ಸೋಮವಾರ, ಜನವರಿ 20, 2020
25 °C

ಬಾಲಾರೋಪಿ: ಕೇಂದ್ರಕ್ಕೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿಗೆ ವಿಧಿಸಿರುವ ಶಿಕ್ಷೆ ಬಗ್ಗೆ ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿ­ಕ್ರಿಯೆ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ  ನೋಟಿಸ್‌ ಜಾರಿ ಮಾಡಿದೆ.ಈ ಪ್ರಕರಣದಲ್ಲಿ ಬಾಲಾಪರಾಧಿಯ ವಯಸ್ಸನ್ನು ಬಾಲ ನ್ಯಾಯಮಂಡಳಿ ನಿರ್ಧರಿಸಿದೆ. ಇದರ ಬದಲು ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ಕೋರ್ಟ್‌ನಲ್ಲಿ ಈ ಬಗ್ಗೆ ತೀರ್ಮಾನವಾಗಬೇಕು ಎಂಬುದು ಅರ್ಜಿದಾರರ ವಾದ.ಇದು ಅತ್ಯಂತ ಹೀನ ಪ್ರಕರಣ­ವಾ­ದರೂ ಅಪರಾಧಿಯು ಬಾಲನ್ಯಾಯ ಕಾಯ್ದೆ­ಯಡಿ ರಕ್ಷಣೆ ಪಡೆದಿ­ದ್ದಾನೆ. ಆದ್ದ­ರಿಂದ ಇಂತಹ ಕಾನೂನನ್ನು ರದ್ದು ಮಾಡಿ, ಅಪರಾಧಿಯನ್ನು ಕ್ರಿಮಿ­ನಲ್‌ ಪ್ರಕರಣಗಳ ವಿಚಾರಣಾ ಕೋರ್ಟ್‌ ಮುಂದೆ ಹಾಜರು ಮಾಡ­ಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಚನೆ ನೀಡ­ಬೇಕು ಎಂದು ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.ಆ. 31ರಂದು ಬಾಲನ್ಯಾಯ­ಮಂಡಳಿ ನೀಡಿ­­ರುವ ತೀರ್ಪು ತಮ್ಮ ಕುಟುಂಬಕ್ಕೆ ಸಮಾಧಾನ ತಂದಿಲ್ಲ. ಆದ್ದರಿಂದ ‘ಬಾಲ­ನ್ಯಾಯ ಕಾಯ್ದೆ– 2000ರ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವುದನ್ನು ಬಿಟ್ಟರೆ ತಮಗೆ ಬೇರೆ ಮಾರ್ಗ ಇಲ್ಲ ಎಂದೂ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್‌. ಚೌಹಾಣ್‌ ಅವರ ನೇತೃತ್ವದ ನ್ಯಾಯಪೀಠವು, ಹೀನ ರೀತಿಯ ಅಪರಾಧ ಪ್ರಕರಣಗಳಲ್ಲಿ ಬಾಲಾರೋಪಿಯ ವಯಸ್ಸು ಖಾತರಿ ಪಡಿಸಿಕೊಳ್ಳುವ ಬಗ್ಗೆ ನಾಲ್ಕು ವಾರ­ಗ­ಳಲ್ಲಿ ಪ್ರತಿಕ್ರಿಯೆ ದಾಖಲಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನೋಟಿಸ್‌ ನೀಡಿದೆ.

ಅತ್ಯಾಚಾರಕ್ಕೆ ಒಳಗಾದ ಯುವತಿಯ ಹೇಳಿಕೆ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸು­ವಂತೆ ನ್ಯಾಯಪೀಠವು ಸರ್ಕಾರಕ್ಕೆ ಸೂಚಿಸಿದೆ.ಹಿನ್ನೆಲೆ: 2012ರ ಡಿಸೆಂಬರ್‌ 16ರ ರಾತ್ರಿ ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್‌   ವಿದ್ಯಾರ್ಥಿನಿ ಮೇಲೆ ಆರು ಮಂದಿ ಅಮಾನುಷ ರೀತಿಯಲ್ಲಿ ಅತ್ಯಾಚಾರ ಎಸಗಿ­ದ್ದರು. ಈ ಆರೋಪಿಗಳಲ್ಲಿ ಒಬ್ಬ ಬಾಲಾರೋಪಿ­ಯಾ­ಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಆತನಿಗೆ ಹದಿನೇಳುವರೆ ವರ್ಷ ವಯಸ್ಸಾಗಿದ್ದ ಕಾರಣ ಆತನ ವಿಚಾರಣೆಯನ್ನು ಬಾಲ ನ್ಯಾಯಮಂಡಳಿ ನಡೆಸಿತ್ತು.

ಆತನ ಮೇಲಿನ ಆಪಾದನೆ ಸಾಬೀತಾದರೂ ಆತ ಬಾಲಾರೋಪಿ­ಯಾದ ಕಾರಣ  ಸುಧಾರಣೆಗೆ ಅವಕಾಶ ನೀಡಿ, ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಇರುವಂತೆ ಶಿಕ್ಷೆ ವಿಧಿ­ಸಿತ್ತು. ಉಳಿದ ನಾಲ್ವರು ತಪ್ಪಿತಸ್ಥರು ಗಲ್ಲು ಶಿಕ್ಷೆಗೆ ಗುರಿಯಾ­ಗಿದ್ದು, ಮತ್ತೊಬ್ಬ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗಲೇ ತಿಹಾರ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅತ್ಯಾಚಾರ ಮತ್ತೆ ಹಲ್ಲೆಗೆ ಒಳಗಾಗಿದ್ದ ಯುವತಿಯು ಡಿ. 29ರಂದು ಸಿಂಗಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.ಮಕ್ಕಳು ಹಕ್ಕು ಸಂರಕ್ಷಣಾ ಆಯೋಗ ವಿರೋಧ: ಹೀನ ರೀತಿಯ ಅಪರಾಧ ಪ್ರಕರಣದ ಬಾಲಾರೋಪಿಗಳ ವಯಸ್ಸನ್ನು ಇಳಿಕೆ ಮಾಡುವ ಕುರಿತು ಡಬ್ಲ್ಯುಸಿಡಿ ಮಾಡಿರುವ ಪ್ರಸ್ತಾವವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ  ಬಲವಾಗಿ ವಿರೋಧಿಸಿದೆ. ಮಕ್ಕಳ ವಯಸ್ಸು ಕುರಿತಂತೆ ನಿಗದಿ ಮಾಡಿರುವ ವಿಶ್ವಸಂಸ್ಥೆಯ ಮಾರ್ಗ­ದರ್ಶಿ ಸೂತ್ರದಲ್ಲಿ ರಾಜಿ ಮಾಡಿಕೊಳ್ಳ­ಲಾಗದು ಎಂದು ‘ಎನ್‌ಸಿಪಿಸಿಆರ್‌’ ಹೇಳಿದೆ.

ಪ್ರತಿಕ್ರಿಯಿಸಿ (+)