ಬಾಲ ಪ್ರತಿಭೆ: ಪೋಷಕರ ಹೊಣೆಗಾರಿಕೆ

7

ಬಾಲ ಪ್ರತಿಭೆ: ಪೋಷಕರ ಹೊಣೆಗಾರಿಕೆ

Published:
Updated:
ಬಾಲ ಪ್ರತಿಭೆ: ಪೋಷಕರ ಹೊಣೆಗಾರಿಕೆ

ಈ ಕೆಳಗೆ ಹೆಸರಿಸಿರುವವರ ಬಗ್ಗೆ ನಿಮಗೆ ಗೊತ್ತೇ...? ನಾವು ಎಲ್ಲೋ ಅವರ ಬಗ್ಗೆ ಕೇಳಿರುತ್ತೇವೆ ಅಥವಾ ಓದಿರುತ್ತೇವೆ ಅಲ್ಲವೇ?ಆಕೃತ್ ಜಸ್ವಾಲ್: 

ವಿಶ್ವದ ಅತಿಚಾಣಾಕ್ಷ ಬಾಲಕ ಎಂದು ಹೆಸರು ಪಡೆದ ಭಾರತೀಯ ಬಾಲಕ. ಅವನ ಬುದ್ಧಿಮಟ್ಟ (ಐ.ಕ್ಯು.) 146 ಇದ್ದು, 2000 ಇಸವಿಯಲ್ಲಿ, ತನ್ನ 7ನೇ ವಯಸ್ಸಿನಲ್ಲೇ ಪ್ರಥಮ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಮಾಡಿದನಂತೆ! ಈಗ ವಿಜ್ಞಾನದಲ್ಲಿ ಪದವಿಗಾಗಿ, ಚಂಡಿಗಢದಲ್ಲಿ ಭಾರತದ ವಿಶ್ವವಿದ್ಯಾಲಯಗಳಲ್ಲೇ ಅತ್ಯಂತ ಕಿರಿಯ ವಿದ್ಯಾರ್ಥಿಯಾಗಿ, ಅಧ್ಯಯನ ನಡೆಸುತ್ತಿದ್ದಾನೆ.ತಥಾಗತ ಅವತಾರ್ ತುಳಸಿ:

 ಹತ್ತನೇ ವಯಸ್ಸಿಗೆ ಪದವಿ. 12ಕ್ಕೆ ಸ್ನಾತಕೋತ್ತರ ಪದವಿ, 6 ವರುಷಗಳ ನಂತರ ಬೆಂಗಳೂರಿನ ಐ.ಐ.ಎ.ಸಿ.ಯಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ. ಈಗ 21ನೇ ವಯಸ್ಸಿನಲ್ಲಿ ವಿದೇಶದ ಆಹ್ವಾನವನ್ನು ತಿರಸ್ಕರಿಸಿ ಮುಂಬೈ ಐ.ಐ.ಟಿ.ಯಲ್ಲಿ ಪ್ರೊಫೆಸರ್. ಇದು ತಥಾಗತ ಅವತಾರ್ ತುಳಸಿಯ ನಂಬಲಾರದ ಸತ್ಯಕಥೆ.-ಹೀಗೆ ನಾವು ಆಗಾಗ ಚಿಕ್ಕ ವಯಸ್ಸಿನಲ್ಲೆ ಅಪೂರ್ವ, ಅಪಾರ ಪ್ರತಿಭೆಯನ್ನು ಹೊಂದಿರುವ ಮಕ್ಕಳ ಬಗ್ಗೆ ಮಾತನಾಡುತ್ತಿರುತ್ತೇವೆ. ಸಂಗೀತದಲ್ಲಿ, ಕ್ರೀಡೆಯಲ್ಲಿ, ಓದಿನಲ್ಲಿ-ಗಣಿತದಲ್ಲಿ ಇಂಥವರು ಪ್ರತಿಭೆ ಪ್ರದರ್ಶಿಸಿ, ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಾರೆ. ಎಲ್ಲಾ ಮಕ್ಕಳು ಸೂಕ್ತ ತರಬೇತಿಯಿಂದ ಪ್ರತಿಭಾವಂತರಾಗುತ್ತಾರೆ ಎಂದು ಕೆಲವರು ವಾದಿಸುತ್ತಾರೆ. ಆದರೆ, ಕೆಲವು ಮಕ್ಕಳು ಮಾತ್ರ ಎಲ್ಲರ ನಿರೀಕ್ಷೆಗೂ ಮೀರಿ ನಿಲ್ಲುತ್ತಾರೆ. ಇದು ಹೇಗೆ ಸಾಧ್ಯ? ಇಂತಹ ಬಾಲ ಪ್ರತಿಭೆ - ‘ಚೈಲ್ಡ್ ಪ್ರಾಡಿಜಿ’ಗಳ ಮೆದುಳು ವಿಶೇಷವೇ? ಕೆಲವು ಪ್ರತಿಭಾನ್ವಿತ ಮಕ್ಕಳ ಮೆದುಳನ್ನು ಸ್ಕ್ಯಾನ್  ಮಾಡಿದಾಗ, ಕೇವಲ ಒಂದು ವಿಷಯದಲ್ಲಿ ದೀರ್ಘಕಾಲಿಕ ಸ್ಮರಣಶಕ್ತಿ ಇದ್ದು, ಬೇರೆಯದರಲ್ಲಿ ಅತ್ಯಂತ ಸಾಧಾರಣವಾಗಿರುತ್ತವೆ ಎಂದು ಗೊತ್ತಾಗಿದೆ. ಆಸ್ಟ್ರೇಲಿಯದ ಮನಶಾಸ್ತ್ರಜ್ಞ, ಮೆಲ್ಬೋರ್ನ್ ವಿಶ್ವವಿದ್ಯಾಲಯದ ಮೈಕೆಲ್ ಒ ಬಾಯಲ್, ಗಣಿತ ಹಾಗೂ ತರ್ಕದಲ್ಲಿ ಪ್ರತಿಭಾವಂತರಾದ ಮಕ್ಕಳ ಮೆದುಳಿನ ಸ್ಕ್ಯಾನ್ ಮಾಡುತ್ತಿದ್ದರು. ಅವರ ಪ್ರಕಾರ, ಸಾಧಾರಣ ಮಕ್ಕಳಿಗಿಂತ, ಇಂಥ ಮಕ್ಕಳ ಬಲಭಾಗದ ಮೆದುಳು ಆರರಿಂದ ಏಳು ಪಟ್ಟು ಕ್ರಿಯಾಶೀಲವಾಗಿರುತ್ತವೆ, ಜತೆಗೆ, ಏಕಾಗ್ರತೆ ತೋರಿಸುವ ಭಾಗವೂ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಇದಲ್ಲದೆ, ಈ ಮಕ್ಕಳಿಗೆ, ತಮ್ಮ ಮೆದುಳಿನ ಬಲಭಾಗದ ಕ್ರಿಯೆಗಳನ್ನು ಸ್ತಬ್ಧಗೊಳಿಸಿ, ಕೇವಲ ಎಡಭಾಗವನ್ನು ಹೆಚ್ಚು ಉಪಯೋಗಿಸುವ, ಏಕಾಗ್ರಗೊಳಿಸುವ ಶಕ್ತಿ ಇರುತ್ತದಂತೆ.ವ್ಯನ್ಡೆರ್‌ವರ್ಟ್ ಎಂಬ ವಿಜ್ಞಾನಿಯ ಪ್ರಕಾರ ಇಂಥ ಮಕ್ಕಳ ಮೆದುಳಿನ ಸೆರಿಬೆಲ್ಲಮ್ ಎಂಬ ಭಾಗ ಉತ್ತಮವಾಗಿದ್ದು, ಅವರ ಸ್ಮರಣಶಕ್ತಿಗೆ (ಗಣಿತ, ಕಲೆ ಅಥವಾ ಭಾಷೆ) ಬಹಳ ಒತ್ತು ಕೊಟ್ಟಿರುತ್ತದೆ.

 ಪ್ರಕೃತಿ ಹಾಗೂ ಪೋಷಣೆಕೆಲವು ಸಂಶೋಧಕರ ಪ್ರಕಾರ ಬಾಲಪ್ರತಿಭೆ ಜನ್ಮತಃ ಬಂದಿದ್ದು, ಆ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಶಕ್ತಿಯುತ, ಭಾವನಾತ್ಮಕ ಚಟುವಟಿಕೆಗಳಿಂದ ಮತ್ತು ಅವರವರ ವೈಯಕ್ತಿಕ ಸ್ವಭಾವಗಳಿಂದ ರೂಪುಗೊಳ್ಳುತ್ತದೆ. ಆದರೆ, ಕೆಲವರು, ವಾತಾವರಣವೇ ಇದಕ್ಕೆ ಪೂರಕವಾಗಿರುತ್ತದೆ ಎಂದು ಹೇಳುತ್ತಾರೆ. ಉದಾಹರಣೆಗೆ, ಒಬ್ಬ ತಂದೆ, ತನ್ನ ಮೂವರು ಮಕ್ಕಳಿಗೂ ಚೆಸ್ ಆಡುವಂತೆ ಪ್ರೋತ್ಸಾಹಿಸಿ, ಉತ್ತಮ ವಾತಾವರಣ ಹಾಗೂ ತರಬೇತಿ ಕೊಟ್ಟು ಅವರು ಗ್ರ್ಯಾಂಡ್ ಮಾಸ್ಟರ್ಸ್ ಆಗುವಂತೆ ಮಾಡಿ, ಉತ್ತಮ ತರಬೇತಿ-ಪೋಷಣೆಯಿಂದ ಇದು ಸಾಧ್ಯ ಎಂದು ಪ್ರತಿಪಾದಿಸಿದನಂತೆ.ಆದರೆ ಇಲ್ಲಿ ಒಂದು ವಿಷಯ ಗಮನಿಸಿದರೆ, ತಂದೆಯಾದವನೂ ಒಬ್ಬ ಒಳ್ಳೆಯ ಚೆಸ್ ಆಟಗಾರನಾಗಿದ್ದುದು! ಸಂಗೀತಗಾರ ಮೋಜಾರ್ಟ್‌ನ ತಂದೆ ಕೂಡ ಒಳ್ಳೆಯ ಸಂಗೀತಗಾರನಾಗಿದ್ದನಂತೆ! ಅದೇ ರೀತಿ ಪಿಕಾಸೋನ ತಂದೆ ಕೂಡ ಉತ್ತಮ ಕಲಾಕಾರನಾಗಿದ್ದ. ಹಾಗೆಯೇ, ಅಯಾನ್ ಖಾನ್-ಅಮಾನ್ ಖಾನ್‌ಅವರ ತಂದೆ ಅಮ್ಜದ್‌ಅಲಿ ಖಾನ್ ವಿಶ್ವವಿಖ್ಯಾತ ಸರೋದ್ ಕಲಾವಿದರಾಗಿದ್ದಾರೆ.ಗಣಿತವಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಿರಲಿ - ಯಾರಿಗೆ ಇವುಗಳ ಜತೆ ಚಿಕ್ಕವಯಸ್ಸಿನಿಂದಲೇ ಹತ್ತಿರದ ಒಡನಾಟ ಇರುತ್ತದೋ, ಅವರಿಗೆ ಸಾಧನೆ ಮಾಡಲು ಹೆಚ್ಚಿನ ಅವಕಾಶವಿರುತ್ತದೆ. ಅದೇ ರೀತಿ ಭಾಷೆಯನ್ನು ಕಲಿಯುವುದರಲ್ಲಿ, ಕಂಠಪಾಠ ಮಾಡುವುದರಲ್ಲಿ ಕೂಡ ಸುತ್ತಲಿನ ವಾತಾವರಣ ಹೆಚ್ಚಿನ ಸಹಾಯ ಮಾಡುತ್ತದೆ. ಹೀಗಾಗಿ, ಅನುವಂಶಿಕತೆ ಹಾಗೂ ವಾತಾವರಣ ಎರಡೂ ಮಕ್ಕಳ ಪ್ರತಿಭೆಗೆ ಪೂರಕವಾಗಿರುತ್ತದೆ. ಇದರಲ್ಲಿ ಕೆಲವು ಮಕ್ಕಳು ಮಾತ್ರ ಇತರರಿಗಿಂತ ಹೆಚ್ಚು ಪ್ರತಿಭಾವಂತರಾಗಿರುತ್ತಾರೆ.ಅಧ್ಯಾಪಕರ ಕರ್ತವ್ಯ

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವುದರಲ್ಲಿ ಅಧ್ಯಾಪಕರ ಪಾತ್ರ ಹಿರಿದಾದುದು. ಅವರು ಮಕ್ಕಳಿಗೆ ಮಾರ್ಗದರ್ಶಕರಾಗಿ, ಅವರು ತಮ್ಮ ಪ್ರತಿಭೆಯನ್ನು ಒಂದೇ ಸಮನಾಗಿ ಮುನ್ನಡೆಸುವಂತೆ ಮಾರ್ಗದರ್ಶನ ಮಾಡಬೇಕು. ಜತೆಗೆ, ಈ ಪುಟ್ಟ ಪ್ರತಿಭೆಗಳು ಉತ್ತಮ ಯುವಕರಾಗಿ ಬೆಳೆಯುವುದಕ್ಕೆ ಸಹಕರಿಸಬೇಕಾಗುತ್ತದೆ. ಏಕೆಂದರೆ, ಯುವಾವಸ್ಥೆಯು ಸಾಮಾನ್ಯರಿಗೇ ಒಂದು ರೀತಿ ದ್ವಂದ್ವ ಉಂಟು ಮಾಡುವ ಕಾಲ. ಟರೊವ್‌ಸ್ಕಿ ಎಂಬ ಮನಶ್ಶಾಸ್ತ್ರಜ್ಞ ಹೇಳುವಂತೆ - “ಈ ಮಕ್ಕಳು ಚಿಕ್ಕಂದಿನಿಂದಲೇ ಎಲ್ಲರಿಂದ ವಿಶೇಷವಾಗಿ ಗಮನಿಸಲ್ಪಟ್ಟಿರುತ್ತಾರೆ. ಆದರೆ, ಅವರು ಬೆಳೆಯುತ್ತಾ ಬೆಳೆಯುತ್ತಾ, ಬೇರೆಯವರ ಜತೆ ಸ್ಪರ್ಧೆ ಹೆಚ್ಚಾಗುತ್ತದೆ. ಏಕೆಂದರೆ, ಅಷ್ಟು ವಯಸ್ಸಿಗೆ ಬೇರೆಯವರೂ ಚೆನ್ನಾಗಿಯೆ ಕಲಿತಿರುತ್ತಾರೆ’’.ಟರೊವ್‌ಸ್ಕಿ ಇಂಥ ಮಕ್ಕಳ ಬಗ್ಗೆ ಇನ್ನೊಂದು ವಿಷಯ ಹೇಳುತ್ತಾರೆ - “ಸಾಮಾನ್ಯವಾಗಿ ಇಂಥ ಮಕ್ಕಳು ತಮ್ಮ ಆಸಕ್ತಿಯ ವಿಷಯದಲ್ಲೇ ಪೂರ್ಣ ಗಮನ, ಏಕಾಗ್ರತೆ ಕೊಟ್ಟಿರುವುದರಿಂದ, ಅವರು ಬಾಲ್ಯದ ಬೇರೆಯ ಅನುಭವಗಳನ್ನು ಕಳೆದುಕೊಂಡಿರುತ್ತಾರೆ. ಇದರಿಂದ, ಅವರು ಬೌದ್ಧಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಮುಂದೆ ಕಷ್ಟವಾಗುತ್ತದೆ.”ಎಷ್ಟೊ ಬಾರಿ ಇಂಥ ಪ್ರತಿಭೆಗಳು ತಮ್ಮ ಪೋಷಕರ ಕಾರಣದಿಂದಲೇ ಮುಂದೆ ಸಮಾಜವನ್ನು ಎದುರಿಸಲು ಕಷ್ಟ ಪಡುತ್ತಾರೆ. ಏಕೆಂದರೆ, ಕೆಲವು ಪೋಷಕರು ತಾವು ಸಾಧಿಸಲಾಗದ್ದನ್ನು ಮಕ್ಕಳ ಮೂಲಕ ಸಾಧಿಸಲು ಹೋರಾಡುತ್ತಾರೆ. ಆದರೆ, ಆ ಮಗು ಇದಕ್ಕೆ ಸಿದ್ಧವಿದೆಯೇ ಅದಕ್ಕೆ ಆ ಶಕ್ತಿ ಇದೆಯೇ ಎಂದು ಯೋಚಿಸುವುದಿಲ್ಲ. ಉದಾಹರಣೆಗೆ, ಹದಿನೈದು ವರ್ಷದ ದಿಲೀಪ್ ರಾಜ್ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿರುವುದು ಸುದ್ದಿಯಾಗಿತ್ತು. ಇಂತಹ ಮಕ್ಕಳು ನಿಜವಾಗಿಯೂ ಪ್ರತಿಭಾವಂತರೆ? ಅಥವಾ ಅದು ಅವರ ಪೋಷಕರ, ಸಲಹೆಗಾರರ ತಳ್ಳುವಿಕೆಯೆ?ಮನಶಾಸ್ತ್ರಜ್ಞರ ಪ್ರಕಾರ ಇದು  ‘ಪೋಷಕರ ಆತುರ ಭಾವ. ಹೇಳಿದ್ದನ್ನೇ ಒತ್ತಿ ಒತ್ತಿ ಹೇಳಿ, ಅದನ್ನು ಹೇರಿ, ಶೀಘ್ರವೇ ಅದರ ಫಲವನ್ನು ನಿರೀಕ್ಷಿಸುವುದು. ಇಂಥ ಪೋಷಕರು ಮಕ್ಕಳ ಮೂಲಕ ಜೀವಿಸುವುದರಿಂದ ಮಕ್ಕಳು ಹೇಗಾದರೂ ಹೆಸರು ಗಳಿಸುವಂತೆ ತಳ್ಳಲ್ಪಡುತ್ತಾರೆ.

ಆಕೃತ್ ಜಸ್ವಾಲ್‌ನ ವಿಷಯವನ್ನೇ ನೋಡಿದರೆ, ಅವನು ಶಸ್ತ್ರಚಿಕಿತ್ಸೆ ಮಾಡಿದ ಸಂಸ್ಥೆ ಅವನ ಪೋಷಕರದ್ದೇ. ಅವನೇ ಹೀಗೆ ಹೇಳುತ್ತಾನೆ- “ನಾನು ಆ ಹುಡುಗಿಯ ಶಸ್ತ್ರಚಿಕಿತ್ಸೆ ಮಾಡಲು ಅವಳ ತಂದೆತಾಯಿಯ ಅನುಮತಿ ಬಿಟ್ಟರೆ ಬೇರೆ ಯಾರದ್ದೂ ಬೇಕಾಗಲಿಲ್ಲ. ಏಕೆಂದರೆ ನನ್ನ ತಂದೆತಾಯಿಯ ಸಂಸ್ಥೆಯಲ್ಲೇ  ಮಾಡಿದ್ದರಿಂದ ಅವರು ನನಗೆ ಪ್ರೋತ್ಸಾಹಿಸಿದರು.” ಇಲ್ಲದಿದ್ದರೆ, ಒಬ್ಬ ಎಂಟು ವರ್ಷದ ಹುಡುಗ ಈ ರೀತಿ ಮಾಡುವುದು ವೈದ್ಯಕೀಯ ನೀತಿಗೆ ಹೊರತಾದುದು.

ತಮ್ಮ ಮಕ್ಕಳನ್ನು ಪ್ರಸಿದ್ಧರನ್ನಾಗಿ ಮಾಡುವ ದೊಡ್ಡ ಹುಮ್ಮಸ್ಸಿನಲ್ಲಿ ಪೋಷಕರು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಾಗಿರುತ್ತಾರೆ.ಅದು ಸಾಧ್ಯವಾಗದೇ ಇದ್ದಾಗ ಅಂಥ ಮಕ್ಕಳು ಒಮ್ಮೆಗೇ ಕೆಳಗೆ ಬೀಳಬೇಕಾಗುತ್ತದೆ. ಕೆಲವು ವರ್ಷಗಳ ಹಿಂದೆ, 17 ವರ್ಷದ ತಥಾಗತ ಅವತಾರ್ ತುಳಸಿ, ಅವನು ಹೇಳಿಕೊಳ್ಳುವಂತೆ ಬಾಲ ಪ್ರತಿಭೆ ಅಲ್ಲವೆಂದು ಡಿಪಾರ್ಟ್‌ಮೆಂಟ್ ಆಫ್‌ಸೈನ್ಸ್ ಅಂಡ್ ಟೆಕ್ನಾಲಜಿ (ಡಿ.ಎ.ಟಿ) ತೀರ್ಮಾನಿಸಿತ್ತು. ಭೌತಶಾಸ್ತ್ರ ಪ್ರತಿಭೆ ಎಂದು ಹೊಗಳಿದ್ದರ ಹಿಂದೆ ಅವನ ತಂದೆಯ (ನಾರಾಯಣ್ ಪ್ರಸಾದ್) ಪ್ರಭಾವ ಇದೆ ಎಂದು ತಿಳಿಯಿತು. ಅವರು ಪ್ರಚಾರದ ಇಚ್ಛೆಯಿಂದ, ಮಗನಿಗೆ ಇಡೀ ಭೌತಶಾಸ್ತ್ರವನ್ನು ಕಂಠಪಾಠ ಮಾಡುವಂತೆ ಒತ್ತಾಯಮಾಡಿದ್ದರಂತೆ. ಹೀಗಾಗಿ, 2000ರಲ್ಲಿ ಡಿ.ಎಸ್.ಟಿ. ಅವನನ್ನು ಜರ್ಮನಿಗೆ ಅಲ್ಲಿಯ  ನೊಬೆಲ್ ಪ್ರಶಸ್ತಿ ವಿಜೇತರನ್ನು ಭೇಟಿಮಾಡಲು ಕಳುಹಿಸಿದಾಗ, ಅವರಲ್ಲಿಯ ಒಬ್ಬ ಪ್ರೊಫೆಸರ್ ಮಾಧ್ಯಮಗಳಿಗೆ ಹೀಗೆ ಹೇಳಿದರು - ‘ಐ ಫೀಲ್ ಸಾರಿ ಫಾರ್‌ದ ಬಾಯ್. ಅವನೇ ಒಪ್ಪಿಕೊಂಡಂತೆ ಅವನ ತಂದೆತಾಯಿ, ಅವನು ನೋಬೆಲ್ ಪ್ರಶಸ್ತಿ ಪಡೆಯಲು ಎಷ್ಟೆಲ್ಲಾ  ಮಾಡುತ್ತಿದ್ದಾರೆ’.ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಮನಸ್ತ್ರಜ್ಞೆ  ವಂದನಾ ಪ್ರಕಾಶ್ ಹೇಳುತ್ತಾರೆ - ‘ಇಂಥ ಪ್ರತಿಭಾವಂತ ಮಕ್ಕಳಿಗೆ ಮನೆಯಲ್ಲಿ ಪೂರಕ ವಾತಾವರಣವಿರಬೇಕು’. ನಿಮ್ಹಾನ್ಸ್‌ನ ವೈದ್ಯ ಜಿತೇಂದ್ರ ನಾಗ್ವಾರ್ ಹೇಳುತ್ತಾರೆ - ‘ಇಂಥ ಮಕ್ಕಳನ್ನು ಪ್ರೋತ್ಸಾಹಿಸಿ. ಆದರೆ, ಅವರ ದೈಹಿಕ, ಮಾನಸಿಕ ಆರೋಗ್ಯವನ್ನು ಕಡೆಗಣಿಸಿ ಅವರ ಮೇಲೆ  ಒತ್ತಡ ಹಾಕಬೇಡಿ’.

ಕೆಲವು ಮಕ್ಕಳು ಹಲವು ವರ್ಷಗಳು ಪ್ರಚಾರದಲ್ಲಿದ್ದರೆ, ಕೆಲವರು ಕೇವಲ ಹಲವು ದಿನಗಳಲ್ಲೇ ಮರೆಯಾಗುತ್ತಾರೆ. ಆದರೆ, ಅಷ್ಟು ಸಮಯವಂತೂ ಅವರು ಎಲ್ಲರ ಅಚ್ಚರಿಗೆ ಪಾತ್ರರಾಗುತ್ತಾರೆ. ಕೆಲವಂತೂ ದೊಡ್ಡವರಿಗೂ ಅಸಾಧ್ಯವಾದ ಪ್ರತಿಭೆಗಳು! ಇದು ನಿಜಕ್ಕೂ ಅದ್ಭುತ ಎನಿಸುತ್ತವೆ. ಆದರೆ ಸ್ಟೆಸಿಯಾ ಟಾಶರ್ ಅವರ ಈ ಮಾತಂತೂ ಮರೆಯಲಾಗದು- ‘ಒಂದು ಮಗು ನಾಳೆ ಎಂಥಾ ವ್ಯಕ್ತಿ ಆಗಬಹುದೆಂಬ ಚಿಂತೆ ನಮಗೆ ಯಾವಾಗಲೂ ಇರುತ್ತದೆ. ಆದರೆ, ಆ ಮಗು ಇಂದೂ ಒಬ್ಬ ವ್ಯಕ್ತಿ ಎಂಬುದನ್ನು ಮರೆಯುತ್ತೇವೆ.’

 ಮಕ್ಕಳ ಮೇಲೆ ಪೋಷಕರ ಪ್ರಭಾವ

ಆನುವಂಶಿಕ ಗುಣಗಳಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಬಹಳವೇ ಇದೆ ಎನ್ನುತ್ತಾರೆ ವಿಜ್ಞಾನಿಗಳು. ಪ್ರಖ್ಯಾತ ಸೆಲ್ಲೊ ವಾದಕ ಜೇನಸ್ ಸ್ಟಾರ್ಕರ್, ತನ್ನ ತಾಯಿಯ ಆಶ್ಚರ್ಯಕರವಾದ ಕಥೆಯನ್ನು ಹೀಗೆ ಹೇಳುತ್ತಾನೆ. ತಾನು ಸತತವಾಗಿ ಸಂಗೀತ ಅಭ್ಯಾಸ  ಮಾಡಲಿ ಎಂಬ ಉದ್ದೇಶದಿಂದ, ಚಿಕ್ಕ ಚಿಕ್ಕ ಸ್ಯಾಂಡ್‌ವಿಚ್‌ಗಳನ್ನು ಮಾಡಿ, ಅವನು ಅಭ್ಯಾಸ ಮಾಡಲು ಕೂರುವ ಸ್ಟ್ಯಾಂಡ್ ಮೇಲೆ ಇಡುತ್ತಿದ್ದಳಂತೆ. ಇದರಿಂದ, ಅವನು ಅಭ್ಯಾಸ ಮಾಡುವಾಗ, ತಿಂಡಿ ತಿನ್ನಲು ಎದ್ದು ಹೋಗಬೇಕಾಗುವುದಿಲ್ಲ ಎಂದು! ಇದಲ್ಲದೇ, ಒಂದು ಗಿಣಿಯನ್ನು ತಂದು, ಅದಕ್ಕೆ ಕೇವಲ “ಅಭ್ಯಾಸ ಮಾಡು ಜೇನಸ್, ಅಭ್ಯಾಸ ಮಾಡು’’ ಎಂಬ ಮಾತನ್ನು ಮಾತ್ರ ಹೇಳಿಕೊಟ್ಟಿದ್ದಳಂತೆ!ಇದಕ್ಕೆ ವಿರುದ್ಧವಾಗಿ ಇನ್ನೊಂದು ಸತ್ಯ ಕಥೆ ಇದೆ. ಇದು ಪಿಯಾನೋ ವಾದಕಿ ರೂತ್ ಸ್ಲೆಜಿನ್ಕಳದ್ದು. ಇವಳು 1929ರಲ್ಲಿ ತನ್ನ ನಾಲ್ಕನೇ ವಯಸ್ಸಿನಲ್ಲೇ ಪ್ರಥಮ ಕಾರ್ಯಕ್ರಮ ಕೊಟ್ಟಳು. ಅವಳು ಆತ್ಮಕಥೆಯಲ್ಲಿ ಹೀಗೆ ಹೇಳಿದ್ದಾಳೆ. - “ನನ್ನ ತಂದೆ, ಪ್ರತಿದಿನ ನಾನು 9 ಗಂಟೆಗಳ ಕಾಲ ಅಭ್ಯಾಸ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದರು. ನನ್ನ ಒಂದು ತಪ್ಪನ್ನೂ ಅವರು ಸಹಿಸುತ್ತಿರಲಿಲ್ಲ. ಅತಿ ಸಣ್ಣ ತಪ್ಪಿಗೂ ಹೊಡೆಯುತ್ತಿದ್ದರು. ನನ್ನ ಹದಿನೈದನೇ ವಯಸ್ಸಿನಲ್ಲಿ ನನಗೆ ದೊಡ್ಡ ಮಾನಸಿಕ ಆಘಾತವಾಗಿ ಪಿಯಾನೋ ನುಡಿಸುವುದನ್ನೇ ಕೈಬಿಟ್ಟೆ ’.ಈ ಎರಡೂ ಘಟನೆಗಳು ಪೋಷಕರ ಪ್ರಭಾವ ಯಾವ ರೀತಿ ಪರಿಣಾಮ ಮಾಡಬಲ್ಲದು ಎಂದು ತೋರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry