ಬಾಲಮಂದಿರಗಳಿಂದ 700ಕ್ಕೂ ಹೆಚ್ಚು ಮಕ್ಕಳು ನಾಪತ್ತೆ!

7

ಬಾಲಮಂದಿರಗಳಿಂದ 700ಕ್ಕೂ ಹೆಚ್ಚು ಮಕ್ಕಳು ನಾಪತ್ತೆ!

Published:
Updated:
ಬಾಲಮಂದಿರಗಳಿಂದ 700ಕ್ಕೂ ಹೆಚ್ಚು ಮಕ್ಕಳು ನಾಪತ್ತೆ!

ಮೈಸೂರು: ಜಿಲ್ಲೆಯಲ್ಲಿ ಕಳೆದ ವರ್ಷ 550ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂಬ ಅಂಶವನ್ನು ರಾಜ್ಯ ಮಹಿಳಾ ಆಯೋಗ ಬಹಿರಂಗಪಡಿಸಿರುವ ಕೆಲ ದಿನದಲ್ಲಿಯೇ ಒಡನಾಡಿ ಸೇವಾ ಸಂಸ್ಥೆ ಮತ್ತೊಂದು ಆಘಾತಕಾರಿ ಅಂಶವನ್ನು ಬಹಿರಂಗ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಬಾಲ ಮಂದಿರಗಳಿಂದ ಕಳೆದ 10 ವರ್ಷದ ಅವಧಿಯಲ್ಲಿ 700ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ.ಒಡನಾಡಿಯ ಪರಶು ಮತ್ತು ಸ್ಟ್ಯಾನ್ಲಿ ಅವರು ಮಾಹಿತಿ ಹಕ್ಕಿನ ಆಧಾರದಲ್ಲಿ ಪಡೆದುಕೊಂಡ ಅಂಕಿ-ಸಂಖ್ಯೆಗಳ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ಸರ್ಕಾರವೇ ನಡೆಸುವ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರದಿಂದ ಇಷ್ಟೊಂದು ಭಾರೀ ಸಂಖ್ಯೆ ಮಕ್ಕಳು ಕಾಣೆಯಾಗಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಹೀಗೆ ಕಾಣೆಯಾದ ಮಕ್ಕಳಲ್ಲಿ ನೂರಕ್ಕೂ ಹೆಚ್ಚು ಬಾಲಕಿಯರೂ ಇರುವುದು ಗಂಭೀರ ವಿಷಯವಾಗಿದೆ. ಅಲ್ಲದೆ ಇಂತಹ ಬಾಲ ಮಂದಿರಗಳಲ್ಲಿ ಇರುವ ಮಕ್ಕಳೆಲ್ಲರೂ 16 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು. ಈ ಮಕ್ಕಳು ಎಲ್ಲಿಗೆ ಹೋದರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ.ಸರ್ಕಾರ ನಡೆಸುವ ಬಾಲ ಮಂದಿರಗಳಿಂದಲೇ ಮಕ್ಕಳು ಕಾಣೆಯಾಗಿದ್ದರೂ ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿರುವುದು ಬಿಟ್ಟರೆ ಇತರೆ ಯಾವುದೇ ತನಿಖೆಯನ್ನೂ ಕೈಗೊಳ್ಳಲಾಗಿಲ್ಲ. ಮಕ್ಕಳನ್ನು ನೋಡಿಕೊಳ್ಳಬೇಕಾದ ಬಾಲ ಮಂದಿರದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕೂಡ ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾರ್ವಜನಿಕ ಕುಂದುಕೊರತೆಯ ರಾಷ್ಟ್ರೀಯ ಕಾರ್ಯಪಡೆ ಸದಸ್ಯರೂ ಆಗಿರುವ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಎಂ.ಎಲ್.ಪರಶುರಾಮ್ ಮತ್ತು ಸ್ಟ್ಯಾನ್ಲಿ ಕೆ.ವಿ. ಅವರು ಈ ಕುರಿತಂತೆ ತನಿಖೆ ನಡೆಸಲು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಸರ್ಕಾರ ನಡೆಸುವ ಬಾಲಮಂದಿರಗಳಿಂದ ಮಕ್ಕಳು ಕಾಣೆಯಾಗಿರುವುದಲ್ಲದೆ, ಕೆಲವು ಮಕ್ಕಳು ಅಸಹಜ ಸಾವಿಗೂ ಈಡಾಗಿದ್ದಾರೆ. ಸರ್ಕಾರದ ಭದ್ರತೆಯಿಂದ ಸಂವಿಧಾನದ ಹಕ್ಕುಬಾಧ್ಯತೆಗಳನ್ನು ಅನುಭವಿಸಬೇಕಾದ ಮಕ್ಕಳು ಕಾಣೆಯಾಗುತ್ತಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಮಕ್ಕಳು ಕಾಣೆಯಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಹುತೇಕ ಬಾಲ ಮಂದಿರಗಳಲ್ಲಿ ಮುಕ್ತ ಹಾಗೂ ವ್ಯವಸ್ಥಿತವಾದ ಆಶ್ರಯವಿಲ್ಲ. ವಿಶೇಷ ತರಬೇತಿ ಇಲ್ಲ. ಆಪ್ತ ಸಮಾಲೋಚಕರು ಇಲ್ಲ. ಸ್ನಾನದ ಕೊಠಡಿ, ಶೌಚಾಲಯಗಳ ಕೊರತೆ ಇದೆ. ಮಕ್ಕಳನ್ನು ನಿಲಯದ ಮೇಲ್ವಿಚಾರಕರು ಮನೆಕೆಲಸಕ್ಕೆ ಬಳಸಿಕೊಳ್ಳುವುದು ಕಂಡುಬಂದಿದೆ.ಬಾಲ ಮಂದಿರಗಳಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳು ಇಲ್ಲ. ವ್ಯಾಪಕ ಭ್ರಷ್ಟಾಚಾರ ಇರುವುದರಿಂದ ಪೌಷ್ಟಿಕ ಆಹಾರ ಕೂಡ ದೊರಕುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.ಈ ಕುರಿತಂತೆ ಅವರು ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಲೋಕಾಯುಕ್ತರಿಗೆ ಪತ್ರ ಬರೆದು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry