ಭಾನುವಾರ, ಜೂನ್ 20, 2021
24 °C

ಬಾಲ್ಯವಿವಾಹ ತಡೆಗೆ ಸತ್ಯವತಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಯಲು ಮಹಿಳೆಯರು ಶಪಥ ಮಾಡಬೇಕು~ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಸತ್ಯವತಿ ಗುರುವಾರ ಮನವಿ ಮಾಡಿದರು.ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ `ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ~ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು `ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿರುವುದು ಆತಂಕ ಕಾರಿ ಬೆಳವಣಿಗೆಯಾಗಿದೆ. ಜಿಲ್ಲೆಯು ಇತರೆ ವಿಷಯಗಳಲ್ಲಿ ಪ್ರಗತಿಪಥದಲ್ಲಿದೆ. ಆದರೆ ಸಾಮಾಜಿಕವಾಗಿ ಹಿಂದುಳಿದಿದೆ~ ಎಂದು ಬೇಸರ ವ್ಯಕ್ತಪಡಿಸಿದರು.`ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಭಾರ ಎನ್ನುವ ತಪ್ಪುಕಲ್ಪನೆಯಿಂದ 18 ವರ್ಷ ತುಂಬುವ ಮುನ್ನವೇ ಮದುವೆ ಮಾಡಿಕೊಡಲಾಗುತ್ತಿದೆ. ಇದು ಕಾನೂನು ಪ್ರಕಾರ ಅಪರಾಧ. ಕೆಲವು ದಿನಗಳ ಹಿಂದೆ ಕೆ.ಆರ್.ನಗರ ಮತ್ತು ಹುಣಸೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ನಡೆಯಬೇಕಿದ್ದ ಬಾಲ್ಯವಿವಾಹಗಳನ್ನು ಅಧಿಕಾರಿಗಳು ರಾತ್ರೋರಾತ್ರಿ ನಿಲ್ಲಿಸಿದ್ದಾರೆ~ ಎಂದು ಹೇಳಿದರು.`ಇತ್ತೀಚಿಗೆ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮ ಪಂಚಾಯಿತಿಯ ಮಹಿಳಾ ಜನಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದ ನಾನು ಮಹಿಳೆಯರು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಕೇವಲ ಮೂಲ ಸೌಕರ್ಯಕ್ಕೆ ಒತ್ತು ನೀಡದೇ ಸಾಮಾಜಿಕ ಸಂಗತಿಗಳ ಬಗ್ಗೆಯೂ ಚರ್ಚಿಸಬೇಕು. ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಬೇಕು.ಶಾಲಾಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದೇನೆ. ಇದರಿಂದ ಬಾಲ್ಯವಿವಾಹವನ್ನು ತಡೆಗಟ್ಟಲು ಸಾಧ್ಯ~ ಎಂದು ತಿಳಿಸಿದರು.`ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಕೇವಲ ಸಾಲ ಪಡೆದು, ಮರುಪಾವತಿ ಮಾಡಿದರೆ ಸಾಲದು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಬಾಲ್ಯವಿವಾಹವನ್ನು ತಡೆಯಬೇಕು ಹಾಗೂ ಶಾಲೆಯಿಂದ ಹೊರಗೆ ಉಳಿದಿರುವ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಬೇಕು~ ಎಂದು ಸಲಹೆ ನೀಡಿದರು.ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಎಸ್.ಎಂ. ಮಂಗಳ ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ್ ಇದ್ದರು. ನಂತರ ಬಾಲ ಮಂದಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.