ಭಾನುವಾರ, ಮೇ 9, 2021
25 °C

ಬಾಲಸುಬ್ರಹ್ಮಣ್ಯಂ ವರದಿ ಪರಿಶೀಲನೆಗೆ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಸರ್ಕಾರಿ ಭೂಮಿ ಒತ್ತುವರಿ ಸಂಬಂಧ ಬಾಲಸುಬ್ರಹ್ಮಣ್ಯಂ ನೇತೃತ್ವದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಸಲ್ಲಿಸಿರುವ ವರದಿ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ಭದ್ರಾ ನದಿಗೆ ಮಂಗಳವಾರ ಮುಂಜಾನೆ ಬಾಗಿನ ಅರ್ಪಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವರದಿಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಲಿದೆ ಎಂದ ಅವರು, ಈಗಾಗಲೇ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯ ಅಧ್ಯಯನ ಕಾರ್ಯ ನಡೆಯುತ್ತಿದ್ದು, ಇದು ಮುಗಿಯುತ್ತಿದ್ದಂತೆ ಬಾಲಸುಬ್ರಹ್ಮಣ್ಯಂ ಕಾರ್ಯಪಡೆ ವರದಿಯ ಅಧ್ಯಯನ ನಡೆಸಲಾಗುವುದು ಎಂದರು.ಬಾಲಸುಬ್ರಹ್ಮಣ್ಯಂ ನೇತೃತ್ವದ ಕಾರ್ಯಪಡೆಯನ್ನು ಸರ್ಕಾರವೇ ರಚಿಸಿದ್ದು, ಅದನ್ನು ತಿರಸ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಿಹಾರ, ಗುಜರಾತ್‌ನಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ನಾಗರಿಕ ಸನ್ನದು ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆ ಕೈಗೊಂಡಿದೆ ಎಂದರು. ಸಚಿವರಾದ ಡಾ.ವಿ.ಎಸ್.ಆಚಾರ್ಯ, ಸುರೇಶ್‌ಕುಮಾರ್ ನೇತೃತ್ವದಲ್ಲಿ ಈ ಕುರಿತ ರೂಪು-ರೇಷೆಗಳ ಚರ್ಚೆ ನಡೆದಿದೆ ಎಂದರು.ಮಳೆ ನಿಂತ ಮೇಲೆ ಇಡೀ ರಾಜ್ಯದಲ್ಲಿ ಹೊಂಡಗಳಿಲ್ಲದ ರಸ್ತೆ ನಿರ್ಮಾಣ ಮಾಡುವುದು ತಮ್ಮ ಮೊದಲ ಆದ್ಯತೆ ಎಂದ ಅವರು, ಹಾಗೆಯೇ ಶಿಕ್ಷಣ, ಆರೋಗ್ಯ, ವಸತಿ, ನೀರು ಹಾಗೂ ಸಂಪರ್ಕ ವ್ಯವಸ್ಥೆ ಕಲ್ಪಿಸುವುದನ್ನು ಆದ್ಯತಾ ವಲಯಗಳನ್ನಾಗಿ ಸರ್ಕಾರ ಗುರುತಿಸಿದೆ ಎಂದರು.ಸರ್ಕಾರ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ಭಾಗ್ಯಲಕ್ಷ್ಮೀ, ಸಂಧ್ಯಾಸುರಕ್ಷಾ ಯೋಜನೆಗಳಿಗೆ ತಕ್ಷಣವೇ ಹಣ ಬಿಡುಗಡೆ ಮಾಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ಶೇ.35ರಷ್ಟು ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದ್ದು, ಮುಂದಿನ ಒಂದೂವರೆ ತಿಂಗಳಿನಲ್ಲಿ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದರು.ನಕ್ಸಲ್ ಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ರಾಷ್ಟ್ರೀಯ ಸಮನ್ವಯ ಸಮಿತಿ ಸಭೆಯಲ್ಲಿ ಆಗ್ರಹಿಸಲಾಗಿದೆ. ತಾವು ಸಂಸದರಾದಗಿನಿಂದಲೂ ಈ ಬಗ್ಗೆ ವಿಶೇಷ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.ಜನಾರ್ದನ ರೆಡ್ಡಿ ಬಂಧನದಿಂದ ಸರ್ಕಾರಕ್ಕೆ ಯಾವುದೇ ಮುಜುಗರ, ತೊಂದರೆ ಇಲ್ಲ. ಹಾಗೆಯೇ, ಕೊಪ್ಪಳ ಉಪ ಚುನಾವಣೆಯಲ್ಲಿ ಇದು ಪ್ರಭಾವ ಬೀರುವುದಿಲ್ಲ ಎಂದರು.ರಾಜ್ಯದಲ್ಲಿ ಎಲ್ಲಡೆ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ಕಡೂರು ಸೇರಿದಂತೆ ಚಿತ್ರದುರ್ಗ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅನಾವೃಷ್ಟಿ ಆಗಿದೆ. ಕೆಲವು ಕಡೆಗಳಲ್ಲಿ ಅತಿವೃಷ್ಟಿಯೂ ಆಗಿದೆ. ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದರು.

    

       

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.