ಬಾಳಬಂಡಿ ಎಳೆಯದ ಎತ್ತಿನಗಾಡಿ

7

ಬಾಳಬಂಡಿ ಎಳೆಯದ ಎತ್ತಿನಗಾಡಿ

Published:
Updated:

ಯಳಂದೂರು: ಎತ್ತಿನಗಾಡಿ ಓಡಿಸುವವರ ಬದುಕು ಒಂದು ದುರಂತದ ಕತೆ ಇದ್ದಂತೆ. ಜೀವನದ ರಥ ಎಳೆಯಲೂ ಸಂಕಷ್ಟಪಡು ತ್ತಿರುವ ಅವರ ಬಾಳಪಥದಲ್ಲಿ ಬೆಳ್ಳಿ ಬೆಳಕು ಕಾಣುವಾಸೆ. ಆದರೆ, ಪ್ರತಿ ಗ್ರಾಮದಲ್ಲೂ ಆಧುನಿಕತೆಯ ಭಾಗವಾಗಿ ಓಡಾಡುತ್ತಿರುವ ಆಟೋ, ಸರಕು ಸಾಗಣೆ ಆಟೋ, ಟ್ರ್ಯಾಕ್ಟರ್‌ನ ಸದ್ದು ಎತ್ತಿನಗಾಡಿ ನಂಬಿದವರ ಹಾದಿಯನ್ನು ಬದಲಿಸಿದೆ.ಇವುಗಳ ಪೈಪೋಟಿಯ ನಡುವೆಯೇ ಇಂದಿಗೂ ಸದ್ದು ಮಾಡದೆ ನಿಧಾನಗತಿ ಯಲ್ಲಿ ಸಂಚರಿಸುತ್ತಿರುವ ಎತ್ತು, ಗಾಡಿ, ನೊಗ, ಏರು ಅನ್ನದಾತನ ತುತ್ತಿನಚೀಲ ವಾಗಿ ಬಳಕೆಯಲ್ಲಿವೆ. ಇದನ್ನೇ ನಂಬಿ ಕೊಂಡು ದಿನನಿತ್ಯವೂ ಬಾಳಿನ ಬಂಡಿ ನೂಕುತ್ತಾ ಬಂದಿರುವವರ ಬದುಕಿನ ಚಿತ್ರಗಳು ಮಾತ್ರ ನೋವಿನ ಎಳೆಯನ್ನೇ ಬಿಂಬಿಸುತ್ತವೆ.ತಾಲ್ಲೂಕಿನ ಹಳ್ಳಿಗಳಲ್ಲಿ ಕೂಲಿಗಾಗಿ ಎತ್ತಿನಗಾಡಿಯಲ್ಲಿ ಸರಕು ಸಾಗಿಸುವವರು ಇದ್ದಾರೆ. ಅವರಲ್ಲಿ ಕೆಲವರು ಕೃಷಿಗಾಗಿ ನೇಗಿಲು ನಂಬಿದ ಕಾಯಕವನ್ನು ವ್ರತದಂತೆ ಪಾಲಿಸುತ್ತ ಬಂದಿದ್ದಾರೆ. ಆದರೆ, ಕಳೆದ ತಲೆಮಾರಿನಿಂದಲೂ ಇದನ್ನೇ ನಂಬಿ ದವರು ಮಾತ್ರ ತಮ್ಮ ಮಕ್ಕಳನ್ನೇ ಸಾರಥಿ ಮಾಡಿ ಮರೆಯಾಗಿದ್ದಾರೆ.ಆದರೆ, ಅವರ ಮಕ್ಕಳು ಮಾತ್ರ ಆಧುನಿಕ ಜೀವನಕ್ಕೆ ಹೊಂದಿಕೊಂಡು ಬಾಳಿನ ಬಂಡಿ ಎಳೆಯುತ್ತಿಲ್ಲ. ಅವುಗಳ ಪೋಷಣೆಯ ಭಾರಕ್ಕೆ ನಲುಗಿ ತಮ್ಮ ಮರದ ಗಾಡಿಗಳಿಗೆ ಇತಿಶ್ರೀ ಹೇಳುವ ಹಂತ ತಲುಪಿದ್ದಾರೆ.ಮುಂಜಾವಿನಲ್ಲಿ ಸದ್ದು ಮಾಡುತ್ತಿದ್ದ ಎತ್ತುಗಳ ಜಾಗದಲ್ಲಿ ಈಗ ಟ್ರಿಲ್ಲರ್, ಟ್ರ್ಯಾಕ್ಟರ್‌ಗಳ ಶಬ್ದವೇ ಕೇಳಿಸು ತ್ತಿರುವುದು ಇದಕ್ಕೆ ಮೂಲ ಕಾರಣ. ಹೀಗಾಗಿ, ಕುಶಲರಹಿತ ಕಾರ್ಮಿಕರ ಭಾಗವಾಗಿದ್ದ ಇಂತಹ ಕಸುಬು ಕಣ್ಮರೆಯಾಗುತ್ತಿವೆ.`ಈಗ ಮೊದಲಿನಂತೆ ಉಳುಮೆ ಹಾಗೂ ಸರಕು ಸಾಗಿಸಲೂ ಯಾರೊ ಬ್ಬರು ನಮ್ಮನ್ನು ಕರೆದು ಕೂಲಿ ಕೊಡು ತ್ತಿಲ್ಲ. ನಮಗೆ ಇರುವ ಐದಾರು ಎಕರೆ ಜಮೀನು ಇರುವುದರಿಂದ ಜೀವನ ಸಾಗಿಸುತ್ತಿದ್ದೇವೆ. ಸ್ವಂತ ಕಾರ್ಯ, ಮನೆಗೆಲಸಕ್ಕಷ್ಟೇ ಎತ್ತಿನಬಂಡಿ ಬಳಸು ತ್ತೇವೆ. ಇದನ್ನೇ ನಂಬಿ ಬಾಡಿಗೆ ಅರಸುವುದು ಕನಸಾಗಿದೆ~ ಎನ್ನುತ್ತಾರೆ ಯರಿಯೂರು ಗ್ರಾಮದ ಯುವಕರು.`ಕೆಲವು ಕುಟುಂಬಗಳು ಗೊಬ್ಬರ, ಇಟ್ಟಿಗೆ, ಕಲ್ಲು, ಮಣ್ಣು ತರಲಷ್ಟೇ ಎತ್ತಿನಗಾಡಿ ಬಳಸುತ್ತಾರೆ. ಗದ್ದೆಗಳಲ್ಲಿ ಕಬ್ಬು ಇಲ್ಲವೆ ಧವಸ-ಧಾನ್ಯ ಸಾಗಣೆಗೆ ಮಾತ್ರ ಕರೆಯುತ್ತಾರೆ. ದಿನಪೂರ್ತಿ ಕೆಲಸಕ್ಕೆ ಮಿನಿ ವಾಹನಗಳು ಬಳಕೆಯಲ್ಲಿವೆ. ಹಾಗಾಗಿ, ಅವುಗಳ ನಿರ್ವಹಣೆ ನಮಗಷ್ಟೇ. ಮಕ್ಕಳನ್ನು ಓದಿನ ಕಡೆ ಹಚ್ಚಿದ್ದೇವೆ~ ಎನ್ನುತ್ತಾರೆ ಅವರು.`ದಿನವೊಂದಕ್ಕೆ ಗಾಡಿಗೆ 500 ರೂ, ಉಳುಮೆಗೆ 250 ರೂಪಾಯಿ ಬಾಡಿಗೆ ಸಿಗುತ್ತಿತ್ತು. ಆದರೆ, ಮಿನಿ ಆಟೋ ಹಾಗೂ ಟ್ರಿಲ್ಲರ್‌ಗಳ ಭರಾಟೆಯಿಂದ ನಮ್ಮನ್ನು ಕೇಳುವವರು ಇಲ್ಲ. ಪಶು ಆಹಾರ ಹಾಗೂ ಮೇವಿಗಾಗಿ 200 ರೂಗಿಂತ ಹೆಚ್ಚು ವ್ಯಯಿಸಬೇಕು. ಒಮ್ಮೆ ಎತ್ತುಗಳ ಪಾದಗಳಿಗೆ ಲಾಳ ಕಟ್ಟಿಸಲು 400 ರೂ ನೀಡಬೇಕಿದೆ. ಎತ್ತಿನಗಾಡಿ ನಂಬಿಕೊಂಡು ತುತ್ತಿನಚೀಲ ತುಂಬಿಸಿ ಕೊಳ್ಳುವುದು ಕಷ್ಟಕರ~ ಎನುತ್ತಾರೆ ಎತ್ತಿನಗಾಡಿ ಒಡೆಯರಾದ ಶಿವಮಲ್ಲು ಮತ್ತು ಶೇಖರಾಜು.ಕೂಲಿಯಾಳು ಕೊರತೆ: ಮತ್ತೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಕೂಲಿಯಾಳು ಕೊರತೆಯೂ ಇದೆ. ಎತ್ತಿನಗಾಡಿ ಹೊಂದಿದವರು ಕಬ್ಬು ಕಟಾವು ಹಾಗೂ ಸಾಗಣೆಗೆ ಕೂಲಿಯಾಳು ಗಳನ್ನು ನಂಬಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಕಾರ್ಮಿಕರಿಗೆ ನೀಡುವ ಕೂಲಿ ಯಲ್ಲೂ ಏರಿಕೆಯಾಗಿದೆ. ಎತ್ತುಗಳ ಪೋಷ ಣೆಯೂ ದುಬಾರಿ. ಹಾಗಾಗಿ, ಎತ್ತಿನಗಾಡಿ ನಂಬಿದವರಿಗೆ ಲಾಭ ಗಿಟ್ಟುತ್ತಿಲ್ಲ.ಹಲವು ಗ್ರಾಮಗಳಲ್ಲಿ ಎತ್ತಿನಗಾಡಿ ಗಳಲ್ಲಿ ಸರಕು ಸಾಗಿಸಿ ಜೀವಿಸುವವರು ಇದ್ದಾರೆ. ಆದರೆ, ಎಷ್ಟು ಮಂದಿ ಎತ್ತಿನಗಾಡಿ ಹೊಂದಿದ್ದಾರೆ ಎಂಬ ಮಾಹಿತಿ ಇಲ್ಲ. ಅಸಂಘಟಿತರಾಗಿರುವ ಎತ್ತಿನಗಾಡಿ ಒಡೆಯರು ಇಂದಿಗೂ ಸಂಘಟಿತರಾಗಿಲ್ಲ. ಇವರ ಬದುಕಿನ ಬಾಳಿನ ಪಥದಲ್ಲಿ ಹೊಂಗಿರಣ ಮೂಡುವುದು ಯಾವಾಗ ಎಂಬ ಪ್ರಶ್ನೆ ಈಗ ಎದುರಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry