ಬುಧವಾರ, ನವೆಂಬರ್ 13, 2019
22 °C

`ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ'

Published:
Updated:

ಶಹಾಪುರ: ಇಡೀ ಮಾನವ ಕುಲವೇ ನಾಚಿಸುವಂತಹ ಅನಿಷ್ಠ ಪದ್ದತಿಯಾದ ಬಾಲ್ಯ ವಿವಾಹ ಪಿಡಿಗು ತೊಲಗಬೇಕು. ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಇದು ಸಾಮಾನ್ಯವಾಗಿ ಬಿಟ್ಟಿದೆ. ಕಾನೂನು ಸದ್ಭಳಕೆ ಮಾಡಿಕೊಂಡು ಇಂತಹ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಜನಜಾಗೃತಿ ಮದ್ದಾಗಲಿ ಎಂದು ನ್ಯಾಯಾಧೀಶ ಸತೀಶ ಎಸ್.ಟಿ. ಹೇಳಿದರು.ತಾಲ್ಲೂಕಿನ ಮುಡಬೂಳ ಗ್ರಾಮದ ಕಡಕೋಳ ಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ನಿಸರ್ಗ ಸಂಸ್ಥೆ, ಪೊಲೀಸ್ ಇಲಾಖೆ , ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಜಾಥಾ ಹಾಗೂ ಸಂಚಾರಿ ನ್ಯಾಯಾಲಯದ ಅಭಿಯಾನದ ಕೊನೆಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಜನ ಸಾಮಾನ್ಯರು ಕಡ್ಡಾಯವಾಗಿ ಕಾನೂನು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ನ್ಯಾಯಾಧೀಶರು ಕರೆ ನೀಡಿದರು.

ಸಭೆ ಸಾನಿಧ್ಯವನ್ನುವಹಿಸಿದ್ದ ಕಡಕೋಳ ಮಡಿವಾಳೇಶ್ವರಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡುತ್ತಾ, ಕಾನೂನು ಅರಿವು  ಮೂಡಿಸಲು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು. ಅದರಲ್ಲಿ ಹೆಚ್ಚು ಪ್ರಬುದ್ದತೆಗೆ ಬರುವ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಜೊತೆ ಯಾವ ರೀತಿ ನೆರವು  ಪಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವನ್ನು ತಿಳಿಸಿದರೆ  ಹೆಚ್ಚು ಅನುಕೂಲವಾಗುತ್ತದೆ.

ರೋಗ ಬಂದಾಗ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ಎಚ್ಚರಿಕೆಯ ಕ್ರಮಗಳನ್ನುವಹಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಕಾನೂನು ಸಾಕ್ಷರತಾ ಜಾಥಾ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಾ ಕಾನೂನು ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಮ್ಮವ್ವ ಭೀಮಣ್ಣ ಯಾದವ, ಗ್ರಾಮದ ಮುಖಂಡರಾದ ರಂಗಣ್ಣಗೌಡ ಚೆನ್ನಪಟ್ಟಣ, ನಿವೃತ್ತ ತಹಸೀಲ್ದಾರ ರಾಮರಡ್ಡಿ, ಬಂಡೆಪ್ಪ ದೊರೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ನೂತನ ವಕೀಲರ ಪರಿಷತ್ ಅಧ್ಯಕ್ಷ ಶಿವಶರಣಪ್ಪ ಹೊತಪೇಟ, ವಕೀಲರಾದ ಮಲ್ಲಿಕಾರ್ಜುನ ಅಂಗಡಿ, ಭಾಸ್ಕರರಾವ ಮುಡಬೂಳ, ಸತ್ಯಮ್ಮ ಹೊಸ್ಮನಿ, ಅಂಬರೇಶ ಇಟಗಿ, ಶಿವಕುಮಾರ ಗುಬ್ಬಿ, ಉಮೇಶ ಕುಲಕರ್ಣಿ, ಪತ್ರಕರ್ತ ರವಿ ಹಿರೇಮಠ, ಮಲ್ಲಯ್ಯ ಪೊಲಂಪಲ್ಲಿ ಮತ್ತಿತರರು ಹಾಜರಿದ್ದರು.ನಂತರ ಜಾಥಾದ ಅಂಗವಾಗಿ ಮದ್ರಿಕಿ ಹಾಗೂ ಭೀಮರಾಯನಗುಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿದರು.

ಪ್ರತಿಕ್ರಿಯಿಸಿ (+)