ಶುಕ್ರವಾರ, ಜೂನ್ 18, 2021
23 °C

ಬಾಲ ಮಂದಿರಗಳ ದುಃಸ್ಥಿತಿ: ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾದ ಮಕ್ಕಳು (ಬಾಲಾಪರಾಧಿಗಳು) ವಾಸ ಇರುವ ಸರ್ಕಾರದ ಬಾಲಮಂದಿರಗಳಲ್ಲಿನ ದುಃಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಸರ್ಕಾರದ ವಿರುದ್ಧ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.ರಾಜ್ಯದಲ್ಲಿನ ಹಲವು ಬಾಲಮಂದಿರಗಳಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಆಧಾರದ ಮೇಲೆ ಹೈಕೋರ್ಟ್ ರಿಜಿಸ್ಟ್ರಾರ್ ಪಿ.ಕೃಷ್ಣ ಭಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ್ದ್ದಿದರು. ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿಗೆ ಆದೇಶಿಸಲಾಗಿದೆ.ಪತ್ರದಲ್ಲಿ ಏನಿದೆ?:ರಿಜಿಸ್ಟ್ರಾರ್ ಅವರು ಬರೆದಿರುವ ಪತ್ರದಲ್ಲಿ, `ಬಾಲ ಮಂದಿರಗಳಲ್ಲಿರುವ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ನಮ್ಮ ರಾಜ್ಯದಲ್ಲಿರುವ ಬಾಲಮಂದಿರಗಳಲ್ಲಿ ಬಾಲಕರನ್ನು ನಡೆಸಿಕೊಳ್ಳುತ್ತಿರುವ ರೀತಿ, ಅವರು ವಾಸವಾಗಿರುವ ಸ್ಥಿತಿಗಳ ಕುರಿತು ಪತ್ರಿಕೆಗಳಲ್ಲಿ ಓದಿ ಅಚ್ಚರಿಯಾಯಿತು. ಬಾಲಕರ ಹಕ್ಕುಗಳನ್ನು ಇಲ್ಲಿ ಕಸಿದುಕೊಳ್ಳಲಾಗುತ್ತಿದೆ.`ಕೆಲವು ಕಡೆಗಳಲ್ಲಿ ಬಾಲಕರು ಅಸಹನೀಯ ನೋವು ಅನುಭವಿಸುತ್ತಿದ್ದಾರೆ. ಹಿಂಸೆ ತಾಳಲಾರದೆ ಕೆಲವು ಮಕ್ಕಳು ಮೇಜು, ಖುರ್ಚಿಗಳನ್ನು ಒಡೆದು ಹಾಕಿರುವ ಘಟನೆಗಳೂ ವರದಿಯಾಗಿವೆ. ಕಿಟಕಿ, ಬಾಗಿಲುಗಳನ್ನು ಮುಚ್ಚಿ ಅವರನ್ನು ಕೂಡಿ ಹಾಕಿಡಲಾಗುತ್ತಿದೆ. ಹೊರಗಿನಿಂದ ಬೀಗ ಹಾಕಿ ಮಕ್ಕಳಿಗೆ ಹಿಂಸೆ ನೀಡುತ್ತಿರುವುದು ವರದಿಯಲ್ಲಿ ಉಲ್ಲೇಖಗೊಂಡಿದೆ. `ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತ ಗಮನ ಹರಿಸಿ ಬಾಲಕರ ರಕ್ಷಣೆಗೆ ಮುಂದಾಗಬೇಕು. ಅವರಿಗೆ ಅವರ ಹಕ್ಕು ನೀಡಲು ಸರ್ಕಾರಕ್ಕೆ ಆದೇಶಿಸಬೇಕು~ ಎಂದು ಕೋರಲಾಗಿದೆ.  ಬಾಲಕಿಯರು ವಾಸವಾಗಿರುವ ಬಾಲಮಂದಿರಗಳನ್ನೂ ಈ ಅರ್ಜಿಯಲ್ಲಿ ಸೇರಿಸಿಕೊಂಡಿಕೊಂಡಿರುವ ಪೀಠ ವಿಚಾರಣೆಯನ್ನು ಮುಂದೂಡಿತು. ಈ ಪ್ರಕರಣದಲ್ಲಿ ಮಕ್ಕಳ ಪರವಾಗಿ ವಾದ ಮಂಡಿಸುವ ನಿಮಿತ್ತ ವಕೀಲೆ ಸುಮನಾ ಬಾಳಿಗ ಅವರನ್ನು ಕೋರ್ಟ್ ಸಹಾಯಕಿ (ಅಮಿಕಸ್ ಕ್ಯೂರಿ) ಆಗಿ ನೇಮಕ ಮಾಡಲಾಗಿದೆ.

 

ಖುಲಾಸೆಗೊಂಡವರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು:  ಅನ್ಯ ಧರ್ಮದ ಯುವತಿಯನ್ನು ಪ್ರೀತಿ ಮಾಡಿದ ತಪ್ಪಿಗೆ ಎರಡೂ ಕಣ್ಣುಗಳನ್ನು ಕಳೆದುಕೊಂಡು ದಶಕದ ಕಾಲ ಸುದೀರ್ಘ ಕಾನೂನು ಸಮರ ಸಾರಿದ್ದ ಯುವಕನೊಬ್ಬನ ನೆರವಿಗೆ ಹೈಕೋರ್ಟ್ ಧಾವಿಸಿದೆ.

ಇವರನ್ನು ಅಂಧರನ್ನಾಗಿ ಮಾಡಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಸೆಷನ್ಸ್ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.ಕೆಜಿಎಫ್ ನಿವಾಸಿ ಸುದೇಶ್ ಅವರ ಕಥೆ ಇದು. ನಹೀದಾ ಅಮೀನ್ ಎಂಬಾಕೆಯನ್ನು ಇವರು ಪ್ರೀತಿಸುತ್ತಿದ್ದರು. ಅದನ್ನು ಒಪ್ಪದ ಆಕೆಯ ಸಹೋದರಾದ ಅಮನ್ ಉಲ್ಲಾ ಹಾಗೂ ಮೊಯಿಉದ್ದೀನ್ ಆಸಿಡ್ ಹಾಕಿ ಸುದೇಶ್ ಅವರನ್ನು ಅಂಧರನ್ನಾಗಿ ಮಾಡಿದ್ದೂ ಅಲ್ಲದೇ ಗಾಯಗೊಳಿಸಿದ್ದರು. ಇದು ನಡೆದದ್ದು 2002ರಲ್ಲಿ. ಆದರೆ ಇವರೇ ಆಸಿಡ್ ದಾಳಿ ನಡೆಸಿದ್ದಾರೆ ಎಂಬ ಕುರಿತಾಗಿ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲು ಸೆಷನ್ಸ್ ಕೋರ್ಟ್‌ನಲ್ಲಿ ಸರ್ಕಾರ ವಿಫಲವಾಯಿತು. ಆದುದರಿಂದ 2006ರಲ್ಲಿ ಇಬ್ಬರೂ ಖುಲಾಸೆಗೊಂಡರು.ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.  ಸರ್ಕಾರದ ಪರ ವಾದಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಎಸ್. ಸಂಪಂಗಿರಾಮಯ್ಯ ಅವರು ಪ್ರಕರಣದ ಗಂಭೀರತೆ ಕುರಿತು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.ಅಪರಾಧಿಗಳ ವಿರುದ್ಧ ಸೂಕ್ತ ದಾಖಲೆಗಳನ್ನೂ ಅವರು ಒದಗಿಸಿದರು. ಇದನ್ನು ಪೀಠ ಮಾನ್ಯ ಮಾಡಿದೆ. ಸೆಷನ್ಸ್ ಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳು ರದ್ದು ಮಾಡಿದರು. ಇಬ್ಬರೂ ಅಪರಾಧಿಗಳು ತಲಾ ಒಂದು ಲಕ್ಷ ರೂಪಾಯಿ ಮೊತ್ತವನ್ನು ಪರಿಹಾರದ ರೂಪದಲ್ಲಿ ಸುದೇಶ್ ಅವರಿಗೆ ನೀಡುವಂತೆ ಪೀಠ ನಿರ್ದೇಶಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.