ಬಾಳು ಬೆಳಗಿದ ಬಾಳೆ

7

ಬಾಳು ಬೆಳಗಿದ ಬಾಳೆ

Published:
Updated:

ಎತ್ತ ತಿರುಗಿ ನೋಡಿದರೂ ಹಸಿರು... ಆ ಹಸಿರ ರಾಶಿಯಲ್ಲಿ ತೂಗುತ್ತಿರುವ ಲಕ್ಷಾಂತರ ಬಾಳೆಗೊನೆಗಳು... ಗೊನೆಯ ಭಾರಕ್ಕೆ ನೆಲಕ್ಕೆ ಬಾಗಿದ್ದ ಗಿಡಗಳು... ಬಾಗಿದ ಗಿಡಗಳಿಗೆ ಆಸರೆಯಾಗಿದ್ದ ಊರುಗೋಲು...ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ `ಅರಕೆರೆ' ಗ್ರಾಮದಲ್ಲಿನ 120 ರೈತರು ಕೂಡಿಕೊಂಡು ಮೂರು ಸಾವಿರ ಹೆಕ್ಟೇರ್ ಜಮೀನಿನಲ್ಲಿ ಕೈಗೊಂಡಿರುವ ಬಾಳೆ ಕೃಷಿಯ ಚಿತ್ರಣ ಇದು.ಬಾಳೆ ಕೃಷಿ ರೈತರಿಗೆ ಹೊಸದೇನೂ ಅಲ್ಲ. ಆದರೆ ಕೀಟಹಾವಳಿ, ಇಳುವರಿ ಕುಂಠಿತ, ದರ ಕುಸಿತದಿಂದಾಗಿ ಬೆಳೆಗಾರರು ಬಾಳೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಭಾಗದ ಮಣ್ಣು ಭತ್ತ, ಕಬ್ಬು ಬೆಳೆಗಳಿಗೆ ಮಾತ್ರ ಸೂಕ್ತ ಎನ್ನುವ ಕಾರಣಕ್ಕೆ ಇದುವರೆಗೂ ಮೆಕ್ಕೆಜೋಳ, ಕಬ್ಬಿಗೆ ಜೋತುಬಿದ್ದ ರೈತರು ಈಗ ಕೃಷಿಯಲ್ಲಿ ನಾನಾ ಪ್ರಯೋಗಗಳಿಗೆ ಕೈ ಹಾಕತೊಡಗಿದ್ದಾರೆ. ಇದರ ಪರಿಣಾಮವಾಗಿ ಅರಕೆರೆ ಗ್ರಾಮ ಸಂಪೂರ್ಣ `ಬಾಳೆ ಬೆಳೆಗಾರರ ಗುಚ್ಛ ಗ್ರಾಮ'ವಾಗಿ ರೂಪುಗೊಂಡಿದೆ. ಇಲ್ಲಿನ 120 ರೈತರು ಈ ಗುಚ್ಛ ಗ್ರಾಮ ಪಟ್ಟಿಯಲ್ಲಿದ್ದಾರೆ. ತಮ್ಮ ತಮ್ಮ ಹೊಲಗಳಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಯನ್ನು ಸಾಮೂಹಿಕವಾಗಿ ಚರ್ಚೆ ನಡೆಸುವ ಮೂಲಕ ಅವರು ಹೊಲಗಳತ್ತ ಹೆಜ್ಜೆಹಾಕುತ್ತಾರೆ.ಬಿತ್ತನೆ ನಂತರ ಕೈಗೊಳ್ಳಬೇಕಾದ ಔಷಧೋಪಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಮಾದರಿ ಕೃಷಿ ಚಟುವಟಿಕೆ ತಮಿಳುನಾಡಿನಲ್ಲಿದ್ದರೂ, ಅಲ್ಲಿಯದು ಹೈಟೆಕ್ ತಾಂತ್ರಿಕ ಕೃಷಿ ಚಟುವಟಿಕೆ. ಮಾರುಕಟ್ಟೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ರೈತರು ಅನುಸರಿಸುತ್ತಿರುವ ಉಪಾಯ. ಆದರೆ, ಗೇಣುದ್ದ ಭೂಮಿಯಲ್ಲಿ ಎಲ್ಲವನ್ನೂ ನಿಭಾಯಿಸಿ ಮಾರುಕಟ್ಟೆಗೆ ಸೆಡ್ಡು ಹೊಡೆಯುವ ಶಕ್ತಿ ನಮ್ಮ ರೈತರಿಗಿಲ್ಲ. ಆದರೆ, ಅರಕೆರೆಯ ರೈತರು ಆ ಶಕ್ತಿಯನ್ನು ಸಾಮೂಹಿಕ ಕೃಷಿ ಕಾರ್ಯದಲ್ಲಿ ಕಂಡುಕೊಂಡಿದ್ದಾರೆ.ಬಾಳೆ ಬೆಳೆಯಲು ಮನಸ್ಸು ಮಾಡುವ ಮುನ್ನ ತೋಟಗಾರಿಕೆ ಇಲಾಖೆಯ `ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ'ಯಡಿ ಇಲ್ಲಿನ ರೈತರು ನೂತನ ತಾಂತ್ರಿಕತೆಯ ಕುರಿತು ದಾವಣಗೆರೆಯಲ್ಲಿನ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿನ ವಿಷಯ ತಜ್ಞರ ಸಲಹೆ ಸೂಚನೆ ಪಡೆದುಕೊಂಡಿದ್ದಾರೆ. ಹೀಗಾಗಿ, ಇಂದು ರೈತರ ಹೊಲಗಳಲ್ಲಿ ಒಂದೊಂದು ಬಾಳೆಗೊನೆಗಳು 45 ಕೆ.ಜಿ. ತೂಗುತ್ತಿವೆ. ಅರಕೆರೆ ರೈತರನ್ನು ಜಿಲ್ಲೆಯ ಇತರ ಗ್ರಾಮದ ರೈತರೂ ಅನುಸರಿಸುತ್ತಿರುವ ಪರಿಣಾಮ ಈ ಮೊದಲು ಅಡಿಕೆ ಕೃಷಿಯಲ್ಲಿ ಅಂತರ ಬೆಳೆಯಾಗಿದ್ದ ಬಾಳೆ ಇಂದು ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿ ಪರಿವರ್ತನೆಗೊಳ್ಳುತ್ತಿದೆ.ಬೇಸಾಯ ಕ್ರಮ

ಬಾಳೆ ನಾಟಿ ಮಾಡುವ ಅಂತರ 9 /9, 9/8 ಅಥವಾ 6/6 ಅಡಿ. ಇದರಿಂದ ಕಡಿಮೆ ಗಿಡಗಳನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯಲು ಸಾಧ್ಯ. ಆದರೆ, ಈ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ `ಜಿ-9' ತಳಿಯ ಬಾಳೆಯನ್ನು ಒಂದು ಹೆಕ್ಟೇರಿಗೆ ಸುಮಾರು 3,333 ಗಿಡಗಳನ್ನು ನಾಟಿ ಮಾಡಬಹುದು (7/4ಅಡಿ ಅಂತರ), ಏಲಕ್ಕಿ ಬಾಳೆಯಾದರೆ ಒಂದು ಹೆಕ್ಟೇರಿಗೆ ಸುಮಾರು 3,890 ಗಿಡಗಳನ್ನು ನಾಟಿ ಮಾಡಬಹುದು (6/4 ಅಡಿ ಅಂತರ ).`20 ವರ್ಷಗಳಿಂದ ಅಡಿಕೆಯಲ್ಲಿ ಬಾಳೆ ಹಾಕುತ್ತ ಬಂದಿದ್ದೇನೆ. ಬಾಳೆಗೊನೆ ಅಷ್ಟು ದಷ್ಟಪುಷ್ಟವಾಗಿ ಬರುತ್ತಿರಲಿಲ್ಲ. ಬೆಳೆಗಾರರ ಸಂಘಕ್ಕೆ ಸೇರಿಕೊಂಡ ಮೇಲೆ ಒಂದು ಹೆಕ್ಟೇರಿಗೆ (ಎರಡೂವರೆ ಎಕರೆ) `ಜಿ-9' 3 ಸಾವಿರ ಬಾಳೆಗಿಡಗಳನ್ನು ನಾಟಿ ಮಾಡಿದೆ. ನಂತರ ಕೀಟ ಹಾವಳಿ, ನೀರು ನಿರ್ವಹಣೆಯನ್ನು ಸಕಾಲಕ್ಕೆ ತಕ್ಕಂತೆ ನಿರ್ವಹಿಸಿದೆ. ಬಾಳೆ ಕಂದುಗಳು ಸಪೂರವಾಗಿ ಮೇಲೆದ್ದವು. ಈಗ ಪ್ರತಿ ಗೊನೆ 40ರಿಂದ 50 ಕೆ.ಜಿ ತೂಗುತ್ತಿವೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ನಾನು 150 ಟನ್ ಬಾಳೆ ಬೆಳೆದಿದ್ದೇನೆ 'ಎನ್ನುತ್ತಾರೆ ಯುವ ರೈತರಾದ ಮಧುಕುಮಾರ್, ವೀರಭದ್ರಪ್ಪ.ಮಧ್ಯವರ್ತಿಗಳ ಹಾವಳಿ ಇಲ್ಲ

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಮತ್ತು ಗುಚ್ಛಗ್ರಾಮದ ಪ್ರಮುಖ ಧ್ಯೇಯ ರೈತರನ್ನು ಮಧ್ಯವರ್ತಿಗಳಿಂದ ರಕ್ಷಿಸದು. ಹೀಗಾಗಿ, ರೈತರು ಏಕದರ ಮಾರಾಟಕ್ಕೆ ನಿರ್ಧರಿಸುವ ಮೂಲಕ ಕಂಪೆನಿಗಳನ್ನು ಆಹ್ವಾನಿಸಿದ್ದಾರೆ. ಕಂಪೆನಿಗಳೇ ನೇರವಾಗಿ ರೈತರ ಹೊಲಗಳಿಗೆ ಧಾವಿಸುತ್ತಿರುವುದರಿಂದ ಮಧ್ಯವರ್ತಿಗಳಿಂದ ಈ ರೈತರು ಮುಕ್ತಿ ಪಡೆದಿದ್ದಾರೆ. ಭರಪೂರ ಇಳುವರಿ ಪಡೆದಿರುವ ರೈತರು ಪ್ರತಿ ಕೆ.ಜಿಗೆ ರೂ 8 ರಿಂದ ರೂ 9ಗೆ ದರ ನಿಗದಿಪಡಿಸಿದ್ದಾರೆ. ಹಾಗಾಗಿ, ಪ್ರತಿ ಗೊನೆಗಳು ರೈತರಿಗೆ 400 ರೂಪಾಯಿಯಿಂದ 500 ರೂಪಾಯಿವರೆಗೆ ಬಿಕರಿಯಾಗುತ್ತಿವೆ.ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಉದ್ದೇಶ ಮಹತ್ತರವಾಗಿದೆ. ಹೊಲದ ಸ್ವಚ್ಛತೆ ಕಾರ್ಯದಿಂದ ಗೊನೆ ಕಟಾವಿನವರೆಗೂ ಮಾಡುವ ಎಲ್ಲಾ ಕ್ರಮಗಳಿಗೂ ತೋಟಗಾರಿಕೆ ಇಲಾಖೆ ಸಹಾಯ ಧನವನ್ನು ನೀಡುತ್ತದೆ. `ಜಿ-9' ತಳಿಯ ಬಾಳೆ ಬೆಳೆದ ಸಾಮಾನ್ಯ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ1.27 ಲಕ್ಷ ಹಾಗೂ ಸಣ್ಣ ರೈತರಿಗೆ ರೂ 1.2 ಲಕ್ಷ ಅನುದಾನ ನೀಡಲಾಗುವುದು. ಏಲಕ್ಕಿ ಬಾಳೆ ಬೆಳೆದರೆ ಸಾಮಾನ್ಯ ಮತ್ತು ದೊಡ್ಡ ರೈತರಿಗೆ  ಪ್ರತಿ ಹೆಕ್ಟೇರಿಗೆ ರೂ 1,10,924 ಹಾಗೂ ಪರಿಶಿಷ್ಟ ಜಾತಿ, ಪಂಗಡದ ಸಣ್ಣ ರೈತರಿಗೆ 1.38 ಲಕ್ಷ ರೂಪಾಯಿಗಳನ್ನು ಪ್ರತಿ ಹೆಕ್ಟೇರಿಗೆ ನೀಡಲಾಗುತ್ತಿದೆ.ಒಂದು ಹೆಕ್ಟೇರ್‌ಗೆ ಕನಿಷ್ಠ ಐದು ಸಾವಿರ ರೂಪಾಯಿ ವೆಚ್ಚವಾಗಬಹುದು. ಉಳಿದಂತೆ ತಂತ್ರಜ್ಞಾನದ ಅನುಷ್ಠಾನಕ್ಕೆ ಜಿಲ್ಲೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ತಾಂತ್ರಿಕ ನೆರವು ಒದಗಿಸುತ್ತದೆ. ಹಾಗಾಗಿ, ಇದೊಂದು ರೀತಿ ರೈತರಿಗೆ ಲಾಟರಿ ಇದ್ದ ಹಾಗೆ ಎನ್ನುತ್ತಾರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ಬಸವನಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry