ಬಾಲಾಜಿ, ಸನಮ್‌ಗೆ ಸುಲಭ ಜಯ

7
ಧಾರವಾಡ ಐಟಿಎಫ್ ಟೆನಿಸ್ ಟೂರ್ನಿ

ಬಾಲಾಜಿ, ಸನಮ್‌ಗೆ ಸುಲಭ ಜಯ

Published:
Updated:

ಧಾರವಾಡ: ಅಗ್ರ ಶ್ರೇಯಾಂಕಿತ ಶ್ರೀರಾಮ್ ಬಾಲಾಜಿ ಹಾಗೂ ಎರಡನೇ ಶ್ರೇಯಾಂಕದ ಸನಮ್ ಸಿಂಗ್ ಅವರು ಇಲ್ಲಿನ ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಧಾರವಾಡ ಓಪನ್ ಪುರುಷರ ಐಟಿಎಫ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿದರು.ಮಂಗಳವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ತಮಿಳುನಾಡಿನ ಶ್ರೀರಾಮ್ ಬಾಲಾಜಿ 6-0, 6-4 ಅಂತರದಿಂದ ಅಜಯ್ ಸೆಲ್ವರಾಜ್ ಎದುರು ಏಕಪಕ್ಷೀಯ ಗೆಲುವು ದಾಖಲಿಸಿದರು. ಭರ್ಜರಿ ಸರ್ವ್ ಮತ್ತು ಗ್ರೌಂಡ್ ಸ್ಟ್ರೋಕ್‌ಗಳಿಂದ ಎದುರಾಳಿಯನ್ನು ಕಂಗೆಡಿಸಿದ ಶ್ರೀರಾಮ್ ಒಂದೂ ಅಂಕ ಬಿಟ್ಟುಕೊಡದೇ ಮೊದಲ ಸೆಟ್ ಜಯಿಸಿದರು. ಎರಡನೇ ಸೆಟ್‌ನಲ್ಲಿ ಅಜಯ್ ಪ್ರತಿರೋಧ ತೋರಿದರಾದರೂ ಶ್ರೀರಾಮ್ ಗೆಲುವಿನ ಓಟಕ್ಕೆ ಅದು ಸಾಟಿಯಾಗಲಿಲ್ಲ. ಎರಡನೇ ಸುತ್ತಿನಲ್ಲಿ ಶ್ರೀರಾಮ್ ಸಿದ್ಧಾರ್ಥ್ ರಾವತ್ ಅವರನ್ನು ಎದುರಿಸಲಿದ್ದಾರೆ.ಮತ್ತೊಂದು ಏಕಪಕ್ಷೀಯ ಪಂದ್ಯದಲ್ಲಿ, ದಾವಣಗೆರೆ ಐಟಿಎಫ್ ಟೂರ್ನಿ ವಿಜೇತ ಹರಿಯಾಣದ ಸನಮ್ ಸಿಂಗ್ 6-2, 6-1ರಿಂದ ರಜತ್ ಮಹೇಶ್ವರಿ ವಿರುದ್ಧ ಗೆಲುವು ದಾಖಲಿಸಿದರು. ಕೇವಲ 48 ನಿಮಿಷಗಳಲ್ಲಿ ಸನಮ್ ಪಂದ್ಯ ಮುಗಿಸಿದ್ದು ವಿಶೇಷವಾಗಿತ್ತು. ಪಂದ್ಯದ ನಂತರ `ಪ್ರಜಾವಾಣಿ' ಜೊತೆ ಮಾತನಾಡಿದ ಸನಮ್, ಒತ್ತಡಕ್ಕೆ  ಒಳಗಾಗದೇ ಸಮಾಧಾನವಾಗಿ ಆಡಿದ್ದೇ ಗೆಲುವಿಗೆ ಕಾರಣವಾಯಿತು ಎಂದರು. ಮುಂದಿನ ಸುತ್ತಿನಲ್ಲಿ ಅವರು ಕಾಜಾ ವಿನಾಯಕ್ ಶರ್ಮಾ ಅವರನ್ನು ಎದುರಿಸಲಿದ್ದಾರೆ.ಶಬಾಜ್‌ಗೆ ಆಘಾತ:  ಮಧ್ಯಾಹ್ನ ನಡೆದ ಪಂದ್ಯದಲ್ಲಿ ಅರ್ಜುನ್ ಖಾಡೆ 4-6, 7-6, 6-1ರಿಂದ ಏಳನೇ ಶ್ರೇಯಾಂಕದ ಅಮೆರಿಕಾದ ಆಟಗಾರ ಮೈಕೆಲ್ ಶಬಾಜ್‌ಗೆ ಆಘಾತ ನೀಡಿದರು. ಟೈಬ್ರೇಕರ್‌ನಲ್ಲಿ 6-4ರಿಂದ ಮುಂದಿದ್ದ ಶಬಾಜ್ ಮುಂದಿನ ಗೇಮ್‌ನಲ್ಲಿ ಮುಗ್ಗರಿಸಿದರು. 17 ವರ್ಷದ ರಾಮ್‌ಕುಮಾರ್ ರಾಮನಾಥನ್ ಅಮೆರಿಕಾದ ವಿಲಿಯಂ ಕೆಂಡಾಲ್ ಅವರನ್ನು ಮಣಿಸಿದ್ದು ದಿನದ ವಿಶೇಷವಾಗಿತ್ತು. ಅವರು 6-2, 6-3ರಿಂದ ವಿಲಿಯಂ ಎದುರು ಸುಲಭ ಗೆಲುವು ಪಡೆದರು.ನಾಲ್ಕನೇ ಶ್ರೇಯಾಂಕದ ವಿಜಯಂತ್ ಮಲಿಕ್ 6-2, 6-1ರಿಂದ ಫರೀಜ್ ಮಹಮ್ಮದ್ ವಿರುದ್ಧ; ಸಿದ್ಧಾರ್ಥ ರಾವತ್ 6-2, 7-5ರಿಂದ ಕುನಾಲ್ ಆನಂದ್ ವಿರುದ್ಧ; ನೆದರ್‌ಲ್ಯಾಂಡ್‌ನ ಜೆರೊಯಿನ್ ಬೆನಾರ್ಡ್ 6-2, 6-3 ರಿಂದ ಎನ್. ನೀರಜ್ ಎದುರು ಗೆಲುವು ಸಾಧಿಸಿದರು. ಪಿ. ವಿಘ್ನೇಶ್ 7-6, 6-2ರಿಂದ ಶಬಾಜ್ ಖಾನ್‌ರನ್ನು ಪರಾಭವಗೊಳಿಸಿದರು.  ಜರ್ಮನಿಯ ಟಾರ್ಸ್ಟನ್ ವಿಯೊಸ್ಕಾ 6-4, 6-4ರಿಂದ 8ನೇ ಶ್ರೇಯಾಂಕದ ಅಶ್ವಿನ್  ವಿಜಯ ರಾಘವನ್‌ರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry