ಬಾಲ್ಯ ವಿವಾಹ ತಡೆಗೆ ಒತ್ತಾಯ

7

ಬಾಲ್ಯ ವಿವಾಹ ತಡೆಗೆ ಒತ್ತಾಯ

Published:
Updated:

ಪಟ್ನಾ (ಐಎಎನ್‌ಎಸ್): ಬಿಹಾರದಲ್ಲಿ ಅಧಿಕ ಪ್ರಮಾಣದ ಬಾಲ್ಯ ವಿವಾಹಗಳು ನಡೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ  ದಕ್ಷಿಣ ಆಫ್ರಿಕಾದ ಹೋರಾಟಗಾರ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು, ಈ ಪ್ರಾಚೀನ ಪದ್ಧತಿಯನ್ನು ನಿರ್ಮೂಲನೆ ಮಾಡುವತ್ತ ನಾಗರಿಕರು, ಸಮಾಜ ಹಾಗೂ ಸರ್ಕಾರ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.ಬಾಲ್ಯ ವಿವಾಹದ ವಿರುದ್ಧ ಅರಿವು ಮೂಡಿಸುವ ಸಲುವಾಗಿ ವಿಶ್ವ ಹಿರಿಯ ನಾಯಕರ ತಂಡವೊಂದರ ನೇತೃತ್ವ ವಹಿಸಿ ಅವರು ಮಂಗಳವಾರ ಬಿಹಾರಕ್ಕೆ ಆಗಮಿಸಿದ್ದರು. ತಂಡದಲ್ಲಿ ಐರ‌್ಲೆಂಡ್‌ನ ಮಾಜಿ ಅಧ್ಯಕ್ಷೆ ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಾಜಿ ಹೈಕಮಿಷನರ್ ಮೇರಿ ರಾಬಿನ್ಸನ್, ನಾರ್ವೆಯ ಮಾಜಿ ಪ್ರಧಾನಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮಹಾ ನಿರ್ದೇಶಕರಾದ ಗ್ರೊ ಹರ್ಲೆಮ್ ಬ್ರಂಟ್‌ಲ್ಯಾಂಡ್ ಹಾಗೂ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತೆ ಹಾಗೂ ಭಾರತೀಯ ಸ್ವ-ಉದ್ಯೋಗಿ ಮಹಿಳೆಯರ ಸಂಘದ ಸಂಸ್ಥಾಪಕಿ ಇಳಾ ಭಟ್ ಅವರಿದ್ದು, ಇಲ್ಲಿಗೆ ಸಮೀಪದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದರು.ಬಿಹಾರದಲ್ಲಿ ಶೇ 69ರಷ್ಟು ಬಾಲಕಿಯರು 18 ವರ್ಷ ತುಂಬುವ ಮುನ್ನವೇ ಮದುವೆಯಾಗುತ್ತಿದ್ದು, ವಿಶ್ವದಲ್ಲಿ ಅಂದಾಜು ಒಂದು ಕೋಟಿ ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲೇ ವಿವಾಹವಾಗುತ್ತಿದ್ದಾರೆ. ಇದೇ ಪ್ರಮಾಣ ಮುಂದುವರಿದರೆ ಮುಂದಿನ ದಶಕದಲ್ಲಿ ಜಗತ್ತಿನ ಸುಮಾರು 10 ಕೋಟಿ ಬಾಲಕಿಯರು ಬಾಲ್ಯ ವಿವಾಹವಾಗುವ ಅಪಾಯವಿದೆ ಎಂದು ಟುಟು ಸುದ್ದಿಗಾರರಿಗೆ ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry