ಬುಧವಾರ, ಮೇ 12, 2021
20 °C
ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಸಂದೇಶ ಅಭಿಮತ

`ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ'

ಹಾವೇರಿ: ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಇಚ್ಛಾಶಕ್ತಿಯಿಂದ ಅವಶ್ಯಕತೆಯಿದ್ದು, ಪ್ರತಿಯೊಬ್ಬರು ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಸಂದೇಶ ಹೇಳಿದರು.ಬುಧವಾರ ಇಲ್ಲಿನ ಜಿಲ್ಲಾ ಗುರುಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ 1.25 ಕೋಟಿಗೂ ಹೆಚ್ಚು ಬಾಲ ಕಾರ್ಮಿಕರಿದ್ದಾರೆ. ಇಂತಹ ಸಂದರ್ಭದಲ್ಲಿ ಕೇವಲ ದಿನಾಚರಣೆ ಆಚರಿಸಿ ಜಾಗೃತಿ ಮೂಡಿಸಿದರಷ್ಟೇ ಈ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದರ ಬದಲು ಮಕ್ಕಳು ದೇಶದ ಆಸ್ತಿ ಅವರ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡಬೇಕೆಂಬ ಮನಸ್ಥಿತಿ ಎಲ್ಲರಲ್ಲಿ ಬರಬೇಕಿದೆ ಎಂದರು.ಭಾರತದ ಸಂವಿಧಾನ ಸಹ 6 ರಿಂದ 14ನೇ ವಯಸ್ಸಿನವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ನಿಬಂಧನೆ ವಿಧಿಸಿದೆ. ಅದರಂತೆ ಸರ್ಕಾರ ಶಾಲೆಗಳಲ್ಲಿ ಬಿಸಿಯೂಟ ಮತ್ತಿತರ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿದೆ. ಬಾಲಕಾರ್ಮಿಕ ಪದ್ಧತಿ ತಡೆಗೆ ಸರ್ಕಾರ ಹಲವಿಧ ಸೌಲಭ್ಯ ಒದಗಿಸುವುದರ ಜತೆಗೆ ನೂರಾರು ಕಾನೂನುಗಳನ್ನು ಮಾಡಬಹುದು. ಆದರೆ, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಹೊಣೆಯಿಂದ ಪಾಲಕರು ತಪ್ಪಿಸಿಕೊಂಡರೆ ಸರ್ಕಾರದ ಆಶಯ ಈಡೇರಲಾರದು  ಎಂದು ಅಭಿಪ್ರಾಯಪಟ್ಟರು.

 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧ್ಯಕ್ಷ ಪಾಂಡುರಂಗ ನಾಯಕ ಮಾತನಾಡಿ, `ಶಿಕ್ಷಣ ನಮ್ಮ  ಸಮಾಜದ ಎಲ್ಲ ಮೌಢ್ಯ ಹಾಗೂ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರ ಪಾತ್ರ ಹಿರಿದಾಗಿದೆ. ಬಾಲಕಾರ್ಮಿಕ ಪದ್ಧತಿಯ ಅನಿಷ್ಠಗಳ ಬಗ್ಗೆ ಜನಸಾಮಾನ್ಯರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.ಡಿವೈಎಸ್‌ಪಿ ಸಿ.ಸಿ.ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ.ಹುದ್ದಾರ ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ.ಹೊರಟ್ಟಿ ಮಾತನಾಡಿ, ಬಾಲ ಕಾರ್ಮಿಕರ ಪದ್ಧತಿ ತಡೆಯಲು ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಬಾಲ ಕಾರ್ಮಿಕರ ಸಮೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರನ್ನು ಗುರುತಿಸಿ, ಅವರ ಪುನರ್ವಸತಿಗೆ ಸರ್ಕಾರ ಯೋಜನೆ ರೂಪಿಸಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಅಡಿ ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಬಾಲಕಾರ್ಮಿಕರನ್ನು ಗುರುತಿಸಿ, ಅವರನ್ನು ಕಲಿಕಾ ಕೇಂದ್ರಗಳಿಗೆ ಸೇರಿಸಿ, ಶಿಕ್ಷಣ  ಊಟೋಪಚಾರ ಹಾಗೂ ಸ್ಟೈಫಂಡ್ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 11 ವಿಶೇಷ ಬಾಲಕಾರ್ಮಿಕ ಶಾಲೆಗಳನ್ನು ತೆರೆಯಲಾಗಿದೆ ಎಂದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ  ಎನ್.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್.ಹಿರೇತನದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ವಿಜಯಕುಮಾರ, ಹಾವೇರಿಯ ಇಡಾರಿ (ಐಡಿಎಆರ್‌ವೈ) ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ಪರಿಮಳಾ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ವಾರ್ತಾಧಿಖಾರಿ ಸಿ.ಪಿ.ಮಾಯಾಚಾರಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಕುಂದಾಪುರ ಹಾಜರಿದ್ದರು.ಜಿಲ್ಲಾ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಕ್ಷೇತ್ರಾಧಿಕಾರಿ ವಿನಯ ಘೋರ್ಪಡೆ ಸ್ವಾಗತಿಸಿದರು. ಸಂಜೀವಿನಿ ವಿಶೇಷ ಬಾಲ ಕಾರ್ಮಿಕ ಶಾಲೆಯ ರುದ್ರೇಶ ಚಿಣ್ಣನವರ ವಂದಿಸಿದರು.ಬೃಹತ್ ಜಾಥಾ: ಇದಕ್ಕೂ ಮುನ್ನ ನಗರದ ಹುತಾತ್ಮ ಮೈಲಾರ ಮಹಾದೇವ ಚೌಕದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಶ್ರೀಪಾದ ಅವರು ಡೋಲು ಬಾರಿಸುವ ಮೂಲಕ ಮಕ್ಕಳ ಜಾಥಾಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್. ಪಾಟೀಲ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ.ಹೊರಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಇಚ್ಚಂಗಿ, ಆಶಾಕಿರಣ ಸಂಸ್ಥೆ ಅಧ್ಯಕ್ಷ ಮುತ್ತುರಾಜ ಮಾದರ, ವಿನಯ ಘೋರ್ಪಡೆ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.ಹಾನಗಲ್ ವರದಿ

ಹಾನಗಲ್: ಇಲ್ಲಿನ ನ್ಯಾಯಾಲಯದ ವಕೀಲರ ಸಭಾ ಭವನದಲ್ಲಿ ನಡೆದ `ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ' ಕಾರ್ಯಕ್ರಮವನ್ನು  ಹಾನಗಲ್ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ) ಎಂ.ರಾಮಚಂದ್ರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾನಗಲ್ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ವಡೆಯರ ಮಾತನಾಡಿದರು.ನ್ಯಾಯಾಧೀಶ ಮದ್ವೇಶ ದಬೇರ, ಸಹಾಯಕ ಸರ್ಕಾರಿ ಅಭಿಯೋಜಕ ಸೂರ್ಯನಾರಾಯಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬಿ.ಆರ್. ಶೆಟ್ಟರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ವಕೀಲರ ಸಂಘದ ಕಾರ್ಯದರ್ಶಿ ರಂಗನಾಥ ಅಕ್ಕಿವಳ್ಳಿ, ಸದಸ್ಯರಾದ ಜಿ.ವಿ.ಕಂಬಾಳಿಮಠ, ಬಿ.ಬಿ.ಬ್ಯಾತನಾಳ, ಬಿ.ಎಸ್. ಅಕ್ಕಿವಳ್ಳಿ, ಎಸ್. ಎಲ್. ಬಣಕಾರ, ಟಿ.ಬಿ.ಸವಣೂರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರವಿಬಾಬು ಪೂಜಾರ ನಿರೂಪಿಸಿದರು. ಕಾರ್ಯಕ್ರಮದ ನಂತರ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಜಾಥಾಕ್ಕೆ ಕಿರಿಯ ವಿಭಾಗದ ನ್ಯಾಯಾಧೀಶ ಮದ್ವೇಶ ದಬೇರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಿದರು. ಪಟ್ಟಣದ ಶಾಲೆಗಳ ವಿದ್ಯಾರ್ಥಿಗಳಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾದಲ್ಲಿ ವಿದ್ಯಾರ್ಥಿಗಳು ಬಿತ್ತಿಪತ್ರ ಪ್ರದರ್ಶಿಸಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಘೋಷಣೆ ಕೂಗಿದರು.ಶಿಗ್ಗಾವಿ ವರದಿ

ಶಿಗ್ಗಾವಿ:
ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಗ್ಗಾವಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಆಶ್ರಯದಲ್ಲಿ ಬುಧವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ನ್ಯಾಯಾಧೀಶೆ ಡಿ.ಮಮತಾ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಕೆ.ಅಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಹಾಯಕ ಸರ್ಕಾರಿ ಅಭಿಯೋಜಕಿ ಎಸ್.ಜಿ.ಕೂಡಲಗಿಮಠ, ಜಿಲ್ಲಾ ನೀಡ್ಸ್ ಸೇವಾ ಸಂಸ್ಥೆ ಸಿಇಒ. ಎಫ್.ಎಚ್.ಅಕ್ಕಿ ಮಾತನಾಡಿದರು. ಶಿಕ್ಷಣ ಸಂಯೋಜಕ ಆರ್.ಎಸ್.ದುಂದೂರ, ಎಂ.ಎಚ್.ಹೊಂಗಲ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.