ಬಾಲ್ಯವೇ ಆಹುತಿ

7

ಬಾಲ್ಯವೇ ಆಹುತಿ

Published:
Updated:
ಬಾಲ್ಯವೇ ಆಹುತಿ

ಹ ದಿನಾಲ್ಕು ವರ್ಷ ವಯಸ್ಸಿನ ಕಮಲಳನ್ನು ಅವಳ ತಂದೆ ಸಲಹೆಗೆಂದು ಕರೆತಂದಿದ್ದರು.  ಪರಸ್ಪರ ನಮಸ್ಕಾರಗಳ ವಿನಿಮಯದ ನಂತರ ಸಮಸ್ಯೆ ಏನೆಂದು ವಿಚಾರಿಸಿದೆ. ತಂದೆ ಪ್ರಾರಂಭಿಸಿದರು. ``ಸಾರ್ ಇವಳು ನನ್ನ ಮಗಳು. ಮದುವೆ ಆಗಿ ಎರಡೂವರೆ ತಿಂಗಳಾಯಿತು. ಹದಿನೈದು ದಿನಗಳು ಚೆನ್ನಾಗಿಯೇ ಇದ್ದಳು. ಆದರೆ ಈಗ ಗಂಡನ ಮನೆಗೆ ಹೋಗೋಲ್ಲ ಅಂತ ಕೂತುಕೊಂಡಿದ್ದಾಳೆ. ಗಂಡ ಬಂದರೆ ಅವನನ್ನ ತಲೆ ಎತ್ತಿಯೂ ನೋಡೋಲ್ಲ. ಮತ್ತೆ ಬಾಕಿ ಎಲ್ಲರ ಹತ್ರಾನೂ ಸರಿಯಾಗಿರ‌್ತಾಳೆ. ಹಾಗಾಗಿ ಇವಳ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ತಿಳಿದುಕೊಳ್ಳೋಣ ಅಂತ ನಿಮ್ಮ ಹತ್ತಿರ ಕರೆದುಕೊಂಡು ಬಂದ್ವಿ~ ಎಂದರು.ಹದಿನಾಲ್ಕು ವರ್ಷದ ತರುಣಿಯ ವಿವಾಹವಾಗಿದೆ ಎಂದು ತಾನು ಹೇಳಿದಾಕ್ಷಣವೇ ನನಗೆ ಸ್ವಲ್ಪ ಶಾಕ್ ಆದಂತೆನಿಸಿತು. ಅದನ್ನು ತೋರಗೊಡದೇ ಕಮಲಳ ಪತಿಯ ವಯಸ್ಸು ಮತ್ತು ಉಳಿದಂತೆ ವಿವಾಹದ ಬಗ್ಗೆ ವಿಚಾರಿಸಿದೆ. ಅದಕ್ಕೆ ಕಮಲಳ ತಂದೆ `ಸಾರ್ ಅದೊಂದು ದೊಡ್ಡ ಕತೆ~ ಎಂದರು. ಅದೇನೆಂದು ಸಂಕ್ಷಿಪ್ತವಾಗಿ ಹೇಳುವಂತೆ ಕೇಳಿಕೊಂಡೆ. ಅದಕ್ಕೆ ಕಮಲಳ ತಂದೆ `ಸಾರ್ ಇವಳ ತಾಯಿಗೆ ಸ್ವಲ್ಪ ಸೀರಿಯಸ್ ಆಗಿತ್ತು.  ಹಾಗಾಗಿ ಅವರು ಇದ್ದಾಗಲೇ ಇವಳ ಮದುವೆ ಮಾಡಬೇಕೆಂದು ನಿಶ್ಚಯಿಸಿದರು. ನನಗೆ ಇಷ್ಟ ಇರಲಿಲ್ಲ. ಆದರೂ ಒಪ್ಪಿಕೋಬೇಕಾಯಿತು.  ಆ ಹುಡುಗ ಒಳ್ಳೆಯವನೇ.  ಅವನಿಗೆ ಇಪ್ಪತ್ತ ನಾಲ್ಕು ವರ್ಷ ವಯಸ್ಸು.  ತಂದೆಗೆ ಒಬ್ಬನೇ ಮಗ. ಒಳ್ಳೇ ಮನೆತನ. ಇವಳು ಮೊದಲು ಮದುವೆಗೆ ಒಪ್ಪಲಿಲ್ಲ. ಆದರೆ ಹಿರಿಯರು ಹೇಳಿದ ಹಾಗೆ ಕೇಳಬೇಕಲ್ವಾ. ಹಾಗಾಗಿ ಮದುವೆ ಆಗೇ ಬಿಡ್ತು. ಈಗ ನಾವು ಅನುಭವಿಸಬೇಕು~ ಎಂದರು. ವಿವರವಾದ ಮಾಹಿತಿಗಳನ್ನು ಪಡೆದ ನಂತರ ಕಮಲಾಳ ಮನೋವಿಶ್ಲೇಷಣೆ ಮಾಡಿದೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಕಮಲಾಳಿಗೆ ವಿವಾಹ ಎಂದರೇನು? ಎಂಬುದರ ತಿಳಿವಳಿಕೆಯೂ ಇರಲಿಲ್ಲ.  ಅದರಲ್ಲಿಯೂ ಲೈಂಗಿಕ ಸಂಪರ್ಕದ ಬಗ್ಗೆ ಅವಳಿಗೆ ಗೊತ್ತೇ ಇರಲಿಲ್ಲ.ಬಾಲ್ಯ ವಿವಾಹದಿಂದ ಹೆಣ್ಣಿನ ಮೇಲೆ ಆಗುವ ಬಾಧಕಗಳೆಷ್ಟು ಎಂಬುದನ್ನು ಒಂದು ನಿಮಿಷ ಯೋಚಿಸಿದರೆ ಎದೆ ಧಸಲ್ ಎನ್ನುತ್ತದೆ. ಬಾಲ್ಯ ವಿವಾಹದಿಂದ ಹೆಣ್ಣಿನ ಮೇಲಾಗುವ ದುಷ್ಪರಿಣಾಮಗಳನ್ನು ಕುರಿತು ಸಾವಿರದ ಒಂಬೈನೂರಾ ಇಪ್ಪತ್ತೊಂಬತ್ತರಲ್ಲಿ ಭಾರತ ಸರ್ಕಾರವು (ಅಂದಿನ ಬ್ರಿಟಿಷ್ ಸರ್ಕಾರ) `ಶಾರದಾ ಆ್ಯಕ್ಟ್~ ಎಂಬ ಕಾನೂನು ಜಾರಿಗೆ ತಂದಿತು. ಅದರ ಪ್ರಕಾರ ಹದಿನೆಂಟು ವಯಸ್ಸಿನೊಳಗಿನ ಹೆಣ್ಣು ಮಕ್ಕಳ ಮತ್ತು ಇಪ್ಪತ್ತೊಂದು ವರ್ಷ ವಯಸ್ಸಿನೊಳಗಿನ ಗಂಡು ಮಕ್ಕಳ ಮದುವೆ ನಿಷೇಧ. ಆ ಕಾನೂನು ಜಾರಿಗೆ ಬಂದು 8 ದಶಕಗಳ ನಂತರವೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ ಎಂದರೆ ಓದುಗರಿಗೆ ಆಶ್ಚರ್ಯ ಎನಿಸಬಹುದು. ಈಗಿನ ಆಧುನಿಕ ಗಣಕ ತಂತ್ರಜ್ಞಾನ ಯುಗದಲ್ಲಿ ಹದಿಮೂರು ಹದಿನಾಲ್ಕು ವಯಸ್ಸಿನ ಮಕ್ಕಳು ಪ್ರೀತಿ ವಿವಾಹಕ್ಕೊಳಗಾಗಿ ಮನೆ ಬಿಟ್ಟು ಓಡಿ ಹೋಗುವ ಪ್ರಸಂಗಗಳು ಕಡಿಮೆಯೇನಲ್ಲ.  ಬಾಲ್ಯ ವಿವಾಹಕ್ಕೆ ಆಹುತಿಯಾಗುವವರು ಹೆಚ್ಚಾಗಿ ಹೆಣ್ಣು ಮಕ್ಕಳೇ. ನಲವತ್ತು - ಐವತ್ತು ದಾಟಿದ ಪುರುಷರೂ ಹದಿನಾಲ್ಕು ಹದಿನೈದರ ಹೆಣ್ಣು ಮಕ್ಕಳನ್ನು ಮದುವೆಯಾಗುವ ಪ್ರಕರಣಗಳು ಸಾಕಷ್ಟಿವೆ.ಕನ್ಯತ್ವ ಕಾಪಾಡುವ ಪದ್ಧತಿ:

ಬಾಲ್ಯ ವಿವಾಹಕ್ಕೆ ಕಾರಣಗಳು ಹಲವು. ಬಡತನವು ಬಾಲ್ಯ ವಿವಾಹಕ್ಕೆ ಒಂದು ಮುಖ್ಯವಾದ ಕಾರಣ.  ಕುಟುಂಬದ ಆರ್ಥಿಕತೆಯನ್ನು ನಿಭಾಯಿಸಲು ಹೆಣ್ಣು ಮಕ್ಕಳನ್ನು ಮಾರಿ ಸಾಲ ತೀರಿಸುವುದು ಅಥವಾ ಅದರಿಂದ ಬಂದ ಹಣವನ್ನು ಆದಾಯ ಎಂದೆಣಿಸುವುದು ಇದರ ಉದ್ದೇಶ. ಹಾಗಾಗಿ ಹೆಚ್ಚಿನ ಬಾಲ್ಯ ವಿವಾಹಗಳು ಆರ್ಥಿಕವಾಗಿ ಕೆಳಸ್ತರದಲ್ಲಿರುವ ಕುಟುಂಬಗಳಲ್ಲಿ  ನಡೆಯುತ್ತವೆ.  ಕೆಲವು ಜನಾಂಗಗಳಲ್ಲಿ ಬಾಲ್ಯ ವಿವಾಹವು ಹೆಣ್ಣಿನ ಕನ್ಯತ್ವವನ್ನು ಕಾಪಾಡುವ ಒಂದು ಪದ್ಧತಿ. ಹೆಣ್ಣು ಮಕ್ಕಳು ದೊಡ್ಡವರಾದ ಮೇಲೆ ಅವರು ಕನ್ಯತ್ವ ಕಳೆದುಕೊಂಡು ಅಶ್ಲೀಲ ಲೈಂಗಿಕತೆಯಲ್ಲಿ ತೊಡಗುತ್ತಾರೆ ಎಂಬ ಬಲವಾದ ನಂಬಿಕೆ.  ಇದರಿಂದ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆಂಬುದು ಇವರ ವಾದ. `ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ~ ಎಂಬ ಗಾದೆಯ ಹಾಗೆ ಹೆಣ್ಣು ಮಕ್ಕಳಾದರೆ ಅವರು ಮನೆ ಕೆಲಸಗಳಿಗೆ ಮಾತ್ರ ಅರ್ಹರು. ವಿದ್ಯೆ ಕಲಿಸಿದರೆ ಅದರಿಂದ ಪ್ರಯೋಜನವಿಲ್ಲ ಎಂದು ನಂಬುವ ಕೆಲವು ಕುಟುಂಬಗಳಲ್ಲಿ ಎಳೆ ವಯಸ್ಸಿನಲ್ಲಿ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಒಂದು ಉಪಾಯ. ಮಾದಕ ವಸ್ತುಗಳ ಹಾಗೆ ಹೆಣ್ಣು ಮಕ್ಕಳನ್ನು ಕಳ್ಳ ಸಾಗಣೆ ಮೂಲಕ ಬೇರೆಡೆಗೆ ಸಾಗಿಸಿ ಅವರನ್ನು ಎಳೆಯದರಲ್ಲೇ ಮದುವೆಯ ನೆಪದಿಂದ ಲೈಂಗಿಕ ಶೋಷಣೆಗೆ ಒಳಪಡಿಸುವ ಸಮಾಜ ಕಂಟಕ ವ್ಯಕ್ತಿಗಳೂ ಬಾಲ್ಯ ವಿವಾಹಕ್ಕೆ ಒಂದು ಕಾರಣ ಎಂದು ಹೇಳಬಹುದು. ಇದರಿಂದ ಹೆಣ್ಣು ಮಕ್ಕಳನ್ನು ಮಾರಿ ಹಣಗಳಿಸುವುದೂ ಒಂದು ಉದ್ದೇಶ. ಬಾಲ್ಯ ವಿವಾಹವು ಹೆಣ್ಣಿನ ಮೇಲೆ ಹಲವಾರು ದುಷ್ಪರಿಣಾಮ ಬೀರುವುದೊಂದೇ ಅಲ್ಲ, ಸಮಾಜದ ಮುಂದಿನ ಪೀಳಿಗೆಯ ಮೇಲೆ ತನ್ನ ಕರಿನೆರಳನ್ನು ಬೀರುತ್ತದೆ.   ಕಾನೂನಿನನ್ವಯ ಹೆಣ್ಣು ಮಕ್ಕಳಿಗೆ ಹದಿನೆಂಟನೇ ವಯಸ್ಸಿನ ಒಳಗಾಗಿ ಮತ್ತು ಗಂಡು ಮಕ್ಕಳಿಗೆ ಇಪ್ಪತ್ತೊಂದನೇ ವಯಸ್ಸಿನೊಳಗಾಗಿ ವಿವಾಹ ಮಾಡುವುದು ನಿಷಿದ್ಧ. ಅದಕ್ಕೆ ಶಿಕ್ಷೆಯೂ ಇದೆ. * ಹದಿನೆಂಟು ವಯಸ್ಸಿನ ಒಳಗೆ ಗರ್ಭ ಧರಿಸುವ ಹೆಣ್ಣು ಮಕ್ಕಳಲ್ಲಿ ಗರ್ಭಾವಸ್ಥೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚು.ಬಾಲ್ಯ ವಿವಾಹದ ಹೆಣ್ಣು ಮಕ್ಕಳಲ್ಲಿ ಲೈಂಗಿಕ ಶೋಷಣೆ, ಎಚ್‌ಐವಿ  ಸೋಂಕು ರೋಗಗಳ ಅಪಾಯ ಹೆಚ್ಚು.ಬಾಲ್ಯ ವಿವಾಹವಾದ ಹೆಣ್ಣು ಮಕ್ಕಳು ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾಗುವುದು ಹೆಚ್ಚು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry