ಬಾಲ್ಯ ವಿವಾಹ ಧಿಕ್ಕರಿಸಿ ನಿಂತ ಯುವತಿ

7

ಬಾಲ್ಯ ವಿವಾಹ ಧಿಕ್ಕರಿಸಿ ನಿಂತ ಯುವತಿ

Published:
Updated:

ಹುಬ್ಬಳ್ಳಿ: `ಆಕೀ ಸಾಲಿ ಕಲಿಯೋದು ಬಿಟ್ಟು ಗಂಡನ ಕೂಡ ಬಾಳೆ ಮಾಡ್ತೀನಿ ಅಂದ್ರ ವಾಪಸ್ ಮನೀಗ್ ಬರ್ಲಿ, ಇಲ್ಲಕ್ರ ಆಕಿ ಎಲ್ಲಿ ಇರ್ತಾಳೋ ಅಲ್ಲೇ ಸುಖದಿಂದ ಇರ್ಲಿ, ಆಕೀ ಮಾರಿ ನೋಡಾಕ ನಾವು ಒಲ್ವಿ'.ಬಾಲ್ಯ ವಿವಾಹ ಧಿಕ್ಕರಿಸಿ ಜಿಲ್ಲಾಡಳಿತದ ಆಶ್ರಯ ಪಡೆದಿರುವ ಧಾರವಾಡ ತಾಲ್ಲೂಕು ಲೋಕೂರಿನ ದಾಕ್ಷಾಯಿಣಿಯ (ಹೆಸರು ಬದಲಾಯಿಸಲಾಗಿದೆ) ತಾಯಿ ದ್ಯಾಮವ್ವ ಅವರು ಗ್ರಾಮಕ್ಕೆ ತೆರಳಿದ್ದ `ಪ್ರಜಾವಾಣಿ'ಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಸದ್ಯ ಧಾರವಾಡ ಎಸ್‌ಪಿ ಡಾ. ವೈ.ಎಸ್. ರವಿಕುಮಾರ್ ಸೂಚನೆ ಮೇರೆಗೆ ಡಿ. 11ರಿಂದ ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಾಲ ಮಂದಿರದಲ್ಲಿ ದಾಕ್ಷಾಯಿಣಿಗೆ ಆಶ್ರಯ ನೀಡಲಾಗಿದೆ.ಲೋಕೂರಿನ ತಿಪ್ಪಣ್ಣ ಸವದತ್ತಿ ಹಾಗೂ ದ್ಯಾಮವ್ವ ದಂಪತಿಯ ಮೂವರು ಮಕ್ಕಳಲ್ಲಿ ದಾಕ್ಷಾಯಿಣಿ ಮೊದಲನೆಯವಳು. ಧಾರವಾಡದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಐದನೇ ವಯಸ್ಸಿನಲ್ಲಿ ಗ್ರಾಮದಲ್ಲಿಯೇ ನೆಲೆಸಿರುವ ಸೋದರಮಾವ ನಾಗಪ್ಪ ಹಾದಿಮನಿ ಅವರೊಡನೆ ಮದುವೆ ಮಾಡಿಕೊಡಲಾಗಿದೆ.ಗೃಹ ಪ್ರವೇಶದ ನೆಪ: ದಾಕ್ಷಾಯಿಣಿ ಪೋಷಕರಿಗೆ ನಾಗಪ್ಪ ಹಾದಿಮನಿ ಇತ್ತೀಚೆಗೆ ಲೋಕೋರಿನಲ್ಲಿ ಹೊಸ ಮನೆ ಕಟ್ಟಿಸಿಕೊಟ್ಟಿದ್ದಾರೆ. ನವೆಂಬರ್‌ನಲ್ಲಿ ಅದರ ಗೃಹಪ್ರವೇಶ ಏರ್ಪಡಿಸಿ ಅದೇ ದಿನ ಮಗಳನ್ನು ಗಂಡನ ಮನೆಗೆ ಕಳುಹಿಸಲು ಉಡಿ ತುಂಬುವ ಕಾರ್ಯ ಇಟ್ಟುಕೊಂಡಿದ್ದಾರೆ. ಇದಕ್ಕೆ ದಾಕ್ಷಾಯಿಣಿ ವಿರೋಧ ವ್ಯಕ್ತಪಡಿಸಿದ್ದಾಳೆ. ಪೋಷಕರು ಬಲವಂತಪಡಿಸಿದಾಗ ಕಾಲೇಜಿನ ಪ್ರಾಚಾರ್ಯರ ಗಮನಕ್ಕೆ ತಂದಿದ್ದಾಳೆ. ಆಕೆಯ ತಂದೆಯನ್ನು ಕರೆಸಿ ಮಾತನಾಡಿದ್ದಾರೆ. ಇದರಿಂದ ಕೆರಳಿದ ಮನೆಯವರು ಕಾಲೇಜಿಗೆ ಹೋಗದಂತೆ ಮಗಳಿಗೆ ತಾಕೀತು ಮಾಡಿದ್ದಾರೆ.ಉಡಿ ತುಂಬುವ ಕಾರ್ಯದ ಮುನ್ನಾ ದಿನ ಲೋಕೂರಿನಿಂದ ತಪ್ಪಿಸಿಕೊಂಡು ಬಂದ ದಾಕ್ಷಾಯಿಣಿ ಗರಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೋಷಕರನ್ನು ಠಾಣೆಗೆ ಕರೆದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ. ಮತ್ತೆ ಪೋಷಕರು ಬಲವಂತಪಡಿಸಿದಾಗ ರಕ್ಷಣೆಗಾಗಿ ಧಾರವಾಡ ಎಸ್‌ಪಿಗೆ ಮೊರೆ ಹೋಗಿದ್ದಾಳೆ.`ಬಾಲ್ಯದಿಂದಲೂ ಕೊರಳಲ್ಲಿದ್ದ ತಾಳಿ ತೋರಿಸಿ ಮಾವ ನಾಗರಾಜನೇ ನಿನ್ನ ಗಂಡ ಎನ್ನುತ್ತಿದ್ದರು. ನನಗೆ ಮದುವೆಯ ನೆನಪೇ ಇಲ್ಲ. ಪೊಲೀಸರ ಎದುರು ತಪ್ಪಾಗಿದೆ ಎಂದು ಒಪ್ಪಿಕೊಂಡವರು ಊರಿಗೆ ಬರುತ್ತಿದ್ದಂತೆಯೇ ಮಾವನೊಟ್ಟಿಗೆ ಕಳುಹಿಸಲು ಸಿದ್ಧತೆ ನಡೆಸಿದರು. ಕಾಲೇಜಿಗೆ ಮಾವನ ಮನೆಯವರ ಅನುಮತಿ ಪಡೆಯುವಂತೆ ತಾಕೀತು ಮಾಡಿದರು. ಕೊನೆಗೆ ಧಾರವಾಡದ ಎಸ್‌ಪಿ ಕಚೇರಿಗೆ ತೆರಳಿ ರಕ್ಷಣೆ ಕೋರಿದ್ದಾಗಿ' ದಾಕ್ಷಾಯಿಣಿ ಪತ್ರಿಕೆಗೆ ತಿಳಿಸಿದರು.`ಗ್ರಾಮದ ಮಠದಲ್ಲಿ ಬಸವ ಜಯಂತಿ ಜಾತ್ರೆಯಂದು ಸಾಮೂಹಿಕ ಮದುವೆಯಲ್ಲಿ ದಾಕ್ಷಾಯಿಣಿಯನ್ನು ಮಗ ನಾಗಣ್ಣನಿಗೆ ಧಾರೆ ಎರೆಯಲಾಗಿತ್ತು. ಅಕೆ ವಾರಿಗೆಯ ಹುಡುಗಿಯರು ಮಕ್ಕಳನ್ನು ಹೆತ್ತು ಸಂಸಾರ ಮಾಡಿಕೊಂಡಿದ್ದಾರೆ. ಧಾರವಾಡಕ್ಕೆ ಕಲಿಯಾಕೆ ಹೋಗಿ ಮನೆ ಮರ್ಯಾದೆ ತೆಗೆದಳು' ಎಂದು ಅಜ್ಜಿ ರಾಯವ್ವ ಮೊಮ್ಮಗಳ  ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಪೋಷಕರ ಮನವೊಲಿಕೆ ಯತ್ನ

`ಬಾಲ್ಯದಲ್ಲಿ ಆಗಿರುವ ವಿವಾಹ ಊರ್ಜಿತವಲ್ಲ. ಆಕೆಯ ಪೋಷಕರನ್ನು ಕರೆದು ಮನವೊಲಿಸಲಾಗುವುದು. ಸದ್ಯ ಆಕೆಯ ಪರೀಕ್ಷೆ ಹಿನ್ನೆಲೆಯಲ್ಲಿ ಓದಿಗೆ ಅಡ್ಡಿಯಾಗದಂತೆ ಹುಬ್ಬಳ್ಳಿಯಲ್ಲಿ ಆಶ್ರಯ ನೀಡಲಾಗಿದೆ.                                                                

 -ಡಾ. ವೈ.ಎಸ್. ರವಿಕುಮಾರ್

 (ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry