ಭಾನುವಾರ, ಏಪ್ರಿಲ್ 11, 2021
25 °C

ಬಾಲ್ಯವಿವಾಹ ನಿರ್ಮೂಲನೆಯಾಗಲಿ: ಜಯಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದ ಕೂಪಕ್ಕೆ ದೂಡಬಾರದು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರು ವಿಶೇಷ ಒತ್ತು ನೀಡಬೇಕು~ ಎಂದು ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಸಲಹೆ ನೀಡಿದರು.ನಗರದ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಮೇನ್)ಯ ಆವರಣದಲ್ಲಿ ಮಂಗಳವಾರ ನಡೆದ ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಿರುವ ಕಂಪ್ಯೂಟರ್, ಅಡುಗೆ ಕೊಠಡಿ ಹಾಗೂ ಶೌಚಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಜ್ಯಸಭಾ ಸದಸ್ಯರಿಗೆ ನೀಡುವ ಸರ್ಕಾರದ ಅನುದಾನ ಉತ್ತಮ ಕಾರ್ಯಗಳಿಗೆ ಸದ್ವಿನಿಯೋಗವಾಗಬೇಕು. ಅನುದಾನದಡಿ ಶಾಲೆಗೆ ಸೌಲಭ್ಯ ಕಲ್ಪಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಲಾ ಆವರಣ ವಿಶಾಲವಾಗಿದೆ. ಕೈದೋಟ ಬೆಳೆಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದ ಅವರು, ಬಾಲ್ಯದಲ್ಲಿಯೇ ಹೆಣ್ಣುಮಕ್ಕಳಿಗೆ ವಿವಾಹ ಮಾಡುವುದು ತಪ್ಪು. ಅವರಿಗೂ ಗಂಡು ಮಕ್ಕಳಂತೆ ಸಮಾನ ಶಿಕ್ಷಣ ನೀಡಬೇಕು ಎಂದು ಹೇಳಿದರು.ಸಂಸದ ಆರ್. ಧ್ರುವನಾರಾಯಣ ಮಾತನಾಡಿ, `ಕೇಂದ್ರ ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ರಾಜ್ಯಸಭಾ ಸದಸ್ಯರು ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಯಾವುದೇ ಕ್ಷೇತ್ರಕ್ಕಾದರೂ ಅನುದಾನ ನೀಡಬಹುದು. ಜಯಶ್ರೀ ಅವರು ಹಿಂದುಳಿದ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ನೀಡಿರುವುದು ಶ್ಲಾಘನೀಯ ಎಂದರು.ಮಕ್ಕಳಿಂದ ದುಡಿಸಿಕೊಳ್ಳುವುದು ಅಪರಾಧ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಹೆಣ್ಣುಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ಆಗ ಮಾತ್ರ ಅವರ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು.ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, `ಮುಸ್ಲಿಂ ಬಾಂಧವರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಕಾಳಜಿವಹಿಸಬೇಕು~ ಎಂದು ಸಲಹೆ ನೀಡಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ  ಅಂದಾನಿ, ಸೈಯದ್‌ರಫೀ, ಮಹಮ್ಮದ್ ಅಸ್ಗರ್, ಮುಜೀದ್ ಅಹಮ್ಮದ್, ಫಯಾಜ್ ಅಹಮ್ಮದ್ ಷರೀಫ್, ಅಯಾಬ್‌ಉಲ್ಲಾ ಖಾನ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.