ಬಾಳ ಬೆಸುಗೆಗೆ ಕಲಾವಿದರ ಕೊಡುಗೆ

7

ಬಾಳ ಬೆಸುಗೆಗೆ ಕಲಾವಿದರ ಕೊಡುಗೆ

Published:
Updated:
ಬಾಳ ಬೆಸುಗೆಗೆ ಕಲಾವಿದರ ಕೊಡುಗೆ

ಸದಾ ಬಣ್ಣದೊಂದಿಗೆ ಒಡನಾಟವಿರಿಸಿಕೊಂಡಿರುವ ಕಲಾವಿದರ ಬದುಕಿನಲ್ಲಿ ಒಮ್ಮಮ್ಮೆ ಕಾರ್ಮೋಡದ ಕರಿಛಾಯೆ ಮುಸುಕುವುದುಂಟು. ಖ್ಯಾತಿಗಳಿಸಿದ ಕಲಾವಿದರ ಬದುಕು ಒಂದು ತೆರನದ್ದಾದರೆ; ಪ್ರತಿಭೆಯಿದ್ದರೂ ಜೀವನದಲ್ಲಿ ಒಮ್ಮೆಯೂ ಯಶಸ್ಸಿನ ರುಚಿಕಾಣದ ಕಲಾವಿದರ ಬದುಕು ಮತ್ತೊಂದು ತೆರನದ್ದು. ಆರಕ್ಕೇರದ ಮೂರಕ್ಕಿಳಿದ ಇವರ ಬದುಕು ಸದಾ ತೂಗುಯ್ಯಾಲೆಯಾಡುತ್ತಿರುತ್ತದೆ.`ಕಲಾಕೃತಿಗಳನ್ನು ಮಾರಾಟ ಮಾಡುವ ಮಾರ್ಕೆಟಿಂಗ್ ನಾಲೆಡ್ಜ್ ನನ್ನಲ್ಲಿ ಇಲ್ಲ~ ಎನ್ನುತ್ತಲೇ ಮಾತು ಆರಂಭಿಸುವ ಕಲಾವಿದ ಎಚ್.ಎಸ್.ಗಂಗಾಧರ್ ಸುಮಾರು ಇಪ್ಪತ್ತಾರು ವರ್ಷಗಳಿಂದ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯಲ್ಲಿ ಗ್ರಾಫಿಕ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದರಿಂದ ಸಂಬಳವೂ ಅಷ್ಟಕ್ಕಷ್ಟೆ.

 

ಎಚ್.ಎಸ್.ಗಂಗಾಧರ್

ಮದುವೆ, ಮಕ್ಕಳು ಸಂಸಾರ ಅಂತೆಲ್ಲಾ ಬದುಕು ಸಾಗಿಸುತ್ತಿದ್ದ ಗಂಗಾಧರ್ ಅವರಿಗೆ ಹೆಚ್ಚಿನ ಆದಾಯ ತರುವ ಯಾವ ಮೂಲವೂ ಇರಲಿಲ್ಲ. ಅಷ್ಟರಲ್ಲೇ ಮಗಳು ಮದುವೆ ವಯಸ್ಸಿಗೆ ಬಂದಳು. ಮದುವೆ ಮಾಡಲು ಹೊರಟಾಗ ಕೈಯಲ್ಲಿ ಹಣವಿಲ್ಲ. ಆದರೆ, ಮಗಳನ್ನು ಮಡಿಲು ತುಂಬಿ ಕಳುಹಿಸಲೇ ಬೇಕು.

 

ಆಗ ಗಂಗಾಧರ್ ಇತರೆ ಕಲಾವಿದರ ಬಳಿಗೆ ಹೋಗಿ ತಮ್ಮ ಕಷ್ಟ ನಿವೇದಿಸಿಕೊಂಡರು. ಆಗ ಅವರಿಗೆ ಹಣಕ್ಕೆ ಬದಲಾಗಿ ಸಿಕ್ಕಿದ್ದು ಕಲಾಕೃತಿಗಳು. ಗಂಗಾಧರ್ ಸಹಾಯ ಕೇಳಲು ಹೋದ ಎಲ್ಲ ಕಲಾವಿದರು ತಮ್ಮ ಒಂದೊಂದು ಕಲಾಕೃತಿಯನ್ನು ದಾನವಾಗಿ ನೀಡಿದರು. ಅವುಗಳನ್ನು ಮಾರಾಟ ಮಾಡಿ ಮಗಳ ಮದುವೆ ಮಾಡಿ ಎಂದು ಪ್ರೀತಿಯಿಂದ ಹರಸಿ ಕಳುಹಿಸಿದರು.ಗಂಗಾಧರ್ ಕಳೆದ ಎರಡು ತಿಂಗಳ ಹಿಂದೆ ಮಗಳ ಮದುವೆ ಮಾಡಿದ್ದಾರೆ. ಮೈಮೇಲಿರುವ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಸಲುವಾಗಿ ಈಗ ಹೆಸರಾಂತ ಕಲಾವಿದರ ಚಿತ್ರಕಲಾಕೃತಿಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಿದ್ದಾರೆ.ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮೇ 14ರಿಂದ 18ರವರೆಗೆ ನಡೆವ ಪ್ರದರ್ಶನದಲ್ಲಿ ಅಪರೂಪದ 70 ಕಲಾಕೃತಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಖ್ಯಾತ ಕಲಾವಿದರಾದ ಕೆ.ಚಂದ್ರಕಾಂತ್ ಆಚಾರ್ಯ, ಎಸ್.ಜಿ.ವಾಸುದೇವ್ ಸೇರಿದಂತೆ ಸುಮಾರು 70 ಖ್ಯಾತನಾಮರ ಕಲಾಕೃತಿಗಳು ಇಲ್ಲಿವೆ.  ಪ್ರಕೃತಿ, ಹೆಣ್ಣು, ಮೈಥುನ, ಪ್ರಾಣಿ ಪ್ರಪಂಚ, ಮನುಷ್ಯನ ಮನೋವಾಂಛೆಗಳಿಗೆ ಸಂಬಂಧಿಸಿದ ವಿಷಯಗಳು ಈ ಕಲಾಕೃತಿಗಳಲ್ಲಿ ಸುಂದರವಾಗಿ ಅಭಿವ್ಯಕ್ತಿಗೊಂಡಿವೆ.

 ಕಲೆಯನ್ನು ಪ್ರೀತಿಸುವ ಎಲ್ಲರಿಗೂ ಇಲ್ಲಿರುವ ಒಂದಿಲ್ಲೊಂದು ಕಲಾಕೃತಿಗಳು ಇಷ್ಟವಾಗುವುದು ಖಂಡಿತ.`ಕಲಾವಿದರೆಲ್ಲರೂ ಒಂದೇ ಕುಟುಂಬದವರಿದ್ದಂತೆ. ವಿಶ್ವವಿಖ್ಯಾತಿ ಗಳಿಸಿದ ಕಲಾವಿದರು ಒಮ್ಮಮ್ಮೆ ಮಾನವೀಯತೆ ಮೆರೆಯುವುದುಂಟು. ತನ್ನೊಡನೆ ಅಖಾಡಕ್ಕಿಳಿದ ಕಲಾವಿದನ ಬದುಕು ಹಳಿ ತಪ್ಪುತ್ತಿರುವಾಗ ಪ್ರೀತಿಯಿಂದ ಕೈಹಿಡಿದು ಸರಿದಾರಿಯಲ್ಲಿ ನಡೆಸುವ ನಿಸ್ಪೃಹ ಕಲಾವಿದರು ನಮ್ಮ ನಡುವೆ ಇದ್ದಾರೆ.ಮಗಳು ಮದುವೆ ವಯಸ್ಸಿಗೆ ಬಂದಾಗ ದಿಕ್ಕು ತೋಚದೆ ನಿಂತಿದ್ದಾಗ ಕೈಹಿಡಿದವರು ನನ್ನ ಕಲಾವಿದ ಗೆಳೆಯರು. ಅವರಿಗೆ ನಾನು ಚಿರಋಣಿ. ಕಲಾವಿದರೆಲ್ಲರೂ ಕಲಾಕೃತಿ ನೀಡಿ ಮದುವೆ ಮಾಡಲು ನೆರವಾದರು. ಈಗ ಕಲಾರಸಿಕರು ಕಲಾಕೃತಿಗಳನ್ನು ಕೊಂಡು ಕೊಂಡರೆ ಸಾಲದ ಭಾರವನ್ನು ಇಳಿಸಿಕೊಳ್ಳುತ್ತೇನೆ~ ಎನ್ನುವ ಗಂಗಾಧರ್ ಕಲಾಕೃತಿಗಳೆಲ್ಲವೂ ಮಾರಾಟಗೊಳ್ಳುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಮಾಹಿತಿಗೆ: 98450 73155

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry