ಬಾಲ ಕಾರ್ಮಿಕ ಪದ್ಧತಿ ಜೀವಂತ

7

ಬಾಲ ಕಾರ್ಮಿಕ ಪದ್ಧತಿ ಜೀವಂತ

Published:
Updated:

ಕೊಪ್ಪಳ: ತಾಲ್ಲೂಕಿನ ಚಾಮಲಾಪುರ ಗ್ರಾಮ ಬಳಿ ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಯುವತಿ ಸತ್ತಿದ್ದರೆ, 20ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಐವರು ಇನ್ನೂ 15 ವರ್ಷದ ದಾಟದವರು. ಇವರೆಲ್ಲ ಗ್ರಾಮದ ಬಳಿ ಇರುವ ಕೋಳಿ ಫಾರ್ಮ್‌ನಲ್ಲಿ ದುಡಿದು ವಾಪಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಅಂದರೆ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ ಇದೆ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಗಾಯಗೊಂಡಿರುವವರೆಲ್ಲ ತಾಲ್ಲೂಕಿನ ಜಿನ್ನಾಪುರ ಗ್ರಾಮದವರು. ಈ ಪೈಕಿ ಶಿವಕುಮಾರ ಬಸಪ್ಪ (13), ಶಿವಕುಮಾರ ದುರುಗಪ್ಪ (13), ಭೀಮೇಶ ನಾಗಪ್ಪ (13) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಪವಿತ್ರ ಬಸಂತಪ್ಪ (12) 6ನೇ ತರಗತಿ ಹಾಗೂ ಸಾವಿತ್ರಿ ಗವಿಸಿದ್ದಪ್ಪ (15) 9ನೇ ತರಗತಿ ಓದುತ್ತಿದ್ದಾರೆ.ಸಂಜೆ ವರೆಗೂ ಶಾಲೆಯಲ್ಲಿ ಕಲಿಯುವ ಈ ಮಕ್ಕಳು ರಾತ್ರಿ ಸಮಯದಲ್ಲಿ ಚಾಮಲಾಪುರ ಗ್ರಾಮದ ಬಳಿಯ ಸುರೇಶ ಪೌಲ್ಟ್ರಿ ಫಾರ್ಮ್‌ನಲ್ಲಿ ದುಡಿಯಲು ಹೋಗುತ್ತಾರೆ ಎಂಬುದು ಸಹ ಈ ಘಟನೆಯಿಂದ ಬಹಿರಂಗಗೊಂಡಿದೆ. ರಾತ್ರಿ 8ರಿಂದ 12 ಗಂಟೆ ವರೆಗೆ ದುಡಿದರೆ 40 ರೂಪಾಯಿ ಕೂಲಿ ಸಿಗುತ್ತದೆ. ಹೀಗಾಗಿ ಎಷ್ಟೇ ಕಷ್ಟವಾದರೂ ಈ ಮಕ್ಕಳು ಕೋಳಿ ಫಾರ್ಮ್‌ನಲ್ಲಿ ದುಡಿಯಲು ಹೋಗುತ್ತಾರೆ ಎಂದು ಹೇಳಲಾಗಿದೆ.ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುರೇಶ ಪೌಲ್ಟ್ರಿ ಫಾರ್ಮ್‌ನ ಮಾಲಿಕರಾದ ವೆಂಕಟ ರೆಡ್ಡಿ ಹಾಗೂ ಶ್ರೀನಾಥ್ ರೆಡ್ಡಿ ಎಂಬುವವರ ವಿರುದ್ಧ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣ ಮತ್ತು ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಯೂನಿಸೆಫ್‌ನ ಮಕ್ಕಳ ರಕ್ಷಣಾ ತರಬೇತಿ ಸಂಯೋಜಕ ಹರೀಶ್ ಜೋಗಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಕೋಳಿ ಫಾರ್ಮ್‌ನಲ್ಲಿ ದುಡಿಯಲು ಕಾರ್ಮಿಕರನ್ನು ಒದಗಿಸುವ ಏಜೆಂಟರು ಹಾಗೂ ಫಾರ್ಮ್‌ನ ಮಾಲಿಕರ ಮಧ್ಯೆ ಒಪ್ಪಂದವಾಗಿರುತ್ತದೆ. ಕಾರ್ಮಿಕರಿಗೆ ನೀಡಬೇಕಾದ ಕೂಲಿ ಹಣ ಈ ಏಜೆಂಟರಿಗೆ ಸಂದಾಯವಾಗುತ್ತದೆ. ಏಜೆಂಟ್ ಎಷ್ಟು ಹಣ ನೀಡುತ್ತಾನೋ ಅಷ್ಟನ್ನು ಮಾತ್ರ ಕಾರ್ಮಿಕರು ಸ್ವೀಕರಿಸಬೇಕು. ಅಲ್ಲದೇ, ಫಾರ್ಮ್‌ನ ಮಾಲಿಕ ಹಾಗೂ ಈ ಕಾರ್ಮಿಕರ ನಡುವೆ ಯಾವುದೇ ಸಂಪರ್ಕ ಇರುವುದಿಲ್ಲ. ಹೀಗಾಗಿ ಬಹುತೇಕ ಏಜೆಂಟರು ಬಾಲ ಕಾರ್ಮಿಕರನ್ನೇ ಕೆಲಸಕ್ಕೆ ಕಳುಹಿಸುತ್ತಾರೆ ಎಂಬುದನ್ನು ಕಾರ್ಮಿಕ ಇಲಾಖೆ, ಯೂನಿಸೆಫ್‌ನ ಅಧಿಕಾರಿಗಳು ಖಾಸಗಿಯಾಗಿ ವಿವರಿಸುತ್ತಾರೆ.ಆದರೆ, ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಇಷ್ಟಾದರೂ ಜಿಲ್ಲೆಯಲ್ಲಿ ಮಕ್ಕಳು ದುಡಿಯುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಈ ಲೋಪಕ್ಕೆ ಯಾರು ಹೊಣೆ ಎಂದು ಕಾರ್ಮಿಕ ಮುಖಂಡ ಬಸವರಾಜ ಶೀಲವಂತರ ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry