ಶನಿವಾರ, ಮಾರ್ಚ್ 6, 2021
31 °C

ಬಾಳಿಗೆ ನೆರಳಾದ ಹಿಪ್ಪುನೇರಳೆ ಬೆಳೆ

–ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

ಬಾಳಿಗೆ ನೆರಳಾದ ಹಿಪ್ಪುನೇರಳೆ ಬೆಳೆ

ಸಂತೇಮರಹಳ್ಳಿ: ಸಮೀಪದ ಯಡಿಯೂರು ಗ್ರಾಮದ ಶೇಖರ್‌ಮೂರ್ತಿ ಅವರು ಬಿಎಸ್ಸಿ ಪದವಿ ಮುಗಿಸಿದ ತಕ್ಷಣ ದೇವನೂರು ಗ್ರಾಮದ ಸಹಕಾರ ಬ್ಯಾಂಕ್‌ನಲ್ಲಿ ಕಾರ್ಯದರ್ಶಿಯಾಗಿ ನೌಕರಿ ಗಿಟ್ಟಿಸಿಕೊಂಡರು.ಮೂಲತಃ ರೇಷ್ಮೆ ಕೃಷಿಕರಾಗಿದ್ದ ಅವರಿಗೆ ತಮ್ಮ ಸ್ವಗ್ರಾಮದಲ್ಲಿ ಎರಡೂವರೆ ಎಕರೆ ಜಮೀನು ಸಾಗುವಳಿ ಮಾಡದೇ ಇರುವುದು ಅವರ ಮನಸಿಗೆ ನೋವುಂಟು ಮಾಡುತ್ತಿತ್ತು. ಈ ಜಮೀನು ಅವರನ್ನು ಕೈಬೀಸಿ ಕರೆಯುತ್ತಿತ್ತು. ಕೊನೆಗೆ, ನೌಕರಿಗೆ ರಾಜೀನಾಮೆ ನೀಡಿ ಗ್ರಾಮಕ್ಕೆ ಆಗಮಿಸಿದರು.ಆ ವೇಳೆಯಲ್ಲಿಯೇ ರಾಜ್ಯ ಸರ್ಕಾರ ಜಪಾನ್‌ ವಿ1 ಹಿಪ್ಪುನೇರಳೆ  ತಳಿಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಪರಿಚಯಿಸಿತು. ಅಲ್ಲಿ ಯಶಸ್ವಿಯಾದ ಬಳಿಕ ರೇಷ್ಮೆ ಇಲಾಖೆಯು ಚಾಮರಾಜನಗರ ಜಿಲ್ಲೆಯ ಪ್ರಗತಿಪರ ರೈತರಿಗೆ ವಿ1 ಹಿಪ್ಪುನೇರಳೆ ತಳಿ ಬಗ್ಗೆ ಮಾಹಿತಿ ನೀಡಲು ಮುಂದಾಯಿತು. ದುರಂತವೆಂದರೆ ಆ ವೇಳೆಗೆ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಸಂಪೂರ್ಣವಾಗಿ ನೆಲಕಚ್ಚಿತ್ತು.ಈ ರೇಷ್ಮೆ ತಳಿಗೆ ಆಕರ್ಷಿತರಾದ ಶೇಖರ್‌ಮೂರ್ತಿ ತಮ್ಮ ಎರಡೂವರೆ ಎಕರೆ ಜಮೀನಿಗೆ ಕೊಳವೆಬಾವಿ ಕೊರೆಸಿದರು. ಈ ತಳಿಯನ್ನು 3X2 ಮತ್ತು 5 ಅಡಿ ಅಗಲದಲ್ಲಿ ನೆಟ್ಟು ಹನಿ ನೀರಾವರಿ ಅಳವಡಿಸಿದರು. ಜಮೀನಿನಲ್ಲಿ ಮಟ್ಟಾಳೆ ಗರಿಯ ಶೆಡ್‌ ನಿರ್ಮಿಸಿಕೊಂಡು ರೇಷ್ಮೆ ಹುಳು ಸಾಕಾಣಿಕೆ ಆರಂಭಿಸಿದರು.ರೇಷ್ಮೆ ಬೆಳೆಯ ಅಭಿವೃದ್ಧಿಗೆ ಇಲಾಖೆಯು ಎಕರೆಗೆ ₨ 35 ಸಾವಿರ, ಗೊಬ್ಬರಕ್ಕೆ  ₨ 15 ಸಾವಿರ ಸಹಾಯಧನ ನೀಡಿತು. ಇಲಾಖೆ ನೀಡಿದ ಸಹಾಯ ಅವರಿಗೆ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಲು ಮತ್ತಷ್ಟು ಪ್ರೇರೇಪಿಸಿತು.ಪ್ರಸ್ತುತ ಅವರು ಮೈಸೂರು ಕೇಂದ್ರ ರೇಷ್ಮೆ ಬಿತ್ತನೆ ಕೋಠಿಯಿಂದ ಪ್ರತಿ ಬೆಳೆಗೆ ಸಿಎಸ್ಆರ್ 250 ಮೊಟ್ಟೆ ತೆಗೆದುಕೊಂಡು ನಂಜನಗೂಡು ತಾಲ್ಲೂಕಿನ ಬಸವನಪುರದ ಚಾಕಿ ಕೇಂದ್ರಕ್ಕೆ ಕೊಡುತ್ತಾರೆ. ಕೇಂದ್ರದವರು ರೇಷ್ಮೆ ಮರಿಯನ್ನು 2ನೇ ಜ್ವರದ ನಂತರ ಕೊಡುತ್ತಾರೆ. ಅಲ್ಲಿಯವರೆಗೆ ₨ 5 ಸಾವಿರ ಮಾತ್ರ ಖರ್ಚಾಗಿರುತ್ತದೆ.ಕೇವಲ 17 ದಿನದಲ್ಲಿ ಹುಳು ಹಣ್ಣಾಗುತ್ತದೆ. ತಂದೆ ಮತ್ತು ಅವರ ಮಗ ನಿರಂತರವಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ₨ 5 ಸಾವಿರ ಹೊರತುಪಡಿಸಿ ಇತರೇ ಖರ್ಚು ಬರುವುದಿಲ್ಲ.ರೇಷ್ಮೆ ಗೂಡುಗಳನ್ನು ರಾಮನಗರದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ  ಮಾರಾಟ ಮಾಡುತ್ತಾರೆ. ಪ್ರತಿ ಕೆಜಿಗೆ ₨ 390 ರಿಂದ ₨ 420 ರವರೆಗೂ ಮಾರಾಟ ಮಾಡಿದ್ದಾರೆ. ಪ್ರತಿ ಬೆಳೆಗೆ 70ರಿಂದ 80 ಕೆಜಿವರೆಗೂ ರೇಷ್ಮೆ ಗೂಡು ಬೆಳೆಯುತ್ತಾರೆ. ವರ್ಷದಲ್ಲಿ 10 ತಿಂಗಳು ಬೆಳೆ ತೆಗೆದು ಪ್ರತಿ ಬೆಳೆಗೆ ₨ 40 ಸಾವಿರದವರೆಗೆ ಸಂಪಾದಿಸುತ್ತಾರೆ.ವಿದ್ಯಾರ್ಥಿಗಳಿಗೆ ಪಾಠ: ರಾಜ್ಯದ ವಿವಿಧ ಮೂಲೆಗಳಿಂದ ಕುದೇರು ರೇಷ್ಮೆ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ತಪ್ಪದೇ ಇವರ ಹುಳು ಸಾಕಾಣಿಕೆ ಕೇಂದ್ರಕ್ಕೆ ಆಗಮಿಸಿ ತರಬೇತಿಯ ಅನುಭವ ಪಡೆದು ಹೋಗುತ್ತಾರೆ.ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಭಾಗದ ರೈತರು ಶೇಖರ್‌ಮೂರ್ತಿ ಅವರ ಹುಳು ಸಾಕಾಣಿಕೆ ಕೇಂದ್ರಕ್ಕೆ ಬಂದು ಸಲಹೆ ಪಡೆದುಕೊಂಡು ಹೋಗುವುದು ಉಂಟು.‘ಈ ಕಸುಬು ಅವಲಂಬಿಸಿಕೊಂಡರೆ ಪ್ರತಿ ತಿಂಗಳು ಹಣಗಳಿಸಬಹುದು. ಮನೆ ಮಂದಿಗೆಲ್ಲಾ ಕೆಲಸ ಸಿಗುತ್ತದೆ. ಸೋಮಾರಿತನಕ್ಕೆ ಅವಕಾಶವಿಲ್ಲ. ಬೇರೆಡೆ ಹೋಗಿ ದುಡಿಯುವುದು ತಪ್ಪುತ್ತದೆ. ಈ ಚಟುವಟಿಕೆಯ ಅಭಿವೃದ್ಧಿಗೆ ರೇಷ್ಮೆ ಇಲಾಖೆ ಸಹಾಯ ನೀಡುತ್ತಾ ಬಂದಿದೆ. ನಾನು ಇತರೇ ರೈತರಿಗೂ ಸಲಹೆ ನೀಡುತ್ತಾ ಬಂದಿದ್ದೇನೆ. ರೇಷ್ಮೆ ಹುಳು ಸಾಕಾಣಿಕೆಯಲ್ಲಿ ನೆಮ್ಮದಿ ಸಿಕ್ಕಿದೆ’ ಎನ್ನುತ್ತಾರೆ ಶೇಖರ್‌ಮೂರ್ತಿ.ಮಾದರಿ ರೈತ

‘ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶೇಖರ್‌ಮೂರ್ತಿ ನಿರಂತರವಾಗಿ ದುಡಿಯುತ್ತಾರೆ. ಆಳುಕಾಳು ಬಳಸಿಕೊಳ್ಳುವುದಿಲ್ಲ. ರೇಷ್ಮೆ ಕೃಷಿಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇತರೇ ರೈತರಿಗೆ ಅವರು ಮಾದರಿಯಾಗಿದ್ದಾರೆ’

- ರೈತ ವೈ.ಎಂ. ನಾಗಣ್ಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.