ಶನಿವಾರ, ಆಗಸ್ಟ್ 24, 2019
28 °C

ಬಾಳ ಬೆಳಕು ಅಂಗದಾನ

Published:
Updated:
ಬಾಳ ಬೆಳಕು ಅಂಗದಾನ

ಕಳೆದ ವರ್ಷ ಇದೇ ಸಮಯದಲ್ಲಿ ದೆಹಲಿಯ 22 ವರ್ಷದ ಒಬ್ಬ ಯುವಕ ರಸ್ತೆ ಅಪಘಾತಕ್ಕೆ ಈಡಾದ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವಕನಿಗೆ ಅಗತ್ಯ ಅಂಗಗಳು ಲಭ್ಯವಾಗದ ಕಾರಣ ಆತ ಮಿದುಳು ಸಾವಿಗೆ ಒಳಗಾದ. ಇದರಿಂದ ಎಚ್ಚೆತ್ತುಕೊಂಡ ಅವನ ಪಾಲಕರು ತಮಗೆ ಬಂದ ಸ್ಥಿತಿ ಇನ್ನೊಂದು ಕುಟುಂಬಕ್ಕೆ ಬಾರದಿರಲಿ ಎಂದು ತಮ್ಮ ಮಗನ ಎಲ್ಲಾ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಅಂಗಗಳನ್ನು ತೆಗೆಯಲು ವೈದ್ಯರು ನಿರಂತರ 10 ಗಂಟೆಗಳ ಕಾಲ ದುಡಿದರು. ಕತ್ತಲಾಗಿದ್ದು ಒಂದು ಮನೆ, ಬೆಳಕು ಮೂಡಿದ್ದು ಹತ್ತಾರು ಮನೆಗಳಲ್ಲಿ... ಆ ಯುವಕ ಒಂದಷ್ಟು ಜನರ ಬಾಳಿಗೆ ಹೊಸ ಬೆಳಕು ಚೆಲ್ಲಿ ಹೋಗಿದ್ದ... ಪ್ರತಿವರ್ಷ ಆಗಸ್ಟ್ 6ರಂದು `ವಿಶ್ವ ಅಂಗದಾನ ದಿನ'ದ ಹೊತ್ತಿನಲ್ಲಿ ಆ ಯುವಕ ನೆನಪಾಗುತ್ತಾನೆ.ಅಂಗದಾನದ ಸತ್ಯ

ಒಬ್ಬ ಜೀವಂತ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಅಥವಾ ತನ್ನ ಮರಣಾನಂತರ ತನ್ನ ಅಂಗಗಳನ್ನು ಮತ್ತೊಬ್ಬರಿಗೆ ನೀಡುವುದು ಅಂಗದಾನ. ಕೆಲವು ಅಂಗಗಳನ್ನು ವ್ಯಕ್ತಿ ಮೃತ ಪಟ್ಟ ನಂತರವೇ ತೆಗೆದುಕೊಳ್ಳಲು ಸಾಧ್ಯ. ಆದರೆ ಇನ್ನೂ ಕೆಲವು ಅಂಗಗಳನ್ನು ವ್ಯಕ್ತಿ ತಾನು ಬದುಕಿರುವಾಗಲೇ ದಾನ ಮಾಡಬಹುದು. ಮತ್ತು ಇದರಿಂದ ಅವನ ಆರೋಗ್ಯ ಅಥವಾ ಜೀವನದ ಗುಣಮಟ್ಟಕ್ಕೆ ಯಾವುದೇ ಧಕ್ಕೆಯಾಗದು.ವಿವಿಧ ಕಾರಣಗಳಿಂದ ವ್ಯಕ್ತಿಯ ಅಂಗ ಅಥವಾ ಅಂಗಗಳು ಚಿಕಿತ್ಸೆ ಅಥವಾ ಔಷಧಿಯಿಂದ ಗುಣಪಡಿಸಲಾಗದಷ್ಟು ಪ್ರಮಾಣದಲ್ಲಿ ಹಾನಿಗೊಳಗಾದಾಗ ಅವು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಬಹುದು. ಆಗ ಇನ್ನೊಬ್ಬ ವ್ಯಕ್ತಿಯ ದೇಹದಿಂದ ಜೀವಂತ ಅಂಗಗಳನ್ನು ಹಾಗೂ ಕೋಶಗಳನ್ನು ತೆಗೆದು ಆ ವ್ಯಕ್ತಿಗೆ ಅಳವಡಿಸುವ ಮೂಲಕ ಅಂಗ ಕಸಿ ಮಾಡಬಹುದು.ವೈದ್ಯಕೀಯ ಭಾಷೆಯಂತೆ `ಬ್ರೇನ್ ಡೆಡ್' ಆದ ವ್ಯಕ್ತಿಯ ದೇಹದಿಂದ ಅದಾಗಿ ಕೆಲವೇ ನಿಮಿಷಗಳಲ್ಲಿ ಅಂಗಗಳನ್ನು ಪಡೆಯಬೇಕಾಗುತ್ತದೆ. ಏಕೆಂದರೆ ಒಂದು ಗಂಟೆಯ ಅವಧಿಯಲ್ಲಿ ಅಂಗಗಳು ಅವನತಿ ಹೊಂದಲು ಆರಂಭಿಸುತ್ತವೆ. ಆದ್ದರಿಂದ ಮೃತ ವ್ಯಕ್ತಿಯಿಂದ ಎಷ್ಟು ಸಾಧ್ಯವೊ ಅಷ್ಟು ತುರ್ತಾಗಿ ಅಂಗಾಂಗಗಳನ್ನು ಪಡೆದು ಅಷ್ಟೇ ಕ್ಷಿಪ್ರವಾಗಿ ಅದನ್ನು ಅಗತ್ಯ ರೋಗಿಗೆ ಕಸಿ ಮಾಡಬೇಕು. ಸಾಮಾನ್ಯವಾಗಿ ಮೃತ ವ್ಯಕ್ತಿಯಿಂದ ಮೂತ್ರಪಿಂಡ, ಯಕೃತ್ತು, ಕಣ್ಣು (ಕಾರ್ನಿಯ), ಹೃದಯ, ಶ್ವಾಸಕೋಶ, ಮೇದೋಜೀರಕ ಗ್ರಂಥಿ (Pancreas)ಗಳನ್ನು ಪಡೆಯಲಾಗುತ್ತದೆ. ಕೇವಲ ಮೃತ ವ್ಯಕ್ತಿಯಿಂದ ಮಾತ್ರವಲ್ಲ, ಬದುಕಿದ್ದಾಗಲೂ ಮೂತ್ರಪಿಂಡ (ಎರಡರಲ್ಲೊಂದನ್ನು), ಯಕೃತ್ತಿನ ನಾಲ್ಕನೇ ಒಂದು ಭಾಗವನ್ನು ಹಾಗೂ ಮೂಳೆ ಮಜ್ಜೆ (Bone marrow) ದಾನ ಮಾಡಬಹುದು.ಅಂಗ ವೈಫಲ್ಯಕ್ಕೆ ಕಾರಣ

ಅಂಗ ವೈಫಲ್ಯಕ್ಕೆ ಇಂಥದ್ದೇ ಕಾರಣ ಎಂದು ನಿರ್ದಿಷ್ಟವಾಗಿ ಹೇಳಲಾಗದು. ವೈದ್ಯಕೀಯ ಕಾರಣಗಳು, ಸೋಂಕು ಅಥವಾ ಅಪಘಾತದಿಂದಲೂ ವ್ಯಕ್ತಿಯ ಅಂಗಾಂಗಗಳು ವಿಫಲವಾಗಬಹುದು. ವೈದ್ಯಕೀಯ ಕಾರಣಗಳೆಂದರೆ: `ಗ್ಲೊಮೆರುಲರ್' ರೋಗಗಳು, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಮೂತ್ರಪಿಂಡ ವೈಫಲ್ಯ; ಹೆಪಟೈಟಿಸ್‌ನಿಂದ ಉಂಟಾಗುವ ಯಕೃತ್ತು ಸಿರೋಸಿಸ್, ಕೊಬ್ಬಿನ ಪಿತ್ತ ಜನಕಾಂಗದಿಂದ ಉಂಟಾಗುವ ಸಿರೋಸಿಸ್. ಸ್ವರಕ್ಷಿತ ರೋಗದ ಕಾರಣದಿಂದ ಬರುವ ಸಿರೋಸಿಸ್ ಇತ್ಯಾದಿಯಿಂದಾಗಿ ಯಕೃತ್ತು ವೈಫಲ್ಯ, ಪರಿಧಮನಿ ಕಾಯಿಲೆ, ಹುಟ್ಟಿನಿಂದ ಬಂದ ಹೃದ್ರೋಗಗಳಿಂದಾಗಿ ಹೃದಯ ವೈಫಲ್ಯ. ಇಡಿಯೋಪಥಿಕ್ ಶ್ವಾಸಕೋಶದ ಫೈಬ್ರೋಸಿಸ್‌ನಂತಹ ಕಾಯಿಲೆಯಿಂದಾಗಿ ಶ್ವಾಸಕೋಶ ವೈಫಲ್ಯವಾಗಬಹುದು.ದಾನ ಹೇಗೆ?

ಅಂಗಗಳನ್ನು ಎಲ್ಲೆಂದರೆ ಅಲ್ಲಿ, ಹೇಗೆಂದರೆ ಹಾಗೆ ದಾನ ಮಾಡುವಂತಿಲ್ಲ. ಭಾರತೀಯ ಮಾನವ ಅಂಗಗಳ ಕಸಿ ಕಾಯ್ದೆಯ ಪ್ರಕಾರ ಮಾನವನ ಅಂಗದಾನಕ್ಕೆ ಕೆಲವು ಮಾನದಂಡಗಳಿವೆ. ಯಾವುದಾದರೂ ನೋಂದಾಯಿತ ಅಂಗದಾನ ಕೇಂದ್ರದ ಮೂಲಕ ವ್ಯಕ್ತಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಗರದ ನಿಮ್ಮಾನ್ಸ್‌ನಲ್ಲಿ `ಕರ್ನಾಟಕ ವಲಯ ಸಮನ್ವಯ ಸಮಿತಿ' (Zonal Coordination Committee of Karnataka -ZCCK) ಎನ್ನುವ ಕೇಂದ್ರವಿದೆ. ಮಾಹಿತಿ, ಸಂಪರ್ಕಕ್ಕೆ: www.zcck.in zcckbangalore@gmail.com zಬೇಡಿಕೆ, ಲಭ್ಯತೆಯ ಪ್ರಮಾಣ

ಭಾರತದಲ್ಲಿ ಪ್ರತಿವರ್ಷ ಅಂದಾಜು ಎರಡು ಲಕ್ಷ ಮೂತ್ರಪಿಂಡ ಹಾಗೂ ಒಂದು ಲಕ್ಷ ಯಕೃತ್ತುಗಳ ಅಗತ್ಯವಿರುತ್ತದೆ. ಆದರೆ ಕೇವಲ ಶೇ 3 ಅಥವಾ ಶೇ 4ರಷ್ಟು ಪ್ರಮಾಣದಲ್ಲಿ ಮಾತ್ರ ಲಭ್ಯವಾಗುತ್ತಿವೆ. ಅಂದರೆ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 4,000 ಕಿಡ್ನಿ ಕಸಿ ಮತ್ತು 500ರಷ್ಟು ಯಕೃತ್ತು ಕಸಿ ಕಾರ್ಯ ನಡೆಯುತ್ತದೆ. ಇದರಲ್ಲಿ ರೋಗಿಗಳ ಹತ್ತಿರದ ಸಂಬಂಧಿಗಳಿಂದ ದಾನ ಪಡೆದು ಮಾಡುವ ಶಸ್ತ್ರಚಿಕಿತ್ಸೆಗಳೇ ಹೆಚ್ಚು. ಪ್ರತಿವರ್ಷ ಭಾರತದಲ್ಲಿ ಅಂದಾಜು 90,000 ಜನ ಅಂಗವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಅಂಗದಾನದ ಬಗ್ಗೆ ಜನರಲ್ಲಿ ಸೂಕ್ತ ತಿಳಿವಳಿಕೆ ಇಲ್ಲದಿರುವುದು, ಸತ್ತ ನಂತರದ ಜೀವನದ ಬಗ್ಗೆ ಇರುವ ನಂಬಿಕೆಗಳು, ಧಾರ್ಮಿಕ ತಪ್ಪು ಕಲ್ಪನೆಗಳು ಅಂಗದಾನಕ್ಕೆ ತೊಡಕುಗಳಾಗಿ ಪರಿಣಮಿಸುತ್ತಿವೆ.ಕರ್ನಾಟಕದಲ್ಲಿ ಅಗತ್ಯವಿರುವ ಅಂಗಗಳ ಸಂಖ್ಯೆ ಹಾಗೂ ಲಭ್ಯವಿರುವ ಅಂಗಗಳ ಸಂಖ್ಯೆಯ ನಡುವಿನ ಅಂತರ ಬಹಳ ದೊಡ್ಡದು. ಈಗ 1000ಕ್ಕೂ ಅಧಿಕ ರೋಗಿಗಳು ಅಂಗಗಳ ಕಸಿ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದರೆ, ಇಲ್ಲಿಯವರೆಗೂ ಕೇವಲ 58 ದಾನಿಗಳು ಮುಂದೆ ಬಂದಿದ್ದಾರೆ. ಕರ್ನಾಟಕ ವಲಯ ಸಮನ್ವಯ ಸಮಿತಿ ಘಇಇಓಯ ದಾಖಲೆಯ ಪ್ರಕಾರ ಈವರೆಗೂ ಒಟ್ಟು ಕೇವಲ 58 ಕಸಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಲಾಗಿದೆ. ಅವುಗಳಲ್ಲಿ ಮೂತ್ರಪಿಂಡ-104, ಯಕೃತ್ತು- 44, ಹೃದಯ-6, ಮೇದೋಜ್ಜೀರಕ ಗ್ರಂಥಿ- 1, ಹೃದಯದ ಕವಾಟುಗಳು-21 ಹಾಗೂ ಕಾರ್ನಿಯ-98.ದೇಶದಲ್ಲಿ ಪ್ರತಿವರ್ಷವೂ...

* ಕಾರ್ನಿಯದ ಬೇಡಿಕೆ: ಒಂದು ಲಕ್ಷ. ಲಭ್ಯತೆ  25,000* ಮೂತ್ರಪಿಂಡದ ಬೇಡಿಕೆ 1.5 ಲಕ್ಷ, ಲಭ್ಯತೆ: 3,500- 4,000* ಯಕೃತ್ತಿನ ಬೇಡಿಕೆ 15,000ದಿಂದ 20,000 ಲಭ್ಯತೆ: 500* ಭಾರತದಲ್ಲಿ ಅಂಗ ದಾನಿಗಳು ಸಿಗದೇ ಪ್ರತಿ ದಿನ ಕನಿಷ್ಠ 12 ಜನ ಸಾವನ್ನಪ್ಪುತ್ತಾರೆ.ಮೂಳೆ ಮಜ್ಜೆ ದಾನಿಗಳೇ ವಿರಳ

ರೋಗಗ್ರಸ್ತ ಅಥವಾ ಹಾನಿಗೆ ಒಳಗಾದ ಮೂಳೆ ಮಜ್ಜೆ ಅಥವಾ ಎಲುಬಿನ ಮಜ್ಜೆಯನ್ನು ದಾನಿಗಳ ಮೂಳೆ ಮಜ್ಜೆಯಿಂದ ಬದಲಾಯಿಸಬೇಕಾಗುತ್ತದೆ. ಲ್ಯುಕೇಮಿಯಾ ಸೇರಿದಂತೆ ಬಿಳಿ ರಕ್ತಕಣಗಳ ಕ್ಯಾನ್ಸರ್ ದುಗ್ಧನಾಳದ ಕ್ಯಾನ್ಸರ್‌ನಂತಹ ಹಲವು ಮಾರಣಾಂತಿಕ ರೋಗಗಳಿಗೆ ಮೂಳೆ ಮಜ್ಜೆ ಬದಲಾವಣೆಯೊಂದೇ ಮಾರ್ಗ. ಆದರೆ ಇದಕ್ಕೆ ದಾನಿಗಳು ಸಿಗುವುದು ದುರ್ಲಭ. ಇದು ಅತ್ಯಂತ ಕ್ಲಿಷ್ಟಕರ ಕೆಲಸ. ಇದಕ್ಕೆ ಮೊದಲು ದಾನಿ ಹಾಗೂ ರೋಗಿಯ ರಕ್ತ ಹೊಂದಾಣಿಕೆ ಆಗಬೇಕು. ಅದರಲ್ಲೂ ರಾಜ್ಯದಲ್ಲಿ ಮೂಳೆ ಮಜ್ಜೆ (Bone marrow)ದಾನದ ಬಗ್ಗೆ ಜನರಿಗೆ ಅರಿವೇ ಇಲ್ಲ. ಈ ಬಗ್ಗೆ ದಾನಿಗಳಿಗೆ ಕೌನ್ಸೆಲಿಂಗ್ ಮಾಡುವುದೆಂದರೆ ಅತ್ಯಂತ ಕಷ್ಟದ ಕೆಲಸ. ಅದರಿಂದ ತಮ್ಮ ಜೀವಕ್ಕೇ ಅಪಾಯವಿದೆಯೇನೊ ಎನ್ನುವಂತೆ ಬೆಚ್ಚುತ್ತಾರೆ.ಆದರೆ ಮೂಳೆ ಮಜ್ಜೆಯನ್ನು 18ವರ್ಷದಿಂದ 60 ವರ್ಷದ ಒಳಗಿನ ಯಾರು ಬೇಕಾದರೂ ದಾನ ಮಾಡಬಹುದು. ಇದರಿಂದ ದಾನಿಯ ಆರೋಗ್ಯ ಅಥವಾ ಜೀವಕ್ಕೆ ಯಾವುದೇ ಅಪಾಯವಿಲ್ಲ. ಕೆಲವು ಸಣ್ಣ ಪುಟ್ಟ ತೊಂದರೆಗಳನ್ನು ಹೊರತಯಪಡಿಸಿ ಯಾವುದೇ ಗಂಭೀರ ಅಪಾಯಗಳೂ ಇಲ್ಲ. ವ್ಯಕ್ತಿ ತಾನು ಬದುಕಿರುವಾಗಲೇ ಕೆಲವು ಅಂಗಗಳನ್ನು ದಾನ ಮಾಡಬಹುದು. ಎರಡರಲ್ಲಿ ಒಂದು ಕಿಡ್ನಿ ದಾನ ಮಾಡಿಯೂ ಆತ ಮೊದಲಿನಂತೆ ಜೀವನ ನಡೆಸಬಹುದು. ಅಲ್ಲದೇ, ಯಕೃತ್ತಿನ ನಾಲ್ಕನೇ ಒಂದು ಭಾಗವನ್ನು ದಾನ ಮಾಡಿದರೂ ಸಹ ಯಕೃತ್ತು ಆರು ವಾರಗಳಲ್ಲಿ ಮತ್ತೆ ತನ್ನ ಮೊದಲಿನ ಸ್ಥಿತಿ ತಲುಪುತ್ತದೆ.- ಡಾ.ಅಮಿತ್ ಅಗರವಾಲ್,

ಮೆಡಿಹೋಪ್ ಆಸ್ಪತ್ರೆ, ಬೆಂಗಳೂರು (080-3343 1000)

Post Comments (+)