ಬಾಲ ಸಂಜೀವಿನಿ ಆಸ್ಪತ್ರೆಯಲ್ಲಿ 7ಮಕ್ಕಳಿಗೆ ಚಿಕಿತ್ಸೆ

7

ಬಾಲ ಸಂಜೀವಿನಿ ಆಸ್ಪತ್ರೆಯಲ್ಲಿ 7ಮಕ್ಕಳಿಗೆ ಚಿಕಿತ್ಸೆ

Published:
Updated:

ದೇವದುರ್ಗ: ತಾಲ್ಲೂಕಿನಲ್ಲಿ ತೀವ್ರ ಕಡಿಮೆ ತೂಕದಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಕಳೆದ ಎರಡು ದಿನಗಳಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಎರಡನೇ ದಿನವಾದ ಭಾನುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 108 ಮಕ್ಕಳಿಗೆ ತಪಾಸಣೆ ನಡೆಸಲಾಯಿತು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರನಗೌಡ ತಿಳಿಸಿದ್ದಾರೆ.

ತೀವ್ರ ಕಡಿಮೆ ತೂಕದ ಮಕ್ಕಳನ್ನು ಅಂಗನವಾಡಿ ವ್ಯಾಪ್ತಿಯಲ್ಲಿ ಗುರುತಿಸಿ ಈಗಾಗಲೇ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದರೂ ಸದರಿ ಮಕ್ಕಳಿಗೆ ಯಾವುದಾದರೂ ಕಾಯಿಲೆ ಇರುವ ಬಗ್ಗೆ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದ ಅವರು, ಭಾನುವಾರ ನಡೆದ ಆರೋಗ್ಯ ತಪಾಸಣೆಯಲ್ಲಿ ರಿಮ್ಸ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ನಾಗರಾಜ ಜವಳಿ ಮತ್ತು ಡಾ. ಬಸವನಗೌಡ ಅವರು  ಒಟ್ಟು 7ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಬಾಲ ಸಂಜೀವಿನಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ತಿಳಿಸಿದರು.

ಮನವಿ: ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳು ಯೋಜನೆಯ ಲಾಭ ಪಡೆದುಕೊಳ್ಳಲು ಮುಂದೆ ಬರಬೇಕಾಗಿದ್ದು, ಕೊನೆಯ ದಿನವಾದ ಸೋಮವಾರ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಿಡಿಪಿಒ ಮನವಿ ಮಾಡಿದ್ದಾರೆ.

ನೀರಿಗೆ ಪರದಾಟ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಈಗಾಗಲೇ ಅವ್ಯವಸ್ಥೆಯ ಆಗರವಾಗಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಮಕ್ಕಳೊಂದಿಗೆ ಆಗಮಿಸುವ ನೂರಾರು ಪಾಲಕರು ಕೈಯಲ್ಲಿ ನೀರು ಹಿಡಿದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂಬುವುದು ಆರೋಪ ಇದೆ.

ಸಾರ್ವಜನಿಕ ಆಸ್ಪತ್ರೆ ಎನಿಸಿಕೊಂಡರೂ ಚಿಕಿತ್ಸೆ ಮತ್ತು ತಪಾಸಣೆಗೆಂದು ಬರುವ ರೋಗಿಗಳಿಗೆ ಕುಡಿಯಲು ಆಸ್ಪತ್ರೆಯಲ್ಲಿ ಹನಿ ನೀರು ಸಿಗದೆ ಇರುವುದು ದುರದೃಷ್ಟ ಎನ್ನುವಂತಿದೆ. ದೂರದ ಊರುಗಳಿಂದ ಬರುವ ರೋಗಿಗಳು ನೀರಿಗಾಗಿ ಪರದಾಡುವಂತ ಸನ್ನಿವೇಶ ಕಂಡು ಬಂದಿದೆ. ಅನಿವಾರ್ಯ ಎಂಬುವಂತೆ ಆಸ್ಪತ್ರೆಯ ಹೊರಗೆ ಬರುವ ಖಾಸಗಿ ಹೋಟೆಲ್‌ಗಳಿಗೆ ಹೋಗಬೇಕಾಗಿದೆ.   ಕೋಟಿಗಟ್ಟಲೆ ಹಣ ಖರ್ಚು ಮಾಡಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಿಸಿದರೂ ರಾಜಕೀಯ ಇಚ್ಚಾಶಕ್ತಿ ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry