚಟು­ವಟಿಕೆ­ಗಳಿಗಾಗಿ ಇದರ ನಿರ್ಮಾಣ­ವಾ­ಗಿದೆ. ಆದರೆ ಮೂಲ ಸೌಲಭ್ಯ ಕೊರತೆ ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಈ ಸಭಾಂಗಣದಲ್ಲಿ ಮಕ್ಕಳ ಕಾರ್ಯಕ್ರಮ­ಗಳಷ್ಟೇ ಅಲ್ಲದೆ ಸರ್ಕಾರಿ ಇಲಾಖೆಗಳ ಕಾರ್ಯಕ್ರಮ ಹಾಗೂ ಇತರ ಖಾಸಗಿ ಕಾರ್ಯಕ್ರಮಗಳೂ ಜರುಗುತ್ತಿರುತ್ತವೆ.ಇಲ್ಲಿ ನಿರಂತರ ಕಾರ್ಯಕ್ರಮಗಳು ನಡೆ­ಯು­ತ್ತಿದ್ದರೂ ಮೂಲಸೌಲಭ್ಯ ಒದ­ಗಿಸಲು ಸಂಬಂಧಪಟ್ಟವರು ಮುಂದಾ­­ಗುತ್ತಿಲ್ಲ ಎನ್ನುವುದು ಕಾರ್ಯಕ್ರಮ ಆಯೋಜಕರ ದೂರು. ದಿನವೊಂದಕ್ಕೆ 500 ರೂಪಾಯಿ ಬಾಡಿಗೆ ಪಡೆಯ­ಲಾಗುತ್ತಿದೆ. ಉಳಿದ ಸಭಾಂಗಣಗಳಿಗೆ ಹೋಲಿಸಿದರೆ ಇದರ ಬಾಡಿಗೆ ಅತೀ ಕಡಿಮೆ. ಭವನದ ಹಿಂಭಾಗದಲ್ಲಿ ವೇದಿಕೆ­ಯೊಂದಿದ್ದು ಬಯಲು ರಂಗ­ಮಂದಿರ­ವಾಗಿಯೂ ಇದನ್ನು ಬಳಸಿ­ಕೊಳ್ಳಬಹುದು.  ಭವನದ ಪಕ್ಕ ವಾಹನ ನಿಲುಗಡೆ ವ್ಯವಸ್ಥೆಯಿಲ್ಲ. ವೇದಿಕೆ ಇದ್ದರೂ ಧ್ವನಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರೀನ್‌ ರೂಂ, ಶೌಚಾಲಯ ವ್ಯವಸ್ಥೆ ಇದೆ. ಮಳೆ ಬಂದರೆ ಕಟ್ಟಡ ಸೋರುತ್ತಿರುತ್ತದೆ. ಇಲ್ಲಿ ಕಾರ್ಯಕ್ರಮ ನಡೆಸಬೇಕಿದ್ದರೆ ಸಂಘಟಕರೆ ಆಸನಗಳ, ಧ್ವನಿ, ಬೆಳಕುಗಳ ವ್ಯವಸ್ಥೆ ಮಾಡಬೇಕಾಗಿದೆ.ಜವಾಹರ್‌ ಬಾಲಭವನ ಸಮಿತಿ ಬೆಂಗ­ಳೂರು ಇದರ ಅಡಿಯಲ್ಲಿ ಕಾರ್ಯ ನಿವರ್ಹಿಸುವ ಈ ಭವನದ ಸಮಿತಿ­ಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇದರ ಅಧ್ಯಕ್ಷರು ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕಾರ್ಯದರ್ಶಿಯಾಗಿದ್ದಾರೆ.‘ಮಕ್ಕಳ ಚಟುವಟಿಕೆಗಳಿಗಾಗಿ ನಿಮಿರ್ಸಿ­ರುವ ಬಾಲಭವನ ಅದಕ್ಕಾ­ಗಿಯೇ ಬಳಕೆಯಾಗಬೇಕು. ಆದರೆ ಇಲ್ಲಿ ಮಕ್ಕಳ ಕಾರ್ಯಕ್ರಮಗಳಿಗಿಂತ ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳೇ ಹೆಚ್ಚಾಗಿ ನಡೆಯುತ್ತಿರುತ್ತದೆ. ಈ ಭವನ­ವನವನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಮಾಡಿ, ಶುಚಿತ್ಚ ಕಾಪಾಡಿ­ಕೊಂಡರೆ ಸಾಂಸ್ಕೃತಿಕ ಕಾರ್ಯಕ್ರಮ­ಗಳನ್ನು ನಡೆಸಬಹುದು. ಬಾಲಭವನ ಸಮಿತಿಯಲ್ಲೂ ಅಧಿಕಾರಿಗಳಲ್ಲದೆ ಇತರರು ಯಾರೂ ಸದಸ್ಯರಾಗಿಲ್ಲ. ಸಮಿತಿಯಲ್ಲಿರುವವರಿಗೆ ಈ ಕುರಿತು ಕಾಳಜಿ ಇಲ್ಲ. ಮಕ್ಕಳ ಸದಸ್ಯತ್ವನ್ನೂ ಆರಂಭಿಸಿ ಭವನದ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಬೇಕು’ ಎಂದು ಚಿತ್ತಾರಿ ಫೌಂಡೇಷನ್‌ ನಿದೇರ್ಶಕ ಚಿತ್ತಾರಿ ವಿ.ಎನ್‌. ಅಭಿಪ್ರಾಯಪ­ಡುತ್ತಾರೆ.‘ಬಾಲಭವನ­ದಲ್ಲಿ ಸೌಲಭ್ಯ ಕೊರತೆ­ಯಿಂದಾಗಿ ಕಾರ್ಯಕ್ರಮಗಳು ನಡೆ­ಯದೆ ಆದಾಯ ಬರುತ್ತಿಲ್ಲ. ಇಲ್ಲಿ ವಾರಕ್ಕೊಮ್ಮೆಯಾದರೂ ಮಕ್ಕಳ ಕಾರ್ಯಕ್ರಮಗಳು ನಡೆಯು­ವಂತಾಗಬೇಕು.ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲೂ ಸಂಬಂಧ ಪಟ್ಟವರು ಗಮನಹರಿಸಬೇಕು’ ಎಂದು ಅವರು ಹೇಳುತ್ತಾರೆ.‘ಅಭಿವೃದ್ಧಿಗೆ ಪ್ರಯತ್ನ’

ಬಾಲಭವನ ಸಮಿತಿ ಕೇವಲ ಆಡಳಿತಕ್ಕೆ ಮಾತ್ರ ಸೀಮಿತ. ಯಾವುದೇ ಅನುದಾನ ನೀಡುವಂತಿಲ್ಲ. ಈ ಹಿಂದೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌.ಕೆ.ಡಿ.ಬಿ.) ಯಿಂದ 5 ಲಕ್ಷ ಅನುದಾನ ಬಿಡುಗಡೆಯಾಗಿದೆ.ಕಾಮಗಾರಿಯೂ ನಡೆದಿದೆ. ಎಂಜಿನಿಯರ್‌ಗಳ ಪ್ರಕಾರ ಬಾಲಭವನ ಕಟ್ಟಡ ರಸ್ತೆಗಿಂತ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿದೆ. ಜಿಲ್ಲಾ ಪಂಚಾಯಿತಿ ಸಾಂಘಿಕ ಸ್ಥಾಯಿ ಸಮಿತಿ ಒಪ್ಪಿದರೆ ಕಟ್ಟಡವನ್ನು ಸ್ಥಳಾಂತರಿಸಬಹುದು. ಅಲ್ಲದೆ ಸಮಿತಿ ಅನುದಾನ ನೀಡಿದರೆ ಕಟ್ಟಡ ದುರಸ್ತಿ ನಡೆಸಬಹುದು. ಸದ್ಯ ಬಾಲಭವನದ ವಾರ್ಷಿಕ ಆದಾಯ 50 ಸಾವಿರ ರೂಪಾಯಿ ಅಷ್ಟೆ. ಇನ್ನು ಶಾಲೆಗಳಿಗೆ ಮಕ್ಕಳ ಕಾರ್ಯಕ್ರಮ ನಡೆಸಲು ಬಾಡಿಗೆಗೆ ನೀಡಿದರೆ ಹೆಚ್ಚು ಆದಾಯ ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.-

–ಪಲ್ಲವಿ ಆಕುರಾತಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ---

‘ಮೂಲ ಸೌಲಭ್ಯ ಅಗತ್ಯ’

ಗುಲ್ಬರ್ಗದ ರಂಗಮಂದಿರಗಳಲ್ಲಿ ದುಬಾರಿ ಬಾಡಿಗೆ ಇರುವುದರಿಂದ ನಾವು ಹೆಚ್ಚಾಗಿ ಬಾಲಭವನದಲ್ಲೇ ಮಕ್ಕಳ ಕಾರ್ಯ­ಕ್ರಮಗಳನ್ನು ನಡೆಸುತ್ತೇವೆ. ಆದರೆ ಇಲ್ಲಿ ಮೂಲಸೌಲಭ್ಯಗಳೇ ಇಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾಲಭವನಕ್ಕೆ ಅಗತ್ಯ ಸೌಲಭ್ಯ ಒದಗಿಸಿ  ಮಕ್ಕಳ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಸದ್ವಿನಿಯೋಗವಾಗಬೇಕು. ಜೊತೆಗೆ ಮಕ್ಕಳ ಚಟುವಟಿಕೆಗೆ ಪೂರಕವಾದ ತೆರೆದ ರಂಗಮಂದಿರದ ಅಗತ್ಯವು ಇದೆ. ಇಲ್ಲಿರುವ ತೆರೆದ ವೇದಿಕೆಯಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳು ನಡೆಸುವಂತಹ ಪೂರಕ ವಾತಾವರಣ ಸೃಷ್ಟಿಯಾಗಬೇಕು.

–ಚಿತ್ತಾರಿ ವಿ.ಎನ್‌., ನಿರ್ದೇಶಕರು ಚಿತ್ತಾರಿ ಫೌಂಡೇಶನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry