ಬಾಲ ಪ್ರೌಢಿಮೆ!

7

ಬಾಲ ಪ್ರೌಢಿಮೆ!

Published:
Updated:
ಬಾಲ ಪ್ರೌಢಿಮೆ!

ಪ್ರೌಢಾವಸ್ಥೆ ಎಂದರೆ ಯಾವುದೋ ಒಂದು ಹಂತದಲ್ಲಿ ದಿಢೀರನೆ ಕಂಡು ಬರುವ ಬೆಳವಣಿಗೆಯಲ್ಲ. ಅದಕ್ಕೆ ವರ್ಷಗಳ ಅವಧಿ ಬೇಕಾಗುತ್ತದೆ. ಈ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ.ಅನುವಂಶೀಯ ಅಂಶಗಳು, ಆಹಾರ, ಪರಿಸರ, ತಂದೆ ತಾಯಿ ಮತ್ತು ಕುಟುಂಬದವರ ಪಾಲನಾ ವಿಧಾನ, ಶಿಕ್ಷಣ, ಅನಾರೋಗ್ಯ ಹಾಗೂ ಸಕಾರಾತ್ಮಕ ಅಥವಾ ನಕಾರಾತ್ಮಕ ಘಟನೆಗಳು ಬೆಳವಣಿಗೆಯ ಗತಿ ಮತ್ತು ಮಟ್ಟದ ಮೇಲೆ ಪ್ರಭಾವ ಬೀರುತ್ತವೆ.ಈ ಅವಧಿಯನ್ನು ಸಾಮಾನ್ಯವಾಗಿ ಯುವತಿಯರಲ್ಲಿ 12 ಹಾಗೂ ಯುವಕರಲ್ಲಿ 14 ಎಂದು ಗುರುತಿಸಲಾಗಿದ್ದರೂ, ಅದು ವ್ಯಕ್ತಿಗತವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ. ಅಂತೆಯೇ 8 ಅಥವಾ 9ನೇ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆ ತಲುಪುವ ಪ್ರಕ್ರಿಯೆಯೇ ಬಾಲ್ಯ ಪ್ರೌಢಾವಸ್ಥೆ.ಕಾರಣಗಳು

ಕೌಟುಂಬಿಕ ಹಿನ್ನೆಲೆ, ಕುಟುಂಬದ ಗಾತ್ರ, ಜನಾಂಗ, ಸಾಮಾಜಿಕ ವರ್ಗ, ಹುಟ್ಟಿನ ಕ್ರಮ, ಪರಿಸರ, ಆರೋಗ್ಯ ಮುಂತಾದವುಗಳು ಈ ಪ್ರಕ್ರಿಯೆಯನ್ನು ನಿರ್ಧರಿಸುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ. ಸ್ಥೂಲಕಾಯ ಅಥವಾ ಬೊಜ್ಜು ಹೊಂದಿರುವ ಮಕ್ಕಳಲ್ಲಿ ಮೈನೆರೆತ ಸಾಮಾನ್ಯಕ್ಕಿಂತ ಸ್ವಲ್ಪ ಮುಂಚೆಯೇ ಕಾಣಿಸಿಕೊಂಡರೆ, ತೀವ್ರ ಅಪೌಷ್ಟಿಕತೆಯಿಂದ ನರಳುವ ಮಕ್ಕಳಲ್ಲಿ ಅದು ತುಂಬಾ ತಡವಾಗಿ ಉಂಟಾಗುತ್ತದೆ.ಸಾಮಾನ್ಯವಾಗಿ ಬೆಳವಣಿಗೆಯ ಹಾರ್ಮೋನು ಪಿಟ್ಯೂಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತದೆ. ಈ ಉತ್ಪತ್ತಿಯಲ್ಲಿ ಹೆಚ್ಚು ಕಡಿಮೆಯಾದರೆ ಅದು ಪ್ರೌಢಾವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪಿಟ್ಯೂಟರಿ ಗ್ರಂಥಿಯಲ್ಲಿ ಬೆಳೆಯುವ ಗೆಡ್ಡೆ ಅಥವಾ ಗ್ರಂಥಿಗೆ ಆಗುವ ಹಾನಿಯಿಂದಲೂ ಈ ಸಮಸ್ಯೆ ಉಂಟಾಗಬಹುದು.  ಕೇಂದ್ರ ನರ ಮಂಡಲದ ಕಾರ್ಯಚಟುವಟಿಕೆಯೂ ಕೂಡ ಪ್ರೌಢಾವಸ್ಥೆಯ ಆರಂಭಿಕ ಹಂತಕ್ಕೆ ಒಂದು ಕಾರಣವಾಗಿದ್ದಿರಬಹುದೆಂದು ಗುರುತಿಸಲಾಗಿದೆ.ಯಾವುದೇ ರೀತಿಯ ರಚನಾತ್ಮಕ ಅಸಹಜತೆಯ ಅನುಪಸ್ಥಿತಿ ಅಥವಾ ಗಡ್ಡೆಯ ಫಲಿತಾಂಶದಿಂದ, ಸೋಂಕು ಅಥವಾ ಯಾವುದೇ ಮಾನಸಿಕ ಆಘಾತದಿಂದ ನರಮಂಡಲಕ್ಕೆ ಹಾನಿಯಾದಾಗ ಬಾಲಪ್ರೌಢಿಮೆ ಉಂಟಾಗಬಹುದು.ಚಿಕಿತ್ಸೆ, ಮಾರ್ಗದರ್ಶನ

ಹದಿಹರೆಯವು ಬಾಲ್ಯ ಮತ್ತು ಪ್ರೌಢತೆಯ ನಡುವಿನ ಸಂದಿಗ್ಧಕಾಲ. ವ್ಯಕ್ತಿಗತ ವಿಕಾಸದ ಅಂತಿಮ ಹಂತ. ಶಾರೀರಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಅನೇಕ ತೊಂದರೆಗಳು ಕಾಣಬಹುದು. ಈ ಹಂತದಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ತಂದೆ-ತಾಯಿಗಳು ಶಿಕ್ಷಕರು ಹೇಳಿ ಕೊಡಬೇಕು.ಶಾರೀರಿಕ ಅಥವಾ ಮಾನಸಿಕ ತೊಂದರೆಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಬೇಕು. ಹಾರ್ಮೋನು ಪ್ರಮಾಣವನ್ನು ಗಮನಿಸಿ ಕೊರತೆ ಇದ್ದರೆ, ಸರಿಪಡಿಸುವ ಚಿಕಿತ್ಸೆ ಕೊಡಿಸಬೇಕು. ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆಗೆ ಪ್ರೇರಣೆ ನೀಡುವ ಥೈರಾಯಿಡ್ ಮತ್ತು ಟೆಸ್ಟೋಸ್ಟೀರಾನ್‌ನಂತಹ ಹಾರ್ಮೋನು ಪರೀಕ್ಷೆ ಹಾಗೂ ಚಿಕಿತ್ಸೆ ಮುಖ್ಯ. ಪ್ರೌಢಾವಸ್ಥೆಯ ಅಂತರ್ನಿಹಿತ ಸಮಸ್ಯೆಗಳನ್ನು ಪತ್ತೆಹಚ್ಚಲು ಇಂತಹ ರೋಗಿಗಳಿಗೆ ದೀರ್ಘಕಾಲಿಕ ಹಾರ್ಮೋನಲ್ ಚಿಕಿತ್ಸೆ ಹಾಗೂ ವಿಸ್ತೃತ ಅವಲೋಕನದ ಅಗತ್ಯವಿರುತ್ತದೆ.ಬಾಲ ಪ್ರೌಢಾವಸ್ಥೆಗೆ ಕಾಲಿಟ್ಟ ಬಾಲಕಿಯರಿಗೆ ಪಾಲಕರ ಭಾವನಾತ್ಮಕ ಹಾಗೂ ನೈತಿಕ ಬೆಂಬಲದ ಅಗತ್ಯವಿರುತ್ತದೆ. ಮುಟ್ಟಿನ ನಿಭಾವಣೆ, ಭಾವನಾತ್ಮಕ ಸಂಘರ್ಷಗಳ ಹತೋಟಿ ಮುಂತಾದ ಕುರಿತು ಅವರಲ್ಲಿ ಚರ್ಚಿಸಬೇಕು. ಸಂಭಾವ್ಯ ಲೈಂಗಿಕ ದೌರ್ಜನ್ಯ ಅಥವಾ ಆಕ್ರಮಣಗಳಂತಹ ಕೃತ್ಯಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry