ಸೋಮವಾರ, ಡಿಸೆಂಬರ್ 9, 2019
25 °C

ಬಾಲಿವುಡ್ ಓಣಿಯಲ್ಲಿ ಧನುಷ್

Published:
Updated:
ಬಾಲಿವುಡ್ ಓಣಿಯಲ್ಲಿ ಧನುಷ್

`ವೈ ದಿಸ್ ಕೊಲವೆರಿ ಡಿ~ ಎಂದು ಹಾಡಿ ದೇಶ ವಿದೇಶಗಳಲ್ಲೂ ಸಂಚಲನ ಮೂಡಿಸಿದ ನಟ ಧನುಷ್ ಈಗ ಕಾಲಿವುಡ್‌ನಿಂದ ಬಾಲಿವುಡ್‌ಗೆ ಜಿಗಿಯುವ ಉತ್ಸಾಹದಲ್ಲಿದ್ದಾರೆ. ನವಿರು ಪ್ರೇಮಕಥೆಯುಳ್ಳ `ತನು ವೆಡ್ಸ್ ಮನು~ ಚಿತ್ರ ನಿರ್ದೇಶಿಸಿದ್ದ ಆನಂದ್ ರೈ ಅವರ ಹೊಸ ಸಿನಿಮಾ `ರಾಂಜ್‌ನಾ~ದಲ್ಲಿ ಧನುಷ್ ನಟಿಸಲಿದ್ದಾರೆ ಎಂಬ ಹೊಸ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸರಿದಾಡುತ್ತಿದೆ. ಸ್ವತಃ ಆನಂದ್ ಅವರೇ ಈ ಸುದ್ದಿ ಹೇಳಿರುವುದರಿಂದ ಬಾಲಿವುಡ್‌ನಲ್ಲಿ ಧನುಷ್ ಸದ್ದು ಮಾಡಲು ಸಜ್ಜಾಗಿದ್ದಾರೆ ಎಂದಾಯಿತು.

ಕ್ರಿಯೇಟಿವ್ ಡೈರೆಕ್ಟರ್ ಆನಂದ್ ಮತ್ತು ನಟ ಧನುಷ್ ಒಟ್ಟಾಗಿರುವುದರಿಂದ `ರಾಂಜ್‌ನಾ~ ಹೊಸ ಸಂಚಲನ ಉಂಟುಮಾಡಲಿದೆ ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ. ಅಂದಹಾಗೆ ಧನುಷ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ, ಪಂಜಾಬ್, ಚೆನ್ನೈ ಹಾಗೂ ಬನಾರಸ್‌ನ ಸುಂದರ ತಾಣದಲ್ಲಿ ಚಿತ್ರ ಚಿತ್ರೀಕರಣಗೊಳ್ಳಲಿದೆಯಂತೆ.

`ರಾಂಜ್‌ನಾ~ ಬಗ್ಗೆ ವಿಪರೀತ ಒಲವು ವ್ಯಕ್ತಪಡಿಸುತ್ತಿರುವ ನಿರ್ದೇಶಕ ಆನಂದ್‌ಗೆ ಈ ಚಿತ್ರ `ತನು ವೆಡ್ಸ್ ಮನು~ ರೀತಿಯಲ್ಲೇ ಪ್ರೇಕ್ಷಕರನ್ನು ಹಿಡಿದಿಡುತ್ತದೆ ಎಂಬ ಭರವಸೆ ಇದೆ. ರಾಂಜ್‌ನಾ ಉತ್ಕಟ ಪ್ರೇಮಕಥೆಯುಳ್ಳ ಚಿತ್ರ. `ಕಾದಲ್ ಕೊಂಡೇನ್~ ಚಿತ್ರದಲ್ಲಿ ಧನುಷ್ ನಟಿಸಿದ್ದ ವಿಚಿತ್ರ ಪ್ರೇಮಿಯ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ರಾಂಜ್‌ನಾ ಚಿತ್ರದ ಅವರ ಪಾತ್ರವೂ ಪ್ರೇಕ್ಷಕರ ಮನಸ್ಸನ್ನು ಕಾಡಲಿದೆ ಎಂಬುದು ನಿರ್ದೇಶಕರ ವಿಶ್ವಾಸ.

`ರಾಂಜ್‌ನಾ ಸಿನಿಮಾದ ಪ್ರಮುಖ ಪಾತ್ರಕ್ಕೆ ಹೊಂದುವ ನಟನಿಗಾಗಿ ನಾನು ಕಳೆದ ಆರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದೆ. ನನ್ನ ಕಲ್ಪನೆಯನ್ನು ತೆರೆಯ ಮೇಲೆ ಉತ್ಕಟವಾಗಿ ಭಾವಾಭಿವ್ಯಕ್ತಿಗೊಳಿಸುವಂತಹ ನಟನಿಗಾಗಿ ಮನಸ್ಸು ತುಡಿಯುತ್ತಿತ್ತು. ನಾನು ಧನುಷ್ ಅಭಿನಯಿಸಿದ ಆಡುಕಳಂ (ಮೈದಾನ) ತಮಿಳು ಚಿತ್ರ ನೋಡಿದಾಗ ತಕ್ಷಣ ಅವರೇ ನನ್ನ ಕಥೆಗೆ ಜೀವತುಂಬುವ ವ್ಯಕ್ತಿ ಎಂದೆನಿಸಿತು. ಆಡುಕಳಂ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತಲ್ಲದೆ ಧನುಷ್‌ಗೆ ಶ್ರೇಷ್ಠ ನಟ ಗೌರವವೂ ಸಂದಿತ್ತು.

`ಧನುಷ್ ತುಂಬಾ ಸರಳ. ಸಿನಿಮಾ ಬಗ್ಗೆ ಅಪ್ರತಿಮ ಒಲವು ಇರುವ ವ್ಯಕ್ತಿ. ರಾಂಜ್‌ನಾ ಉತ್ಕಟ ಪ್ರೇಮಕಥೆಯ ಹಂದರ ಹೊಂದಿರುವ ಚಿತ್ರ. ಹಾಗಾಗಿ ನನ್ನ ಚಿತ್ರಕಥೆಯ ಪಾತ್ರಕ್ಕೆ ಇವರು ಹೇಳಿಮಾಡಿಸಿದಂತಿದ್ದಾರೆ. ಪಾತ್ರಕ್ಕೆ ಜೀವ ತುಂಬುವ ಸಾಮಾನ್ಯ ರೂಪು, ಸೃಜನಶೀಲತೆ ಎಲ್ಲವೂ ನನಗೆ ಧನುಷ್ ಅವರಲ್ಲಿ ಢಾಳಾಗಿ ಕಂಡಿದ್ದರಿಂದ ಅವರನ್ನು ಆಯ್ಕೆ ಮಾಡಿದೆ~ ಎನ್ನುತ್ತಾರೆ ಆನಂದ್.

ಕೊಲವೆರಿ ಗೀತೆಯ ಯಶಸ್ಸಿನಿಂದ ಬೀಗುತ್ತಿರುವ ಧನುಷ್ ಹಿಂದಿ ಚಿತ್ರಗಳಲ್ಲಿ ಈ ಹಿಂದೆ ನಟಿಸಿಲ್ಲ. ಹಿಂದಿ ಭಾಷೆಯಲ್ಲಿ ಪಳಗಿದವರೂ ಅಲ್ಲ. ಅವರಿಗೆ ಈ ಅಂಶಗಳೆಂದೂ ಅವರ ನಟನೆಗೆ ಅಡ್ಡಿ ಮಾಡದು. ಹಾಗಾಗಿ ಈಗ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ದುಡಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ ಧನುಷ್. ಅದಕ್ಕೆಂದೇ ಬಾಲಿವುಡ್ ಇಂಡಸ್ಟ್ರಿಯ ವ್ಯಾಕರಣ, ಅಲ್ಲಿನ ಸ್ಥಳೀಯ ಭಾಷೆ- ಸಂಸ್ಕೃತಿಯನ್ನು ತಿಳಿದುಕೊಳ್ಳುವ ಉಮೇದನ್ನು ಉತ್ಸಾಹದಿಂದ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಕೊಲವೆರಿ ಗೀತೆ ಯದ್ವಾತದ್ವಾ ಯಶಸ್ಸು ಪಡೆಯುವ ಮುನ್ನವೇ ಆನಂದ್ ಮತ್ತು ಧನುಷ್ ನಡುವೆ ಈ ಪ್ರಾಜೆಕ್ಟ್ ಕುರಿತು ಮಾತುಕತೆ ನಡೆದಿತ್ತು ಎನ್ನುತ್ತದೆ ಒಂದು ಮೂಲ.

`ರಾಂಜ್‌ನಾ ಕಥೆ ಕೇಳಿ ತುಂಬಾ ಉತ್ಸಾಹ ತೋರಿರುವ ಧನುಷ್‌ಗೆ ಬಾಲಿವುಡ್ ಅಂಗಳದಲ್ಲಿ ಖಾತೆ ತೆರೆಯಲು ಇದೊಂದು ಉತ್ತಮ ಅವಕಾಶ. ಆನಂದ್ ಅವರ ರಾಂಝನಾ ಚಿತ್ರಕಥೆ ಮಾಮೂಲಿ ಸಿನಿಮಾಗಿಂತ ವಿಭಿನ್ನವಾಗಿದೆ. ಇದು ನನ್ನ ಎಲ್ಲ ಸಿನಿಮಾಗಳಿಗಿಂತ ಭಿನ್ನವಾಗಿ ಮೂಡಿಬರಲಿದೆ~ ಎನ್ನುತ್ತಾರೆ ಅವರು.

ಧನುಷ್ ಈಗಾಗಲೇ ನಿರ್ದೇಶಕ ಆನಂದ್ ಜತೆಗೂಡಿ ಬನಾರಸ್‌ಗೆ ಭೇಟಿ ನೀಡಿದ್ದರಂತೆ. ಅಲ್ಲಿನ ಸಂಸ್ಕೃತಿ ಹಾಗೂ ಆಚರಣೆ ಕಂಡು ಧನುಷ್ ಮನಸ್ಸು ಪುಳಕಿತಗೊಂಡಿದೆಯಂತೆ. ಅಲ್ಲದೆ ಶೂಟಿಂಗ್ ಸಮಯದಲ್ಲಿ ಸರಾಗವಾಗಿ ಮಾತನಾಡುವ ಆಸೆಯಿಂದ ಹಿಂದಿಯನ್ನು ಬನಾರಸ್‌ನಲ್ಲಿಯೇ ಕಲಿಯಬೇಕೆಂದೂ ಮನಸ್ಸು ಮಾಡಿದ್ದಾರಂತೆ.

ಪ್ರತಿಕ್ರಿಯಿಸಿ (+)