ಬಾಲಾಜಿ, ಮುರುಗೇಶನ್ ಮುನ್ನಡೆ

7
ಐಟಿಎಫ್ ಟೆನಿಸ್: ಗಮನ ಸೆಳೆದ ಮೋಹಿತ್

ಬಾಲಾಜಿ, ಮುರುಗೇಶನ್ ಮುನ್ನಡೆ

Published:
Updated:

ದಾವಣಗೆರೆ: ಭಾರತದ ಶ್ರೇಯಾಂಕಿತ ಆಟಗಾರರಾದ ಎನ್. ಶ್ರೀರಾಮ್ ಬಾಲಾಜಿ, ಸನಮ್ ಸಿಂಗ್ ಹಾಗೂ ರಂಜಿತ್ ವಿರಾಲಿ ಮುರುಗೇಶನ್ ಇಲ್ಲಿ ನಡೆಯುತ್ತಿರುವ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ಪಂದ್ಯಗಳಲ್ಲಿ ಗೆದ್ದು ಸೋಮವಾರ ಎರಡನೇ ಸುತ್ತಿಗೆ ಪ್ರವೇಶ  ಪಡೆದಿದ್ದಾರೆ. ಮೋಹಿತ್ ಮಯೂರ ಜಯಪ್ರಕಾಶ್ ಗಮನಾರ್ಹ ಪ್ರದರ್ಶನ ನೀಡಿದರು.

ಅಗ್ರಶ್ರೇಯಾಂಕದ ಶ್ರೀರಾಮ್ ಬಾಲಾಜಿ ಅವರು ಲಕ್ಷಿತ್ ಸೂದ್ ಅವರನ್ನು 6-7(5), 6-2, 6-0ಯಲ್ಲಿ ಮಣಿಸಿದರು. ಅನುಭವಿ ಆಟಗಾರ ಬಾಲಾಜಿ ಅವರಿಗೆ ಮೊದಲ ಸೆಟ್‌ನಲ್ಲಿ ಲಕ್ಷಿತ್ ತೀವ್ರ ಪೈಪೋಟಿ ನೀಡದರಾದರೂ, ನಂತರ ಅಷ್ಟೇನೂ ಅನುಭವ ಇಲ್ಲದ ಲಕ್ಷಿತ್ ಅದೇ ಸಾಮರ್ಥ್ಯವನ್ನು ಮುಂದುವರಿಸಲಾಗಲಿಲ್ಲ. ಇದೇ ರೀತಿ ನಡೆದ ಇನ್ನೊಂದು ಪಂದ್ಯದಲ್ಲಿ ಮೋಹಿತ್ ಮಯೂರ ಜಯಪ್ರಕಾಶ್ ಅವರು ವಿಜಯಂತ್ ಮಲಿಕ್ ಅವರನ್ನು 4-6, 7-6(5), 6-2ರಲ್ಲಿ ಸೋಲಿಸಿದರು.

ರಂಜಿತ್ ವಿರಾಲಿ ಮುರುಗೇಶನ್ ಅವರು 6-4, 6-0ಯಿಂದ ರಕ್ಷಯ್ ಥಕ್ಕರ್ ಅವರನ್ನು ಮಣಿಸಿದರು. ಸನಮ್ ಸಿಂಗ್ ಅವರು ಅರ್ಜುನ್ ಖಾಡೆ ಅವರನ್ನು 6-4, 6-0ಯಿಂದ ಸೋಲಿಸಿದರು. ವೈಲ್ಡ್ ಕಾರ್ಡ್ ಪಡೆದ ಸಾಗರ್ ಮಂಜಣ್ಣ ಅವರು ಅಮೆರಿಕದ ಮೈಕೆಲ್ ಶಾಬಾಸ್ ಎದುರು 6-4, 6-0ಯಿಂದ ಸೋಲಬೇಕಾಯಿತು.

ಎನ್. ವಿಜಯ ಸುಂದರ್ ಪ್ರಶಾಂತ್, ಅರುಣ್ ಪ್ರಕಾಶ್ ರಾಜಗೋಪಾಲನ್ ಜೋಡಿಯು ಫರೀಜ್ ಮಹಮದ್, ವಿಘ್ನೇಶ್ ಪೆರನಮಲ್ಲೂರ್ ಜೋಡಿಯನ್ನು 6-3, 1-6 (10-7)ರಿಂದ ಸೋಲಿಸಿತು. ಮೋಹಿತ್ ಮಯೂರ್ ಜಯಪ್ರಕಾಶ್, ರಾಮ್‌ಕುಮಾರ್ ರಾಮನಾಥನ್ ಅವರು ಜತಿನ್ ದಹಿಯಾ, ರಜತ್ ಮಹೇಶ್ವರಿ ಜೋಡಿಯನ್ನು 6-3, 6-1ರಿಂದ ಮಣಿಸಿದರು. ಸೂರಜ್ ಬೆನಿವಾಲ್ ಅಸ್ವಸ್ಥತೆಯಿಂದಾಗಿ ಪಂದ್ಯದಿಂದ ನಿವೃತ್ತಿ ಪಡೆದರು. ಇದರಿಂದಾಗಿ ಬೆನಿವಾಲ್, ಬ್ರಹ್ಮಜಿತ್‌ಸಿಂಗ್ ಹಾಗೂ ನೀರಜ್ ಇಳಂಗೋವನ್, ರಷ್ಯಾದ ಸೆರ್ಗೈ ಕ್ರತಿಯೋಕ್ ನಡುವಿನ ಪಂದ್ಯ ನಡೆಯಲಿಲ್ಲ.

ಹಾಲೆಂಡ್ ಆಟಗಾರರಾದ ಜೆರಿಯನ್ ಬೆನಾರ್ಡ್, ಕೊಲಿನ್ ವಾನ್ ಬೀಮ್‌ಜೋಡಿಯು ಅಜಯ್ ಸೆಲ್ವರಾಜ್, ಅಶ್ವಿನ್ ವಿಜಯರಾಘವನ್ ಜೋಡಿಯನ್ನು 6-7(4), 6-3 (10-4)ರಿಂದ ಮಣಿಸಿತು. ರಂಜಿತ್ ವಿರಲಿ ಮುರುಗೇಶನ್, ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ ಜೋಡಿಯು ಕುನಾಲ್ ಆನಂದ್, ರೋನಕ್ ಮಂಜುಳಾ ವಿರುದ್ಧ 7-6(3), 6-3ರಲ್ಲಿ ಗೆಲುವು ಸಾಧಿಸಿತು.

ಗೆಲುವಿನ ಕಂಕಣ ತೊಟ್ಟವರು...

ದಾವಣಗೆರೆ: ಟೆನಿಸ್ ನನ್ನ ಆಸಕ್ತಿ. ಅದಕ್ಕಾಗಿಯೇ ವರ್ಜಿನಿಯಾಕ್ಕೆ ತೆರಳಿದೆ. ಅಲ್ಲಿ ಅತ್ಯುತ್ತಮ ತರಬೇತಿ ಸಿಗುತ್ತಿದೆ. ಹಾಗೆಂದು ಭಾರತದ್ದೇನೂ ಕಳಪೆ ಅಲ್ಲ. ಇಲ್ಲಿಯೂ ಒಳ್ಳೆಯ ಸೌಲಭ್ಯ ಕೊಟ್ಟರೆ ಅತ್ಯುತ್ತಮ ಆಟಗಾರರು ಹೊರಬರುತ್ತಾರೆ. ವಿದೇಶಾಂಗ ವ್ಯವಹಾರ ಕುರಿತ ಪದವಿ ಪಡೆಯುತ್ತಿದ್ದಾಗ ನಾಲ್ಕು ವರ್ಷಗಳ ಕಾಲ ವರ್ಜಿನಿಯಾ ವಿವಿ ಕಾಲೇಜು ತಂಡವನ್ನು ಪ್ರತಿನಿಧಿಸಿದೆ. ವೃತ್ತಿಪರ ಆಟಗಾರನಾದ ಬಳಿಕ ತಾಯಿನಾಡನ್ನು ಪ್ರತಿನಿಧಿಸುವುದೇ ಹೆಮ್ಮೆಯೆನಿಸುತ್ತದೆ.


- ಇದು ವಿಶ್ವ 358ನೇ ಕ್ರಮಾಂಕದ ಆಟಗಾರ ಸನಮ್ ಸಿಂಗ್ ಮಾತು.  ಅರ್ಜುನ್ ಖಾಡೆ ಅವರನ್ನು ಸೋಲಿಸಿದ ಬಳಿಕ ಅವರು ವ್ಯಕ್ತಪಡಿಸಿದ ಅಭಿಪ್ರಾಯವಿದು.


ಕರ್ನಾಟಕದ ಅಂಗಣದಲ್ಲಿ 10 ವರ್ಷಗಳ ಬಳಿಕ ಆಡುತ್ತಿದ್ದೇನೆ. ಜೂನಿಯರ್ ಪಂದ್ಯಗಳಲ್ಲಿ ಆಡಿದ ಬಳಿಕ ವೃತ್ತಿಪರ ಆಟಗಾರನಾಗಿ ಇಲ್ಲಿ ಆಡುತ್ತಿರುವುದು ಇದೇ ಮೊದಲು ಎಂದರು.

ಆಟದ ಬಗ್ಗೆ ವಿವರಿಸಿದ ಅವರು, `ಆಟದ ಆರಂಭದಿಂದಲೇ ಎಲ್ಲ ಸರ್ವ್‌ಗಳ ಮೇಲೆ ಹಿಡಿತ ಸಾಧಿಸಿದ್ದೆ. ಖಾಡೆ ಕೂಡಾ ಪ್ರಬಲ ಸವಾಲಿನ ಸರ್ವ್ ನೀಡುತ್ತಿದ್ದರು. ಮೊದಲ ಸೆಟ್‌ನಲ್ಲಿ ಅವರು ಮುಂದೆ ಇದ್ದರು' ಎಂದರು. 

ಮೂಲತಃ ಚಂಡಿಗಡದ ಸನಮ್ ಅವರು, ಪ್ರಸಕ್ತ ವರ್ಷ ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಷನಲ್ಸ್, ವಿಶ್ವ ಟೆನಿಸ್ ಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ನ  ಪಂದ್ಯಗಳ ಸಿಂಗಲ್ಸ್‌ನಲ್ಲಿ ಒಟ್ಟು 28 ಬಾರಿ, ಡಬಲ್ಸ್‌ನಲ್ಲಿ 2 ಪಂದ್ಯಗಳನ್ನು ಗೆದ್ದಿದ್ದಾರೆ.

ಚೆನ್ನೈನ ಮುರುಗೇಶನ್ ಅವರ ಟೆನಿಸ್ ಬದುಕು ಕಳೆಗಟ್ಟಿದ್ದು 2008ರ ಬಳಿಕ. ದೆಹಲಿಯಲ್ಲಿ ನಡೆದ ಪುರುಷರ ಮುಕ್ತ ಚಾಂಪಿಯನ್ ಪಂದ್ಯದಲ್ಲಿ ಗೆದ್ದ ಅವರು, ಕಾಮನ್‌ವೆಲ್ತ್ ಗೇಮ್ಸ, ಏಷ್ಯನ್ ಗೇಮ್ಸ ಹಾಗೂ 2010ರಲ್ಲಿ ಚೆನ್ನೈನಲ್ಲಿ ನಡೆದ ಡೇವಿಸ್ ಕಪ್‌ನ ತಂಡದಲ್ಲಿದ್ದರು.

ಪ್ರಸ್ತುತ ವರ್ಷ ಎಟಿಪಿ, ಡಬ್ಲ್ಯೂಟಿಎ ಮತ್ತು ಐಟಿಎಫ್‌ನ ವಿವಿಧ ಪಂದ್ಯಗಳ ಪೈಕಿ ಸಿಂಗಲ್ಸ್‌ನಲ್ಲಿ 32 ಪಂದ್ಯ, ಡಬಲ್ಸ್‌ನಲ್ಲಿ 20 ಪಂದ್ಯಗಳನ್ನು ಗೆದ್ದ ದಾಖಲೆ ಅವರದ್ದು.

ಲಕ್ಷಿತ್ ಸೂದ್ ಅವರನ್ನು ಮಣಿಸಿದ ಭಾರತದ ಒಂದನೇ ಶ್ರೇಯಾಂಕದ ಆಟಗಾರ ಶ್ರೀರಾಂ ಬಾಲಾಜಿ ಅವರದ್ದು ಪ್ರಸಕ್ತ ವರ್ಷ ಎಟಿಪಿ, ಡಬ್ಲ್ಯೂಟಿಎ ಹಾಗೂ ಐಟಿಎಫ್‌ನ ಪಂದ್ಯಗಳ ಸಿಂಗಲ್ಸ್‌ನಲ್ಲಿ 39, ಡಬಲ್ಸ್‌ನಲ್ಲಿ 45 ಪಂದ್ಯಗಳನ್ನು ಗೆದ್ದ ಅನುಭವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry