ಸೋಮವಾರ, ಮೇ 23, 2022
24 °C

ಬಾಲ್ಯವಿವಾಹ: ಕೋರ್ ಕಮಿಟಿಯಿಂದ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಧಾರವಾಡ: “ಬಾಲ್ಯವಿವಾಹ ತಡೆಗಟ್ಟಲು ರಾಜ್ಯ ಸರ್ಕಾರ ನೇಮಿಸಿರುವ ಬಾಲ್ಯವಿವಾಹ ತಡೆ ಕೋರ್ ಕಮಿಟಿ ನಿಗದಿತ ಅವಧಿಯೊಳಗೆ ತನ್ನ ವರದಿ ಸಲ್ಲಿಸಲಿದೆ” ಎಂದು ಕಮಿಟಿ ಅಧ್ಯಕ್ಷ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜೂನ್ ತಿಂಗಳಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬಾಲ್ಯವಿವಾಹ ತಡೆಗಗಟ್ಟುವ ನಿಟ್ಟಿನಲ್ಲಿ ಇಂಥ ಕಾರ್ಯಕ್ಕೆ ಮುಂದಾಗುವ ತಂದೆ- ತಾಯಂದಿರಿಗೆ, ಸಾಮೂಹಿಕ ವಿವಾಹ ನಡೆಸುವ ಸಂಘಟಕರಿಗೆ ಶಿಕ್ಷೆ ಹಾಗೂ ಇಂಥ ಸಮಾರಂಭದಲ್ಲಿ ಭಾಗವಹಿಸುವವರಿಗೆ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ವರದಿಯಲ್ಲಿ ಇದನ್ನು ಶಿಫಾರಸ್ಸು ಮಾಡಲಾಗುವುದು ಎಂದರು.ಸಮಿತಿಯು ಬೆಂಗಳೂರಿನ ಹೊರಗೆ ಜಿಲ್ಲಾಮಟ್ಟದಲ್ಲಿ ಸಮಾಲೋಚನೆ ಸಭೆ ನಡೆಸಿರುವುದು ಇದೇಮೊದಲ ಬಾರಿ. 16 ರಂದು ಧಾರವಾಡ, ಗದಗ ಹಾಗೂ 17 ರಂದು ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರ ಸಂವಾದ ನಡೆಸಲಾಯಿತು. ಸಭೆಯಲ್ಲಿ ಉತ್ತಮ ಸಲಹೆಗಳು ವ್ಯಕ್ತವಾಗಿದ್ದು, ಅವುಗಳನ್ನು ಸಮಿತಿ ಸದಸ್ಯರ ಸಭೆಯಲ್ಲಿ ಚರ್ಚಿಸಿ ವರದಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದ ಅವರು, ಪ್ರತಿ ಗ್ರಾಮಗಳಲ್ಲಿ ಮಕ್ಕಳ ಹಕ್ಕು ರಕ್ಷಿಸುವ ಸಮಿತಿಗಳನ್ನು ರಚಿಸುವ ಯೋಜನೆ ಇದೆ ಎಂದು ತಿಳಿಸಿದರು.ಸಮಿತಿಯು ನಾಲ್ಕು ಮುಖ್ಯ ವಿಷಯಗಳ ಕುರಿತು ಅಭಿಪ್ರಾಯ ರೂಪಿಸುತ್ತಿದೆ. ಬಾಲ್ಯವಿವಾಹಗಳಿಂದಾಗುವ ದುಷ್ಪರಿಣಾಮ ಹಾಗೂ ಅದರ ಕುರಿತು ಜನರಲ್ಲಿ ಅರಿವು ಮೂಡಿಸುವುದು. ಬಾಲ್ಯವಿವಾಹಗಳು ಸಂತೋಷದಿಂದ ನೆರವೇರಿಸುತ್ತಾರೆಯೇ? ಅನಿವಾರ್ಯತೆಯ ಸಂದರ್ಭವಿದೆಯೇ? ಮುಂತಾದ ಕಾರಣಗಳ ಗೊತ್ತುಪಡಿಸಿ ಅವುಗಳ ನಿವಾರಣೆ ಹೇಗೆ ಎಂಬುದರ ಕುರಿತು, ಕಾನೂನುಗಳ ಮಿತಿಯಲ್ಲಿ ಅದನ್ನು ಉಲ್ಲಂಘಿಸಿದಲ್ಲಿ ಉಂಟಾಗುವ ಶಿಕ್ಷೆ ಸಾಕೆ ಹಾಗೂ ಕೊಯೆದಾಗಿ ಬಾಲ್ಯವಿವಾಹ ತಡೆ ಸಂದರ್ಭದಲ್ಲಿ ಕಾನೂನು ಕಾಯ್ದೆ ಪರಿಣಾಮಕಾರಿ ಜಾರಿಯಲ್ಲಿ ಉಂಟಾಗುವ ಸಮಸ್ಯೆಗಳ ಕುರಿತು ಚಿಂತನ- ಮಂಥನ ನಡೆಯಲಿದೆ ಎಂದರು.ವೈಯಕ್ತಿಕ ಸಂದರ್ಭಗಳಿಗಿಂತ ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ ಇಂಥ ಪ್ರಸಂಗಗಳು ಹೆಚ್ಚು ಜರುಗುತ್ತಿರುವುದನ್ನು ಸಮಿತಿ ಗಮನಿಸಿದೆ. ಈ ಕುರಿತು ರೀತಿ ನಿಯಮಗಳನ್ನು ರೂಪಿಸಲು ಗಮನ ನೀಡಲಾಗುವುದು ಎಂದು ಹೇಳಿದರು.ಸಮಾಲೋಚನೆ ಸಭೆಯಲ್ಲಿ ಸಮಿತಿಯ ಮುಂದೆ ವಿಷಯ ತಿಳಿಸಲು ಸಾಧ್ಯವಾಗದವರು ತಮ್ಮ ಅಭಿಪ್ರಾಯಗಳನ್ನು ಸದಸ್ಯ ಕಾರ್ಯದರ್ಶಿಗಳು, ಬಾಲ್ಯವಿವಾಹ ತಡೆ ಕೋರ್ ಕಮಿಟಿ, ಕೊಠಡಿ ಸಂಖ್ಯೆ 133, 1ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್.ಅಂಬೇಡ್ಕರ ಬೀದಿ, ಬೆಂಗಳೂರು-1, ದೂರವಾಣಿ ಸಂಖ್ಯೆ 080-22034357ಕ್ಕೆ ಸಂಪರ್ಕಿಸಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವರದ್ಧಿ ಇಲಾಖೆ ಕಾರ್ಯದರ್ಶಿ ಸಿ.ಎನ್.ಸೀತಾರಾಂ, ಜಂಟಿನಿರ್ದೇಶಕಿ ನಜರತ್ ಫಾತಿಮಾ, ಉಪನಿರ್ದೇಶಕರಾದ ಪಂಕಜಾ, ಸರೋಜಾ ಕಡೇಮನಿ, ಓಬಳಪ್ಪ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.