ಬಾಲವಿಕಾಸದಲ್ಲಿ ಚಿಣ್ಣರ ಮನಗೆದ್ದ ಗ್ರಾಮೀಣ ಕ್ರೀಡೆಗಳು

7

ಬಾಲವಿಕಾಸದಲ್ಲಿ ಚಿಣ್ಣರ ಮನಗೆದ್ದ ಗ್ರಾಮೀಣ ಕ್ರೀಡೆಗಳು

Published:
Updated:

ಧಾರವಾಡ:  ಲಗೋರಿ, ಚಿಣ್ಣಿ–ದಾಂಡು, ಕುಂಟೆ ಬಿಲ್ಲೆ, ಕಿರ್ ಕಿರ್‌ ಆಟ, ಉಪ್ಪು ಉಪ್ಪು ಕಡ್ಡಿ, ಕುಂಬಳಕಾಯಿ ಆಟ, ಒಂಟಿ ಕಾಲಿನ ಓಟ, ಕಣ್ಣು ಕಟ್ಟಿ ಗಡಿಗೆ ಒಡೆಯು­ವುದು, ಮರಕೋತಿಯಾಟ, ಚೌಕಾ­ಬಾರಾ ಸೇರಿದಂತೆ ಹತ್ತಾರು ಬಗೆಯ ಆಟಗಳನ್ನು ಮಕ್ಕಳು ಶುಕ್ರವಾರ ಇಲ್ಲಿಯ ಶಿಕ್ಷಕಿಯರ ತರಬೇತಿ ಸಂಸ್ಥೆಯ ಆವರಣದಲ್ಲಿ ಆಡಿದರು.ಕರ್ನಾಟಕ ಬಾಲವಿಕಾಸ ಅಕಾ­ಡೆಮಿ ಆರಂಭವಾಗಿ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿ­ಕೊಂಡಿದ್ದ ಕ್ರೀಡೋತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಹಲವು ಬಗೆಯ ಜನಪದ ಕ್ರೀಡೆ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು.‘ಜನಪದ ಹಾಗೂ ಗ್ರಾಮೀಣ ಕ್ರೀಡೆಗಳು ಮಕ್ಕಳ ದೈಹಿಕ ಸದೃಢತೆ ಹೆಚ್ಚಿಸುವ ಜೊತೆಗೆ ಮಾನಸಿಕ ವಿಕಸನದ ಕೌಶಲಗಳನ್ನು ಹೊಂದಿವೆ. ಬಾಲ್ಯಜೀವನ ಮರಳಿ ಬಾರದು. ಹೀಗಾಗಿ ಈ ಅವಧಿಯನ್ನು ಸಂಪೂರ್ಣ­ವಾಗಿ ಸದುಪಯೋಗ ಮಾಡಿಕೊಳ್ಳಿ’ ಎಂದು ಅಕಾಡೆಮಿ ಹೊರತಂದ ‘ಮಕ್ಕಳ ಜನಪದ ಆಟಗಳು’ ಕೃತಿ ಬಿಡುಗಡೆ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕೆ.ಆರ್.ಸುಂದರ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.‘ಜಾಗತೀಕರಣದಿಂದಾಗಿ ಜನಪದ ಮತ್ತು ದೇಸಿ ಸಂಸ್ಕೃತಿ ಕಣ್ಮರೆ­ಯಾಗುತ್ತಿವೆ. ಇಂಥ ಸಂಕ್ರಮಣ ಕಾಲದಲ್ಲಿ ಮಕ್ಕಳಿಗೆ ದೇಸಿ ಸಂಸ್ಕೃತಿಯ ಅರಿವು ಮೂಡಿಸಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ’ ಎಂದು ಅಕಾಡೆಮಿಯ ದಿನದರ್ಶಿಕೆ ಬಿಡು­ಗಡೆಗೊಳಿಸಿದ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.‘ಜನಮಾನಸದಿಂದ ದೂರ­ವಾಗುತ್ತಿದ್ದ ಜನಪದ ಆಟಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಅಕಾಡೆಮಿಯು ಯೋಗ್ಯ ಕೆಲಸ ಮಾಡಿದೆ’ ಎಂದು ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ್ ಹೇಳಿದರು.ಅಕಾಡೆಮಿಯ ಯೋಜನಾಧಿಕಾರಿ ಮಾಲತಿ ಪೋಳ ಮತ್ತು ಜಗದೀಶ ಮಳಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry