ಬಾಳು `ಬೀಸುವ ಕಲ್ಲು'...

ಮಂಗಳವಾರ, ಜೂಲೈ 23, 2019
20 °C

ಬಾಳು `ಬೀಸುವ ಕಲ್ಲು'...

Published:
Updated:

ಆ ಹುಡುಗ ಗಿಡದ ಕೆಳಗೆ ತನ್ಮಯನಾಗಿ ಕಲ್ಲು ಕಟೆಯುತ್ತಿದ್ದ. ನಾನು ಮುಂದೆ ಹೋಗುವುದನ್ನು ನಿಲ್ಲಿಸಿ ಅವನನ್ನೇ ನೋಡುತ್ತ ನಿಂತೆ. ಮತ್ತಷ್ಟು ಅವನ ಸಮೀಪ ಹೋದೆ. ತೀರಾ ಹತ್ತಿರದಲ್ಲೇ ನಾನು ನಿಂತಿದ್ದರೂ ಆತ ನನ್ನನ್ನು ಗಮನಿಸಲೇ ಇಲ್ಲ. ಅವನು ಚೌಕಾಕಾರದ ಕಲ್ಲಿನಲ್ಲಿ ಗೋಲಾಕಾರದ ಒರಳನ್ನು ಕಟೆಯುತ್ತಿದ್ದ. ಒರಳು ಎಂದರೆ ಏನು ಎಂದು ಬಹುತೇಕ ನಗರದ ಜನರಿಗೆ ಗೊತ್ತಿಲ್ಲ. ಹಳ್ಳಿಗರು ಇದನ್ನು ಒಳ್ಳ ಎನ್ನುತ್ತಾರೆ. ಈ ಒಳ್ಳ ಹಾಗೂ ಕಲ್ಲು (ಬೀಸುವ ಕಲ್ಲು) ಬೇಕಾಗುವುದು ಮದುವೆಯ ಸಮಯದಲ್ಲಿ. ಅದೂ ಪೂಜೆ ಮಾಡಲು ಮಾತ್ರ. ಒಳಕಲ್ಲು ಪೂಜೆ ಎಂಬ ಸಾಂಪ್ರದಾಯಿಕ ಶಾಸ್ತ್ರದೊಂದಿಗೆ ಮದುವೆಯ ಎಲ್ಲ ಕಾರ್ಯಗಳು ಶುಭಾರಂಭವಾಗುತ್ತವೆ. ಅಷ್ಟು ಬಿಟ್ಟರೆ ಒಳ್ಳ ಹಾಗು ಕಲ್ಲಿಗೆ ಸದ್ಯದ ದಿನಗಳಲ್ಲಿ ಯಾವ ವಿಶೇಷ ಕಾರ್ಯವೂ ಇರುವುದಿಲ್ಲ.ಈಗ ಒರಳು ಹಾಗು ಬೀಸುವ ಕಲ್ಲುಗಳ ಎಲ್ಲ ಕೆಲಸವನ್ನು ವಿದ್ಯುತ್‌ಚಾಲಿತ ಮಿಕ್ಸರ್ ಹಾಗು ಗ್ರೈಂಡರ್‌ಗಳು ಮಾಡಿ ಮುಗಿಸುತ್ತವೆ. ಈ ಆಧುನಿಕ ಯುಗದಲ್ಲಿ ಈ ಹುಡುಗ ಕಟೆಯುವ ಕಲ್ಲುಗಳನ್ನು ಯಾರು ಖರೀದಿಸುತ್ತಾರೆ ಎಂಬ ಕುತೂಹಲ ನನಗೆ. ಅದಕ್ಕಾಗಿ ಅವನನ್ನು ಮಾತಿಗೆಳೆಯಲು ಪ್ರಯತ್ನಿಸಿದೆ.ಈ ಒರಳು ಕಲ್ಲಿಗೆ ಎಷ್ಟು ಎಂದು ಕೇಳಿದೆ. ಆತ ಒಂಬತ್ತು ನೂರು ರೂಪಾಯಿ ಎಂದ. ಇಂಥ ಒಂದು ಕಲ್ಲು ಕಟೆಯಲು ನಿನಗೆ ಎಷ್ಟು ಸಮಯ ಬೇಕು ಎಂದೆ. ಮೂರು ಗಂಟೆ ಸಾಕು ಎಂದ. ನನಗೆ ಅಚ್ಚರಿಯಾಯಿತು. ಅಷ್ಟು ಚಿಕ್ಕ ಹುಡುಗ ಗಂಟೆಗೆ ಮೂರು ನೂರು ರೂಪಾಯಿ ಗಳಿಸುತ್ತಾನೆಂದರೆ ಅಚ್ಚರಿಯಾಗದೇ ಇರುತ್ತದೆಯೇ?! ನಿನಗೀಗ ಎಷ್ಟು ವರ್ಷ ಎಂದೆ. ಹದಿನೇಳು ಎಂದು ಉತ್ತರಿಸಿದ. 12 ವರ್ಷದವನಿದ್ದಾಗಿನಿಂದಲೇ ಈ ಕಲ್ಲು ಕಟೆಯುವ ಕೆಲಸಕ್ಕೆ ತೊಡಗಿದ್ದಾನೆ ಎಂಬುದೂ ತಿಳಿಯಿತು. ನನ್ನ ಯಾವ ಪ್ರಶ್ನೆಗೂ ಆತ ಆಸಕ್ತಿಯಿಂದ ಮುಖಕೊಟ್ಟು ಮಾತನಾಡಲಿಲ್ಲ. ಅವನ ಲಕ್ಷ್ಯವೆಲ್ಲ ಕಲ್ಲು, ಉಳಿ ಹಾಗೂ ಸುತ್ತಿಗೆಯ ಕಡೆಗೇ ಇತ್ತು. ಅವನ ಫೋಟೊ ತೆಗೆಯಲು ಮುಂದಾದಾಗಲೂ ನನ್ನ ಕಡೆಗೆ ತಿರುಗಿಯೂ ನೋಡಲಿಲ್ಲ. ಈಗಲೇ ಅವನನ್ನು ಮಾತನಾಡಿಸುವುದು ಸರಿಯಲ್ಲ, ಮತ್ತೊಮ್ಮೆ ಈ ಕಡೆಗೆ ಬಂದರಾಯಿತು ಎಂದುಕೊಂಡು ಅಲ್ಲಿಂದ ಹೊರಟೆ.ಎರಡು ದಿನಗಳ ನಂತರ ಮತ್ತೆ ಅಲ್ಲಿಗೆ ಹೋದೆ. ಅದು ವಿಜಾಪುರದ ತೊರವಿ ರಸ್ತೆಯಲ್ಲಿರುವ ಶಾಸ್ತ್ರಿ ನಗರ. ಅಲ್ಲಿಯ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಮರದ ನೆರಳಿನಲ್ಲಿ ಕಲ್ಲು ಕಟೆಯುವ ಕೆಲಸ ಕಳೆದ ಆರು ತಿಂಗಳಿಂದ ನಡೆಯುತ್ತಿದೆಯಂತೆ. ಕಾಡುಗಲ್ಲುಗಳು ಅಡುಗೆ ಮನೆಯ ಸುಂದರ ಉಪಕರಣಗಳಾಗಿ ಅಲ್ಲಿ ರೂಪ ಪಡೆಯುತ್ತಿವೆ. ಸುತ್ತಿಗೆ, ಉಳಿಗಳು ಅಲ್ಲಿನ ಉಪಕರಣಗಳಾದರೆ, ವಿವಿಧ ಗಾತ್ರದ ಕಪ್ಪು ಹಾಗು ಬಿಳಿ ಕಲ್ಲುಗಳು ಅಲ್ಲಿನ ಕಚ್ಚಾ ಪದಾರ್ಥಗಳು. ಅಂದು ಆ ಹುಡುಗ ಅಲ್ಲಿ ಕಾಣಲಿಲ್ಲ. ಆತನ ಮಾವ ರಾಜು ವಡ್ಡರ ಕಲ್ಲು ಕಟೆಯುವ ಕೆಲಸದಲ್ಲಿ ತೊಡಗಿದ್ದ. ಅವನ ಜೊತೆಗೆ ಇನ್ನೊಬ್ಬ ವ್ಯಕ್ತಿ ಮತ್ತೊಂದು ಕಲ್ಲಿಗೆ ರೂಪ ಕೊಡುತ್ತಿದ್ದ.ರಾಜುನೊಂದಿಗೆ ನಾನು ಮಾತಿಗಿಳಿದೆ. ರಾಜು ಅವನ ಅಳಿಯನಂತಲ್ಲ. ನಾನು ಕೇಳಿದ್ದಕ್ಕೆ ಚೆನ್ನಾಗಿಯೇ ಉತ್ತರಿಸಿದ. ಕೆಲಸ ಮಾಡುತ್ತಲೇ ನನ್ನೊಂದಿಗೆ ಮಾತಿಗಿಳಿದ. `ಈಗ ಶಹರದವರು ಈ ಕಲ್ಲುಗಳನ್ನು ಕೊಳ್ಳುತ್ತಿಲ್ಲ. ಹಳ್ಳಿಯಿಂದ ಬಂದವರು ಮಾತ್ರ ಚೌಕಸಿ ಮಾಡಿ ಖರೀದಿಸುತ್ತಾರೆ. ದಿನವೂ ಮೂರ‌್ನಾಲ್ಕು ಕಲ್ಲುಗಳು ಮಾರಾಟವಾಗುತ್ತವೆ. ಅನೇಕ ಬಾರಿ ನಾವೇ ಕಟೆದ ಕಲ್ಲುಗಳನ್ನು ಹಳ್ಳಿಯ ಸಂತೆಗಳಿಗೆ ಮಾರಲು ಒಯ್ಯುತ್ತೇವೆ. ಅಲ್ಲೂ ಮೊದಲಿನಂತೆ ವ್ಯಾಪಾರ ಆಗುವುದಿಲ್ಲ. ಹಳ್ಳಿಗಳಲ್ಲೂ ಮಿಕ್ಸರ್-ಗ್ರೈಂಡರ್ ಬಳಸುತ್ತಿದ್ದಾರೆ. ನಮ್ಮ ಉದ್ಯೋಗ ಬಹಳ ದಿನ ನಡೆಯುವಂತೆ ಕಾಣುವುದಿಲ್ಲ' ಎಂದು ಆತಂಕ ವ್ಯಕ್ತಪಡಿಸಿದ.ಶಕ್ತಿಯುತ ಆಹಾರ

ಮಿಕ್ಸರ್‌ನಲ್ಲಿ ತಯಾರಾದ ಚಟ್ನಿ-ಆಹಾರ ರುಚಿಯಾಗಿರುವುದಿಲ್ಲ. ಅದರ ಭಾರಿ ವೇಗಕ್ಕೆ ಆಹಾರದ ಸತ್ವ ಸುಟ್ಟು ನಿಸ್ಸತ್ವವಾಗುತ್ತದೆ. ಕಲ್ಲಿನಲ್ಲಿ ಕುಟ್ಟಿದ ಆಹಾರ ಶಕ್ತಿಯುತವೂ ಆಗಿರುತ್ತದೆ ಹಾಗು ರುಚಿಕರವೂ ಆಗಿರುತ್ತದೆ ಎನ್ನುತ್ತಾ, ತಾನು ತಯಾರಿಸುವ ಕಲ್ಲುಗಳ ಪರವಾಗಿ ಮಾತನಾಡಿದ. ಒರಳು, ಬೀಸುವ ಕಲ್ಲು, ರೊಟ್ಟಿ ಕಲ್ಲು, ಚಟ್ನಿ ಕಲ್ಲು, ರುಬ್ಬುವ ಗುಂಡು ಮುಂತಾದವುಗಳ ಬಗ್ಗೆ ವಿವರಿಸಿ ಗುಣಗಾನ ಮಾಡಿದ. ಒಂದು ಕಲ್ಲು ತೊಗೊಂಡು ಹೋಗ್ರಿ ಎಂದು ಒತ್ತಾಯಿಸಿದ. ಬೇಕಾದ್ರೆ ಬೆಲೆ ಕಡಿಮೆ ಮಾಡಿ ಕೊಡ್ತೀನಿ ಎಂದೂ ಹೇಳಿದ. ಮತ್ತೊಮ್ಮೆ ಬರ‌್ತೀನಿ ಎಂದು ಹೇಳಿ ಅಲ್ಲಿಂದ ಹೊರಟೆ.ಒಡ್ಡರಲ್ಲಿ ಬಹಳ ಉಪಜಾತಿಗಳವೆಯಂತೆ. ಕಲ್ಲು ಒಡ್ಡರು, ಮಣ್ಣು ಒಡ್ಡರು, ಗಾಡಿ ಒಡ್ಡರು, ಗೋಡೆ ಒಡ್ಡರು... ಎಂದೆಲ್ಲ ಅವರನ್ನು ಗುರುತಿಸುತ್ತಾರೆ. ಕಲ್ಲು ಒಡ್ಡರನ್ನು ಶಿಲ್ಪಕಾರರು ಎಂದೂ ಕರೆಯುತ್ತಾರೆ. ಅವರೆಲ್ಲ ತಾವು ಜಕಣಾಚಾರಿ-ಡಕಣಾಚಾರಿ ವಂಶಜರು ಎಂದು ಹೇಳಿಕೊಳ್ಳುತ್ತಾರೆ. ಕೆಲವರು ಒಡೆಯರಾಜಲು ಎಂಬ ರಾಜ ಮನೆತನದವರು ಎನ್ನುತ್ತಾರೆ. ಸಾಮಾನ್ಯವಾಗಿ ಹಿಂದೆಲ್ಲ ಒಡ್ಡರೇ ಕಲ್ಲು ಕಟೆಯುವ, ಮನೆ ಕಟ್ಟುವ, ಫರಸಿ ಜೋಡಿಸುವ ಕೆಲಸಗಳನ್ನು ಮಾಡುತ್ತಿದ್ದರು. ಈಗ ಹಾಗಿಲ್ಲ. ಎಲ್ಲ ಜಾತಿ ಜನಾಂಗದವರು ಕಟ್ಟುವ-ಕಡೆಯುವ ಕೆಲಸ ಮಾಡುತ್ತಿದ್ದಾರೆ. ಒಡ್ಡರು ತಮ್ಮ ಕೆಲಸದ ಮೇಲಿನ ಏಕಸ್ವಾಮ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.ಈಗಲೂ ನನ್ನ ತಲೆಯಲ್ಲಿ ಮೊದಲ ದಿನ ಕಂಡ ಆ ಹುಡುಗನ ಚಿತ್ರ ಮಾಸದೆ ಉಳಿದಿದೆ. ಇದು ದುಡಿಯುವ ವಯಸ್ಸಲ್ಲ; ಕಲಿಯುವ ವಯಸ್ಸು ಎಂಬುದು ಅವನಿಗೆ ಗೊತ್ತೇ ಇಲ್ಲ. ಅವನಿಗೆ ಮತ್ತು ಅವನಂಥ ಬಾಲಕಾರ್ಮಿಕರಿಗೆ ಇದನ್ನು ತಿಳಿಸುವವರಾದರೂ ಯಾರು? ದುಡಿತದಲ್ಲೇ ತಮ್ಮ ಬಾಲ್ಯವನ್ನು ಕಳೆದುಕೊಳ್ಳುವ ಇಂಥ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry