ಬಾಳೆಗೆ ಜೋಡಿ ಸೀಬೆ, ನುಗ್ಗೆ

7

ಬಾಳೆಗೆ ಜೋಡಿ ಸೀಬೆ, ನುಗ್ಗೆ

Published:
Updated:

ಇಂದು ಎಲ್ಲರಿಗೂ ಲಕ್ಷ ಲಕ್ಷ ಸಂಪಾದನೆ ಮಾಡುವ ಆಸೆ. ಅದಕ್ಕಾಗಿ ಉನ್ನತ ವಿದ್ಯಾಭ್ಯಾಸ ಮಾಡಿ ಕೃಷಿ ಕ್ಷೇತ್ರಕ್ಕೆ `ಗುಡ್‌ಬೈ' ಹೇಳಿ ಮಹಾನಗರಗಳತ್ತ ವಲಸೆ ಹೋಗುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ ಬಿ.ಬಿ.ಎಂ ಕಲಿತ ಯುವಕ, ನೌಕರಿಯ ಆಸೆಗೆ ಹೋಗದೆ, ಕೃಷಿಯಲ್ಲಿಯೇ ಭರ್ಜರಿ ಆದಾಯ ಗಳಿಸುತ್ತಿದ್ದಾರೆ!ಇವರ ಹೆಸರು ವೀರೇಶರೆಡ್ಡಿ ಬೂದಿಹಾಳ. ಊರು ಕೊಪ್ಪಳ ತಾಲ್ಲೂಕಿನ ಬಿಸರಳ್ಳಿ ಗ್ರಾಮ. ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ (ಬಿಬಿಎಂ) ಪದವಿ ಪಡೆದ ವೀರೇಶರೆಡ್ಡಿ, ಎಲ್ಲರಂತೆ ಮೊದಲು ನೌಕರಿ ಅರಸುತ್ತ ಬೆಂಗಳೂರಿಗೆ ಹೋದರು. ಆದರೆ ಅವರಿಗೆ ಹಿಡಿಸುವ ಉದ್ಯೋಗ ಅಲ್ಲಿ ಸಿಗದಾಗ, ಮತ್ತೆ ನೌಕರಿಯ ಆಸೆ ಪಡದೇ ಗ್ರಾಮಕ್ಕೆ ಮರಳಿದರು. ಕೃಷಿಯಲ್ಲಿಯೇ ಬದುಕು ಗಟ್ಟಿಗೊಳಿಸಬೇಕು ಎನ್ನುವ ಧೃಢ ನಿರ್ಧಾರ ಮಾಡಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಇದರ ಪರಿಣಾಮ ಇಂದು ಅವರ 30 ಎಕರೆ ಜಮೀನಿನಲ್ಲಿ ಬಾಳೆ, ಸೀಬೆ, ನುಗ್ಗೆ, ಕರಿಬೇವು...ಹೀಗೆ ಹಲವಾರು ರೀತಿಯ ಮಿಶ್ರ ಬೆಳೆ ನಲಿದಾಡುತ್ತಿವೆ.ರೈತರು ಋತುಮಾನಕ್ಕೆ ತಕ್ಕಂತೆ ಒಂದೋ ಎರಡೋ ಬೆಳೆ ಬೆಳೆಯುವುದು ಸಹಜ. ನೀರಾವರಿ ಇದ್ದರೂ ಒಂದು ಅಥವಾ ಎರಡು ತೋಟಗಾರಿಕೆ ಬೆಳೆ ಮಾಡುವುದು ಬಹುತೇಕ ರೈತರ ವಾಡಿಕೆ. ಮಿಶ್ರ ಬೆಳೆಯಾಗಿ ಹಲವಾರು ತೋಟಗಾರಿಕಾ ಬೆಳೆಗಳನ್ನು ಬೆಳೆದು ಯಶಸ್ವಿಯಾದವರು ವಿರಳ. ಆದರೆ ವೀರೇಶರೆಡ್ಡಿ ಮಿಶ್ರ ಬೆಳೆ ಬೆಳೆದು ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.ಭಾರಿ ಆದಾಯ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಸೌಲಭ್ಯ ಪಡೆದು, ತಮ್ಮ ಹೊಲದಲ್ಲಿ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಈ ಯೋಜನೆಯಡಿ ಶೇ 75ರ ರಿಯಾಯಿತಿ ದರದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ. ಹೊಲದ ಬದುವಿನಲ್ಲಿ ಬೆಳೆಸಿರುವ ಕರಿಬೇವಿನಿಂದ ತಮ್ಮ ದೈನಂದಿನ ಖರ್ಚನ್ನು ನೀಗಿಸಿಕೊಳ್ಳುತ್ತಿದ್ದಾರೆ. ಮೊದಲು 10 ಎಕರೆ ಜಮೀನಿನಲ್ಲಿ 4 ಸಾವಿರ ಬಾಳೆ ಗಿಡ ನಾಟಿ ಮಾಡಿದ ಇವರು ಬಾಳೆಗೆ ಅಗತ್ಯ ನೀರು, ರಸಾವರಿ ಮೂಲಕ ಗೊಬ್ಬರ ಪೋಷಕಾಂಶ ಕೊಟ್ಟು, ಉತ್ತಮ ಬೆಳೆ ಕಂಡಿದ್ದಾರೆ.ಪ್ರತಿ ಗೊನೆ ಸರಾಸರಿ 28 ಕೆ.ಜಿ. ತೂಕ ಬಂದಿದ್ದು, ಈಗಾಗಲೇ ಸುಮಾರು 160 ಟನ್ ಇಳುವರಿ ಪಡೆದಿದ್ದಾರೆ. ಈ ಬಾರಿಯೂ ಉತ್ತಮ ಬಾಳೆಯ ಇಳುವರಿ ಬಂದಿದ್ದು, ಇದರಿಂದಲೇ ಈವರೆಗೆ ಒಟ್ಟು 25 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿದ್ದಾರೆ. ನಾಲ್ಕು ಎಕರೆಯಲ್ಲಿ ನುಗ್ಗೆ ಬೆಳೆದಿದ್ದರೆ, ಆರು ಎಕರೆಯಲ್ಲಿ ಸೀಬೆ ಬೆಳೆ ಹಚ್ಚಿದ್ದಾರೆ.ಸೀಬೆಕಾಯಿಗೆ ಈಗ ಭಾರಿ ಬೇಡಿಕೆ ಇರುವ ಕಾರಣ, ಅದರಿಂದ ಭರ್ಜರಿ ಲಾಭ ಕಂಡಿದ್ದಾರೆ. `ಹೊಲದ ಬದುವಿನಲ್ಲಿ ಕರಿಬೇವಿನ ಜೊತೆಗೆ ಸಾಗುವಾನಿ, ಸಿಲ್ವರ್ ಓಕ್‌ನಂತಹ ಅರಣ್ಯ ಬೆಳೆಯನ್ನು ಬೆಳೆದಿದ್ದು, ಇದರಿಂದಲೂ ಭಾರಿ ಆದಾಯದ ನಿರೀಕ್ಷೆ ಇದೆ' ಎನ್ನುತ್ತಾರೆ ವೀರೇಶರೆಡ್ಡಿ. `ಜ್ಞಾನಕ್ಕಾಗಿ ಶಿಕ್ಷಣ ಪಡೆಯಬೇಕೇ ಹೊರತು ಉದ್ಯೋಗಕ್ಕಾಗಿಯೇ ಶಿಕ್ಷಣ ಪಡೆಯಬೇಕು ಎನ್ನುವ ಮನೋಭಾವ ಸಮಂಜಸವಲ್ಲ. ಪರಿಶ್ರಮ ಮತ್ತು ಬದ್ಧತೆ ಇದ್ದರೆ ಕೃಷಿಯಲ್ಲೂ ಉತ್ತಮ ಯಶಸ್ಸು ಸಾಧಿಸಲು ಸಾಧ್ಯ' ಎನ್ನುವುದು ಯುವ ಕೃಷಿಕರಿಗೆ ಅವರ ಕಿವಿಮಾತು. ಸಂಪರ್ಕಕ್ಕೆ- 7760544421.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry