ಬಾಲ ನ್ಯಾಯಮಂಡಳಿ ತೀರ್ಪು: ಅತ್ಯಾಚಾರ ಆರೋಪಿ `ವಯಸ್ಕನಲ್ಲ'

7

ಬಾಲ ನ್ಯಾಯಮಂಡಳಿ ತೀರ್ಪು: ಅತ್ಯಾಚಾರ ಆರೋಪಿ `ವಯಸ್ಕನಲ್ಲ'

Published:
Updated:
ಬಾಲ ನ್ಯಾಯಮಂಡಳಿ ತೀರ್ಪು: ಅತ್ಯಾಚಾರ ಆರೋಪಿ `ವಯಸ್ಕನಲ್ಲ'

ನವದೆಹಲಿ (ಪಿಟಿಐ): `ದೆಹಲಿ ಬಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರನೆಯ ಆರೋಪಿ  ವಯಸ್ಕ ನಲ್ಲ' ಎಂದು ಇಲ್ಲಿನ ಬಾಲ ನ್ಯಾಯಮಂಡಳಿ (ಜೆಜೆಬಿ) ಸೋಮವಾರ ಘೋಷಿಸಿದೆ.ಘಟನೆ ನಡೆದ ದಿನ ಆರೋಪಿಯ ವಯಸ್ಸು `17 ವರ್ಷ, 6 ತಿಂಗಳು, 24 ದಿನಗಳು' ಎಂದು ಆತನ ಜನ್ಮ ದಿನಾಂಕ ಹಾಗೂ ಶಾಲೆಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಜೆಜೆಬಿ ತೀರ್ಮಾನಿಸಿದೆ.ಆರೋಪಿಯ ವಯಸ್ಸನ್ನು ಖಚಿತವಾಗಿ ನಿರ್ಧರಿಸಲು ಆತನ ಮೂಳೆಯ ಪರೀಕ್ಷೆ ನಡೆಸಬೇಕು ಎಂದು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಅದು  ತಿರಸ್ಕರಿಸಿದೆ.ಇಡೀ ಪ್ರಕರಣದ ಆರೋಪಿಗಳ ಪೈಕಿ ಈ ಬಾಲಕನೇ ಅತ್ಯಂತ ಅಮಾನುಷವಾಗಿ ವರ್ತಿಸಿದ್ದ ಎಂದು ದೆಹಲಿ ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದರು.ಮೇಲ್ಮನವಿಗೆ ನಿರ್ಧಾರ: ದೇಶವೇ ಬೆಚ್ಚಿಬೀಳುವಂತೆ ಮಾಡಿದ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ  `ವಯಸ್ಕನಲ್ಲ' ಎಂದು ಜೆಜೆಬಿ ನೀಡಿರುವ ಆದೇಶದ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸರ್ಕಾರಿ ವಕೀಲರು ಹೇಳಿದ್ದಾರೆ. ಆರೋಪಿ ಉತ್ತರ ಪ್ರದೇಶದ ಬಡಾವುನ್‌ನ ಭವಾನಿಪುರದ ಶಾಲೆಯಲ್ಲಿ 3ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದ.ಶಾಲೆಯ ಆಗಿನ ಮುಖ್ಯಶಿಕ್ಷಕರು ಜೆಜೆಬಿ ಮುಂದೆ ಆತನ ವಯಸ್ಸಿನ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. `ಈಗ ಆ ಬಾಲಕನನ್ನು ನಾನು ಗುರುತಿಸಲಾರೆ. ಆದರೆ 2002ರಲ್ಲಿ  ಪ್ರವೇಶ ಕೊಡಿಸಲು ಶಾಲೆಗೆ ಬಂದಿದ್ದ ಆತನ ತಂದೆ ಆತನ ಜನ್ಮ ದಿನಾಂಕವನ್ನು 1994 ಜೂನ್ 4 ಎಂದು ದಾಖಲಿಸಿದ್ದರು' ಎಂದು ಅವರು ತಿಳಿಸಿದ್ದರು. ಇದನ್ನು ಜೆಜೆಪಿ ಅಂಗೀಕರಿಸಿತು.ಮನೆಗೆ ಹಿರಿಯ ಮಗ: ಆರೋಪಿ ಬಾಲಕ, ಮನೆಗೆ ಹಿರಿಯ ಮಗ. ಅವನಿಗೆ ಇಬ್ಬರು ಸೋದರರು, ಇಬ್ಬರು ಸೋದರಿಯರಿದ್ದಾರೆ. ತಂದೆ ಮಾನಸಿಕ ಅಸ್ವಸ್ಥ. ತಾಯಿ ಕೂಲಿ ಕೆಲಸ ಮಾಡಿಕುಟುಂಬವನ್ನು ಸಾಕುತ್ತಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.5-6 ವರ್ಷದ ಹಿಂದೆ ಮನೆ ಬಿಟ್ಟು ದೆಹಲಿಗೆ ಓಡಿ ಹೋಗಿದ್ದ ಈತ, ಘಟನೆಯ ಮತ್ತೊಬ್ಬ ಆರೋಪಿ  ರಾಮ್ ಸಿಂಗ್‌ನ ಸಂಪರ್ಕಕ್ಕೆ ಬರುವವರೆಗೂ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ.ಘಟನೆ ನಡೆದ ಡಿಸೆಂಬರ್ 16ರಂದು ಆರೋಪಿಗಳೆಲ್ಲ ಕುಡಿದು ಮೋಜು ಮಾಡಿ ಲೈಂಗಿಕ ಬಯಕೆ ಈಡೇರಿಸಿಕೊಳ್ಳುವ ಸಲುವಾಗಿ ರಾಮ್ ಸಿಂಗ್ ಚಾಲಕನಾಗಿದ್ದ ಬಸ್‌ನಲ್ಲಿ ಹೊರಟಿದ್ದರು.ದಾರಿಯಲ್ಲಿ ಅಮಾಯಕನೊಬ್ಬನನ್ನು ಹತ್ತಿಸಿಕೊಂಡು ಸುಲಿಗೆ ಮಾಡಿ ಅರ್ಧ ದಾರಿಯಲ್ಲೇ ಅವನನ್ನು ಬಸ್‌ನಿಂದ ಕೆಳಗೆ ನೂಕಿದ್ದರು. ಅಲ್ಲಿಂದ ಮುಂದೆ ನತದೃಷ್ಟ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಹತ್ತಿಸಿಕೊಂಡು ಚಲಿಸುವ ಬಸ್‌ನಲ್ಲೇ ಹೇಯ ಅತ್ಯಾಚಾರ ನಡೆಸಿ ಕೆಳಗೆ ತಳ್ಳಿ ಪರಾರಿಯಾಗಿದ್ದರು.18ರ ನಂತರವೂ ಬಚಾವ್

ಆರೋಪಿ ಬಾಲಕನಿಗೆ ಬರುವ ಜೂನ್ 4 ರಂದು 18 ವರ್ಷ ತುಂಬಲಿದೆ. ಈಗ ಆತನನ್ನು `ಸರ್ಕಾರಿ ಸುಧಾರಣಾ ಕೇಂದ್ರದಲ್ಲಿ' ಇಡಲಾಗಿದೆ.   ಆದರೆ, ಆತ ವಯಸ್ಕನಲ್ಲ (ಕಾನೂನಿನ ಪ್ರಕಾರ 18 ವರ್ಷ ತುಂಬುವವರೆಗೆ ವಯಸ್ಕರಲ್ಲ) ಎಂದು ಜೆಜೆಬಿ ತೀರ್ಮಾನಕ್ಕೆ ಬಂದಿರುವುದರಿಂದ ಜೂನ್ 4ರಂದು ಆತನನ್ನು `ಸುಧಾರಣಾ ಕೇಂದ್ರದಿಂದ' ಬಿಡುಗಡೆ ಮಾಡಬೇಕಾಗುತ್ತದೆ.ಬಾಲ ನ್ಯಾಯ ಕಾಯ್ದೆಯ 15(ಜಿ) (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಲಂ ಪ್ರಕಾರ, 16-18 ವರ್ಷದೊಳಗಿನ ಮಕ್ಕಳು ಯಾವುದೇ ಬಗೆಯ ಅಪರಾಧಗಳಲ್ಲಿ ಭಾಗಿಯಾದರೂ ಅವರನ್ನು ಜೈಲಿಗೆ ಹಾಕುವಂತಿಲ್ಲ. ಬದಲಾಗಿ ಗರಿಷ್ಠ ಮೂರು ವರ್ಷ ಅವರನ್ನು ಸುಧಾರಣಾ ಕೇಂದ್ರಗಳಿಗೆ ಕಳುಹಿಸಬಹುದು. ಇದೇ ಕಾಯ್ದೆಯ 16ನೇ ಕಲಂ ಪ್ರಕಾರ, ಇಂಥ ಮಕ್ಕಳಿಗೆ 18 ತುಂಬಿದ ತಕ್ಷಣ ಅಲ್ಲಿಂದ ಬಿಡುಗಡೆ ಮಾಡಲೇಬೇಕಾಗುತ್ತದೆ. ನಂತರ ಅವರನ್ನು ಮತ್ತೆ ಇದೇ ಅಪರಾಧ ಪ್ರಕರಣದಲ್ಲಿ ಜೈಲಿಗೆ ಕಳಿಸುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry