ಸೋಮವಾರ, ನವೆಂಬರ್ 18, 2019
23 °C

ಬಾಳೆನಾರಿಗೆ ಮೌಲ್ಯ ತಂದ ನಾರಿಯರು

Published:
Updated:

ಬಯಲುಸೀಮೆ ನಾರಿಯರು ಬಾಳೆನಾರಿಗೂ ಉತ್ಕೃಷ್ಟ ಮೌಲ್ಯ ತಂದುಕೊಟ್ಟಿದ್ದಾರೆ. ಬಾಳೆ ನಾರಿನಲ್ಲಿ ತಯಾರಿಸಿದ ಆಕರ್ಷಕ ವಿನ್ಯಾಸದ ಉತ್ಪನ್ನಗಳು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಹಾಕಿವೆ.ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿ, ಸೀಗೆಹಟ್ಟಿ ಹಾಗೂ ಮಾಯಸಂದ್ರ ಗ್ರಾಮದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಬಾಳೆ ನಾರಿನಿಂದ ತಯಾರಿಸಿದ ಉತ್ಪನ್ನಗಳು ಸ್ವಾವಲಂಬನೆ ಬದುಕಿಗೂ ದಾರಿದೀಪವಾಗಿದೆ.ಲಕ್ಕವ್ವನಹಳ್ಳಿಯ ಕೆಲವು ಮಹಿಳೆಯರು ಸೇರಿಕೊಂಡು 1996ರಲ್ಲಿ `ಕಾಲಭೈರವೇಶ್ವರ ಸ್ವಸಹಾಯ ಸಂಘ' ಸ್ಥಾಪಿಸಿದರು. ಹಂತ ಹಂತವಾಗಿ ಕೌಶಲ ಹೆಚ್ಚಿಸಿಕೊಂಡರು. ಈಗ ಗುಡಿ ಕೈಗಾರಿಕೆ ವಸ್ತುಗಳನ್ನು ಸಿದ್ಧಪಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಂಡಿರುವುದು ಅವರ ಸಾಧನೆಯ ಹಾದಿಯನ್ನು ತೋರಿಸುತ್ತದೆ.ಈ ಸಂಘದ ಸದಸ್ಯೆಯರಿಗೆ ಪ್ರೋತ್ಸಾಹವಾಗಿ ನಿಂತು, ಹಗಲಿರುಳು ದುಡಿಯುತ್ತಿರುವವರು ಈ ಮೊದಲು ಬ್ಯಾಂಕ್ ಅಧಿಕಾರಿಯಾಗಿ, ರುಡ್‌ಸೆಟ್‌ನಲ್ಲಿ ನಿರ್ದೇಶಕರಾಗಿದ್ದು, 2001ರಲ್ಲಿ ಸ್ವಯಂ ನಿವೃತ್ತಿ ಪಡೆದ ಶ್ರೀಕಾಂತ್ ಎಂ. ಹೆಬ್ಬಾಳ್.`ಸ್ವ-ಶಕ್ತಿ' ಕಾರ್ಯಕ್ರಮದಡಿ ಬಡ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಿಂದೆ ಈ ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ಅಂದು ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಕೂಲಿ ಮಾಡಿಕೊಂಡು ಬಂದ ಹಣದಲ್ಲಿ ಮಾತ್ರ ಉಳಿತಾಯ ಮಾಡುತ್ತಿದ್ದರು. ಅಂದು ದಿನಕ್ಕೆ ಕೇವಲ ರೂ. 20-30 ದುಡಿಯುತ್ತಿದ್ದ ಮಹಿಳೆಯರು ಇಂದು ರೂ. 150ರಿಂದ 200ವರೆಗೂ ಗಳಿಸುತ್ತಿದ್ದಾರೆ.ಇಲ್ಲಿನ ಮಹಿಳೆಯರು 2002ರಲ್ಲಿ ಬಾಳೆ ನಾರಿನಿಂದಾಗುವ ಹಲವು ಉಪಯೋಗಗಳನ್ನು ಕಂಡುಕೊಂಡರು. ಬಾಳೆಯ ನಾರು ಉತ್ಕೃಷ್ಟ ಮಟ್ಟದ್ದಾಗಿರುವುದೂ ಇವರಿಗೆ ಗೊತ್ತಿತ್ತು. ಆದರೆ, ಇದರ ಸಮರ್ಪಕ ಬಳಕೆ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತಿಳಿವಳಿಕೆ ಇರಲಿಲ್ಲ. ಇದನ್ನು ಅರಿತ ಹೆಬ್ಬಾಳ್, ಹಲವು ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಈ ಮಹಿಳೆಯರಿಗೆ ತರಬೇತಿ ಕೊಡಿಸಲು ವ್ಯವಸ್ಥೆ ಮಾಡಿದರು.ಆರಂಭದಲ್ಲಿ ಇವರಿಗೆ ದಿನದ ಗಳಿಕೆಯಾಗಿ ಕೇವಲ 1-2 ರೂಪಾಯಿ ಮಾತ್ರ ಸಿಗುತ್ತಿತ್ತು. ನಂತರ  ಹಗಲಿರುಳು ಪರಿಶ್ರಮಪಟ್ಟಿದ್ದಕ್ಕೆ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲು ಸಾಧ್ಯವಾಗಿದೆ. ಇವರು ಉತ್ಪಾದಿಸಿದ ವಸ್ತುಗಳಿಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ `ಹಿರಿಯೂರು ಲಕ್ಕವ್ವನಹಳ್ಳಿ ಕಾಲಭೈರವೇಶ್ವರ ಸ್ವಸಹಾಯ ಗುಂಪು' ಹೆಸರನ್ನೇ ದಾಖಲಿಸಿದ್ದಾರೆ.ಬಾಳೆ ನಾರಿನಿಂದ ಯಾವ ಉಪಯೋಗವೂ ಇಲ್ಲ. ಗೊಬ್ಬರ ಮತ್ತು ಕಸ ಮಾತ್ರವಷ್ಟೇ ಲಭ್ಯ ಎಂದಷ್ಟೇ ತಿಳಿದುಕೊಂಡಿದ್ದವರು ಹೆಚ್ಚು. ಆದರೆ, ಈ ಮಹಿಳೆಯರು ಬಾಳೆನಾರಿನ ಹೊಸ ರೂಪಗಳನ್ನು ಅನಾವರಣಗೊಳಿಸಿದ್ದಾರೆ.ಮಾಯಸಂದ್ರ ಗ್ರಾಮದಲ್ಲಿ `ಮಲ್ಲಿಗೆ ಸ್ವ ಸಹಾಯ ಸಂಘ'ದವರು ಬಾಳೆ ನಾರಿನಿಂದ ದಾರ ತಯಾರಿಸುತ್ತಾರೆ ಮತ್ತು ಸೀಗೆಹಟ್ಟಿಯ `ಶ್ರೀದೇವಿ' ಮತು `ಶಾಂತಿ ಸ್ವಸಹಾಯ ಸಂಘ'ದವರು ಸಹ ರಿವರ್‌ಗ್ರಾಸ್ ಮತ್ತು ದಾರವನ್ನು ತಯಾರಿಸಿ ಲಕ್ಕವ್ವನಹಳ್ಳಿ ಕಾರ್ಯಾಗಾರಕ್ಕೆ ಕಳುಹಿಸಿಕೊಡುತ್ತಾರೆ. ಇಲ್ಲಿ ಅವು ಪೂರ್ಣ ಪ್ರಮಾಣದ ಸಿದ್ಧ ವಸ್ತುಗಳಾಗಿ ಮಾರುಕಟ್ಟೆ ತಲುಪುತ್ತವೆ. ಇಲ್ಲಿ ಎಲ್ಲರಿಗೂ ಅವರ ಕೆಲಸಕ್ಕೆ ತಕ್ಕಂತೆ ವೇತನ ದೊರೆಯುತ್ತಿದೆ. ಮಹಿಳೆಯರ ಈ ಸ್ವಸಹಾಯ ಸಂಘಗಳು ಒಂದಕ್ಕೊಂದು ಪೂರಕವಾಗಿ ಸರಪಳಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.`ಹಿಂದೆ ಬಾಳೆ ನಾರು ಉಚಿತವಾಗಿ ಸಿಗುತ್ತಿತ್ತು. ಇಂದು ಹಣ ಕೊಟ್ಟು ಖರೀದಿಸಬೇಕಾಗಿದೆ. ಹೊಲದ ಕೆಲಸ ಮುಗಿಸಿದ ನಂತರ ಬಿಡುವಿನ ವೇಳೆಯಲ್ಲಿ ಬಾಳೆ ನಾರಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಹೆಚ್ಚು ಬೇಡಿಕೆ ಬಂದಾಗ ಚೆಂದದ ಕೈಚೀಲಗಳನ್ನೂ ತಯಾರಿಸುತ್ತೇವೆ' ಎನ್ನುತ್ತಾರೆ ಸದಸ್ಯೆ ತಿಪ್ಪೀರಮ್ಮ.ಈ ಸಂಘಗಳ ಸದಸ್ಯೆಯರು ತಯಾರಿಸಿದ ವಸ್ತುಗಳಿಗೆ ಮೊದಲು ಮಾರುಕಟ್ಟೆ ಸಮಸ್ಯೆಯೇ ದೊಡ್ಡದಾಗಿತ್ತು. ಅದಕ್ಕಾಗಿ `ಗ್ರಾಮ್ಯ ಟರ್ನ್ ಕೀ ಲಿ.' ಸಂಸ್ಥೆ ಹುಟ್ಟು ಹಾಕಿ ಮಾರುಕಟ್ಟೆ ಪ್ರವೇಶಿಸಲಾಯಿತು ಎಂದು ವಿವರಿಸುತ್ತಾರೆ ಹೆಬ್ಬಾಳ್.ಬಾಳೆದಿಂಡಿನ ನಾರು ಜತೆಗೆ ಕೋರೆಗ್ರಾಸ್, ಹಾಪಿನಕಡ್ಡಿ, ರಿವರ್‌ಗ್ರಾಸ್, ಪುಂಡಿನಾರು, ಸೆಣಬು, ಲಾವಂಚ ಮತ್ತಿತರ ವಸ್ತುಗಳಿಂದ ವಿವಿಧ ವಿನ್ಯಾಸದ ಕೈಚೀಲಗಳು, ನೆಲಹಾಸು ಸೇರಿದಂತೆ 100 ತರಹದ ವಿವಿಧ ವಸ್ತುಗಳನ್ನು ಕೈಯಿಂದಲೇ ತಯಾರಿಸಲಾಗುತ್ತಿದೆ. ಇಲ್ಲಿನ ವಸ್ತುಗಳ ಮಾರಾಟಕ್ಕಾಗಿ `ಎಕ್ಸ್‌ಪೋರ್ಟ್ ಕೌನ್ಸಿಲ್ ಆಫ್ ಹ್ಯಾಂಡಿಕ್ರಾಫ್ಟ್', `ಹ್ಯಾಂಡಿಕ್ರಾಫ್ಟ್ರ್ ಆ್ಯಂಡ್ ಹ್ಯಾಂಡ್‌ಲೂಮ್ ಎಕ್ಸ್‌ಪೋರ್ಟ್ ಕಾರ್ಪೊರೇಷನ್', `ಫ್ಯಾಬ್ ಇಂಡಿಯಾ' ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ನಮ್ಮ  ವಸ್ತುಗಳಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಸಾಕಷ್ಟು ಬೇಡಿಕೆ ಇದೆ ಎನ್ನುವುದು ಹೆಬ್ಬಾಳ್ ವಿವರಣೆ.ಇಲ್ಲಿನ ಮಹಿಳೆಯರ ಪರಿಶ್ರಮ, ಸಾಧನೆ ನೋಡಿದ `ನಬಾರ್ಡ್' 2008ರಲ್ಲಿ ಮೂಲ ಸೌಕರ್ಯಕ್ಕಾಗಿ ರೂ. 11.29 ಲಕ್ಷ ಅನುದಾನ ನೀಡಿ ಕೌಶಲ ತರಬೇತಿ ಕೊಡಿಸಿದೆ. ಜಿಲ್ಲಾ ಪಂಚಾಯ್ತಿ ವತಿಯಿಂದ `ವರ್ಕ್‌ಶೆಡ್'(ತಯಾರಿಕೆ ಘಟಕ) ನಿರ್ಮಾಣಕ್ಕೆ ಅನುದಾನವೂ ದೊರಕಿದೆ. ಬ್ಯಾಂಕ್ ಮೂಲಕ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಹಾಯಧನದಲ್ಲಿ ಸಾಲ ನೀಡಲಾಗಿದೆ. ಪಡೆದ ಸಾಲವನ್ನು ಮಹಿಳೆಯರು ಮರುಪಾವತಿಸಿದ್ದಾರೆ.`ಮುಂದಿನ ದಿನಗಳಲ್ಲಿ ಲಕ್ಕವ್ವನ ಹಳ್ಳಿಯಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಆರಂಭಿಸುವ ಉದ್ದೇಶವಿದೆ. ಆರಂಭದಿಂದಲೂ ಹಲವು ಕಷ್ಟಗಳನ್ನು ಎದುರಿಸಿದ ನಾವು, ಈಗಲೂ ಸ್ವಂತದ ಜಾಗವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದೇವೆ. ಈಗ ಬಾಳೆ ನಾರು ಸ್ಥಳೀಯವಾಗಿ ಹೆಚ್ಚು ಲಭ್ಯವಿಲ್ಲ. ಶಿರಸಿ, ಕೊಪ್ಪಳದಿಂದ ತರಿಸುತ್ತಿದ್ದೇವೆ' ಎನ್ನುವ ಹೆಬ್ಬಾಳ್ ಅವರ ಮಾತಿನಲ್ಲಿ ಹಲವು ಕಷ್ಟಗಳ ನಡುವೆಯೂ ಹಳ್ಳಿಗಾಡಿನ ಮಹಿಳೆಯರು ಒಟ್ಟಾಗಿ ಸಾಧನೆ ಮಾಡಲು ನೆರವಾಗಿದ್ದಕ್ಕೆ ತೃಪ್ತಿಯ ಭಾವ ಇಣುಕುತ್ತದೆ.

ಹೆಚ್ಚಿನ ಮಾಹಿತಿಗೆ ಹೆಬ್ಬಾಳ್ ಮೊ: 98801 55332.ಬಾಳೆನಾರು ಉತ್ಪನ್ನ ಅಮೆರಿಕಕ್ಕೆ!

ಬಾಳೆ ನಾರಿನಲ್ಲಿ ತಯಾರಿಸಿದ ಉತ್ಪನ್ನಗಳನ್ನು ಅಮೆರಿಕಾಗೆ ನಿರಂತರವಾಗಿ ರಫ್ತು ಮಾಡಲಾಗುತ್ತಿದೆ. ಆಗಾಗ ಫ್ರಾನ್ಸ್, ನಮಿಬಿಯಾಗೂ ನಾರಿನ ಉತ್ಪನ್ನಗಳು ರವಾನೆ ಆಗುತ್ತಿವೆ. ಹಿರಿಯೂರು ಕ್ಲಸ್ಟರ್‌ನ 15 ಸ್ವಸಹಾಯ ಗುಂಪುಗಳಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿರುವ ತಂಡಗಳೆಂದರೆ ಲಕ್ಕವ್ವನಹಳ್ಳಿ, ಸೀಗೆಹಟ್ಟಿ, ಮಾಯಸಂದ್ರ, ಹುಚ್ಚವ್ವನಹಳ್ಳಿ, ಕೂನಿಕೆರೆಯ ಸಂಘ. ಇಷ್ಟೂ ಸಂಘಗಳ ಸದಸ್ಯೆಯರು ಸದ್ಯ ಪ್ರತಿವರ್ಷ ಅಂದಾಜು ರೂ. 40 ಲಕ್ಷ ವಹಿವಾಟು ನಡೆಸುತ್ತಿದ್ದಾರೆ. ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಆರಂಭಿಸುವುದು, ಬಾಳೆ ನಾರಿನ ಉತ್ಪನ್ನಗಳಲ್ಲಿ ಹೊಸ ವಿನ್ಯಾಸಗಳನ್ನು ರೂಪಿಸುವುದು ಈ ನಾರಿಯರ ಭವಿಷ್ಯದ ಯೋಜನೆ. `ಬದಲಾಗುತ್ತಿರುವ ಮಾರುಕಟ್ಟೆ ಸನ್ನಿವೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ನವೀನ ರೀತಿ ವಿನ್ಯಾಸಗಳ ಹೊಸ ಉತ್ಪನ್ನಗಳನ್ನು ತಯಾರಿಸುವ ಬಗೆಗೂ ಗಮನ ನೀಡಲಾಗುವುದು' ಎನ್ನುತ್ತಾರೆ ಹೆಬ್ಬಾಳ್ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)